Saturday, 14 February 2015

ಅವಳು ಹಾಗೇ... ಆರೋಗ್ಯ ಹಾಳಾಗಿದ್ದು, ಮನುಷ್ಯರ ವರ್ತನೆಗಳಿಗೆ ಬೇಸರಗೊಂಡಿದ್ದು, ತನ್ನವರನೂ ದೂರ ಮಾಡಿಕೊಂಡಿದ್ದು, ಸಂಬಂಧಗಳ ಬಗ್ಗೆ ಅಸಹ್ಯಪಟ್ಟಿದ್ದು, ಭರವಸೆಗಳಿಲ್ಲದ ಜೀವನ ನಡೆಸುವ ಕಹಿಸತ್ಯಗಳ ನಗು ನಗುತ್ತಾ ಹೇಳುತ್ತಿದ್ದರೆ.... ಅವನು ಸುಮ್ಮನೆ ಎದ್ದು ಬಂದು ಅಪ್ಪಿಕೊಂಡಾಗ ಜೋರಾಗಿ ಅತ್ತಳು.

ಆಡಬೇಕಾದ ಮಾತುಗಳು ಮನದಲ್ಲೇ ಉಳಿದು ಹೆಪ್ಪುಗಟ್ಟಿ, ಹೊರಳಲಾರದ ನಾಲಿಗೆ.
ಎಲ್ಲದಕ್ಕೂ ಒಂದು ಮಿತಿಯಿದೆ, ಸಹನೆಗೂ ಸಹ.
ಪ್ರೀತಿಸುವ ಹೃದಯಕ್ಕೆ ನೋವುಗಳೇ ಯಾಕೆ ???
ಗುಲಾಬಿಯ ಹಿಡಿಯುವಾಗ ಮುಳ್ಳು ಚುಚ್ಚುತ್ತದೆ ಒಮ್ಮೊಮ್ಮೆ...

ಪಾದಗಳ ಕೈಲಿ ಹಿಡಿದು ಸವರಿದ ಅವನ ರೀತಿಗೆ ಆರಾಧನೆ ಇದು ಎಂದುಕೊಂಡೆ...
ನನ್ನ ಪ್ರೀತಿಯ ಹುಡುಕಾಟ ಇಲ್ಲಿಗೆ ಮುಗಿಯಿತು ಅನಿಸಿತು. 
ಸಿಕ್ಕಿತೋ ...ಸಿಕ್ಕಿತು ಎಂಬ ಭ್ರಮೆಯೋ....
ಒಂದಷ್ಟು ಕಾಲ ಜೊತೆ ಜೊತೆಗೆ .....ಖುಷಿ ಖುಷಿಯಲಿ ....
ಅವನ ಮಾತುಗಳು ಮೌನ ರೂಪ ತಾಳಿ, ಹೆಜ್ಜೆಗಳು ಏಕೋ ಹಿಂದೆ ಹಿಂದೆ ಸರಿಯತೊಡಗಿದಾಗ ಆತಂಕ ಸಹಜ.
ನಾ ನೋವಿನಲಿ ಇರುವಾಗ ನಲಿಸುವ ಅವನಿಲ್ಲ .....ಏನನ್ನಲಿ ????
"ನಿರೀಕ್ಷೆಯನ್ನೇ ಮಾಡದೆ ಪ್ರೀತಿಸಿ".
--ಈ ಮಾತನ್ನು ನೆನಪಿಸಿಕೊಳ್ಳಬೇಕೆ????

Thursday, 12 February 2015



ನಿನಗಾಗಿ ಇನ್ನೆಷ್ಟು ಕಾಯಲೀ ಹೇಳು ?
ಹೇಗೆ ತಾಳಲೀ ತಿಳಿಸು ಈ ಅಗಲಿಕೆಯನು ?
ನಾನು ಸೀತೆಯಲ್ಲ, 
ಊರ್ಮಿಳೆಯಲ್ಲ, ಶಬರಿಯ ಸಹನೆಯೂ ನನಗಿಲ್ಲ.
ತುಂಬಿಕೊಂಡಿರುವ ನಿರಾಸೆಯಲಿ ಬಳಲುತಿಹ ಸಾಮಾನ್ಯ ಪ್ರೇಮಿ ನಾನು ...
ತಾಳಿಕೊಳ್ಳುವುದು ಅಸಾಧ್ಯವಾದಾಗ ಭೂತಾಯಿಯೂ ಕಂಪಿಸುತ್ತಾಳೇ..
ನಾನೂ ಸಹಾ ...
...........ಅವಳು ತನ್ನ ದಿನಚರಿ ಬರೆದು ಮುಗಿಸಿದಳು .
ವಿರಹದುರಿಗೆ ಅಕ್ಷರಗಳು ಸುಟ್ಟು ಕರಕಲಾಗಿ ಹೋದವು.


ಏಕಾಂತದಲಿ ಹಿತವಾದ ವೇಣು ನಾದ ... ಎಂದೋ ಕೇಳಬೇಕೆಂದು ಬಯಸಿದ್ದು ಇದೇನಾ !!!! ಆಲಿಸುತ್ತಾ ನವಿರಾದ ಕಂಪನ ... ಮಧುರತೆಯಲ್ಲಿ ತಲ್ಲೀನ... ರಾಗಕೆ ಶರಣಾಗಿ.....ಒಪ್ಪಿಸಿಕೊಂಡೇ ಏಕೋ ....ಏನೋ .... ನನ್ನೇ ನಾ ... ಹೌದು ತೆರೆಯಬೇಕು ಮುಚ್ಚಿಟ್ಟ ಕದ, ಬೆಳಕು ಬರಲು... ಮನಸನ್ನೂ ಸಹಾ... ಅನುಭವಿಸಲು. ಇನ್ನೆಷ್ಟು ದಿನಾ ಬಾಕಿ ಇದೆ ...? ಸುಖ ಹುಡುಕಬೇಕು, ಬೋಳಿಮಗಂದು ಅಷ್ಟು ಸುಲಭವಾಗಿ ಸಿಗುವುದಿಲ್ಲ, ಸಿಕ್ಕಾಗ ಅಷ್ಟೂ ಬಾಚಿಕೊಳ್ಳಬೇಕು ---ಗೆಳತಿಯ ಮಾತು ನೆನಪಾಗಿ ತುಟಿಯ ಮೇಲೊಂದು ತೆಳುನಗು. ............ಮುಚ್ಚಿಟ್ಟೆ ಪುಸ್ತಕವನ್ನು. ಅಕ್ಷರಗಳು ಘಮ ಘಮಿಸಿದವು.

Wednesday, 11 February 2015



ಪ್ರೀತಿಯ ತೀವ್ರತೆಯಷ್ಟೇ ಸುಖ ವಿರಹವೂ. ಹೋಗಿ ಬಾ , ನಾ ಕಾಯ್ತಿರ್ತೇನೆ ಅಂದಿದ್ದೆ. ಚೈನ್ ಸ್ಮೋಕರ್ ಅವ್ನು , ಟೀ ಕುಡೀತಾ ಸ್ಮೋಕ್ ಮಾಡುವ ಅಭ್ಯಾಸ. ಟೀ ಮಾಡಿಕೊಡೆ ಅಂದರೆ , ಕಿಚೆನ್ ಗೆ ನೀನೂ ಬಾ ಅಪ್ಪಿಕೊಂಡಿರು , ನಾ ಟೀ ಮಾಡ್ತೀನಿ ಅಂತಾ ಅಂಟಿ ಕೊಂಡವಳು ನಾನು.ನನ್ನ ಪ್ರೀತಿಗೆ ಪರೀಕ್ಷೆ ಒಡ್ಡಿ ಹೊರತು ನಿಂತಿದ್ದ. ದಿನಾ ಒಂದು ಪೋಟೋ ಕಳಿಸೋ, ಬಿಟ್ಟಿರೋದು ಕಷ್ಟ ಅನಿಸುತ್ತೆ ಅಂತಾ ಕಣ್ಣೀರಾದೆ. ಓಕೆ ಓಕೆ ನೀನು ಪೋನು ಮೆಸೇಜು ಅಂತಾ ಡಿಸ್ಟರ್ಬ್ ಮಾಡಬೇಡಾ, ನಾನೇ ಫ್ರೀ ಇದ್ದಾಗ ಮಾತಾಡ್ತೇನೆ ಅಂದ. ನೀ ಬಳಿಯಿಲ್ಲದಿರುವಾಗ ನಿನ್ನ ನೆನಪುಗಳು ನನಗೆ ಹತ್ತಿರ ಹೋಗೋ ಎಂದೇ ಹುಸಿಮುನಿಸಿನಲಿ. ಪ್ರೇಮಿಗಳಿಗೆ/ವಿರಹಿಗಳಿಗೆ ಕಾಲ ಎನ್ನುವುದು ಶತ್ರು. ಹತ್ತಿರವಿದ್ದಾಗ -ಯುಗವೊಂದು ಕ್ಷಣ . ದೊರವಿರಲು ಕ್ಷಣವೊಂದು ಯುಗ. ಈ ಪಾಪಿ ಚಂದಿರನೂ ಸಹಾ ಅಷ್ಟೇ ,ಪ್ರೇಮಿಗಳು ಹತ್ತಿರವಿರುವಾಗ ತಂಪು , ದೂರವಿರಲು ಸೂರ್ಯನಾಗಿ ಬದಲಾಗ್ತಾನೇ . ದಿನವೆಲ್ಲಾ ಕೆಲಸ, ಓದು, ಏನೋ ಒಂದು. ರಾತ್ರಿಯಾದರೆ ನೀರವತೆಯಲ್ಲಿ ಬೇಕೆನಿಸುವ ಅವನು. ಏನೋ ಒಂದು ಮೆಸೇಜು - ಊಟ ಆಯ್ತಾ? ಮಲಗಿದ್ಯ? ಸುಸ್ತಾಗಿದೆಯಾ?ತುಂಬಾ ಸಿಗರೇಟು ಬೇಡ ಕಣೋ .. ಕೆಲವೊಮ್ಮೆ ಪುಟ್ಟ ರಿಪ್ಲೇಯ್. ಖುಷಿಗೆ ಅಷ್ಟು ಬೇಕಾದಷ್ಟಾಯ್ತು ದಿನಗಳೆದಂತೆ ...ಇವನನ್ನು ನಾನು ಇಷ್ಟು ಹೇಗೆ ಹಚ್ಚಿಕೊಂಡೆ ಅನಿಸತೊಡಗಿತು. ಪ್ರೇಮಪದ್ಯ ದಿನಾ ರಾತ್ರಿ ಮೊದಮೊದಲು ..ಕಲಿಸತೊಡಗಿದೆ.. ಸಹಿಸಿಕೊಂಡ. ನಂತರ ವಿರಹದ ಗೀಚುವಿಕೆ.... ಸುಮ್ಮನಾಗತೊಡಗಿದ. ಭಯವಾಯ್ತು, ಕಾಟ ಕೊದ್ತೀದ್ದೀನ ? ಕೇಳಿದೆ . ಇಲ್ಲವೇ ಹಚ್ಚಿಕೊಂಡ ಮೇಲೆ ಮುಗಿಯಿತು, ದೂರ ಹೋಗುವ ಮಾತಿಲ್ಲ , ಒಂದಷ್ಟು ತಲೆಬಿಸಿ ಜಾಸ್ತಿ ಇದೆ, ಡೋಂಟ್ ವರಿ ಸ್ವಲ್ಪ ಟೈಮ್ ಕೊಡು ಸರಿ ಹೋಗ್ತೇನೆ ಪ್ಲೀಸ್ ಅಂತಾ ಒಮ್ಮೆ ಕಾಲ್ ಬಂದಾಗ ಕೊಂಚ ನೆಮ್ಮದಿ. ಯಾವಾಗ ಬರ್ತಿಯಾ ? ಗೊತ್ತಿಲ್ಲ. ತುಂಬಾ ಕಷ್ಟ ಕಣೋ ಬಿಟ್ಟಿರೋದು ಮೌನ . ಅವನು ಹಾಗೆಲ್ಲಾ ಅರ್ಥವಿರದ ಮಾತುಗಳನ್ನು ಆಡುವುದಿಲ್ಲ, ಹುಸಿ ಭರವಸೆಗಳ ಕೊಡುವುದಿಲ್ಲ. ನನಗೂ ಮಾತುಗಳಲ್ಲಿ ನಂಬಿಕೆ ಏನಿಲ್ಲ. ಏನೇನ್ ಆಗುತ್ತೋ ಅದು ಆಗಲೀ ಅಂತಾ ಎಷ್ಟು ದಿನ ಸಹನೆ ವಹಿಸುವುದು ? ದಿನಗಳ ಲೆಕ್ಕ ಶುರುವಾಯ್ತು.. ಇಂದು, ಈಗ, ನಾಳೆ ಬಂದಾನು ಎಂಬ ನಿರೀಕ್ಷೆಯಲಿ.... ರೋಮ್ಯಾಂಟಿಕ್ ಆಗಿ ಪದ್ಯ ಬರೆಯುವ , ರೋಮ್ಯಾಂಟಿಕ್ ಆಗಿ ಮುದ್ದಿಸುವ ನನ್ನವನಿಗೆ ಮಾತಾಡಲಿಕ್ಕೆ ಮಾತ್ರಾ ಬಿಗುಮಾನ . ಮಾತಾಡುವ , ಹಾಡುವ ಅವನ ದನಿ ಕೇಳಿದರೆ ನನಗೋ ಏನೋ ಸಮಾಧಾನ. ದೂರದಲ್ಲೆಲ್ಲೋ ಬ್ಯುಸಿ ಇದ್ದಾಗಲೂ ಮಧ್ಯ ರಾತ್ರಿ ಕಾಲ್ ಮಾಡಿ, ಮೊದಲಿಗೆ ನಾನೇ ಹೇಳಬೇಕು ಎಂದು ನ್ಯೂ ಇಯರ್ ವಿಷೆಸ್ ಮಾಡಿದ ಹಾಗೇ...