Thursday, 2 January 2014

ಏನೂ ಇಲ್ಲದಿದ್ರೆ ಪರವಾಗಿಲ್ಲ, ಇದ್ದಿದ್ದನ್ನು ಕಳೆದುಕೊಂಡರೆ ಆಗುವ ಸಂಕಟ ನನಗೆ ಗೊತ್ತು.
ಅಮ್ಮನಿಗೆ ಹನ್ನೊಂದಕ್ಕೆ ಮದ್ವೆಯಾಗಿ ಹದಿನೆಂಟಕ್ಕೆ ಹುಟ್ಟಿದ ಅಣ್ಣ ಬೆಳ್ಳಗೆ ಸುಂದರ, ಮೊದಲನೆಯ ಮಗ ಸಹಜವಾಗೇ ಅಪಾರ ಪ್ರೀತಿ. ಅವನ ನಂತರ ೭ ವರ್ಚಕ್ಕೆ ಅಕ್ಕ, ಸುಂದರಿ. ಮಗ -ಮಗಳು ಸಾಕಿತ್ತು, ಆದ್ರೆ ನಾಹುಟ್ಟಿದ್ದು ೫ ವರ್ಷಗಳ ನಂತರ. ನಾ ಬಣ್ಣದಲ್ಲಿ ಕಪ್ಪು, ಮೊಂಡು ಮೂಗು, ಸ್ವಲ್ಪ ಡುಮ್ಮಗೆ. ತೀರಾ ಸೈಲೆಂಟ್. ನೀನು ನಮ್ಮ ಮಗುವಲ್ಲ ಎಂದು ನಗ್ತಿದ್ರು. ನಾ ಎಷ್ಟೋ ದಿನಗಳು ಹಾಗೇ ಅನ್ಕೊಂಡಿದ್ದೆ. ಯಾವುದನ್ನೂ ನನಗೆ ಬೇಕು ಎಂದು ಎಂದೂ ಕೇಳಲಿಲ್ಲ. ಆದರೇ.....
ನನ್ನನ್ನೂ ಸಹ ನನ್ನ ಹದಿನಾರರಲ್ಲಿ ಒಬ್ಬ ಪ್ರೀತಿಸಿದ  ಆಗ ಅವನಿಗೆ ಹದಿನೇಳು. ಮದುವೆಯೂ ಆಯ್ತು,ಮುದ್ದಾದ ಎರಡು ಮಕ್ಕಳೂ ಸಹ. ಭಗವಂತ ಸುಖ, ಸಂಪತ್ತು ......ಸಕಲವನ್ನೂ ನೀಡಿದ.
ನಾನೂ ಒಂದಿಷ್ಟು ಅರಳಿದೆ, ಬೀಗಿದೆ.
ನಾನು ಹದಿನಾರು ಸ್ವಲ್ಪ ಚೆಂದ ಆಗಿದ್ದೆ. ನಮ್ಮ ಹಳೆಯ ದಿನಗಳ ಫೋಟೋ ನೋಡಿ, ಅತ್ತಿಗೆ ಅದು ಹೆಂಗೆ ನಮ್ಮಣ್ಣನನ್ನು ಲವ್ ಮಾಡಿದರೋ ಎಂದು ನಗ್ತಾನೆ ನನ್ ಮೈದುನ. ಹೌದು ನನ್ನವ ನೋಡೋಕೆ ಚೆಂದ ಅನಿಸ್ತಿರಲಿಲ್ಲ. ಆದರೇ ತುಂಬಾ ಗಂಭೀರವಾದ ಮೆಲು ಮಾತಿನ ಒಳ್ಳೆಯ ಹುಡುಗ. ಬಹುಷಃ ನಾವಿಬ್ರೂ ನಮ್ಮ ರೂಪಕ್ಕೆ ಸೋತು ಒಂದಾಗಿರಲಿಲ್ಲ.
