Saturday, 22 December 2012

ನನ್ನ ಕಥೆ ಕೆಲವರಿಗೆ ಇಷ್ಟವಂತೆ :-) ನಾ ಓದಿದ ಕಥೆಯೊಂದನ್ನು ಹೇಳ್ತೇನೆ .ಕೇಳಿ ನಿದ್ರಿಸಿ :-) 
ಒಬ್ಬ ಒಂದು ಕುದುರೆಯನ್ನು ಸಾಕಿದ್ದ .ಅವನ ಹೆಸರು ಖಲೀಫಾ ಅಂದುಕೊಳ್ಳೋಣ ? ಅವನು ಆ ಕುದುರೆಗೆ ಸ್ವತಹ ಮೈ ಉಜ್ಜಿ ,ಮೇವು ಹಾಕಿ ಪ್ರೀತಿಯಿಂದಾ ಸಾಕಿದ್ದ .ಬಹಳಾ ಚೆನ್ನಾಗಿ ಓಡುತಿತ್ತು . ಈ ಕುದುರೆ ಮೇಲೆ ಒಬ್ಬನ ಕಣ್ಣು ಬಿತ್ತು .ನನಗೆ ಕೊಡು ಎಂದು ಕಾಡಿದ .ಆದರೆ ,ಬಹಳಾ ಪ್ರೀತಿಯ ಕುದುರೆ !ಖಲೀಫಾ ಕೊಡಲಿಕ್ಕೆ ಒಪ್ಪಲಿಲ್ಲ .
ಖಲೀಫಾ ಒಂದಿನ ಕುದುರೆಯೇರಿ ಹೋಗ್ತಾಯಿದ್ದಾಗ ,ದಾರಿಯಲ್ಲಿ ಓರ್ವ ಭಿಕ್ಷುಕ ನರಳುತ್ತಾ ಬಿದ್ದಿದ್ದನ್ನು ನೋಡಿದ .ಕುದುರೆಯಿಳಿದು ಬಂದು ಭಿಕ್ಷುಕನನ್ನು ಉಪಚರಿಸಿದ .ಭಿಕ್ಷುಕ ಹೇಳಿದ -ನನಗೆ ಹುಷಾರಿಲ್ಲ ,ದಯವಿಟ್ಟು ವೈದ್ಯರ ಹತ್ತಿರ ಕರೆದುಕೊಂಡು ಹೋಗು .
ಸರಿ ಎಂದು ಖಲೀಫಾ ,ಅವನನ್ನು ಕುದುರೆ ಮೇಲೆ ಹತ್ತಿಸಿ ,ತಾನು ಇನ್ನೇನು ಹಾರಿ ಕುಳಿತುಕೊಳ್ಳಬೇಕು ಎಂದುಕೊಳ್ಳುವಷ್ಟರಲ್ಲಿ ಭಿಕ್ಷುಕ ಕುದುರೆಯನ್ನು ಜೋರಾಗಿ ಓಡಿಸಿಕೊಂಡು ಹೋದ . ಹೋಗ್ತಾ ಹೇಳಿದ -ಹೇಯ್ ಕುದುರೆ ನಾ ಕೇಳಿದಾಗ ಕೊಡಲಿಲ್ಲ ನೀನು ? ಈಗ ನೋಡು ಹೇಗೆ ಅಪಹರಿಸಿದೆ ?
ಖಲೀಫಾ ಅವನ ಹಿಂದೆ ಓಡಿ ಹೋಗಿ ಕೂಗಿ ಹೇಳಿದ -ಆಯ್ತು ಕುದುರೆ ನೀನೇ ಇಟ್ಟುಕೋ,ಆದರೆ ಹೇಗೆ ಈ ಕುದುರೆ ಪಡೆದೆ ಎಂದು ದಯವಿಟ್ಟು ಯಾರಿಗೂ ಹೇಳಬೇಡ .
ಯಾಕೆ ? ಯಾಕೆ ? ಯಾಕೆ ?
ನಿಮಗೆ ಗೊತ್ತಾ ?

ಜನಕ್ಕೆ ಈ ತರಹದ ಮೋಸ ಆಗ್ತಿದೆ ಅಂತಾ ತಿಳಿದರೆ ,ನಿಜವಾಗಲೂ ಅಸಾಹಾಯಕರಾಗಿ,ರೋಗಗ್ರಸ್ಥ ರಾಗಿ ಬೀದಿಯಲ್ಲಿ ಬಿದ್ದ ಬಡವರಿಗೆ ಸಹಾಯ ಮಾಡಲು ಮುಂದೆ ಬರೋಲ್ಲ .
ಒಂದು ಮೋಸದಿಂದಾ ಒಬ್ಬ ವ್ಯಕ್ತಿಗೆ ,ಸಂಸ್ಥೆಗೆ ಅನ್ಯಾಯವಾಗಬಹುದು ನಿಜ .ಆದರೆ ಅದಕ್ಕಿಂತಲೂ ಭಯಾನಕ ಅಂದ್ರೆ ಜನ ,ಮನುಷ್ಯನಲ್ಲಿಯ ಪ್ರಾಮಾಣಿಕತೆಯಲ್ಲಿ ,ವಿಶ್ವಾಸದಲ್ಲಿ ,ಒಳ್ಳೆಯತನದಲ್ಲಿ ನಂಬಿಕೆ ಕಳೆದುಕೊಳ್ಳೋದು .

ನಿಮಗೇನು ಅರ್ಥವಾಯ್ತೋ ನನಗೆ ಗೊತ್ತಿಲ್ಲ . ಕಥೆ ಹೇಳಿದೀನಿ ಉಂಡು ತಾಚಿ ಮಾಡಿ :-)

Thursday, 20 December 2012

ಹಿಟ್ ಮೇಲ್ ಅವರೆಕಾಳ್ ----
            ನನಗೆ  ಚೆನ್ನಾಗಿ ಅಡುಗೆ ಮಾಡೋಕೂ ಬರುತ್ತೆ . ಇವತ್ತು ನಮ್ ಹೊಲದ್ದು ತಾಜಾ ,ಎಳೆಯ ಅವರೆ ಕಾಯಿ ಬಂದಿದೆ .ಅದರಲ್ಲಿ ಉಪ್ಪೆಸರು ಮಾಡಿದ್ರೆ ! ವಾವ್! ಅದರಲ್ಲಿ ತೆಳ್ಳಗಿನ ರಾಗಿ ಮುದ್ದೆ ಮುಳುಗಿಸಿ , ಗುಳು ಗುಳು ನುಂಗೋಕೆ ಏನ್ ಸಖತ್ ಆಗಿರುತ್ತೆ ಗೊತ್ತಾ ?

ನಿಮಗೆ ಹೇಳಿಕೊಡ್ತೇನೆ .
ಉಸಲಿ ಮಾಡೋಕೆ ಎಲ್ಲಾರಿಗೂ ಬರುತ್ತೆ .ಬೆಂದ ಅವರೆಕಾಳಿಗೆ ,ಹಸಿಮೆಣಸು ಜೊತೆಗೆ ಜಾಸ್ತಿ ಈರುಳ್ಳಿ ಹಾಕಿ ಒಗ್ಗರಿಸಿ .ತೆಂಗಿನ ಕಾಯಿ ಬೆರೆಸಿ ಚೂರು ಲಿಂಬೆ ಹುಳಿ ಹಿಂಡೋದು ಮರೀಬೇಡಿ .(ಆಗ ಗ್ಯಾಸು ಅಷ್ಟಾಗಿ ಇರೋಲ್ಲ )
ಒಂದಿಷ್ಟು ಬೆಂದ ಹಸಿಮೆಣಸು ,ಅರ್ಧ ಸೌಟು -ಬೆಂದ ಅವರೇಕಾಳು ,ಕೊತ್ತಂಬರಿ ಸೊಪ್ಪು ,ಒಂದು ಬೆಳ್ಳುಳ್ಳಿ ,ಚೂರು ಹುಣಿಸೇಹಣ್ಣು ,ಒಂದು ಚಮಚೆ ಜೀರಿಗೆ ,ರುಚಿಗೆ ಉಪ್ಪು ಹಾಕಿ ನುಣ್ಣಗೆ ರುಬ್ಬಿಡಿ .
ಬೇಯಿಸಿದ ಅವರೇಕಾಳು ಬಸಿದ ನೀರಿಗೆ ಒಂದು ಚಮಚೆ ಈ ರುಬ್ಬಿದ ಚಟ್ನಿಯನ್ನು ಬೆರೆಸಿ ಕುಡಿಯಿರಿ ,ಇಲ್ಲಾ ರಾಗಿ ಮುದ್ದೆಯನ್ನು ಮುಳುಗಿಸಿ ನುಂಗಿ .
ಆಹಾ ............
ಏನ್ ರುಚಿ ಗೊತ್ತಾ ?
ರಾಗಿ ಮುದ್ದೆ ಮಾಡೋದು ಕೇಳಬೇಡಿ .
ನಾ ಹೇಳಿಕೊಟ್ಟರೂ ನಿಮಗದನ್ನು ಮಾಡೋದು ಅಷ್ಟು ಸುಲಭವಲ್ಲ ಸಾರಿ :-)

Tuesday, 18 December 2012

ಆಡದೇ  ಉಳಿದ ಮಾತು

 ಚಲನೆ ಕಳೆದುಕೊಂಡ ದೇಹ ,ಕೈ ಸ್ವಲ್ಪ ಮಟ್ಟಿಗೆ ಅಲುಗಾಡುತಿತ್ತು ಅಷ್ಟೇ . ಮಾತುಗಳೂ ಮಗುವಿನಂತೆ ತೊದಲು .ಎಲ್ಲರೂ ನಾನು .... 'ಸುಧಾ'..... ಮಲಗಿರೋ ಸ್ತಿತಿ ನೋಡಿಕೊಂಡು ಹೋಗುತ್ತಿದ್ರು .ನನ್ನ ಕಣ್ಣು ,ಮನಸ್ಸು ಅವರನ್ನು ಅರಸುತಿತ್ತು .ಫೋನ್ ತೆಗೆದುಕೊಂಡು 'ಮಾಮಾ ಯಾಕೆ ನೀವು ಬರಲಿಲ್ಲ ?' ಅಂದೇ .