ವ್ಯಾಲಂಟೈನ್ಸ್ ಡೇ ಗೂ ವಿಶ್ ಮಾಡೋಕೆ ಬರಬರದಾ ? ಕಾಲ್ ಮಾಡ್ತಾನ ? ಇನ್ನೇನು ಹತ್ತಿರ ಬಂತು .. ಇವನ್ಯಾವಾಗ ಬಂದಾನು ? ಎಂದು ತಳಮಳ. ಸ್ಟುಪಿಡ್ ತುಂಬಾ ಪ್ರೀತಿಯುಕ್ಕಿದಾಗ ಏನಾದರೂ ಒಂದು ಮುದ್ದು ಮುದ್ದಾದ ಹೆಸರಿನಿಂದ ಕರೆಯೋಣ ಅಂದುಕೊಂಡರೆ, ಅವನ ಹೆಸರಿಗಿಂತಾ ಚೆಂದದ ಬೇರೆ ಹೆಸರು ಸಿಕ್ಕಿಲ್ಲ ಇನ್ನೂ ಮೌನ ವಿಷವಾಗಿ, ವಿರಹ ಕಡಲಾಗಿ ... ನಾನು ಉಳಿಯಲಿಲ್ಲ ನಾನಾಗಿ.. ಪ್ರೀತಿ, ಪ್ರೇಮ, ವಿರಹ ಎಲ್ಲಾ ಸಾಕಾಗಿ , ಅವನು ಏನು ಮಾಡ್ತಿದ್ದಾನೋ, ಹೇಗಿದ್ದಾನೋ ಎಂಬ ತಲ್ಲಣ ಶುರುವಾಯ್ತು. ಬೆಳ್ ಬೆಳಿಗ್ಗೆ ಸೋನು ನಿಗಮ್ ಹಾಡ್ತಿದ, ನಾ ಕೇಳ್ತಿದ್ದೆ..ಈ ರೋಮ್ಯಾಂಟಿಕ್ ವಾಯ್ಸ್ ಕೇಳೋದೂ ಹಿಂಸೆ. ದೂರದಲ್ಲಿರುವ ಅವನು ಬೇಕೂ ತುಂಬಾ ಅನಿಸ್ತಾನೆ. ಒಮ್ಮೆ ಬಾರೋ ನೋಡಬೇಕು ಅಂದರೆ ಬ್ಯುಸಿ ಆಗೋಲ್ಲ ಅನ್ನೋವ್ನು, ಸಣ್ಣಗೆ ಕೋಪ, ಮಾತುಗಳು ಶುರು ನನ್ನವು, ರೇಗಿಸ್ತಾ... ರೇಗಿಸ್ತಾ ನನಗೋ ಕಣ್ಣಲ್ಲಿ ನೀರು .. ಬಾಗಿಲು ತೆಗೆಯೇ ಬಕೆಟ್ ತಂದಿದ್ದೇನೆ ಕಣ್ಣೀರು ತುಂಬಿಸೋಕೆ ಅಂತಾ ಅನ್ನೋವ್ನು. ಅಳುವ ಕಣ್ಣು - ತುಟಿಯ ಮೇಲೆ ನಗು ಏಕ ಕಾಲಕ್ಕೆ ತರಿಸುವ ಚತುರ. ಕಾಡುತ್ತಾನೆ ..... ಕರಿ ಹುಡುಗ ನನ್ನವನು , ಬಲಶಾಲಿ, ಚಿಕ್ಕ ಮಗುವಂತೆ ನನ್ನ ಎತ್ತಿಕೊಂಡು ಚುಂಬಿಸುವ ತುಂಟ. ಒರಟು ಕೈನಲ್ಲಿ ಮೆತ್ತ ಮೆತ್ತಗೆ ದೇಹದ ಒಂದೊಂದೇ ಭಾಗಗಳ ಸ್ಪರ್ಷಿಸುವಾಗ ಅದೆಷ್ಟು ರೋಮಾಂಚನ! ಬೇಕೂ ಅನಿಸುತ್ತಾನೆ ..ಒಂದು ಬಿಗಿಯಪ್ಪುಗೆ , ಸಿಹಿ ಮುತ್ತು ಸಾಕು ಎಂದೊಮ್ಮೆ ಕೇಳಿದ್ದೆ ನಾನು,. ಅದು ಅಲ್ಲಿಗೆ ಮುಗಿಯಿತೇನು ? ನಾನೊಮ್ಮೆ ಹಿಂದಿನಿಂದಾ ತಬ್ಬಿದಾಗ, ಮೆಲ್ಲಗೆ ಕೈ ಹಿಡಿದು ಎದೆಗೆ ಒತ್ತಿಕೊಂಡು ಹಣೆಗೆ ಮುತ್ತಿಟ್ಟು ನನ್ನ ಮಗುವಾಗಿಸಿದ್ದ . . ಹೀಗೆ ತಬ್ಬಿಕೊಳ್ಳುವುದು ಗಟ್ಟಿಯಾಗಿ ಎಂದು ಕಲಿಸಿದವ ತುಂಟ. ಒಂದಕ್ಕೊಂದು ದೇಹಗಳು ಬೆಸೆದಾಗ ಮೈ ಎಲ್ಲಾ ರೋಮಾಂಚನ. ಅಗಲುವುದೇ ಬೇಡವೆನಿಸಿತ್ತು. ಹೆರಳ ಸರಿಸಿ, ಮೊಗವಿಡಿದು ಹಣೆಗೆ, ಅಲ್ಲಿಂದಾ ಕೆನ್ನೆಗೆ ಮೆತ್ತನೆಯ ತುಟಿಗಳ ತಗಲುವಿಕೆಯ ಹಿತ. ನಾಚಿಗೆಯಲಿ ತಗ್ಗಿದ ಮೊಗವೆತ್ತಿ ಮುಚ್ಚಿದ ಕಣ್ಣು ರೆಪ್ಪೆಗಳಿಗೆ ಹೂ ಮುತ್ತು ಎಷ್ಟು ಚೆಂದವಿತ್ತು! ಅಂತೂ ಅಧರಗಳು ಬೆಸೆದ ಆ ಸವಿಗಳಿಗೆ ಮೈ ಮರೆಸಿತ್ತು. ಮೆಲ್ಲ ಮೆಲ್ಲನೆ ಕುತ್ತಿಗೆ .. ಕೆಳಗಿಳಿದ ಅವನ ತುಟಿಗಳ , ಕೈಗಳ ತುಂಟಾಟ ಪ್ರತಿಯೊಂದು ಭಾಗವನ್ನೂ ಸಾರ್ಥಕಗೊಳಿಸಿತ್ತು ನಿಜಾ. ಪ್ರೀತಿಸುವುದನ್ನು ಕಲಿಸಿದವ ಅವನು.ಹಾ.. ಸೋನು ನಿಗಮ್ ನಾ ಮಧುರ ಹಾಡುಗಳು ನನ್ನನ್ನು ಎಲ್ಲೆಲ್ಲಿಗೋ ಕೊಂಡಯ್ದವು.... ಕನಸೋ ಇದು ? ನನಸೋ ಅವನು ಎದುರಲ್ಲಿ ನಗುತ್ತಾ ನಿಂತಿದ್ದ !!!ಕೈನಲ್ಲಿ ಒಂದು ಕವೆರ್ ಜೊತೆಗೆ . ಯಾಕೋ ಹೀಗ್ಮಾಡಿದೆ? ಕಣ್ಣೀರು ನನಗೆ ದುಃಖಕ್ಕೂ ಖುಷಿಗೂ ಧಾರಾಕಾರ ಸಹಜ ನಿಂಗೆ ಹೀಗೆ ಇಷ್ಟು ಸಂತೋಷ ಸಿಗಲೀ ಅಂತಾ ನಕ್ಕ. ದಿನದಿನವೂ ಹೇಗೆ ಸಾಯ್ತಿದ್ದೆ ಗೊತ್ತಾ ? ಈಗಲೂ ಮಾತುಗಳು ಬೇಕಾ ?ಅಂದು ಕವರ್ ನನ್ನತ್ತ ನೀಡಿದ . ಏನಿದು ಅಂದೇ . ಮಲ್ಲಿಗೆಯ ಘಮಲು ಕೊನೆಯ ತುಂಬಾ ಹರಡಿತ್ತು. ಬಿಚ್ಚಿ ನೋಡಿದರೆ ಗೊತ್ತಾಗುತ್ತೆ ಎಂದ. ಅಷ್ಟಕ್ಕೂ ಪ್ರೀತಿ, ಮಲ್ಲಿಗೆಯ ಘಮ ಬಚ್ಚಿಡೋದು ಹೇಗೆ ? ತೆಗೆದರೆ ಮಲ್ಲಿಗೆ , ಜೊತೆಯಲ್ಲಿ ತುಂಬಾ ಗಾಜಿನ ಬಳೆಗಳು. ಎಂದೋ ಒಮ್ಮೆ ನನಗೆ ಇದು ತಂದುಕೊದುವೆಯಾ ಎಂದಿದ್ದೆ. ಖುಷಿಯಾಯ್ತು ಇಂದು . ಹ್ಯಾಪಿ ವ್ಯಾಲಂಟೈನ್ಸ್ ಡೇ ಕಣೆ ಅಂದ , ಅಯ್ಯೋ ಸ್ವೀಟ್ ತರಲಿಲ್ಲ, ಕೊತ್ತುಬಿದ್ಲಾ ಹಾಗೇ ಎಂದ. ನಾ ತಲೆ ತಗ್ಗಿಸಿದ್ದೆ..ಕಾಯಿಸಿ, ಪೀಡಿಸಿ, ನೋಯಿಸಿ, ಸತಾಯಿಸಿ ಪ್ರೀತಿಸುವ ಇವನ ಪರಿಗೆ ತುಂಬಾ ಭಾವುಕಳಾಗಿದ್ದೆ. ಸುರಿವ ಕಣ್ಣುಗಳ ತುತಿಗಲಿ ಒರೆಸಿ ಸಕ್ಕರೆಯ ಮುತ್ತಿಟ್ಟ ಅವನ ಅಕ್ಕರೆಗೆ ಶರಣಾಗಿ ನಾನವನೊಳು ಒಂದಾದೆ. ಒಲವೆಂದರೆ ಹೀಗೇ..... ಒಬ್ಬರಿಗಾಗಿ ಮತ್ತೊಬ್ಬರು ಜೀವಿಸುವುದು.

Tuesday, 10 February 2015

ನನ್ನ ಹೃದಯದ ಮಿಡಿತಕ್ಕೆ
ನಿನ್ನ ಪ್ರೀತಿಯೇ ಉಸಿರು
ಸಮಯದ ಪರಿವೆಯಿರದೇ
ಜಪಿಸಿದೆ ನಿನ್ನದೇ ಹೆಸರು.
ಆಗಿದೆ ನನಗೆ ವಿರಹದಲಿ
ಪ್ರೀತಿಯಾಳದ ಪರಿಚಯ
ನಿನಗಾಗಿ ಸುರಿದ ಕಣ್ಣೀರಿನಲಿ
ನನ್ನೊಲವ ನೀ ಗುರುತಿಸುವೆಯಾ ?
ಹೊತ್ತಿಕೊಳ್ಳುವ ಪ್ರಣತಿಯನ್ನು
ಮುತ್ತಿಕೊಳ್ಳಲು ಕಾಯುವ
ಹುಚ್ಚು ಕತ್ತಲಿನಂತೆ ಪ್ರೀತಿಸಿದ್ದೇನೆ.
ಒಂದು ಸಂಬಂಧದಲ್ಲಿ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯನ್ನು ನಂಬಿಸಲು ಸಾಕ್ಷಿ ಸಮೇತ ರುಜುವಾತುಪಡಿಸಬೇಕಾದ ಗಳಿಗೆ ಜೀವನದಲ್ಲಿ ಅತ್ಯಂತ ದುರ್ಬಲ ಗಳಿಗೆ ಆಗಿರುತ್ತದೆ. ಸಂಬಂಧಗಳು ಏರ್ಪಟ್ಟಷ್ಟು ಸುಲಭವಲ್ಲ ,ಕೆಡದಂತೆ ನೋಡಿಕೊಳ್ಳುವುದು.
ಯಾವುದೇ ಸಂಬಂಧಗಳ ಬಿರುಕು ತೀಕ್ಷ್ಣವಾದ ಮಾತುಗಳಿಂದಾ.
