Monday, 27 April 2015


ನನ್ನ ಸ್ವಭಾವ ಇದು - ನಾನು ನನಗೆ ಸಂಬಂಧಿಸಿದ್ದನ್ನು ತುಂಬಾ ಕೇರ್ ಮಾಡ್ತೇನೆ, ಯಾರ ಜೊತೆಯಲ್ಲೂ ಶೇರ್ ಮಾಡೋಲ್ಲ:-)
ನನ್ನ ಮಲಗುವ ಕೋಣೆ ಏನೂ ಕ್ಲೀನ್ ಆಗಿರೋಲ್ಲ, ದಿಂಬಿನ ಬಳಿ ತುಂಬಾ ಪುಸ್ತಕಗಳು, ಪೆನ್ಸ್ ಇರುತ್ತೆ. ಮಗ ಅದರಲ್ಲಿ ಏನಾದರೂ ಗೀಚಬಾರದು, ಹಾಸಿಗೆ ಕಚಪಚ ತುಳಿಯಬಾರದು, ಬೆಡ್ ಮೇಲೆ ಕುತ್ಕೊಂಡು ಕುಡಿಯಬಾರದು, ತಿನ್ನಬಾರದು .... ಹೀಗೆ ಎಚ್ಚರಿಕೆ ಕೊಡ್ತಿರ್ತೇನೆ. ಹಾಸಿಗೆ ..... ಸಾವಿರ ಕೊಟ್ಟಿರೋದು ಕಣೋ ಪುಟ್ಟಾ ಹಾಳು ಮಾಡಬೇಡಾ ಅಂತಾ ಸಾಕಷ್ಟು ಸಲ ಬಯ್ಯೋದುಂಟು. ಟೀ. ವಿ ಬೇರೆ ಅಲ್ಲೇ ಇರೋದ್ರಿಂದಾ ಹೀಗೆ ಕೂಗಾಟಗಳು. 
ಇಂದು ಬೆಳಿಗ್ಗೆ -- ಪ್ಲೇಟ್ ನಲ್ಲಿ ಎರಡು ಆನಿಯನ್ ಪಕೋಡ, ಸ್ವಲ್ಪ ನೂಡಲ್ಸ್, ಸ್ವಲ್ಪ ಚಟ್ನಿಪುಡಿ ಅನ್ನ ಎಲ್ಲಾ ಹಾಕ್ಕೊಂಡು, ಅದೇ ತಟ್ಟೇಲಿ ಮ್ಯಾಂಗೋ ಜ್ಯೂಸು ಲೋಟ ಸಹ ಇಟ್ಟುಕೊಂಡು ಒಂದು ಕೈಲಿ ಹಿಡ್ಕೊಂಡೆ, fb ನೋಡ್ತಾ ಟಿಫೆನ್ ತಿನ್ನೋಣ, ಮತ್ಯಾರು ಬರೋದು ಅಂತಾ ಟ್ಯಾಬ್ ಸಹಿತಾ ಮತ್ತೊಂದು ಕೈಲಿ ಹಿಡ್ಕೊಂಡು ರೂಂ ಗೆ ಹೋದೆ. ಕುತ್ಕೊಳೋಕೆ ಮುಂಚೆ ಲೋಟ ಅಲುಗಿತು , ತಟ್ಟೆಯೊಳಗೆ ಉರುಳಿತು, ಆಚೆಯೂ ಚೆಲ್ಲಿ ಹಾಸಿಗೆಯ ಅಂಚು ಒದ್ದೆಯಾಯ್ತು. 
ಇದೇ ಅವಘಢ ಮಗನಿಂದ ಆಗಿದ್ದರೆ .... tv ನೋಡ್ತಾ ತಿನ್ನಬೇಡ ಅಂತಾ ಎಷ್ಟು ಸಲ ಹೇಳೋದು ? ನೆಟ್ಟಗೆ ತಟ್ಟೆ ಹಿಡಿದುಕೊಳ್ಳುವುದಕ್ಕೂ ತ್ರಾಣ ಇಲ್ವಾ ನಿಂಗೆ ? ಹಾಸಿಗೆ ಒದ್ದೆ ಮಾಡಿದ್ಯಲ್ಲಾ? ಆಚೆ ಹೋಗಿ ತಿನ್ನೋದಲ್ವಾ ?........ ಹೀಗೆ ಬಯ್ಗುಳಗಳ ಸುರಿಮಳೆಯೇ ಆಗ್ತಿತ್ತು. 
ನನಗೆ ನಾನು ಮಾಡಿದ ಅವಾಂತರಕ್ಕೆ ಕೋಪ ಬರಲಿಲ್ಲ, ಹತ್ತಿರವಿದ್ದ ಟವೆಲ್ ತೆಗೆದುಕೊಂಡು, ಒತ್ತಿ ಒತ್ತಿ ನೀರು ತೆಗೆದೆ, ಪ್ಲೇಟ್ ಲ್ಲಿ ಸಾಲಿಡ್ ಲಿಕ್ವಿಡ್ ಜೊತೆ ಬೆರೆತು ತೇಲಾಡ್ತಿತ್ತು, ಎಲ್ಲಾ ಸರಿಪಡಿಸಿಕೊಂಡು ನಿಧಾನಕ್ಕೆ ತಿಂದು ಮುಗಿಸಿದೆ. ನಾನು ಮಾಡಿದ್ದು ತಪ್ಪು. ನಾನು fb ನೋಡ್ತಾ, ಹಾಸಿಗೆ ಮೇಲೆ ಕುಳಿತುಕೊಂಡು ತಿಂಡಿ ತಿನ್ನಬಹುದಾ ? ನಾನು ಬಹಳಾ ಹುಷಾರು, ನೀರು ಚೆಲ್ಲುವುದಿಲ್ಲ, ತಿಂಡಿ ಚೆಲ್ಲಿ ಕಲೆ ಮಾಡೋಲ್ಲ ಅನ್ನೋ ಹಮ್ಮು ಅಲ್ವಾ ನನಗೆ ?
ನನಗನಿಸ್ತು --- ನಾವು ಹೀಗೆ ಅಲ್ವ ? ಬೇರೆಯವರ ತಪ್ಪುಗಳಿಗೆ ಕೋಪಿಸಿಕೊಳ್ಳುತ್ತೇವೆ, ಕೂಗಾಡ್ತೇವೆ. ಆದರೆ ನಮ್ಮ ತಪ್ಪಿಗೆ ಎಕ್ಸ್ಕ್ಯೂಸ್ ಕೊಡುತ್ತೇವೆ. ಎಷ್ಟೋ ಸಲ ನಮ್ಮಿಂದಾದ ತಪ್ಪುಗಳಿಗೆ ಕಾರಣ/ ಸಮರ್ಥನೆ ಬೇರೆ ಕೊಡುವ ಪ್ರಯತ್ನ ಮಾಡ್ತೇವ, ಯಾಕೆ ?