ನಾ ಬಂದಾಗ ನೀ ನಿದ್ರಿಸಿದ್ದೆಯಲ್ಲ ? ಎಂದ ಮೆಲುವಾಗಿ .
ಆತ -ನನ್ನ ನೆಚ್ಚಿನ ಸ್ನೇಹಿತ ,,,,,ಎಚ್.ಏನ್ .ಸೋಮಶೇಖರ ಗೌಡ ,ಕೋಲಾರ .ಏನೋ ,,,,ಅದೊಂದು ತರಹದ ಹೇಳಲಾಗದ ಬಂಧ .ನನಗಿಂತಾ ಹತ್ತು ವರ್ಷದ ಹಿರಿಯ , ಇಪ್ಪತ್ತು ವರ್ಷದ ಗೆಳೆತನ ,ನಾನು ಮಗುವಿನಂತೆ ಅವನಿಗೆ ,ಒಳ್ಳೆಯ ಮೃದು ಮನದ ,ಮೆಲು ನಗುವಿನ ,ಗಂಭೀರವಾದ ವ್ಯಕ್ತಿ .ಬರಹಗಾರ ......ಇನ್ನೂ ಏನೇನೋ ! 
ನಾನು ತಿಂಗಳಾನುಗಟ್ಟಲೆ ಕೋಮಾದಲ್ಲಿ ಮಲಗಿದ್ದೆ ,
ಆ ಸಮಯದಲ್ಲೇ ಅವನೂ ಅದೇಕೋ ಬದುಕಲ್ಲಿ ಕುಸಿದು ಮಲಗಿಬಿಟ್ಟಿದ್ದ.
ಸದಾ ಲವ ಲವಿಕೆಯಿಂದಾ ಮಾತಾಡುವ ಅವನ ಅಂದಿನ ನಿರಾಶೆಯ ಮಾತುಗಳನ್ನೂ ನನಗೆ ಕೇಳಲಿಕ್ಕೆ ಆಗಲಿಲ್ಲ .
ನನ್ನ ನಗುವಿಗೆ ಮಾರು ಹೋದ ಆತ 'ಸುಧಾ ನೀ ನಕ್ಕು ಬಿಟ್ರೆ ಮನಸಿಗೆನ್ತಹ ಖುಷಿ ?' ಎಂದು ಸಾವಿರ ಬಾರಿ ಹೇಳಿರಬೇಕು .ಅವತ್ತು ನಾ ನಕ್ಕೆ ,ಆದರೆ ,,,,, ಹಾಗನ್ನಲಿಲ್ಲ .
ಯಾಕೆ ಬೇಸರ ,ನನಗೆ ಬಂದಾ ದುರ್ಗತಿ ನಿನಗೆ ಬಂದಿಲ್ಲ ಮಾಮಾ...ನಾ ನೋಡು ,ಸದಾ ಮಲಗಿರಬೇಕು ,ಮಲಗಿದಲ್ಲಿಯೇ ನನ್ನ ಪ್ರಪಂಚ ,ಏನಾಗಿದೆ ನಿನಗೆ ? ಎಂದೆ .
ಬದುಕು ಭಾರವಾಗಿದೆ -ಅಂದಾ .
ನಿನ್ನನ್ನು ಮಾತಾಡಿಸೋಲ್ಲ ಇವತ್ತು ಎಂದು ಫೋನಿಟ್ಟೆ .
ನಾ ಸಮಾಧಾನಿಸಬೇಕಿತ್ತು ,,,,,,
ನಾನೂ ದುಃಖದ ಮಡುವಿನಲ್ಲೇ ಇರಲಿಲ್ವಾ ?
ಅದೆಷ್ಟು ಬಾರಿ ,ನಕ್ಕಿದ್ವಿ ? ಒಟ್ಟಿಗೆ ಅಲ್ಲಿ -ಇಲ್ಲಿ ತಿರುಗಿದ್ವಿ ?ನೆನಪಾಗಿಸಿಬಿಟ್ಟ ,,,,,
ಕೆಲವೇ ದಿನಗಳು ,,,,,
ನೇಣು ಬಿಗಿದುಕೊಂಡಿದ್ದಾನೆ ಎಂದು ಸುದ್ದಿ ಬಂದಾಗ ......
ಹೋದೆ ,,,,
ಕಣ್ಣೀರು ,,,,,
ಆಗಷ್ಟ್ ೧೪ ,ಅವನ ಜನುಮದಿನ .
ನೆನಪಾಗ್ತಾ ಇದ್ದಾನೆ .
ಆಡದೆ ಉಳಿದಿಹ ಮಾತೂ ನೂರಿದೆ ,,,,
ಪ್ರೀತಿ ಪ್ರೇಮ ಜಾನೇ ದೋ .....

ಮೊದ ಮೊದಲ ಪ್ರೇಮ ,ಅದು ಸದಾ ನಮ್ಮೊಂದಿಗೆ ಇರುತ್ತೆ .

ಸುಮಾರು ೨೦ ವರ್ಷಗಳ ನಂತರ ಅವನು face book ನಲ್ಲಿ ಸಿಕ್ಕ .
'ಹಾಯ್ ' ಅಂದೇ ,ಸಂತೋಷ ಆಗಿದ್ದು ನಿಜ . ಸ್ವಲ್ಪ ಜಾಸ್ತಿನೇ ,,,,,,,,I miss u ಕಣೋ ಅಂದುಬಿಟ್ಟೆ .
ಸುಜೀ ಹಾಗೇ ಇದ್ದ್ದಿಯಲ್ಲೇ ! ಅಂದ ,ಇಲ್ವೋ ಆಗಿಗಿನ್ತಾ ಈಗ ೨೦ ಜಾಸ್ತಿ ಆಯ್ತು,ಸುತ್ತಳತೆಯೂ ಸಹ ಎಂದು ನಕ್ಕೆ .ಹೌದು ದಿನಗಳು ಉರುಳಿದ್ದವು ,ಯಾರಿಗೆ ಕಾಯುತ್ತೆ ? ಇಂದು ಸಿಕ್ಕ ನಮ್ಮಿಬ್ಬರಲಿ ,ಅಂದಿನ ಸಲಿಗೆ ! ಪ್ರೀತಿ!ಯೇ ಇತ್ತಾ ?
ಪರಸ್ಪರ ವಿಚಾರಣೆಗಳು ,ಮದುವೆ,ಮಕ್ಕಳು ,ಜೀವನ ..........
ಹೇಯ್ ನನ್ನ ಹೆಂಡತಿಗೆ ನಿನ್ನ ಬಗ್ಗೆ ಎಲ್ಲಾ ಹೇಳಿದ್ದೀನೆ ಅಂದ.
ಏನಿತ್ತು ಹೇಳುವನ್ತಹುದು ?
ನಾನು ನಿನ್ನನ್ನು ತುಂಬಾ ಪ್ರೀತಿಸ್ತಿದ್ದದ್ದು , ಒಟ್ಟಿಗೆ ತಿರುಗಿದ್ದು , ಯಾವ್ ಯಾವ್ ಪಿಚ್ಚರ್ ನೋಡಿದ್ದು ,ಧರ್ಮವೇ ಬೇರೆ ಎಂದು ಮದುವೆ ಆಗಲಿಕ್ಕೆ ಆಗದೆ ಇದ್ದದ್ದು ಎಲ್ಲಾ ..... ಎಂದ .
ನನಗೆ ಶಾಕ್ .
ಅಯ್ಯೋ ಸಜೀ ....ನೀನು ನನ್ನ ಪ್ರೀತಿಸ್ತಿದ್ದೆ ಅಂತಾ , ನಿನ್ನ ಹೆಂಡತಿಗೆ ಈಗ ಹೇಳೋ ಬದಲು, ನಂಗೆ ಆವಾಗಲೇ ಹೇಳಿ ಬಿಟ್ಟಿದ್ರೆ ? ನಾನು ನಿನ್ನೊಂದಿಗೆ ಈಗ ದುಬಾಯ್ ನಲ್ಲೆ ಇರ್ತಿರಲಿಲ್ವಾ ಎಂದು ನಕ್ಕು ಬಿಟ್ಟೆ .
ಕಣ್ಣಿನ೦ಚಿನಲ್ಲಿದ್ದ ನೀರು ಅವನಿಗೆ ಕಾಣಿಸಲಿಲ್ಲ .
ಹೇಳೋದನ್ನು ಹೇಳಲು ತಡ ಮಾಡೋದ್ಯಾಕೆ ?
"ಮಕ್ಕಳು "

ತುಂಬಿದ ಸಂಸಾರದಲ್ಲಿ ಒಂದು ಸಣ್ಣ ತಪ್ಪು ಎಲ್ಲರನ್ನು ಸ್ವಲ್ಪ ಕಾಲ ಅಗಲಿಸಿತ್ತು .ಒಂದಿಷ್ಟು ನಾನೇ ಸರಿ ಎನ್ನುವ ಅಹಂಕಾರ ಹಿರಿಯರಿಗೂ ,ನನಗೂ .ಪರಸ್ಪರ ಮಾತಿಲ್ಲ .