ಮುನಿಸಿಕೊಳ್ಳುವುದು, ಬಿರುನುಡಿಗಳಾಡುವುವುದು ಸಹಜ , ಆದರೆ ಮಾತು ಬಿಡುವುದು ಇದ್ಯಲ್ಲಾ ಅದು ಬಲು ಹಿಂಸೆ . ಸಂದರ್ಭ ಕೆಲವೊಮ್ಮೆ ಭಿನ್ನಾಭಿಪ್ರಾಯ ತರುತ್ತದೆ. ಒಬ್ಬರು ಕೋಪಗೊಂಡಾಗ , ಮತ್ತೊಬ್ಬರು ತಾಳ್ಮೆಯಿಂದಾ, ಎದುರುತ್ತರ ಕೊಡದಿದ್ದರೆ, ಪರಿಸ್ಥಿತಿ ತಾರಕಕ್ಕೆ ಹೋಗುವುದನ್ನು ನಿಭಾಯಿಸಬಹುದು, ಸಂಬಂಧಗಳ ಕೆಡಿಸಿಕೊಳ್ಳದಿರಬಹುದು.
ನನ್ನ ಬಂಧುಗಳು ಎಷ್ಟೋ ಸಲ , ನನ್ನ ತಪ್ಪಿಲ್ಲದ್ದಾಗ್ಯೂ ನನ್ನಲ್ಲಿ ಮಾತುಬಿಟ್ಟ ಸಂದರ್ಭವಿದೆ, ಅದಿರಲಿ ಗಂಡ ಹೆಂಡಿರು ಕ್ಷುಲ್ಲಕ ವಿಷಯಗಳಿಗೆ ವಾರಗಟ್ಟಲೆ ಮಾತು ಬಿಡುವ ಜೋಡಿಗಳೂ ನಮ್ಮಲ್ಲಿವೆ. ಯಾವುದೇ ಸಂಬಂಧ ಅಷ್ಟು ಸುಲಭವಾಗಿ ಮುರಿಯಲು ಆಗುತ್ತಾ ? ನಾನಂತೂ.....ಅವರು ಮಾತು ಬಿಟ್ರೆ ಸುಮ್ನಿರ್ತೇನೆ , ಬಂಧುಗಳು ಶುಭ ಸಂದರ್ಭಗಳಲ್ಲಿ ಭೆಟ್ಟಿ ಆಗಲೇಬೇಕಾಗುತ್ತೆ , ಮಾತಾಡಿಸ್ತಾರ? ಆಡಿದ್ರೆ, ಏನೂ ನಡೆದೇ ಇರಲಿಲ್ವೇನೋ ಅನ್ನೋ ಹಾಗೆ ನಗು ನಗುತ್ತಾ ಮಾತಾಡಿರ್ತೇನೆ . ಇದು ನನ್ನ ದೌರ್ಬಲ್ಯ ಅಲ್ಲ , ಒಳ್ಳೆಯತನ . ಪ್ರತಿಯೊಂದು ಕ್ಷಣವನ್ನೂ ಖುಷಿಯಾಗಿರಬೇಕು ಎನ್ನುವ ನನಗೆ ಯಾರ ಮೇಲೆಯೂ ಕೋಪ ,ದ್ವೇಷ ಸಾಧಿಸುವ ಮನಸಿಲ್ಲ .
ಮಾತು ಬಿಡೋದು ಅಂದ್ರೆ ?ಚೀ...
ದಿನ ಬೆಳಗಾದ್ರೆ ಮುಖ ನೋಡೋದು ಹೇಗೆ ಸಾಧ್ಯ?
ಒಟ್ಟಿಗೆ ಬದುಕುವಾಗ .....
ಹೊರಗೆ ದುಡಿದು ಬರುವ, ಒತ್ತಡಗಳಲ್ಲಿ ಸಿಲುಕುವ ಗಂಡಸು , ಮನೆಗೆ ಬಂದಾಗ ತನ್ನವರ ಮೇಲೆ ಅಸಹನೆ ತೋರಿಸಿಕೊಂಡರೆ....
ನಾಲ್ಕು ಗೋಡೆಗಳೇ ತನ್ನ ಪ್ರಪಂಚವೆಂದು ಹಿರಿಯರ, ಮಕ್ಕಳ ಜವಾಬ್ದಾರಿಯಲ್ಲ್ಲಿ ದಿನವೆಲ್ಲಾ ದುಡಿವ ಗೃಹಿಣಿ ತನ್ನ ಅಸಹನೆಯನ್ನ್ನು ತನ್ನವನ ಮೇಲೆ ತೋರಿಸಿದರೆ ....
ಒಂದಷ್ಟು ಸಹನೆ .....ಒಬ್ಬರಿಗೊಬ್ಬರು ಎದುರಾಡದೆ ಇದ್ದುಬಿಟ್ಟರೆ , ಪರಿಸ್ಥಿತಿ ಶಾಂತಗೊಂಡಾಗ ತಪ್ಪು ಸರಿಗಳ ವಿವೇಚನೆ ಬರದೆ ಎಲ್ಲಿ ಹೋಗುತ್ತೆ ?
ಎಷ್ಟು ಜನ ಹೀಗಿರ್ತಾರೋ ಗೊತ್ತಿಲ್ಲ .
ಬೆಳಗ್ಗೆ ದುಡಿಯಲು ಹೊರಡುವ ಗಂಡನಿಗೆ ಒಂದು ಹಗ್ ಮಾಡಿ ಬೀಳ್ಕೊಡುವ, ಸಂಜೆ ಮನೆಗೆ ಬರುವಾಗ ನೀಟಾದ ಡ್ರೆಸ್ ನಲ್ಲಿ ನಗುತ್ತಾ ಬಾಗಿಲು ತೆಗೆಯುವ ಹೆಂಡತಿ ಸಂಸಾರ ನಿರ್ವಹಣೆಯ ಕಲಿತ ಜಾಣೆ .
ಸಿಟ್ಟು ಸೆಡವು ಗುಡುಗು ಸಿಡಿಲು ತಂದ ನೋವೂ ನಮ್ಮದೇ... ಶುಭ್ರ ಗಗನ ಆಗಲು ಜೀವನ ಪ್ರೀತಿಯೊಂದೇ ಸಾಲದೇ .....?
ರಾತ್ರಿಯಿಡೀ ಅಲ್ಲಿಂದ ಇಲ್ಲಿಗೆ ಓಡಾಡುತ್ತಾ, ಏನೋ ಓದುತ್ತಾ, ಟೀ ವಿ ನೋಡ್ತಾ ನಿದ್ರಿಸದ ನಾನು ಬೆಳಗಿನ ನಿದ್ರೆಯನ್ನು ತುಂಬಾ ಎಂಜಾಯ್ ಮಾಡ್ತೇನೆ . ನನ್ ಪಪ್ಪಿ 'ಡಾಲಿ' ಬಂದಮೇಲೆ ಅದಕ್ಕೂ ಸಂಚಕಾರ . ಅದು ನನ್ ಮಕ್ಕಳ ಹಾಗೆ ತುಂಟ , ಚೂಟಿ ಎರಡು ತಿಂಗಳ ಮರಿ ಸಖತ್ ಸ್ಟ್ರಾಂಗ್ . ಕಟ್ಟು ಬಿಚ್ಚಿದರೆ ಮನೆ ತುಂಬಾ ಕುಣಿತ , ಅಕ್ಕನ ಹೌದು ಅದು ನನ್ನ ಮಗಳಿಗೆ ಮತ್ತು ಮಗನಿಗೆ ತಂಗಿ smile emoticon ಅವಳ ಬಾತ್ ರೂಂ ಗೆ ಓಡಿ ಬಂದು ಬಕೆಟ್ ನಲ್ಲಿರೋ ನೀರು ಕುಡಿಯುತ್ತೆ, ಸೂಸು ಮಾಡುತ್ತೆ, ಅವಳ ನಿಲುವುಗನ್ನಡಿಯ ಮುಂದೆ ನಿಂತು ತನ್ನನ್ನು ತಾನೇ ನೋಡಿಕೊಂಡು ಬಾಲ ಅಲ್ಲಾಡಿಸ್ಕೊಳ್ತ ಖುಷಿಪಡುತ್ತೆ . ಎಷ್ತೆಷ್ಟೊತ್ತಿಗೋ ಎದ್ದು ಹಸಿವೆ ಎಂದು ಅಳುತ್ತೆ, ಸಿಕ್ಕಾಪಟ್ಟೆ ಸೂಸು ಮಾಡಿ ಮನೆನೆಲ್ಲಾ ಗಬ್ಬು ಮಾಡುತ್ತೆ, ಎಲ್ಲಾ ವಸ್ತುಗಳೂ ನನಗೆ ಕಚ್ಚೋಕೆ ಇರೋದು ಅಂತಾ ಕಚ್ಚುತ್ತೆ, ತುಂಬಾ ಮುದ್ದು ಮಾಡಿಸ್ಕೊಳ್ಳುತ್ತೆ,ಹಾಕಿದ ರಂಗೋಲಿ ಕೆಡಿಸುತ್ತೆ , ಪೆಡಿಗ್ರಿ ಬೇಕು , ನೀರು ಬೇಕು, ಆಚೆ ಹೋಗಬೇಕೂ ಅಂತಾ ಹೇಳುತ್ತೆ, ಬುಲೆಟ್ ಸೌಂಡ್ ಅದಾಗ ಎದ್ದು ಬಾಲ ಅಲ್ಲಾಡಿಸಿಕೊಂಡು ಕುಯ್ ಗುಡುತ್ತೆ, ಅಣ್ಣ ಶಾಲೆಯಿಂದ ಬರುವ ವೇಳೆ ಅದಕ್ಕೆ ಗೊತ್ತು, ಮುದ್ದು ಮರಿಗೆ ನಾನೆ ಅಮ್ಮ smile emoticon ಶಾಂಪು ಮಾಡೋಕೆ ,ತಿನ್ನಿಸೋಕೆ, ಸೂಸು ಕಕ್ಕ ಶುದ್ದ ಮಾಡೋಕೆ smile emoticonಯಾರೋ ಏನೋ ಇದು ನಂ ಕೈಲಿ ಸೇವೆ ಮಾಡಿಸ್ಕೊಂಡು ನಮ್ಮನೇಲಿ ಹಾಯಾಗಿರೋಕೆ ? ಯಾರ ರುಣವೋ ಏನೋ ....
ನಾನಂತೂ ಜನ್ಮ ಪುನರ್ಜನ್ಮ ಅಂತೆಲ್ಲಾ ಯೋಚಿಸೋದು ಜಾಸ್ತಿ smile emoticon ಋಣ , ಕರ್ಮ ಅಂತೆಲ್ಲ ತಲೆಕೆಡಿಸಿಕೊಳ್ಳುವುದು ಜಾಸ್ತಿನೆ.
ಹೋಗಲೀ ಬಿಡೀ ... ನಾನು ಇವಳ ದೆಸೆಯಿಂದ ಬೇಗ ಏಳುವುದು, ವಾಕಿಂಗ್ ಹೋಗುವುದು, ಮನೆಯನ್ನು ಬೇಗ ಬೇಗ ಕ್ಲೀನ್ ಮಾಡೋದು ಕಲಿತಿದ್ದೇನೆ. ಒಂದಷ್ಟು ಲವ ಲವಿಕೆ ಅಂತೂ ಇದೆ ಸುಳ್ಳಲ್ಲ smile emoticon
ಅಷ್ಟೇ ಅಲ್ಲ ಇನ್ನೂ ಹೇಳ್ತೇನೆ ಕೇಳಿ ---
ನೆನ್ನೆಯಿಂದಾ ನನ್ನ ಮೀನುಗಳು ಮೇಲಕ್ಕೆ ಬಂದು ಅಡ್ದಾಡ್ತಿವೆ, ಅಕ್ವೇರಿಯಂನ ಫಿಲ್ಟರ್ ಕೆಲಸ ಮಾಡೋದು ನಿಲ್ಲಿಸಿದೆ . ೩ ಮೀನುಗಳು ಕೊನೇಯುಸಿರು ಎಳೆದವು. ಪಾಪ ಪೂರಾ ಮೀನುಗಳು ಸತ್ತರೆ, ಅದನ್ನು ಕೊಟ್ಟವರು ನನ್ನ ಶಪಿಸಿಯಾರು ಎಂಬ ಭಯ, ಇಂದು ಧೈರ್ಯ ಮಾಡಿ , ಓಹೋ ನಾನೇನು ಪೆದ್ದಿನ ಅಂತಾ aquarium ನ ಎಲ್ಲಾ ಭಾಗಗಳನ್ನೂ ಬಿಚ್ಚಿದೆ, ಫಿಲ್ಟರ್ ಬಿಚ್ಚಿದರೆ ಅದರ ತುಂಬಾ ಮೀನುಗಳ ಕಲ್ಮಶ smile emoticon ಅಯ್ಯೋ ನಾನೇನು ಮಾಡಿದ್ದೇನೋ ಇದನ್ನೂ ತೊಳಿಯಬೇಕಯ್ತಾ ಅನಿಸ್ತು ಒಂದು ಕ್ಷಣ.
ಇದನೆಲ್ಲಾ ಯಾಕೆ ಹೇಳಿದೆ ಅಂದರೆ ---
ನಾನೇ ಮಲಗಿದಲ್ಲ್ಲೇ ಮಲಗಿ, ನನ್ನ ದೇಹವೇ ಅಸಹ್ಯ ಎನಿಸಿದ ಮೇಲೆ ಮತ್ಯಾವುದೂ ಅಸಹ್ಯ ಎನಿಸಿಲ್ಲ ನಿಜಾ. ನಮ್ಮವರು, ನಮಗೆ ಬೇಕಾದವರ ಅವಗುಣಗಳು, ಅಸಹ್ಯಗಳು ನಮ್ಮ ಅವಗಾಹನೆಗೆ ಬರುವುದು ಅಪರೂಪ ಅಲ್ವಾ ? ಅಷ್ಟಕ್ಕೂ ನಾವು ಮಾಡುವ ಯಾವುದೇ ಕೆಲಸವನ್ನು ಶ್ರದ್ದೆ, ಪ್ರೀತಿಯಿಂದಾ ಮಾಡಬೇಕು ಅಷ್ಟೇ , ಅಸಹ್ಯ ಅನಿಸೋಲ್ಲ, ಎಲ್ಲರೂ ನಮ್ಮವರೇ ಅನ್ಕೊಂಡ್ರೆ ಕಷ್ಟ ಕಡಿಮೆ 
ಕ್ಷಮಿಸಿ ನನ್ನಲಿ ಮಾತುಗಳಿಲ್ಲ.