Friday, 24 April 2015

ಮಾನವೀಯ ಸಂಬಂಧಗಳು ಅಂತರಂಗದ ಶಕ್ತಿಯ (ಆತ್ಮೀಯತೆಯ) ಸಾಮರ್ಥ್ಯದ ಮೇಲೆ ಬಲಗೊಳ್ಳುತ್ತವೆ

taaytanada sukha --

ಸಾ

ಅಂದು ಬೆಳಿಗ್ಗೆ ಮನೆಯೊಳಗೆ  ಕಾಲಿಟ್ಟೆ. ಆಗಷ್ಟೇ ಎದ್ದು ಸೋಫಾದಲ್ಲಿ ಕುಳಿತಿದ್ದ ಮಗ ಕೇಳಿದ- ಅಮ್ಮಾ ನನ್ನ ಬಿಟ್ಟು ಎಲ್ಲಿಗೆ ಹೋಗಿದ್ದೆ ? ಜಿಜ್ಜಿ ಗುಡಿಗೆ ಮಗನೆ ಅಂದೆ. ಮಿಕಿ ಮಿಕಿ ನೋಡಿದ , ಯಾಕೆ ಅಂದರೆ ನಾನು ದೇವಸ್ಥಾನ ಅಂತಾ ಹೋಗದೆ ಯಾವ್ ರಾಯನ ಕಾಲವಾಯ್ತೋ ನೆನಪಿಲ್ಲ.
ಅಮ್ಮಾ ನೀನು ಡಿಫೆರೆಂಟ್  ಆಗಿ  ಇದೀಯ ಅಂದ. ಯಾಕೋ ಕಂದ ? ಗೊಂದಲವಾಯ್ತು ನನಗೆ, ಸಾವರಿಸಿಕೊಂಡು ಕೇಳಿದೆ, ಅಮ್ಮ ನಿನ್ನ ದೇವಸ್ಥಾನಕ್ಕೆ ಬಿಟ್ಟು ಹೋಗಿದ್ದಕ್ಕ ಹೀಗನ್ನೊದು ? ಅಥವ  ಅಮ್ಮಾ ಚೆನಾಗಿ ಕಾಣಿಸ್ತಿಲ್ವ ?
ಅಯ್ಯೋ ಅಮ್ಮಾ ನನ್  ಲೈಫ್ ಲ್ಲಿ ಈ ತರಹ ನಿನ್ನ ನೋಡಿಲ್ಲ, ಚೆಂದ  ಕಾಣಿಸ್ತಿದ್ದೀ  ಅಮ್ಮಾ, ದಿನಾ ಹೀಗೇ  ಇರು ಅಂದ. ಆಹಾ ಸಾರ್ಥಕ --ಹಸಿರು ಸೀರೆಯಲ್ಲಿ  ಅಮ್ಮ ಮಗನಿಗೆ ಚೆನಾಗಿ ಕಾಣಿಸ್ತಿದಾಳೆ! ಆದರೆ .... ಲೈಫ್ ಅಂತೆಲ್ಲ ಪುಟ್ಟಮರಿ ಮಾತಾಡುತ್ತೆ ? ಪುಟ್ಟ  ಮಗನ ಬಾಯಿಂದ ದೊಡ್ಡ ಮಾತು! ಬೆರಗಾದೆ. ನೋಡ್ರೀ  ಒಂದಿನನಾದ್ರೂ ನೀವು ಹೇಳಿದ್ದೀರ ಹೀಗೆ ನಾನು ಚೆಂದ ಅಂತ ?  ನನ್ನವನಿಗೆ ಕೇಳಿದೆ. ಇರೆ ಹತ್ತು ವರುಷ ಹೋಗ್ಲಿ, ಈ ತರಹ ಮಾತಾಡಿ, ಯಾರನ್  ಪಟಾಯಿಸಿಕೊಂಡು ಬರ್ತಾನೋ ನಿನ್ ಮಗ? ಆಗ ನಗುವಿಯಂತೆ ಅಂದು ನನ್ನವನು ನಕ್ಕ. ಇರಲಿ ಬಿಡೋ, ನಾನು ಅಷ್ಟು ದಿನ ಬದುಕಿರಲಿ, ಆ ಖುಷಿಗೂ ನಗುತ್ತೇನೆ ಏನೀವಾಗ ? ಎಂದೇ:-)
ನನ್ನ ಮಗ ಹಾಗೇ ...   ಮುದ್ದು ಮುದ್ದು ಮಾತಾಡ್ತಾ ಪದೇ ಪದೇ ಮುತ್ತು ಕೊಡುವಾಗ ಒಮ್ಮೆ ಕೇಳಿದೆ - ಮಗನೆ ಯಾಕೆ ಅಮ್ಮನ್ನ ಹೀಗೆ ಮುದ್ದು ಮಾಡೋದು ? ನನಗೆ ಯಾರೂ ಫ್ರೆಂಡ್ಸ್ ಇಲ್ಲ, ಇರೋ ಫ್ರೆಂಡ್ಸ್ ಮಾತಾಡಿಸ್ತಿಲ್ಲ, ಮನೆಗೆ ಬಂದಿಲ್ಲ ಅಂತಾ ಚಿಂತಾ ಮಾಡ್ತಿರ್ತಿಯ  ಅಮ್ಮಾ ... ನಂಗೆ ನಿನ್ ಸ್ಯಾಡ್ ಫೇಸ್ ನೋಡಿದ್ರೆ ಗೊತ್ತಾಗುತ್ತೆ, ಆಗ ಅಮ್ಮನ್ನ ಮುದ್ದು  ಮಾಡಿ ಚಿಂತ ದೂರ ಮಾಡಬೇಕು ಅಂತ ನಂಗೊತ್ತು ಅಮ್ಮಾ, ನಾನು ಎಷ್ಟು ಮುದ್ದು ಮಾಡ್ತಿನೋ ಅದಕ್ಕೆ ಡಬಲ್ ನನಗೆ ಸಿಗೋಲ್ವ ? ಅಂದ !!!
ಅರೆ ಪುಟ್ಟಾ ? ದೇವದೂತ ನೀನು ನನ್ನ ಕಂದ ಎಂದು ತಬ್ಬಿಕೊಂಡೆ.
ಈಗ ರಜೆಯ ಸಂಭ್ರಮ, ಸದಾ ಚಟುವಟಿಕೆಯ ಕಂದ ಕೆಲವೊಮ್ಮೆ ಸುಸ್ತು ಹೊಡಿಸ್ತಾನೆ ನನಗೆ.
ಮನೆಯೆಲ್ಲಾ ಏನೇ ಬೆಣ್ಣೆ ಘಮ ಅಂದ ನನ್ನವ ಮೊನ್ನೆಯೊಮ್ಮೆ. ನನ್ನ ಪುಟ್ಟ ನಗುತಿದ್ದ. ಅಮ್ಮಾ ನೀನು ಸ್ಯಾಂಡ್ವಿಚ್ ಗೇ  ಅಂತಾ ತಂದಿಟ್ಟಿರೋ ಅಮುಲ್ ಅಸಲಿ ಬಟರ್ ನ ನಾನು ಸ್ಕೂಪ್ ಮಾಡ್ಕೊಂಡು ತಿಂದೆ, ಬಯ್ಯಲ್ವ ಅಮ್ಮ ? ಕೇಳಿದ. ನನಗ್ ಯಾಕಮ್ಮಾ ಬಟರ್ ಇಷ್ಟ ? ಎಂದ. ಬಯ್ಯೋಲ್ಲ ಮಗನೆ, ಸಂತಾನ ಗೋಪಾಲಕೃಷ್ಣನ ವ್ರತ, ಪಾರಾಯಣ ಮಾಡಿ ನಿನಗಾಗಿ ನಾನು ದಿನವೂ  ಬೆಣ್ಣೆ  ತಿಂದಿದ್ದೇನೆ  ಕಂದಾ, ನಲವತ್ತು ದಿನಗಳಲ್ಲಿ ಒಂದು ತಟ್ಟೆ ಬೆಣ್ಣೆ ತಿಂದು ನೀರು ಕುಡಿದಿದ್ದೇನೆ.  ನನ್ನ ಮುದ್ದು ಕೃಷ್ಣ ನೀನು, ಅದಕ್ಕೆ ನಿಂಗೂ ಬೆಣ್ಣೆ ಇಷ್ಟ ಅಂದೇ.  ಪೆದ್ದು ಪೆದ್ದಾಗಿ ನಗ್ತು,  ರಾಮನ  ನಕ್ಷತ್ರದಲ್ಲಿ  ಹುಟ್ಟಿದವ  ಒಳ್ಳೆಯ ಮಗ ನನ್ನ ಪುಟ್ಟ.
ತಾಯ್ತನ ಅನ್ನೋದು ನಿಜಕ್ಕೂ ಅದೆಷ್ಟು ಸುಖ ! ಕೆಲವರು ಮಕ್ಕಳನ್ನು ಹೆರ್ತಾರೆ, ಅಮ್ಮನದೋ, ಅಕ್ಕನದೋ , ಇನ್ಯಾರದೋ ಮಡಿಲಿಗೆ ಹಾಕಿ ಈ ಸುಖದಿಂದ ವಂಚಿತರಾಗ್ತಾರೆ. ಮಕ್ಕಳು ಸಣ್ಣಲಿರುವಾಗ  ಕೊಡುವ ಕಾಟ, ಖುಷಿ ಅಲ್ವಾ ? ಅನುಬಂಧ ಬಿಗಿಯಾಗೋದು ಮಕ್ಕಳನ್ನು  ಜೊತೆಯಲ್ಲಿ ಇರಿಸಿಕೊಂಡು  ಸಾಕಿ ಸಲಹಿದಾಗ ಅಲ್ವಾ ?
ನನ್  ಮಗನ ಬಗ್ಗೆ ಬೇಕಾದಷ್ಟು ಬರೆಯಬಹುದು ಬಿಡೀ, ನಾನ್ಯಾಕೆ ಇದನೆಲ್ಲಾ ಬರೆದೆ ಅಂದರೆ ..  ನಮ್ಮ ಪಕ್ಕದ ಮನೆಯಾಕೆಗೂ  ಮಗಳು ಹುಟ್ಟಿ ೧೨ ವರುಷಗಳ ನಂತರ ಮಗ ಹುಟ್ಟಿದಾನೆ. ನಾನು ಮಾತನಾಡುವುದಿಲ್ಲ ಅಷ್ಟು  ಸುಲಭಕ್ಕೆ,  ಮುದ್ದು ಮಗು ನನ್ನ ನೋಡಿ ನಗುವಾಗ, ಸಹಜವಾಗಿ  ನಾನು ಮಾತಾಡಲು ಶುರು ಮಾಡಿಕೊಂಡೆ. ಅದು ಸ್ವಲ್ಪ ಕಾಣಿಸೋದು ಆಪರೂಪ ಆಯ್ತು ಅಂತಾ ಕೇಳಿದೆ -ಮಗ ಎಲ್ಲಿ ? ಆನೆಯಂತಹ ಆಕೆ , ತುಂಬಾ ದಿವರುಷಗಳ  ನಂತರ ಹುಟ್ಟಿದ  ಪುಟ್ಟ ಮಗನನ್ನು ನೋಡಿಕೊಳ್ಳಲಾಗದೇ,  ತುಂಬಾ ಕಾಟ ಕೊಡುತ್ತಾನೆರೀ, ಕೈಯೇ  ಬಿಡೋಲ್ಲ, ಅದಕ್ಕೆ ನಮ್ತಾಯಿ ಹತ್ರ ಬಿಟ್ಟಿದೇನೆ ಅಂದ್ರು ! ಛೆ ಇವರೂ ತಾಯಿನಾ ಅನಿಸ್ತು :( ಉದ್ಯೋಗಸ್ತ ಮಹಿಳೆಯಾದರೆ ಅನಿವಾರ್ಯ ಈ ಸುಖ ಕಳೆದುಕೊಳ್ಳುವುದು.  ಗೃಹಿಣಿನೂ ಹೀಗೆ ಮಾಡೋದು ಸರಿಯಲ್ಲ ಅಲ್ವಾ ?


Wednesday, 15 April 2015



ಪ್ರೀತಿಸುವೆಯಾ ನನ್ನ ಎಂದೇ, ಯಾಕೆ ಈ ಸಂಶಯ  ಅಂದ.
ಹೇಳಲಿಲ್ಲ ಇದುವರೆಗೂ ಅದಕ್ಕೆ ಕೇಳಿದೆ ಎಂದೇ, ಹೇಳದಿರುವ ಮಾತನ್ನೂ  ಅರ್ಥೈಸಿಕೋ  ಎಂದ.
ಗೊತ್ತು ಬಿಡು, ಪದಗಳೆಲ್ಲಾ  ಹಳಸಲು ಅಂದೇ, ನಕ್ಕ ಅವನ ಕಣ್ಣುಗಳಲ್ಲಿ ಮಿಂಚಿದ ಭಾಷೆ ಸ್ಪಷ್ಟವಾಯ್ತು.
ನಿಜಾ ... ಅವನೆಂದೂ 'ನಾ  ನಿನ್ನ ಪ್ರೀತಿಸುವೆ' ಎಂದುಲಿಯಲಿಲ್ಲ, ಮುನಿದಾಗ ನನ್ನ ಕೆನ್ನೆಗೆ ಮುತ್ತಿಟ್ಟ.
ನಾನು ಮಾತನಾಡುತಿದ್ದೆ, ಅವನು ಪಾದಗಳ ಮೆಲ್ಲಗೆ ಅದುಮುತಿದ್ದ.
ಅವನೆದುರು ನಾನು ಮಗುವಾಗುತಿದ್ದೆ,  ನನ್ನ ತುಂಟತನಕ್ಕೆ ಅವನು ಬಿಗಿಯಾಗಿ ತಬ್ಬುತಿದ್ದ, ದೇಹವ ಬಯಸಲಿಲ್ಲ.
ಕಣ್ಣಿನಲಿ ಕಣ್ಣಿಟ್ಟು ನಾ ...  ನೀನು ಬೇಕೆಂದೇ ... ನನ್ನೊಳಗೆ ಲೀನವಾಗಿ ಎದೆಯ ಮೇಲೆ ವಿಶ್ರಮಿಸಿದ.
ಇದ್ದಷ್ಟೂ ಹೊತ್ತು ನಾನೇ ಹರಟಿದೆ,  ಹೊರಟಾಗ ಅವನು ನನ್ನ ನೊಸಲ ಚುಂಬಿಸಿದ.
ಅವನು ನನ್ನವನು,  ಎಂದೆಂದೂ ನನ್ನವನು .... ಪ್ರೀತಿಸಿದವಳ ಎಂದೂ ಅಗಲಲಾರನು.
