ಒಮ್ಮೆ ,ಶಾಲೆಯಿಂದಾ ಬಂದ ನನ್ನ ಪುಟ್ಟ ಕೇಳಿದ ಅಮ್ಮಾ ಗ್ರ್ಯಾಂಡ್ ಮದರ್ ,ಗ್ರಾಂಡ್ ಫಾದರ್ ಎಲ್ಲಿ ? ಅಂತಾ .
ಅವರ ಫೋಟೋ ತೋರಿಸಿ ಸಮಾಧಾನ ಹೇಳೋ ಪ್ರಯತ್ನ ನಡೆಸಿದೆ ,ಫಲವಿಲ್ಲ .
ಎಷ್ಟೋ ವರುಷಗಳ ನಂತರ ,ಹತ್ತಾರು ದೇವರಿಗೆ ಹರಕೆ ಹೊತ್ತು ಹಡೆದ ಮುದ್ದು ಮಗ ,ಅತ್ತೆ -ಮಾವನಿಗೂ ಅಚ್ಚುಮೆಚ್ಚು . ಅಜ್ಜಿ ,ತಾತ ಬೇಕು ನಂಗೆ ,ಅವರ ಫೋಟೋ ಅಂಟಿಸಿಕೊಂಡು ಬರೋಕೆ ಹೇಳಿದಾರೆ ಮ್ಯಾಮು ಅಂತಾ ಮೂತಿ ಮುಂದೆ ಮಾಡ್ತು .ನನ್ನ ಮಗನ ಹಠ ನನ್ನನ್ನು ಕರಗಿಸಿತು .ಸರಿ ಅವರ ಬಳಿ ಕರೆದುಕೊಂಡು ಹೋದೆ . ತಾತ ದಾರಿಯಲ್ಲೇ ಸಿಕ್ತು .ಇದು,ನನ್ ಪುಟ್ಟ ಕಾರಿನಿಂದಾ ಆಚೆ ತಲೆ ಹಾಕಿ 'ತಾತಾ ,,,,,,ಹಾಯ್ ಓಲ್ಡ್ ಮ್ಯಾನ್ 'ಅಂತಾ ಕೈ ಬೀಸೋದಾ ? ತಾತಾ ಗೋಳ್ ಅಂತಾ ನಕ್ಕುಬಿಡ್ತು .
ನನಗೂ .....ನನ್ನ ಮಗನ ಮಾತು ನಗು ತಂತು ,ಅವನ ಪ್ರೀತಿ ಅಳು ತಂತು .
ಹಿಡಿದಿಟ್ಟ ಮೌನ ,ಮುನಿಸು ಕರಗಿತು .
ಮಕ್ಕಳೆಂದರೆ ಹೀಗೆ ಆಲ್ವಾ ?

Sunday, 16 December 2012

ಸುಂದರ  ರಾಜ  ಒಂದು  ದಿನ  ಕುದರೆ ಮೇಲೆ  ಕುಳಿತು  ನಗರ ಸಂಚಾರ  ಮಾಡ್ತಿದ್ದ .ಆಗ  ಒಬ್ಳು  ತರುಣಿ  ,ಸುಂದರ  ತರುಣಿ  ಭಿಕ್ಷೆ  ಬೇಡುತ್ತಿರೋದನ್ನು  ನೋಡಿದ. ಆಹಾ  ಏನ್  ಚೆಲುವೆ ಈಕೆ ? ನನ್ನ  ರಾಣಿಯಾಗಲಿ ,ನನ್ನ ಅರಮನೆಯಲ್ಲಿ  ತಿಂದುಂಡು  ಇನ್ನೂ  ಸುಂದರವಾಗಿ  ಕಾಣಿಸಿಯಾಳು ಅಂತಾ  ಮದ್ವೆ ಮಾಡ್ಕೊಂಡ. ಅರಮನೆ ಅಂದ್ರೆ  ವಿವರಿಸೋದೇ ಬೇಡ  ,ಎಲ್ಲಾ ಸಂಪತ್ತುಗಳೂ ಇದೆ. ಆದರೆ  ದಿನೇ ದಿನೇ  ಆ ತರುಣಿ  ಸೊರಗಿಹೊಗ್ತಾ ಇದ್ದ್ದಾಳೆ ! ಅವಳನ್ನು  ನೋಡಿ  ರಾಜನಿಗೆ ಕೋಪ ಬಂತು .ನನ್ನ ಹತ್ರ ಎಲ್ಲವೂ ಇದೇ ,ಅರಮನೆಯಲ್ಲಿ ಸುಖವಾಗಿರೋದು  ಬಿಟ್ಟು ಯಾಕೆ ಹೀಗಾದಳು ?ಏನು ಕೊರತೆಯಾಗಿದೆ ಇವಳಿಗೆ ? ಅಂತಾ  ಸೊರಗಿದ  ಅವಳ ಬಗ್ಗೆ  ಅಸಹ್ಯಗೊಂಡು ಒಂದು  ಕೋಣೆಯೊಳಗೆ  ಹಾಕ್ತಾನೆ  .ಸ್ವಲ್ಪ  ದಿನಗಳು  ಕಳೆದ ನಂತರ ನೆನಪಾಗಿ ಅಲ್ಲಿ  ಹೋಗಿ ನೋಡಿದ್ರೆ  ಆ ತರುಣಿ  ಸುಂದರವಾಗಿ ,ಖುಷ ಖುಷಿಯಾಗಿದ್ದಳು! ಗಮನಿಸಿದಾಗ  ,
ಕೋಣೆಯೊಳಗೆ  ಇದ್ದ ತರುಣಿಗೆ  ಸ್ವಲ್ಪವೇ  ಆಹಾರ  ಕೊಟ್ರೆ ,ಅವಳು  ಅದನ್ನು  ಬೇರೆ ಬೇರೆ  ಪೊಟ್ಟಣ ಮಾಡಿ ಗೋಡೆಯಲ್ಲಿ ಅಲ್ಲಲ್ಲೇ  ಇಡುತಿದ್ಲು . ಹಸಿವಾದಾಗ  ಒಂದೊಂದು  ಪೊಟ್ಟಣ ದ  ಬಳಿ ಹೋಗಿ  ಅಮ್ಮಾ ತಾಯೀ  ಹಸಿವೆ ......ಎಂದು ಬೇಡಿ  ಆಹಾರವನ್ನು  ತಿನ್ನುತಿದ್ಲು  .ಇದೇ  ಅವಳಿಗೆ  ಖುಷಿ ಅನಿಸ್ತಿತ್ತು .ಸುಖವಾಗಿದ್ಲು :-)

ಈಗ ಹೇಳಿ ಸುಖ - ಸಂತೋಷ ಅಂದ್ರೆ  ಏನು ? 
ಮಾತು

ನುಡಿದರೆ ಮುತ್ತಿನ ಹಾರದಂತಿರಬೇಕು . ನಿಜ ,ಆದರೆ ಮಾತೇ ಮುತ್ತು ,ಮೃತ್ಯು ಸಹಾ.ಏನೇ ಆಗಲೀ ಮಾತು ಚೆಂದ ಯಾರದ್ದು ಅಂತೀರಾ ?ಮಕ್ಕಳ ಮುದ್ದು ಮುದ್ದು ತೊದಲ ಮಾತು . ಮಕ್ಕಳು ಮತ್ತು ಮುದುಕರು ಜಾಸ್ತಿ ,ಅನಾವಶ್ಯಕವಾಗಿ ಮಾತಾಡ್ತಾರೆ ಆಲ್ವಾ ?ಯಾಕೆ ? ಮಕ್ಕಳಿಗೇನೋ ಅರಿಯುವ ಕುತೂಹಲ ಸರಿ .ಟಿಕೆಟ್ ತಗೊಂಡು ಕೂತುಕೊಂಡವರೂ ಯಾಕ್ರೀ ಅಷ್ಟ್ ಮಾತಾಡ್ತಾರೆ ?ಅಯ್ಯೋ ಅದಿರಲಿ ,ಕೆಲವರು ವಯಸಿನ ಇತಿ ಮಿತಿ ಬೇಡ ,ಸಿಕ್ಕಾಪಟ್ಟೆ ಮಾತಾಡ್ತಾರೆ .(ಅವರಿಗೆ ನಾ ಅನಾಸಿನ್ ಅಂತೀನಿ .)ಮಾತಾಡೋವ್ರಿಗೆ ಕೇಳೋ ಕಿವಿ ಇದ್ರೆ ಸಾಕು .ಅವ್ರ ಹಾಗೆ ಮಾತಾಡುವವ್ರನ್ನು ಫ್ರೆಂಡ್ ಮಾಡ್ಕೊಳಲ್ಲ ಗೊತ್ತಾ ?
ನನಗಂತೂ ಮೊದಲಿನಿಂದಲೂ ಮಾತು ಆಡೋದು ಇಷ್ಟವಾಗೋಲ್ಲ .ಆಡಿದ್ರೆ ಒರಟಾಗಿ ಆಡಿ ವಿವಾದ ತಂದುಕೊಳ್ಳುವುದೇ ಹೆಚ್ಚು .ಬೆಣ್ಣೆಯಲ್ಲಿ ಕೂದಲು ತೆಗೆದ ಹಾಗೆ ಮಾತಾಡೋಕೆ ಬರೋಲ್ಲ .ಏಕ್ ಮಾರ್ ದೋ ತುಕಡಾ .
ಕೆಲವರದು ಕೊಂಕು ಮಾತು , ನಯವಾದ ಮಾತು , ನೇರ ಮಾತು,ವಟ ವಟ ಮಾತು ........ಇನ್ನೂ ಏನೇನಿದೆ ? 
ಮಾತಾಡೋದು ಇಲ್ಲದಿದ್ರೆ ಏನ್ ಆಗ್ತಿತ್ತು ? ನಿಂದನೆ ,ಜಗಳಗಳು ಕಡಿಮೆ ಆಗ್ತಿರಲಿಲ್ವಾ ? ನಾನೇ ಒಂದು ಮಾತಾಡೋದು ,ಅದನ್ನು ಅರ್ಥೈಸಿಕೊಳ್ಳುವುದೇ ಬೇರೆ ತರಹ ಆಗಿ ಎಷ್ಟೋ ಸಲ ಥೂ ನಾ ಮೂಕಳಾಗಿದ್ರೆ ಅನಿಸಿದ್ದೂ ಇದೆ. ಕೆಲವೊಮ್ಮೆ ಕಿವುಡಾಗಿದ್ರೆನೂ ಒಳ್ಳೆಯದು ಅನಿಸಿದೆ ನಿಂದನೆ ಕೇಳುವಾಗ .ಮೂಕಳಾಗಿದ್ದೆ ಸ್ವಲ್ಪ ಸಮಯ . ಕೃತಕ ಉಸಿರಾಟಕ್ಕಾಗಿ ಕತ್ತು ಕೊಯ್ದು ಮಲಗಿಸಿದ್ದಾಗ .ನಿನ್ ನಾಲಿಗೆ ಸೇದ್ಹೋಗ ಅಂತಾ ಯಾರೋ ನನಗೆ ಶಪಿಸಿದ್ದಿರಬೇಕು ಬಿಡಿ :-) 
ಮೃದುವಾದ ಮಾತಿನಲ್ಲಿ ಮೋಸವನ್ನು ಹುಡುಕು .
ಕಟೋರವಾದ ಮಾತಿನಲ್ಲಿ ಪ್ರೀತಿಯನ್ನು ಹುಡುಕು .
ಕಟೋರವಾದ ಮಾತುಗಳೆಲ್ಲಾ ವಿಷವಲ್ಲ ,
ಮೃದುವಾದ ಮಾತುಗಳು ಅಮೃತವೇನಲ್ಲ .
(ಟ -ತಪ್ಪಾಗಿದೆ )
ಹೀಗಂತಾ ಎಲ್ಲೋ ಓದಿದ ನೆನಪು .
ಮಾತು ಬೇಕು .ಎಷ್ಟ್ ಬೇಕೋ ಅಷ್ಟೇ .ಜಗಳ ಆಗದಂತಹಾ ಮಾತು ಬೇಕು ಏನಂತೀರಿ?
ಅನಾವಶ್ಯಕವಾಗಿ ಮಾತಾಡಿ ಕಿರಿ ಕಿರಿ ಮಾಡಬೇಡಿ .
ನಂದೂ ಜಾಸ್ತಿಯಾಯ್ತು ಕೊರೆತ :-)