ಆಡದೆ ಉಳಿದಿಹ ಮಾತು ನೂರಿದೆ ಎಂದು ಹಾಡಿದವನೊಡನೆ ಮಾತುಗಳ ಮುಗಿಸಿದ್ದೇನೆ .
ಕನಸುಗಳು ನನಗಿಲ್ಲ, ಹಳೆಯ ನೆನಪುಗಳ ಕಾಟ ಇಲ್ಲ, ಮತ್ತೆ ಮಾತೇನಿದೆ? 
ತಬ್ಬಿದ ತೋಳುಗಳಲಿ, 
ಅವನ ಎದೆಯ ಮೇಲೆ ಮೊಗವಿರಿಸಿ, 
ನನ್ನೊಳಗಿನ ಮಡುಗಟ್ಟಿದ ನೋವುಗಳ ಕರಗಿಸಿ ಕಣ್ಣೀರಾಗಿಸಿದ್ದೇನೆ.
ಮಿಲನ ಸುಖದಲಿ ನೋವುಗಳ ಮರೆಸಿದವನು , ಎಲ್ಲವನ್ನೂ ಕೊಂಡೊಯ್ದಿದ್ದಾನೆ.
ನನ್ನಲಿ ಏನು ಉಳಿಸಿಲ್ಲಾ.
ಹಗಲು ರಾತ್ರಿಯ ಅರಿವಿರದೆ ಪ್ರೀತಿಯಲ್ಲಿ ಮುಳುಗಿ ತೇಲಿದ ಸುಖ ನನದು
ನನಗೆ ಶುಭೋದಯ, ಶುಭ ರಾತ್ರಿ ಹೇಳಬೇಡಿ.
ನನ್ನಲಿ ಮಾತುಗಳಿಲ್ಲ......
ದಯವಿಟ್ಟು ಹೇಗಿದ್ದೀಯಾ ಕೇಳದಿರಿ,
ಮನದಲ್ಲೇ ಇರುವವನ ಸಖ್ಯದಲಿ ನಾನೀಗ, ಮುಂದೆಂದೂ ಖುಷಿಯಾಗಿರುವೆ,
ಕ್ಷಮಿಸಿ ಮಾತುಗಳಿಲ್ಲ ನನ್ನಲ್ಲಿ.
ಮಾತುಗಳು ಬೇಕಾಗಿಯೂ ಇಲ್ಲ,.
ಇದೊಂದು ಕಥೆ.......ನಾ....???? 
ಫೋನ್ ಮಾಡಬೇಡ...ಹೇಯ್ ಮೆಸೇಜ್ ಮಾಡಿದರೆ ಡಿಸ್ಟರ್ಬ್ ಆಗುತ್ತೆ.
ಕೆಲಸ ಮುಗಿಸಿ ಮನೆಗೇ...ಬರ್ತೀನಿ...ತಡವಾದರೇನಂತೆ..
ಹೇಳದೇ ಇದ್ದರೇ ಏನಂತೇ...
ಎಲ್ಲೋ ಹೋಗಿದಾರೆ ಬರ್ತಾರೆ ಅಂದುಕೋ...
ನನ್ನ ಅರ್ಥ ಮಾಡ್ಕೋ...
Busy ಕಣೇ.....
ಛೇ ನನ್ನ ಅರ್ಥನೇ ಮಾಡಿಕೊಳ್ಳಲ್ಲ ನೀನು ...
ಎಂದೆಲ್ಲ ಸಿಡಿಮಿಡಿಗೊಳ್ಳುವ ಅವನಿಗೆ. ....
ನಾಲ್ಕು ಗೋಡೆಗಳ ನಡುವಿನ ಅವಳ ಒಂಟಿತನದ ಪ್ರೀತಿಯ ಹಲುಬುವಿಕೆ ಮಾತ್ರ ಎಂದೂ ಅರ್ಥವಾಗಲೇಯಿಲ್ಲ.
ನೀ ದೂರವಿರೆ ನೂರಾರು ಬಯಕೆಗಳು....
ಅರುಹಲು ಅದೆಷ್ಟೋ ಮಾತುಗಳು...
ಅದೇಕೋ ನಾನರಿಯೆನು
ನಿನ್ನೆದುರು ನಿಂತಾಗ. ..
ತಣ್ಣಗೆ ಕೊರೆಯುವ ಮಂಜು ನಾನು.
ಆಟ ಮುಗಿದಿಲ್ಲ ಇನ್ನೂ .... 
ಹಾಸಿದ್ದ ಪಗಡೆ ಹಾಸು ನಲುಗಿದೆ 
ದುಗ, ಎಂಟು, ಹನ್ನೆರಡು ಎಲ್ಲಾ ಗರ ...ದಾಳ ಉರುಳಿಸಿದಾಗೆಲ್ಲ ನಗು 
ಅವನೇಕೆ ಥಟ್ ಅಂತಾ ಎದ್ದು ಹೋದ ?
ಹೇಳದೆ ಹೋದದ್ದೇಕೆ ತಿಳಿಯದಾದೆ 
ನನ್ನ ಮೇಲೆ ಮುನಿಸೆ ?
ಛೆ ಇರಲಿಕ್ಕಿಲ್ಲ ...ನಾನವನನ್ನು ತುಂಬಾ ಪ್ರೀತಿಸುತ್ತೇನೆ ನಿಜ ..
ಬರಬಹುದೆ ಅವನು ಹಿಂತಿರುಗಿ ?
ಆಟ ಇನ್ನೂ ಮುಗಿದಿಲ್ಲ ....
ನಾನು ಹಣ್ಣು ಮಾಡಬೇಕು
ನನ್ನ ಆಟ ಮುಗಿಸಬೇಕು ...
ಆಟ ಮುಗಿಸದೆ ಅರ್ಧಕ್ಕೆ ಎದ್ದು ಹೋದವನಿಗಾಗಿ ....
ಮರಳಿ ಬಾರದವನಿಗಾಗಿ ನಾ ಕಾಯಲೇ ?
ಆಟ ಮುಗಿದಿಲ್ಲ ಇನ್ನೂ ......
ಬೇಕೆಂದು ಬಯಸಿದಷ್ಟೂ ನಿನ್ನ,
ದೂರ ತಳ್ಳಿ ನೋಯಿಸುತ್ತಿ ಏಕೋ ... 
ನಿನಗಾಗೇ ಮುಡಿದ ಮಲ್ಲಿಗೆ ಬಾಡಿ, ಹೆರಳ ಜಗ್ಗುತ್ತಿದೆ... 
ಸದ್ದಾದಾಗೆಲ್ಲಾ ಹೊಸಿಲಿಗೆ ಓಡಿ ಬಂದು.... 
ದಾರಿಯುದ್ದಕ್ಕೂ ನೋಡಿ ಕಣ್ಣು ನೋಯುತ್ತಿದೆ, 
ಉಟ್ಟ ರೇಸಿಮೆ ಸೀರೆ ಮುದುಡಿತು,
ಜೊತೆಗೆ ನಿನಗಾಗೆ ಕಾದ ಮನಸ್ಸೂ ಸಹ ....
ಹಸನಾದ ಬೆಣ್ಣೆ ಕರಗಿತು, ಕೆಂಪಗೆ ಸುಟ್ಟ ಬಿಸಿ ರೊಟ್ಟಿ ತಣ್ಣಗಾಯ್ತು....
ನೀ ಕರಗಲಿಲ್ಲ, ಬರಲಿಲ್ಲ, ನನ್ನೆದೆ ಮಾತ್ರ ಸುಡುತ್ತಿದೆ ವಿರಹದಲಿ..
ಒಲ್ಲದವನ ಒಲಿಸಿಕೊಳ್ಳುವ ಹುಂಬತನ ನನದು
ಬೇಕಿತ್ತೆ ನನಗೀ ಗೊಡವೆ ?
ಬೇಕೆಂಬ ಬಯಕೆಗಳ ಅದುಮಿಟ್ಟು ಬದುಕುವುದು ದುಸ್ತರ ...
ಹುಡುಕಿದರೂ ಮತ್ತೆಂದೂ ಸಿಗದಂತೆ....
ಕಂತೆಗಳ ಒಗೆದು ಕಾಣದೂರಿಗೆ ನಡೆದುಬಿಡುವೆ
ನೀನಾದರು ಇರು ನಿಶ್ಚಿಂತೆಯಲಿ ....
ಅಂದು ದೀಪಾವಳಿ, ಅಮ್ಮ ನನಗೆ ಎಣ್ಣೆ ಒತ್ತಿ ನೀರು ಹಾಕಿದ್ದರು, ತಲೆ ಒರೆಸಿಕೊಳ್ಳುತ್ತಾ ಕನ್ನಡಿ ಮುಂದೆ ನಿಂತಿದ್ದೆ. ಕನ್ನಡಿಯ ಮೂಲೆಗೆ ಚುಚ್ಚಿಟ್ಟ ಒಂದು ದೊಡ್ಡ ಸೂಜಿ ಕಂಡಿತು. ಅದು ..... ಆಗೆಲ್ಲಾ u pin ಬಳಸಿ ಉಲ್ಲನ್ ಶಾಲ್ ಹಾಕೋದು ಕಲಿತ ಹೊಸತು. ಉಲ್ಲನ್ ಸಮೇತ ಇದ್ದ ಸೂಜಿ. ಅದನ್ನು ತೆಗೆದುಕೊಂಡು ನಾನೇ ಮೂಗಿಗೆ ಮೆತ್ತಗೆ ಚುಚ್ಚಿಕೊಂಡೆ . ಅರ್ಧ ಒಳಗೆ ಹೋಗಿಯೇ ಬಿಡ್ತು , ಮತ್ತಷ್ಟು ಮೆತ್ತಗೆ ಒತ್ತಿದೆ, ಮೂಗಿನ ಈಚೆ ತುದಿಗೆ ಬಂದು ಕೈಗೆ ಸಿಕ್ಕಿತು , ಅಮ್ಮಾ ಮೂಗು ಚುಚ್ಚಿಕೊಂಡೆ ಅಂತಾ ಕಿರುಚಿದೆ . ಅಮ್ಮ ಬಂದು ಸೂಜಿ ಪೂರ್ತಿ ಸುರಿದು ಉಲ್ಲಾನ್ ಕಟ್ಟಿದರು . ಎಲ್ಲರಿಗೂ ಆಶ್ಚರ್ಯ ಸುಧಿ ಅವಳಿಗೆ ಅವಳೇ ಮೂಗು ಚುಚ್ಚಿಕೊಂಡಳಂತೆ ಅಂತ smile emoticon
ನಮ್ ಕಡೆ ಹೆಣ್ಣು ಮಕ್ಲು ದೊಡ್ಡವರು ಆಗ್ತಿದ್ದ ಹಾಗೆ, ಸೋದರ ಮಾವನ ಜವಾಬ್ದಾರಿ ಅವಳಿಗೆ ಮೂಗು ಚುಚ್ಚಿಸೋದು . ಆಗ ಹೆಚ್ಚು ನೋವಾಗೋಲ್ಲ, ಇಲ್ಲಾಂದ್ರೆ ಮದುವೆಯಾಗುವಾಗ ಗಂಡನ ತೊಡೆ ಮೇಲೆ ಕುತ್ಕೊಂಡು ಮುಗು ಚುಚ್ಚಿಸ್ಕೊಬೇಕಾಗುತ್ತೆ ಅಂತ ಹೆದರಿಸೋರು . ನನಗಿಂತ ೫ ವರ್ಷ ಹಿರಿಯವಳಾದ ಅಕ್ಕ ಮೂಗು ಚುಚ್ಚಿಸಿಕೊಳ್ಳುವಾಗಿನ ಆರ್ಭಟ ನೋಡಿ ಹೆದರಿಬಿಟ್ಟಿದ್ದೆ ನಾನು. ಅತ್ತೆ, ಮಾವ , ಅತ್ತಿಗೆ , ಅಮ್ಮ ಎಲ್ರೂ ಅಕ್ಕನನ್ನು ಬಿಗಿಯಾಗಿ ಹಿಡ್ಕೊಂಡು ಮೂಗು ಚುಚ್ಚಿದರೆ, ಅವ್ಳು ನೋವಿಗೆ, ಎಲ್ರಿಗೂ ಹೊಡೆದು ರಂಪ ಮಾಡಿದ್ಲು, ಆಗ ಸರ್ಯಾಗಿ ಚುಚ್ಚದೆ, ಮತ್ತೆ ಸ್ವಲ್ಪ ದಿನಗಳ ನಂತರ ಚುಚ್ಚುವ ಕಾರ್ಯಕ್ರಮ ಇತ್ತು . ಪಜೀತಿ , ಇಷ್ಟು ದಪ್ಪದ ಮೂಗು , ನೋವು ಅನುಭವಿಸಿದ್ದು ನೋಡಿದ್ದೆ .