Thursday, 9 April 2015


ಎಲ್ಲ ಮುಗಿಯಿತು, ಇನ್ನೇನಿದೆ ? ಎಂದು ನಿಟ್ಟುಸಿರಿಟ್ಟು ಬದುಕಿನ ಪುಸ್ತಕವ ಮುಚ್ಚಿದಾಗ .....
ಅರೆ ನನಗೇನೋ ಅಮೂಲ್ಯವಾದುದು ಸಿಕ್ಕಿದೆ !!!
ಅಮೂಲ್ಯವಾಗಿರೋದು ವಿರಳ, ಹೌದು ವಿರಳವಾಗಿರೋದಕ್ಕೆ ಅದು ಅಮೂಲ್ಯ. 
ಸಿಕ್ಕಿದ್ದು ನನಗೇನಾ!! ನನ್ನದೇನಾ !!! 
ಶುರುವಾಗಿದೆ ಗೊಂದಲ..... 
ನನ್ನಲ್ಲೇ ಉಳಿಸಿಕೊಳ್ಳುವ ಹಂಬಲ...
ನಿಜಾ .... ಅವನು ಚೆಲುವ ... ಗಂಧರ್ವ !!!
ಬಂದಿದ್ದಾನೆ ... ಹೊಸ ಅಧ್ಯಾಯ ಬರೆಯಲು.

ಕಾರಣವ ಕೇಳುವುದಿಲ್ಲ ನಿನಗೆ 
ನೀ ಬಾರದಿರುವೆ ಇದುವರೆಗೂ ಯಾಕೆ?
ಪ್ರಶ್ನಿಸುವುದಿಲ್ಲ ನಾನು 
ನನ್ನಾಣೆ... 
ಪ್ರೀತಿಸುತ್ತಿರುವೆಯಾ ನೀನು?
ಅಂದು .... ಬೀಳ್ಕೊಡುವ ಮುನ್ನ .. ಬಾಗಿಲ ಬಳಿ ... 
ಬೊಗಸೆಯಲಿ ಮೊಗವಿಡಿದು, ಹಣೆಗೆ ಮುತ್ತಿಡುವಾಗ .. ನೀ 
ಇದ್ದದ್ದು ಅಪ್ಪಟ ಪ್ರೀತಿ ಮಾತ್ರಾ 
ಇದಂತೂ ಸುಳ್ಳಲ್ಲ .. ಗೊತ್ತಿದೆ .

Tuesday, 7 April 2015


ಹುಣ್ಣಿಮೆಯ ಚಂದಿರನೇ ಮರೆಯಾಗು ಮೋಡಗಳಲಿ.....
ನಿನ್ನ ಮೊಗ ತೋರಿ
ಅವನ ಮೊಗವ ನೆನಪಿಸಬೇಡ.
ಗಾಳಿಯೇ ಲಾಲಿ ಹಾಡು ದಯಮಾಡಿ. ...
ನಾ ನಿದ್ರಿಸಬೇಕಿದೆ, 
ಇಂದೂ ಬಾರದಿರುವವನ ನೆನಪುಗಳು
ಬಹಳವಾಗಿ ಕಾಡುವ ಮೊದಲು.


ತುಂಟ ನಗೆಯ ಚೆಲುವ ಅವನು, 
ನನ್ನ ನೋಡಿ. ...
ನನ್ನ ಕಣ್ಣುಗಳಲ್ಲಿ ಪೋಲಿ ಕನಸುಗಳ ಬಿತ್ತುತ್ತಾನೆ. 
ಅವನಿಗೆ ನನ್ನ ಮಾತುಗಳು ಇಷ್ಟ ಕೇಳಲು, 
ನನಗೆ ಅವನನ್ನು ನೋಡಲು. ....
ಸುಳಿವುದು...ತಂಗಾಳಿ ಮಾತ್ರಾ.
ನಾವಿಬ್ಬರೂ ಜೊತೆಯಾಗಿರಲು ....


ಪ್ರೀತಿಯೆಂದರೇ .....ಒಂದು ಮಧುರವಾದ ಭಾವನೆ. 
ಪ್ರೀತಿಗೆ ಸ್ಪಂದಿಸಿದಾಗ....ತುಂಬಾ ಸಂತೋಷ. 
ನಿರಾಕರಿಸಿದಾಗ...ನಿರಾಸೆಯ ಭಾವ.
ಪ್ರೀತಿ ಪಡೆದೂ...ಕಳೆದು ಹೋದರೇ....ಹತಾಷೆ...ಪ್ರತೀಕಾರದ ರೂಪ.
ನಾವು ಪ್ರೀತಿಸುವವರು....ನಮ್ಮನ್ನೂ ಪ್ರೀತಿಸಬೇಕಂತೇನೂ ಇಲ್ಲ. 
ಇದು ಮಾತ್ರಾ ಸತ್ಯ---
ನಮ್ಮನ್ನು ಪ್ರೀತಿಸಿದವರು ಎಂದೂ ನಮ್ಮನ್ನು ಅಗಲರಾರರು, ಅಭೌತಿಕವಾಗಿಯೂ ನಮ್ಮೊಡನೆಯೇ ಇರುವರು.
ನಾವು ಪ್ರೀತಿಸಿದವರು ಎಲ್ಲಾದರೂ ಚೆನ್ನಾಗಿರಲೀ. ...ನಮ್ಮಿಂದ ದೂರವಾದರೂ....

ನೋಡಬೇಕು
ಕಾಡಬೇಕು
ಕಾಯಬೇಕು 
ಪಡೆಯಬೇಕು
ಕೂಡಬೇಕು
ಕಳೆದು ಹೋಗಬೇಕು
ದೂರವಿರಲು ಚಡಪಡಿಸಬೇಕು
ನೀನೇ ಬೇಕೆಂದು ಬೇಡಬೇಕು
ನೀನಿಲ್ಲದೇ ನಾನಿಲ್ಲಾ ಅನ್ನೋ ಹಾಗೆ...
ನೀನೇ ನನಗೆಲ್ಲಾ ಅನ್ನುವಷ್ಟು ತೀವ್ರವಾಗಿ ಬದುಕಬೇಕು.

ನೆನ್ನೆ ಮಳೆ. ...ಇಂದು ಸೆಖೆ...ಸಹಜ
ನೆನ್ನೆ ನಿನ್ನೊಲವ ಮಳೆ....ಇಂದು ನೆನಪುಗಳ ಕಾವು..ಇದೂ...ಸಹಜ.
ಮತ್ತೆ ಕಾಯಬೇಕು. ..ಮತ್ತೆ ಮತ್ತೆ ತಂಪಾಗಲು. ..



ಕಂಬನಿ ಜಾರುವುದರಲ್ಲಿತ್ತು.....ನಾನು ಇದ್ದೇನೆ ನಿನ್ನ ಗೆಳೆಯ ಎಂದನವನು.
ಅಳುವು ನನ್ನ ಕಣ್ಣುಗಳಲ್ಲಿ. ..ನಗುವು ತುಟಿಗಳಲಿ...ಎದ್ದು ಕೈ ಕುಲುಕಿದ.
ದಿನವೂ ಮುಂಜಾನೆ ಒಂದು " ಶುಭೋದಯ". ದಿನವೆಲ್ಲಾ...ಖುಷಿಯಾಗಿರಲು ಬೇಕಾದಷ್ಟು.
ಕಣ್ಣು ಮುಚ್ಚುವ ಮೊದಲು" ಶುಭರಾತ್ರಿ" ಸಂದೇಶ, ನೆಮ್ಮದಿಯ ನಿದ್ರೆಗೆ.
ಆತಂಕದಲ್ಲಿರುವಾಗ, ಕಣ್ಣೀರು ತುಂಬುವಾಗೆಲ್ಲಾ...ನೆನಪಾಗುತ್ತಾನೆ. ಹೇಳಿದ್ದಕ್ಕೆಲ್ಲಾ ಹೂಂಗುಡುತ್ತಾನೆ. ಕೆಲವೊಮ್ಮೆ ಮೆತ್ತಗೆ ಕೈ ಅದುಮುವಿಕೆ.
ನನಗೆ ಬೇಕಾದದ್ದೂ ಅಷ್ಟೇ. ..ನನ್ನಳಲ ಕೇಳುವ ಕಿವಿಗಳು, ಮಿಡಿಯುವ ಒಂದು ಹೃದಯ.
ಇನ್ನೇನೂ ನಿರೀಕ್ಷೆ ಇಲ್ಲ, ಅವನು ನನ್ನ ಗೆಳೆಯ.


ಎಲ್ಲಾದಕ್ಕೂ ಒಂದು ಅಂತ್ಯವಿದೇ.....
ನನ್ನ ವಿರಹಕ್ಕೂ ಸಿಗಲಿ ಅದು 
ಬಂದು ಬಿಡೋ....
ನನ್ನಲ್ಲಿ ಎಲ್ಲಾ ಭಾವನೆಗಳೂ ಬತ್ತಿ ಹೋಗಿದೆ ಎಂದು ಕೊಂಡಿದ್ದೇ......
ಇಲ್ಲಾ. ....ನೀ ಈಗ ಬಂದು ಬಿಡುವೇ ಎಂದು ಹೋದ ಮೇಲೆ...
ನಿನ್ನ ನೋಡುವ ಚಡಪಡಿಕೆ ಶುರುವಾಗಿದೆ.


ಚೆನ್ನಾಗಿ ಕಲಿಸಿದ್ದಾನೆ ಅವನು .... 
ತುಟಿಗಳ ಬಿಗಿದು ಮಾತುಗಳ ಬಂಧಿಸಿಡುವುದು,
ಕಣ್ಣೀರು ಜಾರದಂತೆ ತಡೆಯುವುದು... 
ಕಾದು, ಬೆಂದು ನೊಂದಿದ್ದೇನೆ ಸಾಕಷ್ಟು .... 
ಇತ್ತೀಚೆಗೆ ಮಾತನಾಡಿಸುತ್ತಾನೆ- ಮಿಂಚೊಂದು ಫಳಕ್ ಅಂದಂತೆ ಆಗೊಮ್ಮೆ ಈಗೊಮ್ಮೆ !!!!
ಒಲವ ವರ್ಷಧಾರೆಗೆ ಇನ್ನೆಷ್ಟು ಕಾಯಬೇಕೋ ......???