Saturday, 15 December 2012


'ಗಂಧರ್ವನಿಗೆ '

ನಿನ್ನ ಮುದ್ದು ಮೊಗ ನೋಡ್ತಾ 

ನನ್ನ ಕಣ್ಣುಗಳ ಮುಚ್ಚಬೇಕು ಅನಿಸುತ್ತೆ 
ನಿನ್ನ ಸವಿನುಡಿಗಳ ಆಲಿಸುತ್ತಾ 
ಮೈ ಮುರಿಯಬೇಕು ಅನಿಸುತ್ತೆ 
ನಿನ್ನ ಪ್ರೀತಿಯ ಸ್ಪರ್ಶದ ನೆನಪಿಗೆ 
ತನು ಮನ ಅರಳಿ ಕಂಪಿಸುತ್ತೆ 
ನೀ ಕುಲು ಕುಲು ನಕ್ಕರಂತೂ
ಈ ಜಗತ್ತೇ ಬೇಡವೆನಿಸುತ್ತೆ
ನಿನ್ನ ಬಿಗಿದ ಬಾಹುಗಳಲಿ ಉಸಿರು 
ಕಟ್ಟಿದರೂ ಬಂಧಿಯಾಗಬೇಕೆನಿಸುತ್ತೆ 
ಏನು ಹೇಳಲೋ ನನ್ನ ಗಂಧರ್ವ 
ಸದಾ ನಿನ್ನ ಜೊತೇಲೆ ಇರಬೇಕೆನಿಸುತ್ತೆ .


'ಬಾಡಿದ  ಹೂ'
ಅಮಿತಾಭ್ ತರಹಾ ಎತ್ತರ ,ಸುಂದರ ಆತ ಅವಲಿಗಿನ್ತಾ ೧೨ ವರುಷ ಹಿರಿಯ ಅವಳನ್ನ ,ಅವಳೋ ಮುದ್ದು ಹುಡುಗಿ ,ಆಗಿನ್ನೂ ನಾಲ್ಕನೇ ಕ್ಲಾಸು .ಅಣ್ಣ ಅದೇಕೋ ಹೆಚ್ಚು ದಿನ ಇವಳಿಗೆ ಪ್ರೀತಿ ತೋರಿಸಲಾಗಲೇಯಿಲ್ಲ ,ಅನಾರೋಗ್ಯ ಕಾಡಿ ವಿಧಿ ಸೆಳೆದಿತ್ತು .ಅಳಲೂ ಬಾರದ ವಯಸ್ಸು .
ಚಿಕ್ಕ ಮಗಳು ಅಂತಾ ಅಪ್ಪನಿಗೆ ಕೊಂಚ ಮುದ್ದಿನ ಹುಡುಗಿ .ವಯಸ್ಸಿಗೆ ಬಂದ ಮಗನ ಅಕಾಲ ಮರಣ ಅಪ್ಪನಿಗೆ ದುಃಖ ,,,,,,,,,,,,,ಮತ್ತೊಂದು ಮಗನನ್ನು ಹುಟ್ಟಿಸುವೆ ಎಂದು ಗುಟ್ಟಾಗಿ ಮತ್ತೊಂದು ಮದುವೆಯಾದ. ಬೆಳೆದ ತನ್ನ ಮೊದಲ ಹಿರಿಯ ಮಗಳ ಮದುವೆ ಮಾಡಲು ಮರೆತ .
ಅಮ್ಮನಿಗೆ ಎರೆಡೆರಡು ಆಘಾತ .ಪುತ್ರಶೋಕ ,ಸವತಿ ಕಾಟ .
ಅಪ್ಪ -ಅಮ್ಮರ ಮಧ್ಯೆ ಕೂಸು ಬಡವಾಯ್ತು .
ಕಿತ್ತಾಟ ದಿನವೂ .....
ಹದಿನೈದರ ಹರೆಯ ....
ಅಕ್ಕನ ಗೆಳತಿಯ ಅಣ್ಣ ,ತನಗಿಂತಾ ಹತ್ತು ವರ್ಷ ದೊಡ್ಡವ,ಪ್ರ್ರಿತಿಸ್ತಿದ್ದಾನೆ ಅಂದುಕೊಂಡಳು . ಕಾಲ್ಫ್ ಲವ್ ?ಮನೆ ಬಿಟ್ಟು ಹೋಗಲು ಸಹಾಯ ಆಗಬಹುದೂ ಅಂತಾ ಅಂದುಕೊಂಡರೆ ,,,,
ದೊಡ್ಡವರು ಸೇರಿದರು ,ಬಾರಿಸಿಸಿದರು ,,,,
ಮುಗಿಯಿತು ಅವಳ ಬದುಕಲ್ಲಿ ಮೂರನೇ ಗಂಡಸೂ ಇಲ್ಲಾವಾದ .
ದೊರೆಯದ ಅಣ್ಣನ ಪ್ರೀತಿ ,ಸಿಗದನ್ತಾದ ಅಪ್ಪನ ಅಕ್ಕರೆ ತನಗೆ ಸಿಕ್ಕ ಎಲ್ಲಾ ಗಂಡಿನಲ್ಲಿ ಹುಡುಕಿದಳು .
ಅವಳಿಗೆ 'ಐ ಲವ್ ಯೂ ' ಅಂದ್ರು ಎಷ್ಟೋ ಜನ .ಅದು ತನ್ನ ದೇಹಕ್ಕೆ ಮಾತ್ರಾ ಅನಿಸಿತು .
ಅಪ್ಪನಂತೆ ಆದರಿಸುವ ,ಸೋದರನಂತೆ ಕಾಪಿಡುವ,ತನ್ನನ್ನು ಎದೆಯಲ್ಲಿ ಬಚ್ಚಿಟ್ಟು ' ನಾನಿದ್ದೇನೆ ಎಂದೂ ನಿನ್ನೊಂದಿಗೆ ಸದಾ ' ಎನ್ನುವ ಪ್ರೀತಿ ಬೇಕಿತ್ತು ಅಷ್ಟೇ ,,,,
ಕೊನೆಗೂ ಅವಳ ಹೃದಯ ವನದಲ್ಲಿ ಪ್ರೀತಿ ಸುಮ ಅರಳಲೇಯಿಲ್ಲ .