ಅದಕ್ಕೆ ನನಗೆ ನಾನೆ ಯಾರೂ ಇಲ್ಲದಾಗ ,ಮೂಗು ಚುಚ್ಚಿಕೊಂಡು ನೋವು ಮಾಡಿಕೊಂಡೆ, ಯಾರ ಮುಂದೆಯೂ ಅತ್ತು ಅವಮಾನ ಅನುಭವಿಸೋದು ನನಗೆ ಈಗಲೂ ಇಷ್ಟವಾಗುವುದಿಲ್ಲ.
ಮುಂದೇನೋ ಆಗಬಾರದ್ದು ಆಗುತ್ತೆ , ನೋವೆ ಆಗುತ್ತೆ ಅದನ್ನು ಎದುರಿಸೋಕೆ ಈಗಲೇ ತಯಾರಾಗಬೇಕು ಅನ್ನೋ ಸ್ವಭಾವ . ಅಪರೂಪಕ್ಕೆ ನನ್ನ ಮಗ ಹೊಟ್ಟೆಯಲ್ಲಿರುವಾಗ ,ಹೊಟ್ಟೆ ಸಿಕ್ಕಾಪಟ್ಟೆ ದೊಡ್ಡ ಇತ್ತು, ನೀರು ತುಂಬಾ ಇದೆ ಅಂದಿದ್ರು , ನಾನು ಮಗು ಹೇಗೆ ಹುಟ್ಟುತ್ತೋ ಏನೋ ಎಂದು ಸ್ಕ್ಯಾನಿಂಗ್ ಮಾಡಿಸುವಾಗ, ಹೇಗಾದರೂ ಇರಲಿ ಹೇಗಿರುತ್ತೆ ಹೇಳಿ ನಾನೀಗಲೆ ಅದು ಹೇಗಿದ್ರು ಒಪ್ಪಿಕೊಳ್ಳೋಕೆ ರೆಡಿ ಆಗ್ತೇನೆ ಅಂತ ಡಾಕ್ಟರ್ ಗೆ ಕೇಳಿ ಬಯ್ಯಿಸಿಕೊಂಡಿದ್ದೆ .
ನೋವು ಅಂದ್ರೆ ಅದ್ಯಾಕೆ ಭಯವೋ ?ನನಗಂತೂ ನಾ ಬಯಸಿದಂತಹ ಬದುಕು, ಕೇಳಿದ್ದನ್ನೆಲ್ಲಾ ಇಲ್ಲಾ ಅನ್ನದೇ ತಂದುಕೊಡುವ ಗಂಡ, ಜಾಣ ಮುದ್ದು ಮಕ್ಕಳು, ಸಾಕಷ್ಟು ಎಲ್ಲವೂ ಇದ್ದರೂ ..ನನ್ನ ಮುಖದಲ್ಲಿ ನಗು ಇಲ್ಲ ? ಯಾಕೆ ಅಂತಾ ಎಲ್ರು ಕೇಳ್ತಾರೆ. ಇರುವುದನೆಲ್ಲಾ ಬಿಟ್ಟು ಇನ್ನೇನು ಬಯಸುತ್ತೇನೆಯೋ ನಾನರಿಯೆನು frown emoticon
ಸ್ವಲ್ಪ ಅನಾರೋಗ್ಯದ ಕಹಿ, ಸದಾ ಮತ್ತೊಬ್ಬರ ಸಮಸ್ಯೆ , ಕಷ್ಟಗಳನ್ನು ನನ್ನದೇ ಎಂದು ಅನುಭವಿಸುವ ಮೃದುತನ /ಹುಚ್ಚುತನ ಇರಬೇಕು, ನಾ ನಗುವುದು ಕಡಿಮೆ frown emoticon
ಹಾ.... ನೋವು ಅಂದ್ರೆ ದೈಹಿಕ ನೋವುಗಳು ಸಾಕಷ್ಟು ಅನುಭವಿಸಿದ್ದರೂ , ಆ ನೋವಿಗೆ ಭಯ ಪಡುತ್ತೇನೆ. ಅದಷ್ಟೇ ಅಲ್ಲ, ಒಂದು ಸಣ್ಣ ಬಿರುಮಾತು, ನಾ ಹಚ್ಚಿಕೊಂಡವರ ಮೌನ, ನೆಗ್ಲಿಜೆನ್ಸ್ ಇದೆಲ್ಲಾ ನನ್ನನ್ನು ತುಂಬಾ ನೋಯಿಸುತ್ತೆ. ಇನ್ನು ರುತುಸ್ರಾವದ ನೋವು, ಸುಮ್ ಸುಮ್ನೆ ಏನೇನೋ ಯೋಚಿಸಿ, ಅದು negetive ಆಗಿಯೇ ಜಾಸ್ತಿ ಯೋಚಿಸಿ, ತಲೆಕೆಡಿಸ್ಕೊಂಡು ಬರುವ ತಲೆನೋವಿಗೆ ಸಹ ಹೆದರಿ ಮಾತ್ರೆಗಳ ತರಿಸಿಟ್ಟುಕೊಳ್ಳುವ ಹೆಣ್ಣು ನಾನು smile emoticon ನೋವು ತಡೆಯೋಕೆ ಆಗದೆ ಸತ್ತು ಹೋಗಿಬಿಡಬೇಕು ಅನಿಸಿಬಿಡುತ್ತೆ .
ಸಾವಿನ ಬಗ್ಗೆ ಅತಿಯಾಗಿ ಮಾತಾಡುವ ನಾನು ಬಹುಷಃ ಬದುಕನ್ನು ತುಂಬಾ ಪ್ರೀತಿಸ್ತೇನೆ. ಬರುವುದಾದರೆ ಬರಲಿ ಸಾವು ನಿದ್ರೆಯಲಿ, ಅದುವರೆಗೂ ನನ್ನವರಿಗೆ, ನಾನು ಪ್ರೀತಿಸುವವರಿಗೆ, ಯಾರಿಗೂ ಹೊರೆಯಾಗದಂತೆ, ಆದಷ್ಟು ಕಡಿಮೆ ತೊಂದರೆ ಕೊಡ್ತಾ ... smile emoticon ನಾನು ಬದುಕಬೇಕು.
ಏನೆಂದು ಕರೆಯಲಿ ನಿನ್ನ ಹೇಳು ನಾನು.... 
ಹೆಸರಿಗೆ ಸಿಗದಷ್ಟು ಎತ್ತರದ ಸಂಬಂಧವನ್ನು... 
ಚಿನ್ನ ಬಂಗಾರ ಎಂದು ನಿನಗೆ ಬೆಲೆ ಕಟ್ಟಲಾಗುವುದೇನು.. 
ಹುಣ್ಣಿಮೆಯಂದು ದೂರದಿಂದಲೇ ನಿನ್ನ ನೋಡಲಾಗುವುದೇನು....
ಎಂದಾದರೊಮ್ಮೆ ನನ್ನ ಬಿಟ್ಟು ಹೋಗುವ ಜೀವ ನೀನನ್ನಲೇನು.... 
ನಿನಗೆ ನನ್ನ ಹೃದಯ ನೀಡಿದ ಮೇಲೂ ನನ್ನ ಹೃದಯವೆನ್ನಲೇನು....
ಎಂದೆಲ್ಲ ರಮಿಸಿ ಕೈ ಬೆರಳ ತುದಿ ಹಿಡಿದು ಜೊತೆಗೂಡಿದವನು...
ತಬ್ಬಿ ತೋಳುಗಳಲಿ ಹಣೆಗೆ ಮುತ್ತಿಟ್ಟವನು..
ಅಪ್ಪಿಕೊಳ್ಳುವೆಯ ಒಮ್ಮೆ ಗಾಳಿಯೂ ನುಸುಳದಂತೆ ಬಿಗಿಯಾಗಿ
ಇನ್ಯಾರಿಗೂ ಸಿಗದಂತೆ ಮುಡುಪಿಡುವೆಯ ನನಗೆ ಮೀಸಲಾಗಿ ಎಂದು ಅಪ್ಪಿದವನು ...
ನಿನ್ನ ನಗುವಿಗೆ ನನ್ನ ನಗುವೇ ಕಾರಣವಾದರೆ ಹೇಳಿಬಿಡು
ನೋವಿನಲ್ಲೂ ನಗುವುದ ರೂಢಿಸಿಕೊಳ್ಳುವೆ ನಾನು ಎಂದವನು ...
ನಿನ್ನ ಮೊಗದಿ ಎಂದೂ ನಗುವೇ ಕಾಣ ಬಯಕೆಯೆಂದು ನನ್ನ ನಗಿಸಿದವನು ...
ಕೇಳದೇ ನನ್ನ ಬಯಕೆಗಳ ತಣಿಸಿದವನು...
ಅವನು ನನಗೇ ಬೇಕೆಂದು ಬೇಡೆನು ಎಂದಿಗೂ ಆ ದೇವರನು
ನನ್ನೊಲುಮೆಯೇ ನಿಜವಾದರೆ ನನ್ನನೆಂದೂ ಅಗಲನು ಅವನು.
ಒಂದು ಸಣ್ಣ ಕಥೆ ಬರೆಯುವ ಪ್ರಯತ್ನ--
ಅವಳು ಸುಂದರಿ, ಚಿನಕುರಳಿ ಮಾತಿನವಳು .
ಅವನೂ ಚೆಲುವ, ಎಲ್ಲರ ನಗಿಸುವನು .
ಸುತ್ತ ಮುತ್ತಲೂ ಜನವೋ ಜನ . 
ಆ ಜನ ಎಂದರು - ಸುಂದರ ಜೋಡಿ, ಅಪರೂಪದ ಗಂಡ ಹೆಂಡತಿ .
ಜನರ ಮಾತುಗಳ ಕೇಳಿದ ಕೋಣೆಯೊಳಗಿನ ...ಮಂಚದ ಮೇಲಿನ ಮೆತ್ತನೆಯ ಹಾಸಿಗೆ, ಜೋಡಿ ತಲೆದಿಂಬು, ನಲುಗದ ಹಾಸು, ಹೊದಿಕೆ ಸದ್ದಿಲ್ಲದೇ ಬಿಕ್ಕಿದವು
ಮೊದಲ ಭೆಟ್ಟಿಯಲ್ಲಿ ----
ಅವಳು ಅವನಿಗೆ ಒಂದು ಸಿಗರೇಟ್ ಲೈಟರ್ ಕೊಟ್ಟಳು.
ಅವನು ಅವಳಿಗೆ ವೈನ್ ಓಪನರ್ ಕೊಟ್ಟ.
ಈಗ----
ಸಿಗರೇಟ್ ಸೇದುವುದು ಕಡಿಮೆ ಮಾಡೋ ಅಂತಿದಾಳೆ.
ಅವನು ಜಾಸ್ತಿ ಕುಡೀಬೇಡ ಕಣೆ ಪ್ಲೀಸ್ ಅಂತಿದಾನೆ.
ಗತದ ಕಹಿಯ ಮರೆತುಬಿಡು ಎಂದು 
ಎನ್ನ ಕಣ್ಣುಗಳಿಗೆ ಮುತ್ತಿಟ್ಟೆ ..... 
ಮರೆತೆ ನಾ ಕಣ್ಮುಚ್ಚಿ ಗತವ.... 
ಅ ಸುಖದಿ ಮರೆತೆ 
ಮುಂದಿನ ಭವಿಷ್ಯವನ್ನೂ ಸಹ 
ಈಗ
ಯಾವುದೇ ಅಸೆ ಕನಸುಗಳಿಲ್ಲ ನನಗೆ ನಿಜ ...
ಚಂದ್ರ ತಾರೆಗಳ ತಂದು ಮುಡಿಸು ಎನಲಾರೆ...
ನಿನ್ನ ವ್ಯಕ್ತಿತ್ವದ ಹಿರಿಮೆಗಿಂತ
ಬೆಟ್ಟ-ಗುಡ್ಡಗಳೂ ಕಿರಿದು
ನಿನ್ನ ಹೃದಯ ವೈಶಾಲ್ಯತೆಗಿಂತ
ಸಾಗರವೂ ಚಿಕ್ಕದು
ಸಾಗರ, ಬೆಟ್ಟ ಗುಡ್ಡಗಳ ಸುತ್ತಿಸು ಎನ್ನುವುದಿಲ್ಲ....
ಇರುವ ನಾಲ್ಕಾರು ದಿನ
ನನ್ನೊಂದಿಗೆ ಅನುಕ್ಷಣವೂ ನೀ ಜೊತೆಯಾಗಿರು
ಎಂದು ಹೇಳುವಾ ಸ್ವಾರ್ಥವೂ ನನದಲ್ಲ
ಸಾಧ್ಯವಾದರೆ ಒಂದಷ್ಟು ಸಮಯ ಕೊಡು
ತುಸು ಹೊತ್ತು ನಿನ್ನೆದೆಗೆ ಒರಗುವೆ
ಮೆಲುದನಿಯಲಿ
ಹಾಡೊಂದ ಹಾಡಿಬಿಡು ನನಗಾಗಿ
ನಾನು ನಿದ್ರಿಸಬೇಕಿದೆ ಎಲ್ಲವನೂ, ಈ ಪ್ರಪಂಚವನೆ ಮರೆತು ......