ಸಾಯಿಸುವುದಕ್ಕಿಂತಲೂ ಕ್ರೂರವಾದ ಶಿಕ್ಷೆ
ನೋಯಿಸುವುದು ಕಣೋ.....
ಪ್ರೀತಿಯ ಸುಖಕ್ಕಿಂತಲೂ 
ನಿನ್ನ ಅಗಲಿಕೆಯ ವೇದನೆ ತೀವ್ರ ಕಣೋ....
ಬಂದುಬಿಡು ಬೇಡುವೆ
ಕಾಡಿಸಬೇಡ ಇನ್ನೂ.

ಅವನಿಲ್ಲದಿರಬಹುದು ನನ್ನ ಜೊತೆಯಲ್ಲಿ
ಅವನಿತ್ತ ಪ್ರೀತಿಯಿದೆ ನನ್ನೆದೆಯಲ್ಲಿ .... 
ಮುಂಜಾನೆಯ ಸಿಹಿನಿದ್ರೆಯಲ್ಲಿನ ಕನಸಿಗೆ ಬರುವ ಆ ಚೆಲುವ 
ನನ್ನ ಬಹುವಾಗಿ ಮುದ್ದಿಸುವ
ಕಣ್ತೆರೆದರೆ ಅವನಿಲ್ಲ !!!!
ಏನಂತೆ ???
ಪ್ರೀತಿಸುವ ಸುಖ ನನಗುಂಟು ಸಾಕಲ್ಲ ದಿನವೆಲ್ಲಾ ಖುಷಿಗೆ ?

ಮನಸೇನೋ ಹಕ್ಕಿಯಂತಾಯ್ತು .... ರೆಕ್ಕೆ ಬಲಿತಿರಲಿಲ್ಲ.... 
ಹಾರಲು ಗರಿ ಬಿಚ್ಚಿದಾಗ ...... ವಾತಾವರಣ ಅನುಕೂಲವಿರಲಿಲ್ಲ .... 
ಹಾರಲೇಬೇಕೆನಿಸಿದಾಗ .... ರೆಕ್ಕೆಗಳಿಗೆ ಒಂದೊಂದೇ ಪೆಟ್ಟು ... ನೋವುಗಳು.... 
ನೋವುಗಳ ಸಹಿಸಿತೇನೋ ....ಕಡಿಮೆಯಾಯಿತೇನೋ ..... 
ಹಾರಬೇಕು ಈಗ ..... ಉತ್ಸಾಹವೇ ಇಲ್ಲ.


ಕನಸಂತೆ ಬಂದವನು....
ಕನಸಾಗಿ..... ಕರಗಿ....ಹೋಗುವ ಮುನ್ನ. ...
ತುಸು ಹೊತ್ತು ಕಣ್ಣೆವೆಯಲಿ ಮುಚ್ಚಿಟ್ಟು. ..
ಒಂದಷ್ಟು ಕನಸುಗಳ ಹೆಣೆದಿಡುವೆ.


ಸಮಯ ಬೆಳಿಗ್ಗೆ ೭ ಗಂಟೆ, ನನ್ನವನು ಪೂಜೆ ಮುಗಿಸಿ, ದೇವರ ಕೋಣೆಯಿಂದ ಹೊರಬಂದ. 
ಮಲಗಿದ್ದ ನನ್ನ ಮಗನೂ ಎದ್ದು ಬಂದ . ದೇವರ ಕೋಣೆಯ ಲೈಟ್ ಆಫ್ ಮಾಡಿದ. ಯಾಕಲೆ ?ಎಂದೇ . ಬಿಜಲಿ ಬಚಾವ್ ಮಾಡಬೇಕಮ್ಮಾ . 
ಯಾಕೆ ಬಚಾವ್ ಮಾಡಬೇಕು ?
ನೀವೆ ಎಲ್ಲಾ ಖಾಲಿ ಮಾಡಿದ್ರೆ ? ನಾವು ದೊಡ್ದವರದ್ಮೇಲೆ ಏನು ಮಾಡೋದು ? ನಮಗೆ ವಾಟರ್, ಪವರ್ ,ಪೆಟ್ರೋಲ್ ಎಲ್ಲಾ imp ಅಲ್ವ? ನಮಗೆ ಬೇಡ್ವಾ ? 
ಈಗಿನ್ನೂ ದೇವರ ಪೂಜೆ ಮುಗಿಸಿ ಡ್ಯಾಡಿ ಆಚೆ ಬಂದಿದ್ದಾರೆ, ಲೈಟ್ ಆಫ್ ಮಾಡ್ತಾರ ಕಂದಾ ?
ಗಾಡ್ ಗೆ ಯಾಕೆ ಲೈಟ್ ? ಅಂಧೇರ ದಲ್ಲಿ ಇರಲಿ ಬಿಡೂ . ಅಷ್ಟಕ್ಕೂ ದಿಯಾ ಇದ್ಯಲ್ಲ ಸಾಕು ಜಾಸ್ತಿ ಬೆಳಕಿದ್ರೆ ಕಣ್ಣು ಚುಚ್ಚುತ್ತೆ ಗಾಡ್ ಗೆ .
ದೇವರೇನು ಹಾಗಂತಾ ಹೇಳಿದ್ರಾ ನಿನಗೆ ?
ಫುಡ್ ಕೊಡೋ ಗಾಡ್, ನನ್ ಮೈಂಡ್ ಗೆ ಅಕಲ್ ಕೊಡೋಲ್ವ ?
ಓಹೋ ಅದು ಬೇರೆ ಉಂಟಾ ಸಾರ್ ತಮಗೆ ?
ಹಮ್ ನಂಗೆ ಅಕಲ್ ಇದೆ, ಈ ಡ್ಯಾಡಿ ಗೆ ಇಲ್ಲ. ನಾನೇನೋ ಸ್ಕೂಲ್ ಗೆ ಹೋಗಬೇಕು, ಬೇಗ ಎದ್ದು ಹೊರಡಬೇಕು. ಅದಕ್ಕೆ ಬೇಗ ಏಳ್ತೀನಿ . ಗಾಡ್ ನ ಯಾಕೆ ಈ ಡ್ಯಾಡಿ ಬೇಗ ಏಳಿಸಿ, ನೀರು ಹಾಕಿ, ಹೂ ಇಟ್ಟು ,ಮಂತ್ರ ಹೇಳಿ, ದೀಪ ಹಚ್ಚಿ ಡಿಸ್ಟರ್ಬ್ ಮಾಡುತ್ತೆ. ಪಾಪ ಗಾಡ್ ಇನ್ನೂ ಮಲಗಿರಲಿ, ಇಷ್ಟು ಬೇಗ ಏನಕ್ಕೆ ಏಳಿಸಬೇಕು ?
ಅಯ್ಯೋ ಮುದ್ದು smile emoticon
ನಕ್ಕು ಬಿಟ್ಟೆ .
ಅಲ್ಲಾ ಈ ನನ್ ಮಗನೆ ಇಷ್ಟು ಮುದ್ದು ಮುದ್ದು ಅಂದ್ರೆ .... !!!!!
ತಾಯಿಗೆ ಬಾಯಲ್ಲಿ ಜಗವನ್ನೇ ತೋರಿದ ಅವನೆಂತಹ ಚೆಂದ ! ಅವನೆಷ್ಟು ಮುದ್ದು !!! ಆ ತಾಯಿ ಎಂತಹಾ ಪುಣ್ಯವಂತೆ !!!
ಮಕ್ಕಳಿರಲವ್ವಾ ಮನೆ ತುಂಬಾ .....


ರವಿ ಮರೆಯಾದ .... ಕತ್ತಲಾಯಿತು...ಮನಕೂ.... 
ಅರೆಗಳಿಗೆ ಕಾದಿರು ನಲ್ಲೆ ಎಂದುಸಿರಿ....
ಕೆನ್ನೆಗೊಂದು ಸವಿನೆನಪಿಗಾಗಿ ಕೊಟ್ಟು ಹೋಗಿ....
ಇಂದೂ ಬಾರದವನ ನೆನೆದು ... 
ಕಾದ ಕಂಗಳ ರೆಪ್ಪೆಗಳಡಿ ನೀರು...
ನಿದಿರೆಗೆ ಜಾಗವೆಲ್ಲಿ.....????


ಕನಸುಗಳು ಖಾಲಿಯಾಗಿವೆ ಕಣೋ......
ಬಂದುಬಿಡು ಬೇಡುವೆ ಕಾಡಿಸಬೇಡ ಇನ್ನೂ
ನಾನೂ ಸಹ ಬದುಕಬೇಕಾಗಿದೆ. 
ಹೊಸ ಸಂವತ್ಸರ...
ಅದೇ .....ಬದಲಾಗದ ನಾನು
ನಿನ್ನೊಲವ ಸದಾ ಹಂಬಲಿಸುವ ಹೃದಯದವಳು
ಕಾಯುತ್ತಲೇ ಇದ್ದೇನೆ......
ಬಾಳಲಿ ವಸಂತವಾಗು, ಬಂದುಬಿಡೋ...