Thursday, 13 December 2012

'ಪ್ರಳಯ '
ಪ್ರಳಯ  ಆಗೋದಾದ್ರೆ  ಆಗಲಿ ಬಿಡಿ ,
ನನ್ನದೇನೂ  ಅಭ್ಯಂತರವಿಲ್ಲ :-)
ಪಟ್ ಅಂತಾ ಪ್ರಾಣ  ಹೋಗಲೀ ,
ಒದ್ದಾಡಿ ಸಾಯೋಕೆ  ನನಗೆ  ಇಷ್ಟವಿಲ್ಲ :(
ಅದಕ್ಕೂ  ಮೊದಲು ,
ಒಂದೆರಡು ಆಸೆ ಗಳು ಇದೇ ,
ಹಿಮದ ಮಳೆಯಲ್ಲಿ ನಿನ್ನೊಡನೆ  ನೆನೆದು ಗಡ ಗಡ ನಡುಗಬೇಕು :-)
ಸಮುದ್ರದ ಅಲೆಗಳ ಹಿನ್ನೆಲೆಯಲ್ಲಿ  ನಿನ್ನ  ಹಾಡ ಕೇಳಬೇಕು
ಆಮೇಲೆ ಏನಾದರೂ  ಆಗಲಿ .
ಜಗದ  ಚಿಂತೆ  ಬೇಡಾ ನನಗೆ
ನಿನ್ನ ಮಡಿಲಲ್ಲಿರುವಾಗ
 ಆಗಲಿ ಬಿಡು ಪ್ರಳಯ .
"ನನ್ನ ಪುಟ್ಟ "

ನನ ಕಂದನಂತೋರು ಹನ್ನೆರಡು ಮಕ್ಕಳು ,

ಹೊನ್ನೆಯ ಮರದಾ ನೆರಳಾಗೆ ,
ಹೊನ್ನೆಯ ಮರದಾ ನೆರಳಾಗೆ ಆಡುವಾಗ ,
ಸನ್ಯಾಸಿ ಜಪವ ಮರೆತಾನು .
ಗನ್ ಬೇಕು ಅಂತಾ ಹಠ ಮಾಡ್ತಿದ್ದ ನನ್ ಪುಟ್ಟನಿಗೆ ಒಂದು ಗನ್ ತಂದುಕೊಟ್ರೆ ,ಸಿಕ್ಕಾಪಟ್ಟೆ ಖುಷಿ ಆಯ್ತು .
ಪಟಾಕಿ ಹೊಡೆಯೋದು ಪಲ್ಯೂಶನ್ ಅಂತಾ ಮಗಳು , ದೀಪ ಬೆಳಗಿಸುವೆ ಅಂದಳು .ಹಚ್ಚಿದೆವು .
ಹೊಸ ಮನೆಯಲ್ಲಿ ಆಕಾಶಬುಟ್ಟಿ ತೂಗಿಬಿಡುವ ನನ್ನ ಕನಸೂ ನೆರವೇರಿತು .
ಮನೆಯ ಹಿರಿಯರ ಸಂತೋಷಕ್ಕಾಗಿ ಒಬ್ಬಟ್ಟು ಮಾಡಿದ್ದಾಯ್ತು .
ಒಂದು ಸಾವು
 ,ಒಂದು ಅನಾರೋಗ್ಯದ ನೋವು ಎಲ್ಲವನ್ನೂ ನುಂಗಿಕೊಳ್ತಾ .......
ಪಟಾಕಿ ಬೇಕೇ ಬೇಕು ಅಂದ ತಮ್ಮನಿಗೆ, ಹೊಡೀಬಾರ್ದು ಕಣೋ ಪುಟ್ಟಾ ಅಂತಾ ಅಕ್ಕ ಬುದ್ದಿ ಹೇಳಿದ್ರೆ ,ಈ ಅಕ್ಕ ಬೇಯ್ತಾಳೆ ,ಅವ್ಳು ನಂಗೆ ಬೇಡ ,ಗಂಡನ ಮನೆಗೆ ಕಳಿಸೂ ಅಂತಾ ಪುಟ್ಟ ರಿಷಿ ಕೋಪಿಸ್ಕೊಳ್ತು .
ಸರಿ ಡಂ ಅನ್ನದ ಪಟಾಕಿನೂ ತಂದಾಯ್ತು .
ಥ್ಯಾಂಕ್ ಯೂ ಅಪ್ಪಾ , ಬಹುತ್ ಖುಷ ಹುವ ,ಎ ಕಮಾಲ್ ಕ ಧಮಾಲ್ ಹೇ .....(ದೇವರಾಣೆ ಗೊತ್ತಿಲ್ಲ , ಅರ್ಥ ಕೇಳಬೇಡಿ ) ಅಂತಾ ಪುಟ್ಟ ಖುಷಿಯಲ್ಲಿ ಕುಣಿದಾಡಿತು .
ವಿಷ್ಯ ಅದಲ್ಲ ,
ಪಟಾಕಿ ಹಚ್ಚುತ್ತಾ ,ಪಟಾಕಿ ತರಹ ಮಾತಾಡ್ತಾ ಓಡಾಡುತಿದ್ದ ಮಗ .ಆಚೆ ಸೈಟ್ ನಲ್ಲಿ ಗುಡಿಸಲಲ್ಲಿರೋ ಮಕ್ಕಳು ನಿಂತು .ನೋಡ್ತಾ ನಗುತಿದ್ವು .ಉರಿಯದೇ ಹೋದ ಟುಸ್ಸ್ ಹೂವಿನ ಕುಂಡವನ್ನು 'ನಮಗೆ ಕೊಡೀ 'ಅಂತಾ ಕಿರುಚುತಿದ್ವು .
ಹಚ್ಚಿದ್ದು ಸಾಕು ಅಂತಾ ಒಳಗೆ ಬಂದ್ವಿ .
ಪುಟ್ಟ 'ಇನ್ನೂ ಬೇಕು ನನಗೆ 'ಅಂದ .ನಾನು ಗಮನಿಸಲಿಲ್ಲ .ಕೈಯಲ್ಲಿ ಪಟಾಕಿ ಹಿಡಿದು ಆಚೆ ಓಡಿದ .(ನಮ್ಮದು ಫಸ್ಟ್ ಫ್ಲೋರ್ .)'ಕ್ಯಾಚ್ ಇಟ್ ' ಎಂದು ಎಸೆದ . ಕೆಳಗೆ ಬಿದ್ದ ಪಟಾಕಿಯನ್ನು ಮಕ್ಕಳು ಖುಷೀಲಿ ಎತ್ಕೊಂಡ್ ಓಡಿದವು .
ಎಷ್ಟು ಹಠ ಮಾಡಿ ತರಿಸಿಕೊಂಡ ಪಟಾಕಿಯನ್ನು ,ಬೇರೆ ಮಕ್ಕಳೊಂದಿಗೆ ಹಂಚಿಕೊಂಡ ನನ್ನ ಮಗನ ಬಗ್ಗೆ ನಿಜಕ್ಕೂ ಹೆಮ್ಮೆ ಆಯ್ತು .
ನಾನು ಕಲಿತಿದ್ದು -
೧.ನಮಗೆ ಎಷ್ಟೇ ನೋವಿರಲಿ ಮಕ್ಕಳು ಮರೆಸ್ತವೆ .
೨.ಖುಷಿಯನ್ನು ಹಂಚಬೇಕು .
ಮಕ್ಕಳ ದಿನದ ಶುಭಾಶಯಗಳು :-)

Wednesday, 12 December 2012

"ಮಕ್ಕಲಿರಳವ್ವಾ  ಮನೆ ತುಂಬಾ "
ನಾನು ಎಷ್ಟೋ ದಿನ ನಿಜ ಅಂದುಕೊಂಡಿದ್ದೆ ,ನೊಂದುಕೊಂಡಿದ್ದೆ .ಅಣ್ಣ ಗೋದಿಬಣ್ಣ ,ಎತ್ತರದ ನಿಲುವು ,ಸುಂದರ .ಅಕ್ಕನೂ ಬೆಳ್ಳಗೆ ಚೆಲುವೆ .ನಾನು ಮಾತ್ರಾ ಕಪ್ಪಗೆ ,ಡುಮ್ಮಿ ,ಮೊಂಡುಮೂಗು ,ಕುಳ್ಳಿ . ಅಮ್ಮ ಹೇಳ್ತಿದ್ರು ,ನೀನು ನಮ್ಮ ಮಗುವಲ್ಲ ,ತೊಟ್ಟಿಯಿಂದಾ ತಂದಿದ್ದು ಅಂತಾ .ನನ್ನನ್ನು 'ಹೆಗ್ಗಣ' ಅಂತಾನೆ ಕರೀತಿದ್ರು .ಮಾತೇ ಆಡದ ನಾನು ಅದಕ್ಕೂ' ಓ ' ಅಂತಿದ್ದೆ . 