ಹೆಚ್ಚು ದಿನ ಚೆಂದ ಉಳಿಯಲಿಲ್ಲ. ತೀವ್ರ ಅನಾರೋಗ್ಯಕ್ಕೆ ಬಿದ್ದ ನಾನು, ನನ್ನ ಸುಂದರ ನಗು ೬೫ ಕೆ,ಜಿ ದೇಹದ ತೂಕ, ಉದ್ದನೆಯ ಜಡೆ, ಚೆಂದದ ಬಣ್ಣ, ಕೊನೆಗೆ ಬದುಕುವ ಆಸೆಯನ್ನೂ ಕಳೆದುಕೊಂಡಿದ್ದೆ. ತೊದಲುತ್ತಾ , ಕಷ್ಟಪಟ್ಟು ಏನು ಮಾತಾಡೋದು ಅಂತಾ ಮೂಕಳಾದೆ, ಬಹಳಷ್ಟು ಸಮಯ .....ನಿಷ್ಕ್ರಿಯಳಾಗಿ ಮಲಗಿದ್ದಲ್ಲೇ ಮಲಗಿದ್ದೆ ನಾನು.
ನಾಲ್ಕು ಗೋಡೆಗಳ ಮಧ್ಯೆ ಮೌನಕ್ಕೆ ಶರಣಾದೆ. ಆಡಿಕೊಳ್ಳುವ ಜನಗಳ ಎದುರಿಸಲು ಭಯ ಇರಬೇಕು. ಅಥ್ವಾ ಎಲ್ಲವನ್ನೂ ಕಳೆದುಕೊಂಡ ನೋವು-ನಿರಾಸೆ ಇರಬಹುದು, ಕುಗ್ಗಿದೆ.
ಕೊನೆಗೊಂದು ದಿನ ಇನ್ನು ಏಳೋಕೆ ಸಾಧ್ಯವೇ ಇಲ್ಲ ಎಂದಮೇಲೂ ಎದ್ದು ಮಗುವಿನ ಹಾಗೆ ಹೆಜ್ಜೆಯಿಡುವುದು ಕಲಿತೆ, ಕುಂಟುತ್ತಾ ನಡೆದೆ. ಅಯ್ಯೋ ಪಾಪ ಎಂದವರ ಮರುಕ ನನಗೆ ಬೇಡವಾಗಿತ್ತು. ಸಹಾಯ ಮಾಡುವವರಿದ್ರೆ ಅವಲಂಬನೆ ಜಾಸ್ತಿ, ಅಸಾಹಾಯಕರಾಗ್ತೇವ.
ದಿನ ಕಳೀತಾ ........
ಜೀವನದಲ್ಲಿ ಕಲಿತೆ.
"ಯಾವುದೂ ಶಾಶ್ವತ ಅಲ್ಲ , ಯಾವುದೂ ನಮ್ಮದಲ್ಲ".
ದೈಹಿಕ -ಮಾನಸಿಕ ನೋವುಗಳ ಸಾಕಷ್ಟು ಉಂಡ ನನಗೆ ನೋವಿನಲ್ಲಿರುವವರಿಗೆ ಸಹಾಯ, ಸಾಂತ್ವನ ನೀಡುವ ಧೈರ್ಯ ಬಂತು.
ಯಾರಾದರೂ ಅವ್ಳು ಚೆನ್ನಾಗಿದಾಳೆ ಅಂದ್ರೆ ನಗು ಬರುತ್ತೆ, ದೇಹದ ಸೌಂದರ್ಯ ಮಾಸೋದು ಎಷ್ಟ್ ಹೊತ್ತು ? ಇದು ಶಾಶ್ವತ ಅಲ್ಲ ಅಂತಾ ನಂಗೊತ್ತಿದೆ ಎನ್ನಬೇಕು ಅನಿಸುತ್ತೆ.
ಕಳೆದುಕೊಂಡಿದ್ರಿಂದಾ ಪಾಠ ಕಲಿತು....
ಅಂದು ಕಳೆದುಕೊಂಡಿದ್ದನ್ನು ಇಂದು ಮರಳಿ ಪಡೆದಿದ್ದೇನೆ. ಜನಗಳ ಜೊತೆ ಬೆರೆತು ಹೊಸದಾಗಿ ಪಡೆದುಕೊಂಡಿರೋದು 'ಆತ್ಮವಿಶ್ವಾಸ'.
"ನಾನು ಕುರೂಪಿ ನಿಜಾ ಆದರೇ ಮನಸ್ಸು ಸುಂದರವಾಗಿದೆ".
ಅಂತರಾಳದ ಸೌಂದರ್ಯವೇ ನಿಜವಾದ ಸೌಂದರ್ಯ.

No comments:

Post a Comment