ಭೂತ-ಭವಿಷ್ಯದ ಗೊಡವೆ ಮರೆಸುವ
ನಿನ್ನೊಡನೆಯ ವರ್ತಮಾನದ ಸುಖ ಸ್ಥಿರವಾಗಬಾರದೇ ನನ್ನೊಲವೇ ?
ಕಥೆಗೆ ವಿಷಯ ನೀಡಿ, ಬರೆಯಲು ಸ್ಪೂರ್ತಿಯಾದ ಸಹೃದಯಿ ಹರೀಶ್ ಸರ್ ಗೆ ---
ತಾನೇ ಟೆನ್ಶನ್ ಲ್ಲಿದ್ದರೂ ನಾನು ಕಳಿಸಿದಾಕ್ಷಣ ಕಥೆ ಓದುವ ಆತುರದಲ್ಲಿ ಓದಿ ಮೆಚ್ಚುಗೆ ಹೇಳಿದ ಭಾರತೀ ಅಕ್ಕನಿಗೆ --
ಧನ್ಯವಾದಗಳು ಹೇಳುತ್ತಾ ....
ನಿಮ್ಮ ಓದಿಗಾಗಿ , ಕಾಮೆಂಟ್ಸ್ ಗಾಗಿ ಫ್ರೆಂಡ್ಸ್ .... ಈ ನನ್ ಕಥೆ ---
ಅದೇ ಕಾವೇರಿ ನದಿಯ ತೀರದ ಮೆಟ್ಟಿಲ ಮೇಲೆ ಕುಳಿತಿದ್ದೆ. ಅಂದು ಅವನಿದ್ದ , ಇಂದು ಇರಲಿಲ್ಲ ಅಷ್ಟೇ ...
ಹೆಚ್ಚು ಹೆಚ್ಚು ನನ್ನ ಹಚ್ಹ್ಚಿಕೊಳ್ಳಬೇಡವೇ .... ನಾನು ಹೆಚ್ಚು ದಿನ ಉಳಿಯುವುದಿಲ್ಲ ಎಂದವನು ನನಗೇಕೆ ಅಚ್ಚುಮೆಚ್ಚಾಗಿದ್ದನೋ !!!
ನೀನಿರದೆ ನಾನು ಹೇಗಿರಲೀ ಹೇಳು ? ನಿನಗಿಂತಾ ಮೊದಲೇ ನಾ ಸತ್ತು ಹೋಗಿಬಿಡ್ತೇನೆ ಎಂದೇ .
ಎಲ್ಲವನ್ನೂ ಕಂಡಿರುವೆ, ಸಾಕು ಎನಿಸಿ ಹೊರಟಿರುವೆ , ಯಾವುದೂ ಬೇಡವೆನಿಸಿದಾಗ ನೀ ಯಾಕೆ ನನಗೆ ? ಹುಚ್ಚೀ ನಾನೆಷ್ಟೇ ದೂರ ತಳ್ಳಿದರೂ , ನಿನಗೆ ಎಷ್ಟು ಅವಮಾನ ಮಾಡಿದರೂ ಯಾಕೕ ಸಹಿಸಿಕೊಂಡೆ, ಹುಚ್ಚು ಹುಚ್ಚಾಗಿ ಯಾಕೆ ಪ್ರೀತಿಸಿದೆ ನನ್ನ ? ಸಾಕಷ್ಟು ನೋಯಿಸಿದ ...
ಮಂತ್ರಮುಗ್ದಳಾಗಿ ಅವನು ಏನೇ ಹೇಳಿದರೂ ಕೇಳುವ ನಾನು ಅದೇಕೆ ಹಾಗೆ ಅವನಿಗೆ ಬೇಡವಾದೇನೋ !!!!!
ಕೊನೆಗೊಮ್ಮೆ ...
ನಿನ್ನಂತೆ ನನ್ನ ಯಾರೂ ಪ್ರೀತಿಸಿರಲಿಲ್ಲ ಕಣೆ ... ನಾ ಹೋದ ಮೇಲೆ ಅಳಬೇಡಾ, ಸಮಾಧಾನ ಹೇಳೋಕೆ ನಾನಿರೋಲ್ಲ, ನನ್ನಾತ್ಮ ಅದ ನೋಡಿ ಹಿಂಸೆ ಅನುಭವಿಸುತ್ತೆ ಕಣೆ , ನಿನಗೆ ನಿನ್ನದೇ ಜವಾಬ್ದಾರಿಗಳಿವೆ, ಅದನ್ನು ಮುಗಿಸಿ ಬಾ , ಕಾಯುವೆ , ಮತ್ತೆ ಸೇರೋಣ , ಭೌತಿಕವಾಗಿ ಇಲ್ಲವಾದರೂ ನಾ ನಿನ್ನೊಡನೆ ಇರುತ್ತೇನೆ ಸದಾ ಎಂದು ಮುಗುಳ್ನಕ್ಕವನನ್ನು ಬೆರಗಾಗಿ ನೋಡಿದೆ.
ನನಗೆ ಸಿಗದ ನೀನು ಯಾರಿಗೂ ಸಿಗಬೇಡ ಹೋಗೋ ಎಂದು ಮನಸಲ್ಲೇ ಕೊಂದು ಬಿಟ್ಟೆ. ಅವನ ಕಾಡುವ ನೆನಪುಗಳ ಕೊಲ್ಲಲಾಗಲಿಲ್ಲ ನನಗೆ .
ಒಂದು ದಿನ ... ಅವನು ಹೇಳಿದಂತೆ ನಡೆದೇ ಬಿಟ್ಟಾಗ ...
ಹೋಗಿ ಅವನ ದೇಹಕ್ಕೆ ಬೆಂಕಿಯಿಟ್ಟು ಬಂದಿದ್ದೆ , ಆದರೆ ... ನಾ ಅವನ ನೆನಪಿನಲ್ಲಿ ದಿನವೂ ಸುಡತೊಡಗಿದೆ.
ಇಂದು ..... ಅವನು ಆಡಿದ ಮಾತುಗಳ ನೆನೆದು .... ಹರಿವ ನದಿಯೊಡನೆ ನಾನೂ ಸಾಗಿಬಿಡಲೇ ಎಂದು ಯೋಚಿಸಿದೆ.
ಕಣ್ಣೀರು ಪುಟಿದು ಪಾದಗಳಿಗೆ ಸುರಿಯುತಿತ್ತು ...
ಕೈ ಒಂದು ಪಾದದ ಮೇಲೆ ಬಿದ್ದ ಕಣ್ಣೀರ ಹನಿಗಳ ಒರೆಸಿತು .
ತಲೆ ಎತ್ತಿದೆ . ಒರೆಸಿದ ಕೈನವರ ಮೊಗದಲ್ಲಿ ಕಿರುನಗು... ಹೊರಡೋಣವೇ ? ಮೆಲು ನುಡಿ.
ಕಳೆದುಕೊಂಡೆ ಎಂದು ಕೊರಗಿದ್ದ, ಬೇಕು ಎಂದು ಬಯಸಿದ್ದ ಪ್ರೀತಿಯ ಬೆಳಕು ಅವರ ಕಂಗಳಲ್ಲಿ ಕಂಡಾಗ ...
ಕೈ ಚಾಚಿದೆ. ಬಿಗಿಯಾಗಿ ಹಿಡಿದುಕೊಂಡ ಆ ಕೈ ಮೆಟ್ಟಿಲುಗಳ ಏರಲು ಸಹಕರಿಸಿತು .
ನನ್ನ ಬಿಟ್ಟು ಹೋದವನು ನನ್ನವನಲ್ಲ ಎಂದೇ ಮೆಲುವಾಗಿ .
ಮುಷ್ಠಿ ಸಡಿಲಿಸಿತು, ಮಾತುಗಳು ಬೇಕಿರಲಿಲ್ಲ. ಬಳಸಿದ ಆ ತೋಳುಗಳಲ್ಲಿ ಬೇಕಾದಷ್ಟು ಮಾತುಗಳಿತ್ತು.
ಸಂಜೆ ಬಾನಲ್ಲಿ ಸೂರ್ಯ ಮುಳುಗಿದ ಕೆಂಪು ರಂಗು ಚೆಲ್ಲಿತ್ತು ....
ನನ್ನ ಬದುಕಲ್ಲಿ ಉದಯಿಸಿದ ಸೂರ್ಯನ ಜೊತೆಗೆ ಮೆಲ್ಲ ಮೆಲ್ಲನೆ ಹೆಜ್ಜೆ ಹಾಕಿದೆ ಕಾರಿನತ್ತ .
"ಮರೆತುಬಿಡು ಕಳೆದ ದಿನಗಳ ಕಹಿಘಟನೆ ...
ಮುನ್ನೆಡೆಯಬೇಕಿದೆ ಜೀವನ ಇರುವವರೊಡನೆ".
ಇಬ್ಬನಿಯಲಿ ತೋಯ್ದ ಗುಲಾಬಿಯ ಕಾಣಲು......
ಈಗ ಕಣ್ಣು ಮುಚ್ಚುವೆ.
ನಿರಾಸೆಯಿರದಿರಲೀ...
ನಾಳೆಯಾದರೂ...
ಅರಳಿಬಿಡು ಓ ಹೂವೇ....
ನಾ ನಿನಗಾಗಿ ಕಾದಿರುವೆ.
-----------
ದಿನವೂ ಸೂರ್ಯೋದಯ , ಸೂರ್ಯಾಸ್ತ 
ಹಗಲೂ--ಇರುಳು 
ಆಗುವುದು 
ನೀನಿಲ್ಲದೆಯೂ....
ನನಗೆ ಮಾತ್ರ. ....
ವ್ಯತ್ಯಾಸದ ಅರಿವಾಗದು.
---------------
ಪ್ರೀತಿಸುವುದನು ಕಲಿಸಿದೇ....
ನಗುವುದನು ಕಲಿಸಿದೇ....
ಅಳುವುದನೂ ಕಲಿಸಿದೇ..
ನೀ...
ನೀನಿಲ್ಲದೆಯೂ. ..ನಿನ್ನ ಮರೆತು ನಾನಿರುವುದ ಕಲಿಸದೇ ಹೋದೇ..
ನಗುವ ಜೊತೆಗೊಯ್ದು, ಕಂಬನಿಯುಳಿಸಿದೇ....
----------------------
ನೀರವ ನಡು ರಾತ್ರಿ ವೇಳೆ ನಡೆದಿದೇ....ನಿನ್ನ ನೆನಪುಗಳ ಗದ್ದಲ....
ನೋಡಲು ನಿನ್ನ ಮೊಗವ ಏನೋ ಕಾತರ..
ಕಂಡೆನೋ. ...ಕಾಣೆನೋ...
ಬಂದು ಬಿಡು ಒಮ್ಮೆ, ನಾ ಕಣ್ಮುಚ್ಚುವ ಮೊದಲು ಬೇಡುವೆನು. 
ಬೇಸರದ ಮೋಡಗಳು ಕರಗಲೀ....
-----------------------------
ಹೇಳಿ ಹೋಗು ಕಾರಣಾ ...
ಎಂದು ಕಾಡಿದೇ ... 
ಹೊಗದಿರೂ ಎಂದು ಬೇಡಿದೇ ... 
ಗೊತ್ತು ನನಗೆ ಪ್ರೀತಿಯೆಂದರೆ ನೀಡುವುದು ಅಷ್ಟೇ ....
ಅವನಲ್ಲಿರಲಿ 
ನಾನಿಲ್ಲೇ ನೆನೆವೆ ಏನಂತೆ ?
-----------------------------------
ಮೊನ್ನೆ ನೆನ್ನೆಯವರೆಗೂ ಆಪ್ತವೆನಿಸಿದವರು. ...
ಇಂದು ಅಪರಿಚಿತರಂತೆ ನಡೆದರೇ.....
ಏನು ಮಾಡಲಿ. .....???
ಅಳುವುದಕೆ ಕಣ್ಣಿನಲ್ಲಿ ನೀರೂ ಇಲ್ಲ...
ಸರಿ ಹೋದೀತೇನೋ ಎಂದು ಕಾಯಲು...
ನಾಳೆಯ ಭರವಸೆಯೂ ಇಲ್ಲ
----------------------------------
ನಾ ನೊಂದು ತೀರ.....
ಅವ ನೊಂದು ತೀರ....
ನಮ್ಮಿಬ್ಬರ ನಡುವೆ ಭೋರ್ಗರೆವ ವಿರಹದ ನದಿ.
------------------------------------------------------
ಗೋಡೆಗಳ ನಡುವಿನಲ್ಲಿ ಒಂದು ನೀರವ ಮೌನ. ....
ಅದಕ್ಕೆ ಹೆಸರು- --
ಏಕಾಂತ
ಕೆಲವೊಮ್ಮೆ--
ಒಂಟಿತನ....
ಸದ್ದಿರದ ಬಿಕ್ಕು...
-------------------------------------------------
ನಿರೀಕ್ಷೆ, ಕನಸುಗಳನ್ನು ಚಿಗುರಿಸಿದ ನನ್ನೊಲವೇ. ..
ಹೀಗೆ ಮೌನವಾಗಿ ನನ್ನ ಕೊಲ್ಲುವುದು ತರವೇ???
ಹಂಚಿಕೊಂಡ ಮೇಲೂ ಮನಸ್ಸು, ಕನಸು... ಎಲ್ಲವನೂ
ಹೇಗೆ ತಾನೇ ಸಹಿಸಲಿ ಹೇಳು ಈ ಅಗಲಿಕೆಯನು ???