ನನಗೆ ಒಂಚೂರು ಪ್ರೀತಿ ಬೇಕಿತ್ತು .
ಆತ ಎತ್ತರದ ,ತೆಳ್ಳಗಿನ ,ಕೆಮ್ಪುಮೊಗದ,ಗಡ್ಡ ಇರುವ ಸುಂದರ .ರಾಜಕೀಯದಲ್ಲಿದ್ದವ .ನನಗಿಂತಾ ಸುಮಾರು ಹದಿನೈದು ವರ್ಷ ದೊಡ್ದವ್ರಿರಬೇಕು .ಅದೇಕೋ ನನ್ ಕಂಡ್ರೆ ಇಷ್ಟ .ನಾನು ಅದನ್ನ ಲವ್ ಅಂತಾ ತಪ್ಪಾಗಿ ತಿಳಿದುಬಿಟ್ಟಿದ್ದೆ :-) ವಯಸ್ಸು ಅಂತಹದ್ದು .ಅದಕ್ಕೆ ಏನೋ !ಈಗಲೂ ಆ ತರಹದವನೇ ನನ್ನ ಕನಸಿನ ರಾಜಕುಮಾರ :-) ಎತ್ತರ ಇರಬೇಕು ,ಅವನೆದೆಯಲ್ಲಿ ನನ್ನ ಮುಖ ಮುಚ್ಚಿಕೊಳ್ಳುವ ಹಾಗೇ ........ಇನ್ನೇನ್ ಕನಸೂ ?ಇದು ನನ್ನ ಮೊದ ಮೊದಲ ಲವ್ವು ! ಇರಬಹುದಾ ?ಯಾವಳಿಗ್ಗೊತ್ತು ?
ಉಹುಂ ,ನಾನು ಯಾರನ್ನೂ ಲವ್ ಮಾಡ್ಲಿಲ್ಲ .
ಈಗಲೂ ಲೋಕಿಗೆ ಹೇಳ್ತೇನೆ -ನಾ ನಿಂಗೆ ಯಾವತ್ತಾದರೂ I LOVE YOU ಅಂದಿದ್ದೀನಾ ಹೋಗೋ ನಾ ಲವ್ವೇ ಮಾಡಿಲ್ಲ ಯಾರನ್ನೂ ಅಂತಾ .ಅವನೂ ಹೇಳ್ತಾನೆ -ಹೂ ,ನಾನೂ ಅಷ್ಟೇ ,ಏನೋ ಹುಡುಗಿ ಗುಂಡು ಗುಂಡುಗೆ ಇದ್ಲು ,ಉದ್ದ ಜಡೆ ಅಲ್ಲಾಡಿಸ್ಕೊಂಡು ಓಡಾಡ್ತಿದ್ಲು ,ಮದ್ವೇಯಾಗೊದಾದ್ರೆ ಇವಳನ್ನೇ ಆಗೋಣ ಅನಿಸ್ತು ಅಷ್ಟೇ :-) ಅಂತಾ .ಹೌದು ,ನಾವಿಬ್ರೂ ಐ ಲವ್ ಯೂ ಹೇಳದೆ ,ಅವ್ನು ,ನನ್ನನ್ನು ಮದ್ವೇಯಾಗ್ತೀರಾ ಅಂತಾ ಕೇಳಿದ್ದು ,ನಾನು ಹೂ ಅಂದು ಮದ್ವೆಯಾಗಿದ್ದು.
ಹೀಗೂ ಉಂಟೆ ?
ನಮಗೀಗ ಮುದ್ದಾದ ಎರಡು ಮಕ್ಕಳು .
ಅಮ್ಮಾ ನೀನು ಈ ಸೀರೆ ಉಡು ,ಈ ಕಲರ್ ಡ್ರೆಸ್ ಹಾಕ್ಕೋ ,ನೀನು ನನ್ನಮ್ಮ ಚೆಂದ ಅಂತಾ ಮುದ್ದಿಸುವ ಪುಟ್ಟ ಮಗ' ರಿಷಿ' ನನ್ನ ಸುಂದರ ಪ್ರಪಂಚ .
ರಿಷಿ ,ಮೊನ್ನೆ ಒಂದು ಪ್ರಶ್ನೆ ಕೇಳಿದ ,ಅಮ್ಮಾ ನಿಂಗೆ ನಾನು ಬೇಕಾ ?ಡ್ಯಾಡಿ ಬೇಕಾ ?
ಯಾಕೋ ಕಂದಾ ಹಾಗಂತೀ ಅಂದೇ .
ಮತ್ತೆ ನನ್ ಕಡೆ ತಿರುಗು ,ಡ್ಯಾಡಿ ಮಾತು ಕೇಳಬೇಡ ಅಂದ.
ನನಗೆ ಬೇಕಾಗಿದ್ದನ್ನು ನಿನ್ನಿಂದನೂ ಕೊಡಲು ಆಗಲಿಲ್ಲ ಅಂತಾ ಈ ನನ್ನ ಮಗ ಹುಟ್ಟಿರೋದು .ಅವನು ನನ್ನನ್ನು ಕೇರ್ ,ಮಾಡ್ತಾನೆ ,ಪ್ರೀತಿ ಮಾಡ್ತಾನೆ ಹೋಗೋ ಅಂದು ಅವನೆಡೆಗೆ ತಿರುಗಿದೆ . 
ಮಕ್ಕಳು ತುಂಬಾ ಸೂಕ್ಷ್ಮ .ಅವಕ್ಕೆ ಬೇಕಾಗಿರೋದನ್ನು ಅವ್ರು ಬಯಸಿದಾಗ ಕೊಟ್ಟು ಬಿಡಿ ಪ್ಲೀಸ್ .

Tuesday, 11 December 2012

ಪ್ರತೀ  ತಿಂಗಳ  ಅಮಾವಾಸ್ಯೆ  ಬಂದಾಗ  ಏನೋ  ಆಗಬಾರದ್ದು  ಆಗೇ ಬಿಡುತ್ತೆ  ಅಂತಾ  ಒಂಥರಾ  ಭಯ  .  ಪೀರಿಯಡ್ಸ್  ಆದಾಗ  ಹೊಟ್ಟೆನೋವು  ಬರುತ್ತ್ತೆ ಅಂತಾ  ಮೊದಲೇ  ಒಂದು  ಪೈನ್ಕಿಲ್ಲರ್  ಇಟ್ಟುಕೊಂಡಿದ್ರೆ  ,  ಆ ತಿಂಗಳು  ಹೊಟ್ಟೆನೋವೆ ಬರೋಲ್ಲ :-) ಹಂಗೇ  ಈ ಭಯ  ಕಾಡದಿರಲು ಉಪಾಯ ಏನಿದೆ ? ಈ ಫೋಬಿಯಾ ಕ್ಕೆ  ಏನಂತಾರೆ ಗೊತ್ತಾ ?
ಕೃಷ್ಣೆ  .......ನಿನಗೊಂದಷ್ಟು   ಪ್ರಶ್ನೆ  .
ಅಪ್ಪನ  ಮಾತು  ಕೇಳಿ  ಒಂದಷ್ಟು  ಇಂಪ್ರೆಸ್ಸ್  ಆಗಿಬಿಟ್ಟೆ .ಅರ್ಜುನ ನೇ ನಿನ್ನ  ಗೆದ್ದಾಗ  ಮತ್ತಷ್ಟು  ಖುಷಿ ಆಗಿರಬೇಕು  ಆಲ್ವಾ ? ಆದರೆ  ಮಕ್ಕಳಲ್ಲಿ  ಒಡಕು  ಬಾರದಿರಲಿ  ಅಂತಾ  ನಿಮ್ಮತ್ತೆ ,ನಿನ್ನನ್ನು  ಮಕ್ಕಳು ಐವರಿಗೂ  ಹಂಚಿದಳಲ್ಲಾ ? ಆಗೇನ್  ಅನಿಸ್ತೆ ? ಹೋಗಲೀ  ನೀನು  ಅವರನ್ನೆಲ್ಲಾ  ಸಮನಾಗಿ  ಕಾಣಬೇಕು ಅಂತಾ  ನಿನ್ನೊಡನೆ  ವಚನ ತೆಗೆದುಕೊಂಡಳಲ್ಲಾ ? ನಿಜ  ಹೇಳೇ  ನೀ  ಹಾಗೇ  ಎಲ್ಲರನ್ನೂ  ಸಮನಾಗಿ  ಕಾಣಲು  ಸಾಧ್ಯವಾಯ್ತೇನೆ ?
ಯಾರಿಗಾದರೂ ಒಬ್ಬರನ್ನು  ಮೆಚ್ಚಬಹುದು  ,ಅವರಿಗೆ  ಎಲ್ಲಾ  ಅರ್ಪಿಸಿಬಿಡಬಹುದು .ಮೆಚ್ಚಿದವರ  ಹತ್ರ  ಮಾತ್ರಾ  ಎಲ್ಲಾನೂ  ಸಾಧ್ಯ ಆದರೆ  .........ಇವನ  ಪಕ್ಕ  ಮಲಗಿದಾಗ  ಅವನ  ನೆನಪು  ಕಾಡಲಿಲ್ಲವೇ ?( ಒರಟು ನನ್ನ ಪ್ರಶ್ನೆ ಅನಿಸಿದರೆ  ಸಾರಿ ಕಣೆ ಪ್ಲೀಸ್ .) ಒಂಟಿ  ವಸ್ತ್ರದಲ್ಲಿದ್ದಾಗ  ಆದ  ಆ  ನಿನ್ನ   ದುಸ್ತಿತಿ ನನಗೆ  ಅಳು ಬರುತ್ತೆ  ಕಣೆ  ನನಗೆ. ಐವರಿದ್ದೂ  ನೀನೆಷ್ಟು  ಸುಖ ಪಟ್ಟೆ ಪಾಂಚಾಲೀ ? ಹೆಣ್ಣು  ಯಾವ ಕಾಲಕ್ಕೂ  ಇಷ್ತೆಯೇನೆ ? ಬೇರೆಯವರ  ಇಷ್ಟಕ್ಕೆ  ಬದುಕಬೇಕಾ ?
ಆಮೇಲೆ  ಮಾತಾಡೋಣ  ?

Monday, 10 December 2012

ಒಬ್ಬ ವ್ಯಕ್ತಿ ಯ ಬಗ್ಗೆ ನಾವು ಎಷ್ಟು ಕಡಿಮೆ ತಿಳಿದುಕೊಂಡಿರುತ್ತೀವಿ ಅಷ್ಟು ಜಾಸ್ತಿ ಅಭಿಮಾನ ಇರುತ್ತೆ ಆತನ ಮೇಲೆ .ಯಾವಾಗ ಸಂಶೋಧನೆ ಮಾಡ ಹೊರಟಿರೋ .....ಮುಗೀತು .ಅವನ ಬಗ್ಗೆ ಅಸಹ್ಯ ಬರೋವಷ್ಟು ಇರುತ್ತವೆ ಕ್ರೂರ ಸತ್ಯಗಳು .

---ಇದು ಓದುತ್ತಾ ಸಿಕ್ಕಿದ್ದು ,ಸರಿ ಅನಿಸ್ತು ,ಬರ್ಕೊಂಡೆ .ನಿಮಗೂ ಹಿಡಿಸಿದರೆ ಲೈಕ್ ಹಾಕಿ .