ನಾಳೆ ಅಮಾವಾಸ್ಯೆ ....
ಆದರೇನು ????
ಬರುತ್ತಾನಂತೆ ನನ್ನ ಚಂದಿರ !!!!
ನಾಳೆಯೇ ಹಬ್ಬ smile emoticon



ಕಣ್ಣನ್ನು, ಮೂಗನ್ನು, ನಗುವನ್ನು, ಮೊಗವನ್ನು, ನಿಲುವನ್ನು, ಬಣ್ಣವನ್ನು, ಮಾತನ್ನು ..... ಅದಕ್ಕೆ ಇದಕ್ಕೆ ಹೋಲಿಸಿ ಎಂದಾದರೊಮ್ಮೆ ವರ್ಣಿಸುತ್ತೇನೆ ಬಿಡ್ರೀ . ಹೆಸರೂ ಕೊಡ ಅದೆಷ್ಟು ಮೋಹಕ !!! ಅವರಪ್ಪ ಅಮ್ಮನಿಗೆ ಥ್ಯಾಂಕ್ಸ್ ಹೇಳಬೇಕು. ಅವನು ಸಿಕ್ಕಾಪಟ್ಟೆ ಚೆಲುವ !!! ಇಷ್ಟೇ ನಂಗೆ ಈಗ ಹೇಳೋಕೆ ಬರೋದು. ನಾನು ಅವನಿಗೆ ಮರುಳಾಗಿದ್ದರಲ್ಲಿ ಹೆಚ್ಚುಗಾರಿಕೆ ಏನಿಲ್ಲ.ನಾನು ಅವನ ಚೆಂದದ ೧% ಊ ಚೆನಾಗಿಲ್ಲ , ನಂಗೊತ್ತು . ಆದರೆ ನಂಗೆ ಅವನು ಹೆಂಗೆ ಫ್ರೆಂಡ್ ಅದ ! ತುಂಬಾ ಹತ್ತಿರನೂ ಆಗ್ಬಿಟ್ಟ! 
ಹೀಗೆ ಮಾತಾಡ್ತಾ..... ಮಾತಾಡ್ತಾ ಒಮ್ಮೆ .... 
ನಾನು ರೌಡಿ ಗೊತ್ತಾ ? ಎಂದ. ನಮ್ಮೂರಲ್ಲಿ ನನ್ ಕಂಡರೆ ಭಯ .. ಹಾಗೆ ... ಹೀಗೇ ... ಸ್ವಲ್ಪ ಬಿಲ್ದಪ್.
ನಾನು ನಕ್ಕೆ, ಓಹೋ ! ಹೌದ ! ನೀನು ಸುಂದರಾಂಗ ಅಂತ ಗೊತ್ತು , ರೌಡಿಸಂ ಬೇರೆ ಉಂಟಾ ? ಹಾಗಾದ್ರೆ ಇನ್ನೂ ನಂಗಿಷ್ಟ ಬಿಡೋ ಎಂದೇ.
ಕಟ್ಟುಮಸ್ತಾದ ದೇಹ, ಜೊಂಪೆ ಕೂದಲು, ಚೂರೂ ಹೊಟ್ಟೆ ಡುಮ್ಮ ಇಲ್ಲ. ಇಷ್ಟು ವಯಸಾದ್ರೂ..... ಆಹಾ ಮನ್ಮಥ! ಎಂದು ಮನದಲ್ಲೇ ಬಯ್ಕೊಂಡು ನಗಾಡಿದೆ.
ಸರಿ ಹಾಗಾದರೆ-- - ಕಣ್ಣು ಹೊಡಿಯೋಕೆ ಬರುತ್ತಾ ನಿಂಗೆ ? ಇಂಟರ್ವ್ಯೂ ಶುರು ಮಾಡಿದೆ.
ಎರಡೂ ಕಣ್ಣುಗಳ ಮಿಟುಕಿಸಿದ.
ನಗೂ ನನ್ನದು ಮತ್ತೆ . ನೋಡೋ ಹೀಗೆ ಎಂದು ನಾನು ಕಣ್ಣು ಹೊಡೆದು ತೋರಿಸಿದೆ.
ಈಗ ಶೀಟಿ ಹೊಡಿ ನೋಡೋಣ ಅಂದೆ.
ಅಷ್ಟೇನೂ ಜೋರಾಗಿ ಬರೋಲ್ಲ ಎಂದು ನಿಧಾನಕ್ಕೆ ಹೊಡೆದ.
ಬಾಯಿಗೆ ಬೆರಳು ಇಟ್ಟು ಜೋರಾಗಿ ಹೊಡೆಯಬೇಕಪ್ಪಾ, ಅಷ್ಟೊಂದು ಫಿಲಂಸ್ ನೋಡ್ತೀ ? ನಾನು ನೋಡು ವಿಶಲ್ ಲಿ ಹಾಡು ಹೇಳ್ತೀನಿ ಗೊತ್ತಾ ? ಎಂದೇ.
ಹೋಗಲೀ ಸಿಗರೇಟ್ ?
ಉಹುಂ ನನಗೆ ಹೊಗೆ ಇಷ್ಟವಾಗೋಲ್ಲ, ಆದರೆ ವೀಕ್ಲಿ ಒನ್ಸ್ ಬೀರ್, ಸ್ಕಾಚ್ ಕುಡೀತೆನೆ. ನಾ ಕೇಳದಿದ್ದರೂ ಅಂದ.
ಅಬ್ಭಾ ಸಧ್ಯ ಕುಡೀತಿಯಲ್ಲಾ !!! ಕುಡಿದಾಗ ರೋಮ್ಯಾಂಟಿಕ್ ಆಗಿ ಇರ್ತೀ ತಾನೇ ? ಎಂದು ಕಿಲಾಡಿ ನಗು ನಕ್ಕೆ. ಸಿಗರೇಟ್ ಬೇಡಾ ಬಿಡೂ, ನಿನ್ನ ಕೆಂದುಟಿಗಳು ಹಂಗೆ ಇರಲಿ, ಚೆಂದ ಉಂಟು ಎಂದೆ .
ಕಾರ್ಡ್ಸ್ ಆಡ್ತೀಯಾ ?
ರಮ್ಮಿ ಸ್ವಲ್ಪ ಬರುತ್ತೆ, ಆದರೆ ದುಡ್ಡು ಕಟ್ಟಿ ಆಡೋಲ್ಲ ಅಂದ.
ಹೇಯ್ ನನಗೆ ಚೆನ್ನಾಗಿ ಬರುತ್ತೆ, ನಾನು ಹೈ ಸ್ಕೂಲ್ ಏಜ್ ನಲ್ಲೆ ಕಲಿತಿದ್ದೇನೆ ಗೊತ್ತಾ ?ಡೋಂಟ್ ವರಿ , ಕಲಿಸ್ತೇನೆ ಬಿಡೂ, ನಾವಿಬ್ಬರೇ ಇರೋವಾಗ ಆಡೋಣ ? ಮೋಸ ಮಾಡೋಲ್ಲ, ನಿನ್ನೆ ಗೆಲ್ಲಿಸ್ತೇನೆ ಎಂದೆ.
ಚೆಲುವ ಎಷ್ಟು ಹುಡ್ಗೀರ್ ನ ಪಟಾಯಿಸಿದ್ದೀ ? ಎಷ್ಟು ಗರ್ಲ್ ಫ್ರೆಂಡ್ಸ್ ನಿನಗೆ ?
ದೇವರಾಣೆ ಯಾರಿಲ್ಲ, ಇಷ್ಟೊತನಕ ನಿನ್ ಜೊತೆಗೆ ಇದ್ದೇನೆ , ಯಾರದ್ದಾದರೂ ಫೋನ್ ಬಂತಾ ? ಚಾರ್ಜ್ ಬೇಗ ಹೋಗೋದಿಲ್ಲ ನನ್ ಸೆಲ್ಲ್ ನಲ್ಲಿ, ಯಾರಗೂ ಅನಾವಶ್ಯವಾಗಿ ಮಾತಾಡೊಲ್ವೆ ... ಕನ್ವಿನ್ಸ್ ಮಾಡೋಕೆ ಪ್ರಯತ್ನಿಸಿದ ಪಾಪ.
ನಾನು ನಂಬೋಲ್ಲ ಬಿಡೂ ಎಂದೆ.
ರೌಡಿ ಅಂತೆ ರೌಡಿ ??? ಸುಮ್ನೆ ಬಿಲ್ದಪ್ ಕೊಡ್ತಾನೆ. ಹೋಗಲಿ ಬಿಡಿ, ನನ್ನ ಮನಸನ್ನು ಕದ್ದಿದ್ದಾನೆ ಕಳ್ಳ . ನನ್ನಲ್ಲಿರುವ ಎಲ್ಲವನ್ನೂ ದೋಚಿದ್ದಾನೆ, ದರೋಡೆಕೋರ. ಏನೇನ್ ಮುದ್ದಾಗಿ ಬಯ್ದುಕೊಳ್ಳಲಿ ??? ನನಗೆ ತುಂಬಾ ಇಷ್ಟವಾಗಿಬಿಟ್ಟಿದ್ದಾನೆ.
ನನಗೆ ಬೇಕಾದ ಹಾಗೇ ನಾನೇ ಅವನನ್ನು ಬದಲಾಯಿಸಿಕೊಳ್ಳುತ್ತೇನೆ. ಬೇಡ ಬೇಡ .... ಇಲ್ಲಾ ಅವನ್ಹೇಗೇ ಇರಲಿ, ನಾನೇ ಹೊಂದಿಕೊಳ್ಳುತ್ತೇನೆ ಏನೀವಾಗ ... ???
ಪ್ರೀತಿಯೇ ಹಾಗೇ ..... ಸದ್ದಿಲ್ಲದೇ ನುಸುಳುವುದು. ನನ್ನನ್ನೂ ಬದಲಾಯಿಸುವುದು !!!!
ಪ್ರೀತಿಯೆಂದರೆ---ಸದ್ಗುಣಗಳ ಮೆಚ್ಚುವುದಷ್ಟೇ ಅಲ್ಲ, ನ್ಯೂನತೆಗಳನ್ನೂ ಒಪ್ಪಿಕೊಳ್ಳುವುದು.
ಪರಸ್ಪರರನ್ನು ಬದಲಾಯಿಸದೆ..... ಇರೋದನ್ನು ಇರೋ ಹಾಗೆ ಒಪ್ಪಿಕೊಂಡು ಅಪ್ಪಿಕೊಳ್ಳುವುದು.
ನಿನ್ನ ಬೆನ್ನ ತಬ್ಬಿದ ನನ್ನ ತೋಳುಗಳ ಬಿಸಿಯ
ಮರೆತಿರಬಹುದು ನೀನು. ..
ಮೆಲ್ಲನೆ ನಕ್ಕು, ಎದೆಗಾನಿಸಿಕೊಂಡು, ಹಣೆಗೆ ಮುತ್ತಿಟ್ಟ ನಿನ್ನೊಲವ
ಮರೆಯಲಾರೆ ನಾನು
ಬೆನ್ನ ತಿರುಗಿಸಿ ಬಹುದೂರ
ಹೋಗಲಾರೆ ನೀನು. ..
ಹಿಂತಿರುಗುವಿ, ಒಂದಲ್ಲಾ..ಒಂದು ದಿನ...
ಕಾಯುತ್ತಿರುವೆ ನಾನು.