ಕಟ್ಟೆಯೊಡೆಯಲಿ ಬಿಗಿದಿಟ್ಟ ಮೌನ. ..
ಹೊರಗೆ ಬರಲಿ ಬಯಕೆಗಳ ಮಹಾಪೂರ.
----------------------------------------------
ಯಾರು ಆಂದರೋ...
ಚಂದ್ರ ತಂಪು ಎಂದು
ಹೇಗೆ ಸುಡುತ್ತಿದ್ದಾನೆ ಗೊತ್ತೇ...
ನೀ ಬಳಿಯಿರದೇ ಇಂದು.
--------------------------------------------------
ನಾನು ಮತ್ತು ಹಾಡುತಿದ್ದಾನೆ ಸೋನು ನಿಗಮ್
ಎದೆಯೊಳಗೆ ಮಧುರ ಭಾವವೇ.....
ನಾಲ್ಕು ಗೋಡೆಗಳ ಮಧ್ಯೆ ನಾ ಒಂಟಿಯಲ್ಲ.
ಒಲವೆಂದರೆ ನನ್ನವನ ಧ್ಯಾನವೇ .
-----------------------------------------
ಅವಳನ್ನು ಬದುಕಿಸಿದ್ದು ಅವನೊಲವು......
ವಿಷವಾಗಿದ್ದೂ ಅದೇ ....
-----------------------------------
ಪ್ರೇಮದ ಸ್ಪರ್ಶದಲಿ ಬೆಳಗಿಸು 
ನಾನು ಕರ್ಪೂರ.
-------------------------------------
ಒಲವೆಂದರೆ ಬದುಕು ಎಂದೇ ಅಂದುಕೊಂಡ ಅವಳು ಅದನ್ನರಸಿ ಸುಸ್ತಾದಾಗ .....
ಸಾವು ಒಲವಿನಿಂದ ಅವಳನಪ್ಪಿತು.
------------------------------------------------
ನೀ ನನ್ನ ಹೆಸರಿಡಿದು ಕರೆಯುವ ಮುನ್ನ....
ಅದು ನನ್ನ ಹೆಸರೆಂದು ಮರೆತಿದ್ದೆ
ಕರೆದಾಗ ....
ನನ್ನಾಣೆ ನನ್ನನೇ ಮರೆತುಹೋದೆ.
ನನ್ನಲ್ಲಿರುವುದು ಇಷ್ಟೇ. ...
ಅವನು ಬಳಿಯಿರಲು ಬಲು ಪ್ರೀತಿ
ದೂರವಿದ್ದಾಗ....
ಪ್ರೀತಿಯ ಜೊತೆಗೆ ಕಾಡುವ ವಿರಹ.
-------------------------------------------
ನಾನು ಯಾಚಿಸಿಲ್ಲ ಯಾರನ್ನೂ, ಏನನ್ನೂ, ಆ ಕಾಣದ ದೇವರನ್ನೂ
ಪಾದದಡಿ ಕುಳಿತು ಬೇಡಿದ್ದು ಹಿಡಿಯಷ್ಟು ನಿನ್ನೊಲವನ್ನು ....
ನೀಡುವುದಾದರೆ ನೀಡು, ಇಲ್ಲವಾದರೆ ಬಿಡೂ ನನ್ನ ಹಣೆಪಾಡು.
ಉಸಿರಾಡದೆ ಬದುಕಲು ಕಲಿಯುವೆ.
--------------------------------------------
ಅವಳು ಬರೆಯುತ್ತಾ ಹೋದಳು ಹಗುರಾಗುವುದಕ್ಕೆ ...
ಪುಂಖಾನುಪುಂಖವಾಗಿ ಪ್ರೇಮ ಪದ್ಯ ...
ಓದುಗರು ---
ಅರೆ ಇದು ನಮ್ಮದೇ ಭಾವನೆ ಇವಳು ಚೆಂದ ಅಕ್ಷರವಾಗಿಸಿದ್ದಾಳೆ ಎಂದರು.
ಮೆಚ್ಚಿದರು ಕೆಲವರು, ಚಪ್ಪಾಳೆ ತಟ್ಟಿದರು, ಬೆನ್ನೂ ತಟ್ಟಿದರು.
ನನಗಾಗೇ ಬರದಳೇನೋ ಎಂದು ಸಂಭ್ರಮಿಸಿದವರೂ ಉಂಟು.
ಅವಳು ಹೇಳಲಿಲ್ಲ - ಛಿದ್ರಗೊಂಡ ನನ್ನ ಕನಸುಗನ್ನಡಿಯ ಚೂರುಗಳು ಇವು.
----------------------------------------------

ನಿನ್ನ ನೋಡುವ ತವಕದಲಿ...... 
ನಯನಗಳು ಎವೆಯಾಡುವುದ ಮರೆತಿವೆ.
-----------------------------------------------
ಒಂದು ಸಣ್ಣ ಕಥೆ ----
ದಿನದ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಅದೆಷ್ಟು ಮೆಸೇಜು, ಕರೆಗಳೋ ಲೆಕ್ಕವಿರಿಸಿರಲಿಲ್ಲ ಅವಳು.
ಇತ್ತೀಚೆಗಿನ ವ್ಯತ್ಯಾಸಕ್ಕೆ ಹೊಂದಿಕೊಳ್ಳಲಾಗದೆ, 'ಒಂಟಿತನ ತುಂಬಾ ಕಾಡುತ್ತಿದೆ ಕಣೋ' ಎಂದಳು.
ಬ್ಯುಸಿ ಕಣೆ, ಕೆಟ್ಟ ಮೂಡ್ ನಲ್ಲಿದ್ದೇನೆ ಪ್ಲೀಸ್ ಎನ್ನುವ ಉತ್ತರವಂತೂ ಸಿಕ್ಕಿತು, ಸಧ್ಯ .
ಕಣ್ಣು ಮುಚ್ಚಲು ಮಾರ್ಗಗಳು ಗೊತ್ತು ಅವಳಿಗೆ, ಕಣ್ಣು ಬಿಟ್ಟಾಗ ಇದ್ದೇ ಇದೆಯಲ್ಲ ಅವನೊಂದಿಗೆ ಕಳೆದ ಕ್ಷಣಗಳ ಮೆಲುಕು.
ಒಲವೆಂದರೆ ಹಾಗೇ ...ದುಗುಡಗಳ ಕಣ್ಣಿನಲಿ ಬಚ್ಚಿಟ್ಟು, ತುಟಿಗಳಲಿ ನಗುತ್ತಾ.. ಕಾಯುವುದು.
a small story ----
'ಪ್ರೀತಿ ಯಾರಿಗೆ ಬೇಡ..?
ಪ್ರೀತಿ ಸಾಯಿಸುತ್ತೆ, ಬದುಕಿಸುತ್ತೆ.
ಬದುಕಿರುವ ತನಕವು ಪ್ರೀತಿ ಬೇಕು, ಪ್ರೀತಿ ಇರದೇ ಬದುಕೋಕೆ ಆಗೊಲ್ಲ ಅಲ್ವಾ'...?
ಅಗಲಿಕೆಯಲ್ಲಿಯೇ ಗೊತ್ತಾಗಿದ್ದು ಅವನನ್ನು ನಾನು ಮಿಸ್ ಮಾಡುತ್ತಿದ್ದೇನೆ ಎಂದು.
ಸುಮ್ಮನೆ ಅವನ ಫೋಟೊ ನೋಡುತ್ತಾ....ಕಣ್ಣೀರು ಬರುತ್ತಿತ್ತು...ನೋಡಬೇಕು ತುಂಬಾ ಅನಿಸ್ತಿತ್ತು.
ಪ್ರೀತಿಯಿಂದ ಕರೆದರೆ ದೇವರೂ ಬರುತ್ತಾನಂತೆ!!
ಬಾಗಿಲ ಸದ್ದು, ಬಂದದ್ದು ಅವನೇ...ಅವನೆದೆಯ ಮೇಲೆ ಕಣ್ಣೀರು ಮಳೆ....
ನಾನ್ಯಾರೆ ನಿನಗೆ? ಎಂದ.
ಯಾರಿಗೊತ್ತು? ನೆನೆದ ನಿನ್ನ ಷರ್ಟ್ ಕೇಳು ತಿಳಿಯಬಹುದು. ಬರೆದಿರಬೇಕು ನೋಡು ಅಲ್ಲಿ ನನ್ನ ಕಣ್ಣೀರು ಓದಿಕೊ ಎಂದೆ,,,ಮುಗುಳು ನಕ್ಕ.
ಮಾತುಗಳು ಬೇಕಿಲ್ಲ ಅರಿಯಲು ಒಬ್ಬರನೊಬ್ಬರು.
ಅರಿಯುವ ಮುನ್ನವೇ ನಾವು ಹತ್ತಿರವಾದವರು.
ಹಿಂತಿರುಗಿ ಹೋದ ಬಳಿಕ ಒಂದು ಮೆಸೇಜು--
ಬೊಗಸೆಯಲ್ಲಿ ನಿನ್ನ ಮೊಗವಿಡಿದು
ಕಣ್ತುಂಬ ನಿನ್ನ ತುಂಬಿಕೊಂಡೆ,
ನಿನ್ನಧರಗಳ ಜೇನನ್ನು ಧಾರೆಯೆರೆದು
ನನ್ನ ಮನದಲ್ಲಿ ನೀ ತುಂಬಿಕೊಂಡೆ.
"You'll never understand how much I love u, and I'll never understand why".
ವಿ.ಸೂ. ನಾನು ಹೇಳುವುದರಲ್ಲಿ ಹೊಸತೇನನ್ನು ನಿರೀಕ್ಷಿಸಬೇಡಿ. ನನ್ನ ಪುಟ್ಟನಿಗೆ ನಾಲ್ಕು ಬಾರಿಸಿ ಓದಿಸಲು ಕುಳ್ಳಿರಿಸಿದ್ದೆ. ತುಂಟ ಪಪ್ಪಿ ನನ್ನ ಮೇಲೆ ಜಿಗಿದು ಆಟವಾಡಲು ಬಂದಿತು, ನಾನು ಪುಟ್ಟನ ಮೇಲೆ ಆಗಷ್ಟೇ ತೋರಿಸಿದ್ದ ಕೋಪದಲ್ಲಿ ಅದಕ್ಕೂ ಬಾರಿಸಿದೆ. ಕುಯ್ ಕುಯ್ ಅಂತು, ಪಾಪದ್ದು, ತಕ್ಷಣ ಅದರ ಹತ್ತಿರ ಹೋಗಿ, ಬಾ ಅಂದೇ, ಬಂತು ಮತ್ತೆ , ತಬ್ಬಿದೆ, ಸಾರೀ ಕಂದಾ ನೋವಾಯ್ತಾ ಎಂದು ತಲೆ ಸವರುತ್ತಿದ್ದರೆ, ಅದು ನನ್ನ ಇನ್ನಷ್ಟು ಬಿಗಿಯಿತು. ನನ್ನ ತಾಯ್ತನ ಅಲ್ಲಿಯೂ ಸಹ ಜಾಗೃತ ಪುಟ್ಟನಿಗೆ ಹೊಟ್ಟೆ ಕಿಚ್ಚು ಅಂತೇನಿಲ್ಲ, ಅದರ ಪೆಟ್ ಅನಿಮಲ್ ನ ಅದನ್ನು ಮುದ್ದು ಮಾಡುವವರೆಲ್ಲರೂ ಮುದ್ದಿಸಬೇಕು. ಡ್ಯಾಡಿ ಮನೆಗೆ ಬಂದಾಗ ಪಪ್ಪಿ ನ ಮಾತಾಡಿಸೋಲ್ಲ ಅಂತಾ ಬೇಜಾರು ಮಾಡಿಕೊಳ್ಳುವ ಮಗಾ , ಯಾಕೆ ನೀನು ಅದನ್ನು ಕಂಡರೆ ಲೈಕ್ ಮಾಡೋಲ್ಲ ?