ಇದು ಇವತ್ತೊಂದು  ಟ್ರೆಂಡ್  ಕ್ರಿಯೇಟ್ ಮಾಡ್ತು :-) ಪೋಸ್ಟ್ ಮಾಡಿದ ಸ್ವಲ್ಪ ಸಮಯದಲ್ಲಿ ಬಹಳಷ್ಟು ಲೈಕುಗಳು ! ಯಾರ್ಯಾರು  ಏನೇನ್ ತಿಳಿದುಕೊಂಡರೋ  ಏನೋ ! ನನಗಂತೂ  ಸರಿ ಅನಿಸಿದ್ದು ,ನಾ ಅನುಭವಿಸಿದ್ದು  ಬರೆದುಕೊಂಡೆ . ನನ್ನ ಹಾಗೇ  ಅನುಭವ ಆದವರಿಗೆ  ಹಿಡಿಸಿದೆ ಅಂದುಕೊಂಡೆ :-) ನನಗೇನು ಸಿಗಬೇಕೋ ಸಿಗ್ತು .

Sunday, 9 December 2012

'ಪ್ರೀತಿ '

ಇವತ್ತೊಂದು ಮಾತು ತುಂಬಾ ಹಿಡಿಸಿತು .
"ಪ್ರೀತಿ ಮಾಡೋದೇ ಬೇರೆ ,ಪ್ರೀತಿ ಉಂಟಾಗೊದೇ ಬೇರೆ ".
ಹೌದು ಪ್ರೀತಿ ಮಾಡೋಕೆ ಏನೋ ಕಾರಣ ಇರುತ್ತೆ . ಯವ್ವನದಲ್ಲಿ ಉಂಟಾಗೋ ಆಕರ್ಷಣೆಯೇ ಪ್ರೀತಿ ಅಂದುಕೋಬಹುದು .ಆದ್ರೆ ಏನೂ ಕಾರಣವಿಲ್ಲದ' ಸೆಳೆತ ' ಉಂಟಲ್ಲಾ ?ಅದು ಯಾವಾಗ ಬೇಕಾದರೂ ಆಗಬಹುದು ,ವಯಸಿನ ಪರಿಮಿತಿ ಇಲ್ಲದೇ.ಕಾರಣವಿಲ್ಲದೇ ಉಂಟಾದ ಸೆಳೆತ /ಪ್ರೀತಿಯೇ ನಿಜವಾದ ಪ್ರೀತಿ ಆಲ್ವಾ ?
ನಾನು ಪ್ರೀತಿಸಿದವರೇ ನಮ್ಮನ್ನೂ ಪ್ರೀತಿಸಿದರೆ -'ಒಲವೇ ಜೀವನ ಸಾಕ್ಷಾತ್ಕಾರ' .
ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ ?
(ಪ್ರೀತಿ ಅಂದ್ರೆ ,ನಾನಿಲ್ಲಿ ಹೆಣ್ಣು -ಗಂಡಿನ ಒಲವಿನ ಬಗ್ಗೆ ಮಾತ್ರಾ ಹೇಳಿರೋದು )
'ನಗು '

ನಾ  ನಕ್ಕಾಗೆಲ್ಲಾ  ,
ಅಮ್ಮ ಕೇಳುತ್ತಾಳೆ
ಯಾಕೆ  ಮಗು ?
ಸುಮ್ಮನೆ ಈ ನಗು ?
ಚ್ಛೆ  !ಅವಳಿಗೇನು  ಗೊತ್ತು ?
ನಿನ್ನ ನೆನಪುಗಳು ಕಚಗುಳಿ ಇಡುತ್ತಿರುತ್ತವೆ ಎಂದು .
ಕುಂತಿ ...ಕಾನೀನ .....ನಿಯೋಗ ....
ಏನಿದು ?
ಏನೇ ಅನ್ನಿ ಈ ಪುಸ್ತಕ ಓದುವ ಖುಷಿನೇ ಬೇರೆ .
ಸುಮಾರು ಹದಿನೆಂಟು ವರುಷಗಳ ಹಿಂದೆ ,ಮದ್ವೆಯಾದ ಹೊಸತು ,ಕೆಲಸ ಏನಿರಲಿಲ್ಲ .ಬೆಳಗ್ಗೆ ಹೋದ ನನ್ ಗಂಡ ಬರೋದು ರಾತ್ರಿ ಆಗ್ತಿತ್ತು .ಒಬ್ಳೆ ಕೂತಿರ್ತಿದ್ದೆ .ಆಗ ಓದಿದ್ದು "ಪರ್ವ ". ಎಷ್ಟು ದಿನ ಅದರ ಗುಂಗು ! ಆ ಪುಸ್ತಕ ಎರವಲು ಪಡೆದವರು ಕೊಡಲೇಯಿಲ್ಲ.ಆ ಪುಸ್ತಕ ನನಗೆ ಕೊಟ್ಟವರೂ ಈಗಿಲ್ಲ ಬಿಡಿ .
ನನ್ ಪುಟ್ಟ ಹೊಟ್ಟೆಯಲಿದ್ದಾಗ ಮತ್ತೆ ಓದೋ ಹಂಬಲ .ಪರ್ವ ,ಜಲಪಾತ ,ಮತದಾನ ,ದೂರ ಸರಿದರು 
,ತಬ್ಬಲಿಯು ನೀನಾದೆ ಮಗನೆ ,ನೆಲೆ ,ಗೃಹಭಂಗ ,ನಾಯಿನೆರಳು ,ನಿರಾಕರಣ ಇಟ್ಕೊಂಡು ಕುಳಿತೆ .ಮೊದಲು 'ನಾಯಿನೆರಳು 'ಓದಿ ಮುಗಿಸಿದೆ . ನನ್ ಪಾಪು ಯಾರು ?ಅದು ಹಿಂದಿನ ಜನ್ಮದಲ್ಲಿ ಯಾರಾಗಿದ್ದಿರಬಹುದು ?ನನಗೂ ಅದಕ್ಕೂ ಎನ್ ಸಂಬಂಧ ಇರಬಹುದು ?......ಥೂ ....ಬರೀ ಇದೇ .ನಾನು ಹಾಗೇ ತೀರಾ ಯೋಚಿಸೋದು .ಆಮೇಲೆ ಇನ್ನೊಂದು ಹುಚ್ಚಿದೆ .ಏನೇ ಓದಲೀ ,ಯಾರನ್ನು ಹಾಕಿಕೊಂಡು ಪಿಚ್ಚರ್ ತೆಗೆಯೋಣ ಅಂತಾ ಪ್ಲಾನ್ ಮಾಡೋದು .
ಮಲೆಗಳಲ್ಲಿ ಮದುಮಗಳು ,ಮೇಘ ಸಂದೇಶ,ಮಂಕುತಿಮ್ಮನ ಕಗ್ಗ ಹೊಸದಾಗಿ ತಂದು ಕೊಟ್ಟರು . ಏನೇನ್ ಓದಿದನೋ !
ಮತ್ತೊಮ್ಮೆ 'ಪರ್ವ' ಕಳೆದೆ ಅಷ್ಟೇ .
ಅದೇನೋ ಸಂಸ್ಕೃತದಲ್ಲಿ ಅಂತಾರೆ -ಪುಸ್ತಕ ,ಮತ್ತೇನೋ ಬೇರೆಯವರ ಹತ್ರ ಹೋಗಿದ್ದು ಹೋಗೇ ಬಿಡುತ್ತೆ ಅಂತಾ .ಈಗಲೂ ಅದೇ ,ಮಲೆಗಳಲ್ಲಿ ಮದುಮಗಳು ,ಮನುಸ್ಮೃತಿ ಇವೆರಡನ್ನೂ ತೆಗೆದುಕೊಂಡು ಹೋಗಿ ಒಂದು ವರ್ಷ ಆಗಿರಬೇಕು ,ಅವರನ್ನು ಕಾಡೀ ಕಾಡೀ ಮನುಸ್ಮೃತಿ ವಾಪಾಸ್ ತರಿಸ್ಕೊಂಡೆ ,ಇನ್ನೊಂದು ಪುಸ್ತಕ ಬರತ್ತೋ ಇಲ್ವೋ !

ಖಾಯಿಲೆ ಮಲಗಿ ಎಲ್ಲಾ ಮರ್ತು ಹೋದ ಮೇಲೆ ,ಮತ್ತೆ 'ಪರ್ವ 'ಸಿಕ್ಕಿದೆ .ಸಂಜೆಯಿಂದಾ ಓದೋಕೆ ಶುರು ಮಾಡಿದೆ .೭೭ ಪುಟಗಳು ಆಯ್ತು .ಹಾದರದ ಕಥೆ ,ಸೋದರ ವೈಷಮ್ಯದ ಕಥೆ ಶುರುನಾ ಅಂದ ನನ್ನವ . ಕುಂತಿಗೆ ಯಮನಿಂದಾ 'ಧರ್ಮ ',ಮರುತ್ತನಿಂದಾ 'ಭೀಮ ,ಇಂದ್ರನಿಂದಾ 'ಅರ್ಜುನ ' ಹುಟ್ಟಿದ್ದಾರೆ .ಅಶ್ವಿನಿ ದೇವತೆಗಳಿಂದಾ ಮಾದ್ರಿಗೆ 'ನಕುಲ ,ಸಹದೇವ '.ಅವ್ರು ಪಾಂಡವರು ಅಲ್ಲ ಅಂತಾ ಧುರ್ಯೋಧನ ರಾಜ್ಯ ಕೊಡುವುದಿಲ್ಲವಂತೆ ,ಧೃತರಾಷ್ಟ್ರ ಮತ್ತು ಪಾಂಡುರಾಜ ಹುಟ್ಟಿದಾದರೂ ಹೇಗೆ ?ರಾಜಕೀಯ ನೋಡು ಅಂತಾ ಲೋಕಿಗೆ ಹೇಳಿ ಬಯ್ಸಿಕೊಂಡೆ .
ಒಂದು ಸಾಮಾನ್ಯ ಜನರ ,ನಮ್ಮೊಳಗೇ ನಡೆಯುತ್ತಿರುವ ಕಥೆಯೇನೋ ಎನಿಸುವಂತೆ ಹೇಳಿಕೊಂಡು ಹೋದ 'ಪರ್ವ 'ನನಗಿಷ್ಟ .
ಕಥೆ ಓದಬೇಕು ಮಿತ್ರರೇ ,ಆ ಲೋಕದಲ್ಲಿ ವಿಹರಿಸೋದೇ ಸುಖ ,ಆಹಾ .....ನೀವೂ ಓದಿ .