ಬಹುಷಃ ನಾನು ಏನು ಆಸೆ ಪಡ್ತಿನೋ ಅದೆಲ್ಲಾ ಆಗುತ್ತೆ / ಸಿಗುತ್ತೆ . ಬರೆಯುವ ತಿಕ್ಕಲು ಇತ್ತು. ವಿರಹ- ಪ್ರೇಮ ಪದ್ಯ, ಸಣ್ಣ ಕಥೆ , ಏನೋ ಕೊರೆತ ಬರೀತಾ ಬರೀತಾ ಖುಶೀ ಸಿಗ್ತು ಇಲ್ಲಿ. ಮೊನ್ನೆಯೊಮ್ಮೆ ನನ್ನವನು ಒಂದು ಹುಟ್ಟಿದ ಹಬ್ಬದ ಸಂಭ್ರಮಕ್ಕೆ ಒಬ್ಬನೇ ಹೋಗಿದ್ದ, ಅವರು ನನ್ನವನ ಶಟಲ್ ಕಾಕ್ ಫ್ರೆಂಡ್. ಅಲ್ಲಿ ನನ್ನ ಫೇಸ್ ಬುಕ್ ಅಣ್ಣ -ತಮ್ಮಗಳೂ ಬಂದಿದ್ರಂತೆ. ಇವ್ರು ಲೋಕೇಶ್ ನಮ್ ಸುಜಾತಾ ಸಿಸ್ಟರ್ /ಸುಜಾತಾ ಮೇಡಂ ಯಜಮಾನರು ಅಂತಾ ಸುಮಾರು ಜನಕ್ಕೆ ಪರಿಚಯ ಆದನಂತೆ ! ಮನೆಗೆ ಬಂದು ಬಯ್ಕೊತಿದ್ದ ನನ್ನವ -ಬರೆಯೋದರಲ್ಲಿ ಏನ್ ಫೇಮಸ್ ಏ ನೀನು ? ಹೋಗೆ ವೆಂಕಮ್ಮನ್ ಗಂಡ ವೆಂಕಮ್ಮನ್ ಗಂಡ ಅಂತಾರೆ ನನ್ನ, ಇನ್ಮೇಲೆ ನಿನ್ ಜೊತೆಗೆ ಬುಕ್ ಬಿಡುಗಡೆ ಅಂತಾ ಬರೊಲ್ಲ.
ಹ ಹ ಹಾ ... ಐ ಲವ್ ಹಿಂ. ಎಲ್ಲಿಗಾದರೂ ನನ್ನ ಕರೆದುಕೊಂಡು ಹೋಗ್ತಾನೆ, ಬರೀ ಅಂತಾ ಪ್ರೋತ್ಸಾಹಿಸ್ತಾನೆ . ಓದಲಿಕ್ಕೆ ಎಷ್ಟೆಲ್ಲಾ ಪುಸ್ತಗಳ ತಂದು ಕೊಡ್ತಾನೆ.
ಚಟುವಟಿಕೆಯ ಹುಡುಗಿ ಮೂಲೆಯಲ್ಲಿ ಕುಳಿತು ಸ್ವಲ್ಪ ದಿನಗಳು ಅತ್ತಿದ್ದು ಕಳೆದ ಮೇಲೆ ... ಈಗ.... ಸಣ್ಣವಳಿರುವಾಗ ನನಗೆ ಪ್ರಿಯವಾದ ಯಕ್ಷಗಾನ, ನಾಟಕ ಮತ್ತೆ ಮಾಡಬೇಕು ಅನಿಸತೊಡಗಿದೆ. ಬಣ್ಣದ ಸೆಳೆತವೕ ಹಾಗೇನೋ ... !!! ದೇಹಕ್ಕೆ ಯವ್ವನ ಇಲ್ಲ, ಮುಪ್ಪೇನೂ ಅಲ್ಲ smile emoticon ಮನಸಿನ್ನೂ ಮುಗ್ದವಾಗಿದೆ. ನಾ ಚೆಂದ ಇಲ್ಲ, ಆದರೆ ಕೆಟ್ಟದಾಗಂತೂ ಇಲ್ಲ. ಗೆಜ್ಜೆ ಕಟ್ಟಿ ತಿತ್ತಿ ತ್ತೈ .... ತಿತ್ತಿತ್ತೈ... ಎಂದು ಕುಣಿಯುವ ತಾಖತ್ ಮನಸಿಗಿದೆ. ನಾಟಕದಲ್ಲಿ ಅಳುವ ಪಾತ್ರ ಮಾಡಿ ಎಲ್ಲರನ್ನೂ ಅಳಿಸಬೇಕು ಎನ್ನುವ ಆಸೆಯಿದೆ. ೨ ವರುಷಗಳ ಕೆಳಗೆ ನಾಟಕದ ಅಭಿನಯಕ್ಕೆ offer ಬಂದರೂ ಯಾಕೋ ಅಂಜಿಕೆ , ಮಾಡಲಿಲ್ಲ frown emoticonವಿಷಾದವಿದೆ.
ಯಾವಾಗ ಯಾರು ಸಿಕ್ಕಿ ಯಾವ ದಿಕ್ಕಿಗೆ ಪಯಣವೋ ಬಲ್ಲವರಾರು ????? ಬದುಕಬೇಕಿದೆ .... ಸುಖ ಎನ್ನುವುದು ಅರಸಿಕೊಂಡು ಹೋದರೆ ಮಾತ್ರ ಸಿಗುತ್ತದೆ ಅಂತಲ್ಲ, ಕೆಲವೊಮ್ಮೆ ಇರೋ ಜಾಗಕ್ಕೆ ಸುಖವೇ ಹುಡುಕಿಕೊಂಡು ಬರುವ ಸಾಧ್ಯತೆಗಳಿರುತ್ತವೆ.. ಅದರೆ ಅದನ್ನು ಪಡೆಯುವುದು ಬಿಡುವುದು ಆ ಕ್ಷಣದ ನಿರ್ಧಾರವಾಗಿರಬೇಕು..


ಅವಳು ಬಹಳಷ್ಟು ದೂರ ಸಾಗಿ ಬಂದು ಸಾಕಾದವಳು. ಕನಸುಗಳ ಕೊಂದು ಕೊಂಡ ಹುಡುಗಿ. ಸಾಕಿನ್ನು ಎಂದು ಕೊನಗಾಣಿಸಲು ಹೊರಟವಳು. ಆ ಸರೋವರದಲ್ಲಿ ಮುಳು ಮುಳುಗಿ ನೀರು ಕುಡಿಯುತ್ತಿದ್ದಾಳೆ ...ಉಸಿರು ನಿಲ್ಲಿಸಲು. 
ಅವನೂ ಸಾಗಿ ಬಂದ, ಕನಸುಗಣ್ಣಿನ ಹುಡುಗ. ..ಪಕ್ಕದಲ್ಲೇಯಿರುವ ಬೆಟ್ಟ ಹತ್ತಿ ನೋಡುವಾಸೆಯ ಛಲಗಾರ. ಕೊಂಚ ದಣಿದಿದ್ದಾನೆ. ಬಂದ ...ನೀರು ಕುಡಿದು ವಿಶ್ರಮಿಸಲು. 
ನೀರು ಕುಡಿಯುತ್ತಿದ್ದಾನೆ..ಶಕ್ತಿಯ ತುಂಬಿಕೊಳ್ಳಲು.....ನೋಡಿದ....
ಮುಳುಗುವ ಹುಡುಗಿಯತ್ತ ಕೈ ಚಾಚಿದ, ತನ್ನತ್ತ ಸೆಳೆದುಕೊಂಡ.
ಸಧ್ಯಕ್ಕೆ ಹುಡುಗಿ ಪಾರಾಗಿದ್ದಾಳೆ.
ಈಗ ಇಬ್ಬರೂ ಮಾತನಾಡಿದ್ದಾರೆ.
ಬದುಕುವಾಸೆ ಇರದವಳೊಡನೆ, ಬೆಟ್ಟ ಹತ್ತುವಾಸೆ ಇರುವವನ ಪಯಣ ಸಾಗಿದೆ.
ಬೆಟ್ಟ ಹತ್ತಿಸುವಾಗ ಎಡವುತ್ತಾನಾ ? ಹುಡುಗಿಯನ್ನು ಬೆಟ್ಟ ಹತ್ತಿಸಿ ನೂಕುತ್ತಾನಾ ? ಇಲ್ಲಾ ಜೊತೆಗೂಡಿ ಬದುಕುವನಾ?
ಏನಾಗುವುದೋ!!!!!!
ಏನು ಬೇಕಾದರೂ ಆಗಬಹುದು. ....
ಕಥೆ ಬರೆಯುವವನ ಇಚ್ಛೆ ಏನು ಇದೆಯೋ........!!!!!!!

ಪ್ರೀತಿಯೆಂದರೇ....
ಒಂದೇ ಮಿಡಿತ
ಒಂದಷ್ಟು ತುಡಿತ.
ಅವನ ನೋವು
ಇವಳ ಕಂಬನಿ
ಇವಳ ನಗು
ಅವನ ಬದುಕು
ಪ್ರೀತಿಯೆಂದರೇ
ದೇಹದ ಮಿಲನ
ಅಷ್ಟೇ ಅಲ್ಲ
ಆತ್ಮಸಾಂಗತ್ಯ.
காதல் என்றால்...
ஒரே தவிப்பு
கொஞ்சம் துடிப்பு
அவனது வலி
இவளது கண்ணீர்
இவள் சிரிப்பு
அவன் வாழ்க்கை
காதல் என்றால்
உடல் இணைவு
மட்டுமல்ல
மன ஒருங்கிணைப்பு
ಇದು ನನ್ನ ಖುಷಿಗೇ,,,,ಸಾಧ್ಯವಾಗಿಸಿದ್ದು Kalimuthu Nalla Tambi sir ಧನ್ಯವಾದಗಳು
1. ಮಳೆಯಲ್ಲಿ ಭೂಮಿ ನೆನೆಯಿತು...
ಅವನೊಲವಿನಲಿ ನಾನೂ ಸಹಾ. ..
ಚಳಿಯೋ...ಬಿಸಿಯೋ....
ಬೇಕು ಅವನೂ...ಇರಲು ಮಳೆಯೂ..

2.
ಹೊರಗೆ ಮಳೆ ಇಳೆಗೆ. ..
ನಿನ್ನ ಬಯಕೆಯ ಧಗೆ
ನನ್ನೊಳಗೆ.