ಅದಕ್ಕೆ ಬೇಸರವಾಗುತ್ತೆ, ಏನು ಪುಟ್ಟೀ ಬಿಸ್ಕೆಟ್ ತಿಂದ್ಯ? ವಾಕಿಂಗ್ ಹೋಗಿದ್ಯಾ ? ಓನು ಬೇಕು ನಿಂಗೆ ಅಂತಾ ಮಾತಾಡಿಸೂ ಅಂತಾ ಡೈಲಾಗ್ ಹೇಳಿಕೊಡ್ತಾನೆ. ಅದರೂ ಕೇಳಿತು, ಅಮ್ಮಾ ಪಪ್ಪಿಗೆ ಮಾತ್ರಾ ಯಾಕೆ ಸಾರೀ ಕೇಳೋದು, ಅದಕ್ಕೇನು ಅರ್ಥವಾಗುತ್ತಾ ? ನನಗೂ ಕೇಳು , ನಾನು ಹ್ಯುಮನ್ ಅಂತ ಮೂತಿ ಉಬ್ಬಿಸಿತು. ಪ್ರೀತಿ ಎಲ್ಲರಿಗೂ ಬೇಕು, ಮುದ್ದಿಸಿಕೊಳ್ಳೋದು ಯಾರಿಗೆ ಇಷ್ಟವಾಗೋಲ್ಲ . ಅಪ್ಪ- ಅಮ್ಮನಿಗೆ ನಾನು ೩ ನೆಯ ಸಂತಾನ , ಆಗಲೇ ಅಣ್ಣ, ಅಕ್ಕ ಇದ್ದ ಸಂಸಾರಕ್ಕೆ ನಾನು ಬೇಡವಾದ ಎಂಟ್ರಿ. ಕೇಳಿದ್ದಕ್ಕೆ ಮಾತ್ರ ಉತ್ತರಿಸುವ ಹುಡುಗಿ, ಯಾರೊಂದಿಗೂ ಬೆರೆಯುತ್ತಿರಲಿಲ್ಲ, ನಾನಾಯ್ತು ನನ್ನ ಕಥೆ ಪುಸ್ತಕಗಳಾಯ್ತು. ನಾ ಚೆಂದಾಗೂ ಇರಲಿಲ್ಲ. ನನಗಂತೂ ಯಾರೂ ಚೆಂದ ಇದ್ದಾಳೆ , ಮುದ್ದಾಗಿದಾಳೆ ಅಂತಾ ಮುದ್ದು ಮಾಡಿದ್ದೇ ಇಲ್ಲ. ನನಗೆ ಬಾಲ್ಯದ ಸುಂದರ ನೆನಪುಗಳು ಅಂತೇನಿಲ್ಲ. ಏಯ್ ಬಾಯಿಲ್ಲಿ ಅಂತಾ ಕರೆದು ನಮ್ ಪಿ. ಟಿ ಮೇಷ್ಟ್ರು ಒಂದು ಪ್ರಶ್ನೆ ಕೇಳ್ತಿದ್ದರು - ನಿನ್ನ ಗಂಡ ಯಾರು ? ನಾನು ನನ್ ಗಂಡ ಪಿ. ಟೀ ಮಾಮ ಅಂದರೆ ಒಂದಷ್ಟು ಪೆಪ್ಪರ್ ಮಿಂಟ್ ಕೊಡ್ತಿದ್ರು , ಈಗ ಅವರು ಶಿವೈಕ್ಯರಾಗಿದ್ದಾರೆ. ಅವರ ನನ್ನ ಪ್ರೀತಿ ಬಗ್ಗೆ ಇನ್ನೊಂದು ದಿನಾ ಹೇಳ್ತೀನಿ. ಮಕ್ಕಳ ವಿಧ್ಯಾಭ್ಯಾಸಕ್ಕೆ ಒಂದು ಕಡೆ ಅಮ್ಮ ನಮ್ಮ ಜೊತೆ, ಅಪ್ಪ ಪಶುವೈದ್ಯ ಸೇವೆಯಲ್ಲಿ ಮತ್ತೊಂದು ಕಡೆ ಇದ್ದಾಗ, ತಿಂಗಳಿಗೊಮ್ಮೆ ಬರುವ ಅಪ್ಪನ ಸೊಂಟದ ಮೇಲೆ ಕಾಲು ಹಾಕಿ ಮಲಗುತ್ತಿದ್ದ ನೆನಪಿದೆ. ನಾನಾಗ ೪ ನೆ ತರಗತಿ, ನಮ್ಮ ಅಣ್ಣ ನನಗಿಂತಾ ಹನ್ನೆರಡು ವರ್ಷಗಳಷ್ಟು ದೊಡ್ಡವನು, ಇಲ್ಲವಾದ. ಗಂಡು ಮಕ್ಕಳಿಲ್ಲದಿದ್ದರೆ ಪಿಂಡ ಹಾಕುವವರು ಯಾರು ಎಂದು ನನ್ನಪ್ಪ ಇನ್ನೊಂದು ಮದುವೆಯಾದರು. ತಪ್ಪೇನಿಲ್ಲ ...ಅಲ್ಲಿಗೆ ನನ್ ಬದುಕಿನ ದಿಕ್ಕು ಬದಲಾಯ್ತು, ಚೂರು ಪ್ರೀತಿ ತೋರುತ್ತಿದ್ದ ಅಪ್ಪ ಇಲ್ಲವಾಗಿದ್ದರು. ದಿನ ಬೆಳಗಾದರೆ ಅಪ್ಪ ಅಮ್ಮನ ಕಿತ್ತಾಟ ಮಾಮೂಲಿ , ನಡುವೆ ಮಕ್ಕಳು ಬಡವಾದರು. ಅದನ್ನು ವಿವರಿಸುವ ಅಗತ್ಯ ಏನಿಲ್ಲ . ನಾನು ನನ್ನ ದಾರಿ ಕಂಡುಕೊಂಡೆ, ನನ್ನವನೊಡನೆ ಮನೆ ಬಿಟ್ಟು. ಅಲ್ಲಿಗೆ ಮದುವೆ ವಯಸ್ಸಿನ ಅಕ್ಕ-ಅಪ್ಪನಿಂದಾ ಅಷ್ಟೇ ಅಲ್ಲ, ತಂಗಿ ಇಂದಾ, ನನ್ ಲೈಫ್ ಹಾಳಾಯ್ತು ಎಂದು ದೂರ. ದೇವರಂತಹ ನನ್ನವ ಸಾಕಷ್ಟು ಎಲ್ಲವನ್ನೂ ಕೊಟ್ಟ ಸತ್ಯ. ಕಳೆದುಕೊಂಡ ಅಮ್ಮನ , ಅಪ್ಪನ , ಅಕ್ಕನ ಪ್ರೀತಿ ....? ಬರು ಬರುತ್ತಾ.... ಏನೆಲ್ಲಾ ಆಯಿತು .... ಸಂಬಂಧಗಳ ಬಗ್ಗೆ ವಿಶ್ವಾಸ ಕಳೆದುಕೊಂಡೆ, ಯಾವೊಂದು ಸಂಬಂಧ ನನಗೆ ನೆಮ್ಮದಿ ಕೊಡುವುದಿಲ್ಲವೋ ಅದರಿಂದಾ ದೂರ. ಅಮ್ಮನ ನೋಡದೆ, ಜೊತೆ ಮಾತಾಡದೆ ಆರು ತಿಂಗಳಾಯ್ತು. ಅಪ್ಪನನ್ನು ನೋಡದೆ ೨ ವರ್ಷ ೨ ತಿಂಗಳು. ನಾನು ಏನು ಅಂದುಕೊಳ್ಳುತ್ತೆನೆಯೋ ಅದು ಆಗುತ್ತೆ , ಇಂದಲ್ಲ ನಾಳೆ ಹೊಟ್ಟೆಬಾಕಿ ಅಂತಾರಲ್ಲ ಹಾಗೆ, ನಾನು ಪ್ರೀತಿಬಾಕಿ ಎದ್ದ ತಕ್ಷಣ ಅಮ್ಮಾ ಎತ್ತಿಕೋ ಎನ್ನುವ ಮುದ್ದು ಮಗ ಇದಾನೆ. ಚಿಂತಾ ಮಾಡಬೇಡ ಅಮ್ಮಾ , ನಾನಿದ್ದೇನೆ ಎಂದು ಸಮಾಧಾನಿಸುವ ಮಗ ನನ್ನ ಅಣ್ಣನ್ನ ನೆನಪಿಸುತ್ತಾನೆ. ನನಗಾಗೆ ಮಿಡಿಯುವ ಜೀವಗಳು ನನಗಿವೆ .ಎಲ್ಲರನ್ನೂ ಪ್ರೀತಿಸಬೇಕು ನಿಜಾ, ನಾ ದ್ವೇಶಿಸೋರೂ ನನಗುಂಟು . ಹಚ್ಚಿಕೊನ್ದವರೂ ಕೆಲವರು ... ಒಂದು- ಆಕೆ ನನದೆ ಆಜು ಬಾಜಿನ ವಯಸಿನವರು. ನನ್ನ ಬರಹಗಳನ್ನು ಓದಿ , ನನ್ನದೇ ಮಾತುಗಳು ನೀವು ಬರೆಯುತ್ತೀರಿ ಎಂದು ಹತ್ತಿರವಾದವರು. ಆಕೆ ಸಾಕಷ್ಟು ಅನುಕುಲಸ್ತೆ, ತುಂಬಾ ಓದಿರುವ , ಸ್ವಂತ ಉದ್ಯಮಿ, ಸುಂದರಿ, ನಾನು ಅವರೆದುರು ಏನೂ ಅಲ್ಲ . ಆದರೆ ....ಭಾವನಾತ್ಮಕ ಸಂಬಂಧಗಳು ಮುಖ್ಯ ಎನಿಸಿದವರು. ಏನೇನೋ ಹೇಳುತ್ತಾ ಭಾವುಕರಾಗುವ ನಾವು ಕಣ್ಣೀರು ಇರುವಾಗಲೇ ಕಿಟಿ ಕಿಟಿ ನಗುವ ತಿಕ್ಕಲರು. ನನ್ನದೇ ನಕ್ಷತ್ರ ಬೇರೆ ಅವರ ಜೊತೆಗಿರುವುದು ತುಂಬಾ ಸಂತೋಷ ತರುವ ಸಂಗತಿ. ಲಿಂಗ ಬೇರೆಯಾಗಿದ್ದರೆ ನಾನೇ ಮದುವೆಯಾಗಬಹುದಿತ್ತು ಎಂದು ನಗುವ ನಮ್ಮಲ್ಲಿ ಏನೋ ಹೊಂದಾಣಿಕೆ. ಅಪರೂಪಕ್ಕೆ, ರಾತ್ರಿಯಿಡೀ ಮಾತಾಡ್ತೀವಿ, ಏನೂ ಅಂತಾ ಗೊತ್ತಿಲ್ಲ ನಾನಿದ್ದೇನೆ ನಿಮ್ಮ ಜೊತೆ ಎಂದು ಭರವಸೆ ನೀಡುವ ಆ ಪ್ರೀತಿಗೆ ಸೋದರಿಯ ಪ್ರೀತಿ ಅಂತಾ ಹೆಸರು ಯಾಕೆ ?
ಎರಡು- ಅವರು ವಯಸ್ಸಿನಲ್ಲಿ ನನಗಿಂತಾ ಚಿಕ್ಕವರು, (ಅಕ್ಕ ಅನ್ರೀ ಅಂತಾ ನಾ ರೇಗಿಸೋದು ಉಂಟು ) ಅದೇಕೋ ಅವರೆದುರು ನಾ ಪುಟ್ಟ ಮಗುವಾಗಿಬಿಡುತ್ತೇನೆ ಅದೇ ಅಚ್ಚರಿ ! ಚಾಕ್ಲೆಟ್ ತಂದು ಕೊಟ್ಟು ನನ್ನನ್ನು ಇನ್ನಷ್ಟು ಚಿಕ್ಕವಳಾಗಿಸುವ ಅವರ ಪ್ರೀತಿಯಲ್ಲಿ ನಾನು ನನ್ನ ಸೀರಿಯಸ್ ಸುಜಾತ ಳನ್ನು ಮರೆತುಬಿಡುತ್ತೇನೆ. ಬಾಲ್ಯದಲ್ಲಿ ಸಿಗದ / ಮರೆತ ಹುಡುಗಾಟ , ತುಂಟನ ಮರುಕಳಿಸುತ್ತದೆ. ಯಾವ್ ಬೊ ಮಗ ಹೇಳಿದ್ದು ನೀವು ಚೆಂದ ಇಲ್ಲಾ ಅಂತಾ? ಚೆನ್ನಾಗಿದ್ದೀರಿ, ಖುಷ್ ಖುಷಿಯಾಗಿದ್ರೆ ಅರೋಗ್ಯ ಸುಧಾರಿಸುತ್ತೆ, ಇನ್ಮೇಲೆ ಏನೂ ಆಗೋಲ್ಲ ಎನ್ನುವ ಅವರು ಹಿಂದಿನದೇನೂ ಕೇಳದೆ, ನಗು ನಗುತ್ತಿರಬೇಕಷ್ಟೇ ಎಂದು ಜೊತೆಗಿರುವ ಪ್ರೀತಿಯ ಜೀವಿ.
ಒಬ್ಬಳೇ ಇರುವುದು ಬೋರ್ ಆಗೋಲ್ಲ ನನಗೆ ನೆಟ್ ಇಲ್ಲವಾದರೆ ... ಇರೋದು ಕಷ್ಟ . ಫ್ರೆಂಡ್ಸ್ ಜೊತೆ ಚಾಟ್ ಮಾಡೋಕಲ್ಲ, ಅವರೊಂದಿಗೆ ನನ್ ಫೀಲಿಂಗ್ಸ್ ಶೇರ್ ಮಾಡೋಕೆ ಬುಕ್ ಮಾಡೋಲ್ಲ, ಪತ್ರಿಕೆಗೆ ಬರೆಯೋಲ್ಲ, ಯಾರಿಗೂ ಉಪದೇಷಗಳಿಲ್ಲ. ನನ್ನ ಬದುಕನ್ನು ಕಡಿಮೆ ಮಾತುಗಳಲ್ಲಿ, ನನ್ನ ಖುಷಿ ಬೇಸರಗಳನ್ನು ಪದ್ಯಗಳಲ್ಲಿ ಇಲ್ಲಿ ಹೇಳ್ತಾ ಹೋಗ್ತೀನಿ, ಮೆಚ್ಚುವ ಜನ ನನಗಿದಾರೆ . ಸಾಕಲ್ವಾ ? ಇನ್ನೂ ಯಾಕೆ ಅಸಹನೆ, ಅಸಂತುಷ್ಟಿ ? ಹೊಸ ವರುಷ ಬಂತೂ ಬಂತೂ ಅಂತಾ ಒಂದು ತಿಂಗಳೇ ಕಳೆದು ಹೋಯ್ತು.....