ನಿರೀಕ್ಷೆ

ಹಸಿರೊಣಗಿ ಕೊಂಬೆ
ಕಳಚುವ ಸ್ಥಿತಿಯಲ್ಲಿ ಎಲೆ -
ಯುದುರಿದ, ಭಾವನೆಗಳ
ಕಳೆದುಕೊಂಡಿರುವ ಒಣಮರ
ನಾನಾಗೆ ........

ಮಣ್ಣಿಂದ ಬಿಡುಗಡೆ
ಹೊಂದಲಾರದೇ ನಿಟ್ಟುಸಿರು


ರವಿಯ ಹೊಂಗಿರಣಗಳು
ಚೆಲ್ಲಾಟವಾಡುತ್ತಿರಲು ಪುಳಕಗೊಳ್ಳದ
ವಸಂತದಿ ಕೋಗಿಲೆಯ ಉಲಿಯುವಿಕೆಗೆ

ದನಿಗೂಡದೇ
ಆ ಭಾವಜೀವಿಯ ಭಾವುಕತೆಗೆ ಸ್ಪಂದಿಸಲಾಗದೆ,
ಯೌವ್ವನದ ಗರಿ ಕಳಚಿದ ಮುದಿಹಕ್ಕಿಯ
ಹಳೆಯ ನೆನಪಿನಂತೆ,

ಗತವೈಭವದ ನೆನಕೆಗಳ ಮೆಲುಕು.
ನಿಂತಿರುವೆ,
ನೀರೂ ಇದೆ,
ಚಿಗುರಲಾರೆ ಮತ್ತೆ.
ಹಸಿರು ಬಿರಿದು,
ಬಾನೆತ್ತರಕ್ಕೆ ಬೆಳೆಯಬೇಕೆಂಬ ಆಸೆಯಿದ್ದರೂ
ಪಕ್ಕದಲ್ಲಿನ ಕಿರುಸಸಿಗೆ ಸ್ಥಳ ತೆರವು

ಸಾವಿನ ನಿರೀಕ್ಷೆಯ,
ಬದುಕಲಾರದ ಮುದುಕನ ತೆರದಿ .
ಆಗಸವ ದಿಟ್ಟಿಸುತ್ತಿರುವೆ ಮಳೆಗಾಗಿ
ಅಲ್ಲ.
ಜೀವಿತದ ಕೊನೇ ಕ್ಷಣಕ್ಕಾಗಿ....

ಹಾಗೇ ಸುಮ್ಮನೇ

ಹೌದು, ನೀನು ದೇವರು !
ನೀನು ದೇವರೆಂದೇ ತಿಳಿದಿದ್ದೆ
ಅಂದು ....

ನಾ ಕತ್ತಲಲ್ಲಿದ್ದೆ
ನೀ ಪ್ರೇಮದ ಹಣತೆಯ ಬೆಳಗಿ
ಕೈಹಿಡಿದು ಬದುಕ ದಾರಿ ತೋರಿದ್ದೆ

ಒಲವ -ಬಯಕೆಗಳ ಪೂರೆಯ ಹರಿದು,
ನಾ ಭಕ್ತೆಯಾಗಿ ಅರ್ಪಿಸಿಕೊಂದಾಗ
ನೀ ಸ್ವೀಕರಿಸಿದ್ದೆ

ನಿನ್ನ ಪೂರೈಕೆಗಳ ಬರ ತೀರಿದಾಗ
ಕೊಂಚ ಕೊಂಚ ಸರಿದಿದ್ದು
ಅರಿವಿಗೆ ಬರಲೇಯಿಲ್ಲ

ಪ್ರೇಮದ ಹಣತೆಯ ಜ್ವಾಲೆ
ಆಲುಗಿದಾಗ ನಾ ನಂದುವುದ
ತಿಳಿಯಲಿಲ್ಲ

ನಿಜ ಹುಡುಗ, ಈಗಲೂ ನೀ ದೇವರೇ,
ಬಾಳನೌಕೆ ದಿಕ್ಕೆಟ್ಟು ಸಾಗುವಾಗ,
ಗುರಿ ಸೇರುವ ಆಸೆ ಮರೀಚಿಕೆಯಾದಾಗ,
ನನ್ನ ಕೂಗು ನಿನಗೆ ಕೇಳುತ್ತಿಲ್ಲ,

ನೀ ಕಲ್ಲುದೇವರು.
ಕಲ್ಲುಹೃದಯದ ದೇವರು?
ದೇವರು-ಪ್ರೇಮ-ಹಣತೆ ......
ಬರಿಯ ಭ್ರಮೆ ! ಚಿಂತೆ
ಉಳಿದಿದೆ ನಿನ್ನ ಸವಿ(!)ನೆನಪುಗಳ ಕಂತೆ...

ಉಸಿರು

ಸ್ನಾನದ ಮನೆಯಲ್ಲಿಯೂ,
ಚೆಲ್ಲಿದ ನೀರಿನಲ್ಲಿ ನನ್ನ ಬೆರಳು ಮೂಡಿಸಿದ್ದು ನಿನ್ನ ಹೆಸರು.
ಅಡಿಗೆ ಮಾಡುವಾಗ ಉರಿಗೆ ಕಪ್ಪಾದ ಪಾತ್ರೆಯ ಮೇಲೆ

ಗೀಚಿದೆ ಉಹುಂ ಬರೆದೆ ನಿನ್ನ ಹೆಸರು.
ಸಮುದ್ರದ ದಡದಲ್ಲಿ ಕುಳಿತೆ,

ಮರಳ ಮೇಲೆ ಚೆಂದದ ನಿನ್ನ ಹೆಸರ ಬರೆದು
ಅಲೆಯಲ್ಲಿ ಕೊಚ್ಚಿಹೊಗೋದನ್ನ ನೋಡ್ತಾ ನಕ್ಕು ಬಿಟ್ಟೆ .
ಕಲ್ಲ ಮೇಲೆಯೂ ಕೆತ್ತಿದೆ

ನಿನ್ನ ಹೆಸರ ಮರಗಳ ಮೇಲೆಯೂ .....
ಪೆನ್ ಸಿಕ್ಕಾಗ, ಕೈ ಮೇಲೆ,

ಕಾಗದದ ಮೇಲೆ ಮುದ್ದಾಗಿ ಬರೆಯುವುದು ನಿನ್ನ ಹೆಸರು .
ಏನೇ ಸಿಕ್ಕರೂ ಅದರ...

ಮೇಲೆಲ್ಲಾ ಬರೆದದ್ದು ನಿನ್ನದೇ ಹೆಸರು .
ನಿನ್ನ ಹೆಸರು ಚೆಂದವೋ !
ನಾ ನಿನ್ನ ಪ್ರೀತಿಸುವುದಕ್ಕೆ ಅದು ಚೆಂದ ಅನಿಸ್ತಿದೆಯೋ!
ಕಂಡ ಕಂಡಲೆಲ್ಲಾ ನಾ ನಿನ್ನ ಹೆಸರೇ ಬರೆಯುವುದಕ್ಕೆ ಏನೋ ಕಾರಣ ?
ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ.......

Saturday, 8 December 2012

ಸಾಂಗತ್ಯ

ನಾನೇ ಪ್ರೀತಿಸುವ ನೀನು
ಬಳಿಯಲಿಲ್ಲದ್ದಿದ್ದರೂ,
ನಿನ್ನ ಮುದ್ದುಗರೆಯುವಿಕೆಯ ,
ಮುನಿಸಿನ ಮಧುರ ನೆನಪುಗಳಿವೆ ನನ್ನಲ್ಲಿ .
ನಾನೇಕೆ ಒಂಟಿ ?

ನೀ ಬರದಿದ್ದರೂ ಸನಿಹ
ನಿನ್ನ ನೆನಪೇ ಸಾಕೆನುವೆ ಹೋಗೋ .
......................................
...........................................

ನಿನ್ನ ಮುದ್ದು ಮೊಗ ನೋಡ್ತಾ
ನನ್ನ ಕಣ್ಣುಗಳ ಮುಚ್ಚಬೇಕು ಅನಿಸುತ್ತೆ

ನಿನ್ನ ಸವಿನುಡಿಗಳ ಆಲಿಸುತ್ತಾ
ಮೈ ಮುರಿಯಬೇಕು ಅನಿಸುತ್ತೆ
ನಿನ್ನ ಪ್ರೀತಿಯ ಸ್ಪರ್ಶದ ನೆನಪಿಗೆ
ತನು ಮನ ಅರಳಿ ಕಂಪಿಸುತ್ತೆ
ನೀ ಕುಲು ಕುಲು ನಕ್ಕರಂತೂ
ಈ ಜಗತ್ತೇ ಬೇಡವೆನಿಸುತ್ತೆ
ನಿನ್ನ ಬಿಗಿದ ಬಾಹುಗಳಲಿ ಉಸಿರು
ಕಟ್ಟಿದರೂ ಬಂಧಿಯಾಗಬೇಕೆನಿಸುತ್ತೆ
ಏನು ಹೇಳಲೋ ನನ್ನ ಗಂಧರ್ವ
ಸದಾ ನಿನ್ನ ಜೊತೇಲೆ ಇರಬೇಕೆನಿಸುತ್ತೆ .