3.
ಕದ್ದಿದ್ದಾನೆ ನನ್ನ ಹೃದಯ
ತುಂಬಾ ತಡವಾಗಿ ಅರಿವಾಗಿದೆ
ಕದ್ದವನು ಇಲ್ಲೇ ಎಲ್ಲೋ ಇದ್ದಾನೆ
ಹಾ!! ಅವನೇ ಇರಬೇಕು ಗುಮಾನಿ ಇದೆ
ಚಹರೆ ಹೀಗಿದೆ---
ಶ್ಯಾಮಲವರ್ಣ, ಎತ್ತರ ನಿಲುವು
ಹರವಾದ ಎದೆ, ಆಜಾನುಬಾಹು
ದುಂಡನೆಯ ಮೊಗ, ತಿದ್ದಿಟ್ಟ ತುಟಿಗಳಲಿ ಮುಗುಳ್ನಗು,
ಮೆಲುಮಾತು ಗಂಭೀರ
ಹೌದು, ಅದೇ ಗೊಮ್ಮಟನ ತೆರದಿ ಶಾಂತಭಾವ
ನಾನೇ ಕೊಟ್ಟೆನೋ? ಅವನೇ ಕದ್ದನೋ?
ಹೋಗಲಿ ಬಿಡಿ ಹುಡುಕಬೇಡಿ ಯಾರೂ. ...
ನನ್ನ ಹೃದಯ ಅವನಲ್ಲೇ ಇರಲಿ.
என் இதயத்தை திருடிவிட்டான்
காலம் கடந்து உணர்ந்தேன்
திருடியவன் இங்கேதான் எங்கோ இருக்கிறான்
ஆம்!! அவனாகத்தான் இருக்கும்-சந்தேகம்
இப்படியானது அவன் அடையாளம்...
மாநிறம், நல்ல உயரம்
படர்ந்த மார்பு ஆஜானுபாகு
உருண்ட முகம், உதட்டில் புன்னகை
மென்மையான கம்பீரப் பேச்சு
ஆம், அந்த கொம்மடனைப்போல சாந்தம்
நானே கொடுத்தேனா? அவன் திருடினான?
போகட்டும் விடுங்கள் யாரும் தேடவேண்டாம்..
என் இதயம் அவனிடமே இருக்கட்டும்.
ಇದೂ ಸಹ Kalimuthu Nalla Tambi sir , ಧನ್ಯವಾದಗಳು smile emoticon
ನಿಮ್ಮನ್ನು ನೀವು ಅಳೆದುಕೊಳ್ಳುವಾಗ 
ಬಹಳಷ್ಟು ಕಳೆದು ಕೊಳ್ಳಬೇಕು. ಹೆಚ್ಚು 
ಕಳೆದು ಕೊಂಡಾಗಲೆ ಮತ್ತಷ್ಟು ಕೂಡುತ್ತದೆ. 
---'ತಂತ್ರಯೋನಿ' -ಸತ್ಯಕಾಮ. 
ಏನೋ ಇದೆ ಇದರಲ್ಲಿ ಎಂದು ಯಾವುದೇ ಪುಸ್ತಕವನ್ನೂ ಓದಬಾರದು. ಏನಿದೆ ಇದರಲ್ಲಿ ನೋಡುವಾ ಎಂದು ಓದತೊಡಗುತ್ತೇನೆ ನಾನು. ಪುಸ್ತಕ ಒಳ್ಳೆಯ ಮಿತ್ರ , ವಾದಗಳಿರೋಲ್ಲ ಅಲ್ಲಿ. ಯಾರು ಏನೇ ಹೇಳಲೀ ? ಏನೇ ಬರೆಯಲೀ? ಅದು ಅವರ ಅನುಭವ, ಅಭಿಪ್ರಾಯ . ನನಗೆ ಏನು ಬೇಕೋ ಅದನ್ನು ಮಾತ್ರಾ ಅಳವಡಿಸಿಕೊಳ್ಳುವುದು ನನ್ನ ಸ್ವಭಾವ. 
ತುಂಬಾ ಭಾವುಕತೆಯೇನೋ ... ಪುಸ್ತಕ ಓದುವಾಗ ಅಳುತ್ತೇನೆ, ಮೂಕಳಾಗುತ್ತೇನೆ, ಕಳೆದೂ ಹೋಗುತ್ತೇನೆ. ಕೆಲವೊಂದು ಪುಸ್ತಕಗಳು ಓದಿ ಮುಗಿಸಿದ ಮೇಲೆ ಬಹುಕಾಲ ಕಾಡುತ್ತವೆ. ನನ್ನೊಳಗೆ ನಾನು ಪ್ರಶ್ನಿಸಿಕೊಳ್ಳತೊಡಗುತ್ತೇನೆ.
ವೀಣಾ ಬನ್ನಂಜೆ ಅವರ "ಸತ್ಯಕಾಮರೊಡನೆ ನನ್ನ ಸಾವಿರದ ದಿನಗಳು" ಓದಿ ಮುಗಿಸಿದೆ.
ಮೊದ ಮೊದಲು ಇದರಲ್ಲಿ ಏನೂ ಇಲ್ಲ ಎನಿಸತೊಡಗಿತು. ಎದ್ದೆ, ಕೂತೆ, ಮಲಗಿದೆ, ಧ್ಯಾನ ಮಾಡಿದೆ, ತಿರುಗಿದೆ... ಹೀಗೆ ...
ಕೆಲವೊಂದು ವಿಷಯಗಳ ಅರಿವಿರದ ಕಾರಣವೇನೋ ... ಅಸಹಜ ಅನಿಸಿತು.ಅಳುವುದು ಸುಮ್ಮನೆ, ಏಕಾಂತ ಪೂಜೆ, ಮಧ್ಯರಾತ್ರಿ ಪೂಜೆ, ನಿರ್ವಾಣದಲ್ಲಿ ಹೋಮ, ಒಟ್ಟಿಗೆ ಮಲಗೋದು, ದಿನಾ ಮುದ್ದಿಸಿಕೊಳ್ಳುವುದು, ಚುಂಬಿಸುವುದು ... ಹೀಗೆ ... ಹುಚ್ಚುತನ ಎನಿಸಿತು. ನನ್ನ ಬುದ್ದಿ ಮಟ್ಟಕ್ಕೆ ಇವೆಲ್ಲಾ ನಿಲುಕಲಾರದ್ದೇನೋ ... ನೋ ಕಾಮೆಂಟ್ಸ್. ಕೊನೆಯ ಒಂದಷ್ಟು ಪುಟಗಳು ಒಂದಷ್ಟು ಸಂಚಲನ ಉಂಟು ಮಾಡಿತು. ಸತ್ಯಕಾಮರ ದೇಹಾಂತ್ಯ, ದಹನ ಓದುವಷ್ಟರಲ್ಲಿ ನಾನು ಜೋರಾಗಿ ಅಳುತಿದ್ದೆ. ಅವರ ಹೆಸರು ಗೊತ್ತು , ಜಾಸ್ತಿ ಅವರ ಬಗ್ಗೆ ಗೊತ್ತಿಲ್ಲ. ನನ್ನ ಅನಾರೋಗ್ಯದ ಪರಿಣಾಮ ಬಹಳಷ್ಟನ್ನು ಮರೆತಿದ್ದೇನೆ. ಓದುವುದೂ ಕಡಿಮೆಯಾಯ್ತು ಸೊ... frown emoticon
ಪ್ರೀತಿಸುವುದು ದೊಡ್ಡದೇನಲ್ಲ, ನಾವು ಪ್ರೀತಿಸುವವರೇ ನಮ್ಮನ್ನೂ ಪ್ರೀತಿಸುವುದು, ಅವರೊಡನೆ ನಾವಿರೋದು ತುಂಬಾ ತುಂಬಾ .... ಏನ್ ಹೇಳೋದು ? ಗೊತ್ತಾಗ್ತಿಲ್ಲ frown emoticon
ಆ ತರಹ ಜೀವಿಸುವುದು ಸಾರ್ಥಕ ಅನಿಸುತ್ತೆ ಅಲ್ವಾ ?ಆ ಮಹಾತ್ಮರ ಸಾನಿಧ್ಯದಲ್ಲಿ, ಅವರ ಪ್ರೀತಿಯಲ್ಲಿ, ಅವರ ಸೇವೆಯಲ್ಲಿ ತನ್ನನ್ನು ತಾನು ಅರ್ಪಿಸಿಕೊಂಡು ಬೆಳೆಯುವುದು ಆಕೆಯ ಸುಕ್ರುತ. ಅದನ್ನೇ ಬರೆಯುತ್ತಾ ಹೋಗ್ತಾರೆ. ನಾನದನ್ನು ನನ್ನ ಜೀವನದ ಕ್ರಮ ನೆನಪಿಸಿಕೊಳ್ಳುತ್ತಾ ಹೋದಂತೆ .... ಶೋಕದಲ್ಲಿ ಮರೆತ ... ನನ್ನ ಗುರುಗಳ ಮಾತು, ಅವರ ಒಡನಾಟ, ಅವರು ಕಲಿಸಿದ ಪಾಠ, ನನ್ನ ಕರ್ತವ್ಯ .... ಒಂದೊಂದೇ ನೆನಪಾಗತೊಡಗಿತು. ನಾನು ಹೇಳಲಾರೆ ಅಷ್ಟೇ ...ನನ್ನ ಗುರುಗಳು ಜೆನ್ ಕಥೆ ಓದಿಸಿ ಬಹಳಷ್ಟು ಅರ್ಥ ಮಾಡಿಸಿದರು. ರಾಮನವಮಿ ದಿನ ತಿರುವಣ್ಣಾಮಲೈ ಗೆ ಕರೆದುಕೊಂಡು ಹೋದರು. ರಮಣರ ಪುಸ್ತಕಗಳನ್ನು ಓದಿಸಿದರು.
ಓಶೋ ಓದಲುತೊಡಗಿದೆ. ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ ಓದಿದೆ... ಮನಸ್ಸಿನ ನಿರಾಳತೆಯ ದಾರಿಯಲ್ಲಿ ಪಯಣ ಸಾಗಿದೆ... ನನ್ನನ್ನು ನಾನು ಅರಿತುಕೊಳ್ಳುವ ಪ್ರಯತ್ನ ಶುರುವಾಯ್ತು.
ಇದು ನನ್ನ ಭಾವನೆಗಳು .... ... ಬರೆದುಕೊಂಡಿರುವೆ.
ಇನ್ನು ಸತ್ಯಕಾಮರ 'ತಂತ್ರಯೋನಿ' ಓದಲಿಕ್ಕೆ ನಾಳೆಯಿಂದ ಸ್ಟಾರ್ಟ್.
ಬಹುಷಃ ಪ್ರೇಮಪದ್ಯಗಳ ಸುಜಾತ ಇನ್ನು ಕಾಣಿಸುವುದಿಲ್ಲ.


ಅವಳು ಪ್ರೀತಿಯಿರುವ ಹೃದಯ ಅರೆಸುತ್ತಾ ಅಲೆಯುತಿಹಳು. ಹೆಜ್ಜೆ ಹೆಜ್ಜೆಗೂ ಸಿಕ್ಕಿದ್ದು ಮುಖವಾಡಗಳ ಮನುಷ್ಯರು (!)
ಸುಸ್ತಾಗಿ ಕಣ್ ಮುಚ್ಚಿ ಕುಸಿದು ಕುಳಿತಾಗ ..... ಕೇಳಿತು..... 
"ಹುಡುಕಾಟ ಕೊನೆಗೊಳಿಸು". 
ಕನಸೋ .... ಭ್ರಮೆಯೊ... ಗೊಂದಲ. 
ಏನಾಗುವುದು ಕಥೆ ? ಸುಖಾಂತ್ಯವೋ ..... ? ದುಃಖಾಂತ್ಯವೋ ...? ನಿಮ್ಮ ಇಷ್ಟಕ್ಕೆ ಬಿಟ್ಟಿದ್ದು.


ತುಂಬು ಕುಟುಂಬ ಚೆಂದವೇ. ಎಲ್ಲರಲ್ಲೂ ಪ್ರೀತಿ ವಿಶ್ವಾಸ ಇದ್ದಾಗ. ತುಂಬು ಕುಟುಂಬ ಯಾಕೆ, ಅತ್ತೆ -ಮಾವ ಜೊತೆಯಲ್ಲಿರುವಾಗ, ಮಕ್ಕಳು- ಗಂಡನ ಜೊತೆಗೆ ಬದುಕುವುದೂ ನನಗಂತೂ ಸುಲಭ ಅನಿಸಿಲ್ಲ. ನಾನೂ ಹೇಗಿರಬೇಕು ಅಂತಾ ಕಲೀತಾ ಇದ್ದೇನೆ. ಅಮ್ಮನೇ ಆಗಲೀ , ಅತ್ತೆಯೇ ಆಗಲೀ .. ಹಿರಿಯರು ನಾನೇ ಬಲ್ಲವಳು/ನು ಎಂದು ಎಲ್ಲಾ ವಿಷಯಗಳಿಗೂ ಸಲಹೆ ಕೊಡೋದು, ಕೇಳದೆ ಇದ್ದರೂ ಮೂಗು ತೂರಿಸಿಕೊಂಡು ಬರೋದು ಬಿಡಬೇಕು. ಎಷ್ಟು ಬೇಕೋ ಅಷ್ಟು ಮಾತು ಆಡಿದರೆ ಕಿರಿ ಕಿರಿ ಇರೋಲ್ಲ ಅಲ್ವಾ ? ಈಗಿನವರು ಬುದ್ದಿವಂತರೇ, ತಮ್ಮ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳಲು ಸಮರ್ಥರಿರುತ್ತಾರೆ. ಹಿರಿತನ ಇದೆ ಅನ್ನೋ ಕಾರಣಕ್ಕೆ ಪ್ರತಿಯೊಂದನ್ನೂ/ ಪ್ರತಿಯೊಬ್ಬರನ್ನೂ ನಿಯಂತ್ರಿಸಲು ಹೋದಾಗ ಮನೆಯಲ್ಲಿ ಅಶಾಂತಿ. ಇದು ನೇರವಾಗಿ ಮನೆಯ ಯಜಮಾನನಿಗೆ, ಮಕ್ಕಳ ಬೆಳವಣಿಗೆಗೆ ಪೆಟ್ಟು. ಗೃಹಿಣಿ/ ಸೊಸೆ ಎಷ್ಟು ಶಾಂತವಾಗಿ ಎಲ್ಲದನ್ನೂ ನಿಭಾಯಿಸಲು ಸಾಧ್ಯವೋ ಅದಕ್ಕೆ ಮನೆಯ ಹಿರಿಯರ ಬೆಂಬಲ ಅವಶ್ಯಕ. ಯಾರನ್ನು ಯಾರೂ ದೂರುವ ಹಾಗಿಲ್ಲ ಇಲ್ಲಿ. ನಾನು ನೋಡಿದ ಹಾಗೆ ಈಗಿನ ಅತ್ತೆಗಳು ಬಹಳಷ್ಟು ಸಮಯವನ್ನು ಧಾರಾವಾಹಿಗಳನ್ನು ನೋಡುವುದರಲ್ಲಿ ನಿರತರಾಗಿರ್ತಾರೆ. ಚಪಲಕ್ಕೆ ತಿನ್ನೋದು, ಸದಾ ಟೀ.ವಿ ನೋಡ್ತಾ ಕೂರೋದು ಮಾಡೋದು ಬಿಟ್ಟು , ಮೊಮ್ಮಕ್ಕಳಿಗೆ ಊಟ ತಿನ್ನಿಸೋದು, ಸ್ಕೂಲ್ ವ್ಯಾನ್ ಹತ್ತಿಸೋದು, ಕಥೆ ಹೇಳೋದು, ವಾಕಿಂಗ್ , ಪಾರ್ಕ್ ಅಂತಾ ಕರೆದುಕೊಂಡು ಹೋಗೋದು.... ಇವೆಲ್ಲಾ ಮಾಡಿದರೆ ಎಷ್ಟು ಚೆನಾಗಿರುತ್ತೆ ಅಲ್ವಾ ? ಧಾರಾವಾಹಿಲಿ ಇವನ್ನೂ ತೋರಿಸ್ರಪಾ ಪ್ಲೀಸ್. ಬರೀ ಫಿಟ್ಟಿಂಗ್ ಇಡೋದು, ಅತ್ತೆ ಸೊಸೆ ಜಗಳ ಆಡೋದು, ಒಬ್ಬ ಎರೆಡೆರಡು ಸಂಬಂಧಗಳಲ್ಲಿ ಹೆಣಗಾಡೋದು ಅಷ್ಟೇ ಬೇಡಾ smile emoticon ಪ್ರೀತಿ- ವಿಶ್ವಾಸದಿಂದಾ ಹೇಗೆ ಬದುಕಬಹುದು ಅದು ಎಷ್ಟು ಚೆನಾಗಿರುತ್ತೆ ಅನ್ನೋದನ್ನೂ ತೋರಿಸಿ ಪ್ಲೀಸ್.
ಮೊನ್ನೆ ಅಮ್ಮ ಬಂದಿದ್ದಾರೆ ನಮ್ಮನೆಗೆ , ನನ್ ಮಗ --ಅಜ್ಜಿ ಇರೋದ್ಯಾಕೆ ಊಟ ಮಾಡಿಸುತ್ತೆ, ನೀನು ತಟ್ಟೆಗೆ ಹಾಕೊಡಮ್ಮ ಅಂತ ತಟ್ಟೆಗೆ ಹಾಕಿಸ್ಕೊಂಡು ಎರಡು ಸರ್ತಿ ಖುಷಿಯಿಂದ ಊಟ ಮಾಡಿತು. ಅಮ್ಮನಷ್ಟೇ ಮುದ್ದು ಅಜ್ಜಿನೂ ಅಲ್ವಾ ಮಕ್ಕಳಿಗೆ ? ನನ್ ಫ್ರೆಂಡ್ಸ್ ಯಾರಾದರೂ ಅಜ್ಜಿಯರಿದ್ದರೆ ಪ್ಲೀಸ್ ಸೊಸೆ ಮೇಲೋ, ಮಗಳ ಮೇಲೋ ಸಿಟ್ಟು ಇದ್ದರೂ ಪರವಾಗಿಲ್ಲ , ಮೊಮ್ಮಕ್ಕಳಿಗೆ ಪ್ರೀತಿ ತೋರಿಸೋದು ಬಿಡಬೇಡಿ.
1.ಅಂತೂ...... ಆಗಮಿಸಿದ ಮಳೆರಾಯ ...
ಭೂತಾಯಿಯ ಸಂಭ್ರಮ..... ತಂಪಿನಲ್ಲಿ.
ನನ್ನವನು ಬರಲಿಲ್ಲ ಮಹರಾಯ 
ನೆನೆಯುತಿರುವೆ ನಾನವನ ನೆನಪಿನಲ್ಲಿ.
2.ಮೋಡ ಮುಸುಕಿದ ವಾತಾವರಣ, 
ಧಗೆಯೂ ಆಚೆ....ನನ್ನೊಳಗೂ ಸಹ...
ಮಳೆಯಂತೂ ಬರುವ ಸೂಚನೆ ಇದೆ...
ನೀನೂ ಬರಬಾರದೇನೋ....?

3.
ನಾನು ಪ್ರಶ್ನಿಸುವುದಿಲ್ಲ -
ಅಡಿಯಿಟ್ಟೆಯೇಕೆ ನನ್ನ ಬಾಳಲಿ ?
ಕಾರಣವ ಕೇಳುವುದೂ ಇಲ್ಲ 
ನೀನು ನಿರ್ಗಮಿಸುವಾಗಲೂ 
ನಿನಗೆ ಕಾಣಿಸದಿರಲಿ 
ನನ್ನ ಕಣ್ಣೀರಿರುವ ಕಂಗಳು.
ನಾ ಬಲ್ಲೆ ...
ಯಾವುದೂ ಶಾಶ್ವತವಲ್ಲ ಇಲ್ಲಿ
ಯಾರು ಯಾರಿಗೂ ಅನಿವಾರ್ಯವೂ ಅಲ್ಲ
ಇದ್ದಷ್ಟು ದಿನ ... ಇರುವಷ್ಟು ಕ್ಷಣ... ಖುಷಿಯಿರಲಿ
ನಗುವಾಗ ನಕ್ಕುಬಿಡು ... ನನ್ನ ಅಗತ್ಯವಿಲ್ಲ
ಕಂಬನಿಯಾದಾಗ ನನ್ನ ನೆನಪಿಸಿಕೋ ....
ಒರೆಸುವ ಕೈಗಳು ನನ್ನಲ್ಲಿವೆ
ನೆನಪಿರಲಿ ನಿನಗೆ ...
ದಣಿದಾಗ ನೀ...
ನಾನಿರುವೆ, ಬಂದುಬಿಡು
ನನ್ನೆದೆಯ ಮೃದುವಿಗೆ ಒರಗಲು
ಏಕೆಂದರೆ ......
"ನಿನ್ನ ಪ್ರೀತಿಸುವುದು ಮಾತ್ರಾ ನನಗೆ ಗೊತ್ತು".


ನಾ ಕರೆದಾಗೆಲ್ಲಾ....
ಓಗೊಡುವ
ನನ್ನ ನಗೆಗಣ್ಣಿನ ಚೆಲುವ
ನನ್ನೆದೆಗೆ ---
ಬೇಸಿಗೆಯ ಮಳೆ.