Thursday, 10 October 2013

ನೀನಲ್ಲಿ ಈಗ ಚಂದಿರನ ನೋಡ್ತಾ ಇದ್ದೀಯ 
ಎನ್ನುವ ಕಾರಣಕ್ಕೆ ......
ನನಗಿಲ್ಲಿ ಹಿತವೆನಿಸುತ್ತಿದೆ -ಬೆಳದಿಂಗಳು.

Tuesday, 3 September 2013

ನನಗೆ ಬರೀ ೮೦೦ ಜನ ಫ್ರೆದ್ಸ್ ಇದ್ದರೇ, ಅವಳಿಗೋ ೩,೮೦೦ ಜನ ಫ್ರೆಂಡ್ಸ್. ನನಗೂ ಆಕೆಗೂ ೩೦೭ ಜನ ಮ್ಯೂಚುವಲ್ ಫ್ರೆಂಡ್ಸ್. ಆಕೆಯ ಪ್ರಬುದ್ದ ಬರಹಗಳ ಅಭಿಮಾನಿ ನಾನು. ಬೇರೆಯವರ ಪೋಸ್ಟ್ ಗೆ ನಾ ಹಾಕಿದ ಕಾಮೆಂಟ್ ನ ಅವಳು ಲೈಕ್ ಮಾಡ್ತಾಳೆ. ಆದರೂ ನಾವಿಬ್ರೂ ಫ್ರೆಂಡ್ಸ್ ಅಲ್ಲ  ಹೀಗೊಂದು ಸುಂದರ ಸಂಬಂಧ (!) 
ಇವತ್ತು ಆಧಾರ ಕಾರ್ಡ್ ಮಾಡಿಸೋಕೆ ೨ ಗಂಟೆಗಳ ಕಾಲ ಕ್ಯೂ ನಲ್ಲಿ ಇರಬೇಕಾಯ್ತು. ಪಕ್ಕದಲ್ಲಿ ಎರಡು ಸಣ್ಣ ಮಕ್ಕಳ ತಾಯಿ. ನಮ್ಮ ಸರದಿ ಬರೋ ತನಕ ಹರಟಿದೆವು. ಭಾಗ್ಯ ಲಕ್ಷ್ಮೀ ಯೋಜನೆ ಬಗ್ಗೆ, ಆಧಾರ ಕಾರ್ಡ್ ಯಾಕೆ ಮಾಡೋದು ಅಂತಾ, ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳ ಸ್ವಭಾವ, ವರ್ತನೆ ಹೇಗೆ ಇರುತ್ತೆ ಅಂತಾ. ಅಷ್ಟು ಅಲ್ಪ ಸಮಯದಲ್ಲೇ ನನ್ನ 'ಅಕ್ಕ ' ಎಂದು ಕರೆದು ಹತ್ತಿರ ಅನಿಸಿದಳು. ಅವಳ್ಯಾರೋ! ನಾನ್ಯಾರೋ! ವಯ್ಯುಕ್ತಿಕ ಪ್ರಶ್ನೆಗಳೇ ಇರಲಿಲ್ಲ. ನಮ್ಮಿಬ್ಬರ ಮಕ್ಕಳು ಆಟ ಆಡ್ತಾ ಇದ್ವು. ಸಮಯ ಮುಗೀತಿತ್ತು, ನನಗೆ ಕೊನೇ, ಇನ್ಯಾರಿಗೂ ಕಾರ್ಡ್ ಮಾಡೋಲ್ಲ ಅಂದ್ರು. ನನ್ನ ನೆಕ್ಸ್ಟ್ ಅವಳು, ಪಾಪ ಎರಡು ಮಕ್ಕಳ ತಾಯಿ. ಅವಳ ಕೈ ಅದ್ಮಿದೆ, ಇರೂ ಎಂದೆ. ನನ್ನ ಕಾರ್ಡ್ ಮಾಹಿತಿ ಆಗುವವರೆಗೂ ಕಂಪ್ಯೂಟರ್ ಮುಂದೆ ಕುಳಿತ ಸಿಬ್ಬಂದಿಯನ್ನು ರೇಗಿಸ್ತಾ , ನಗಿಸ್ತಾ ನಾನು ನನ್ನವ ಫ್ರೆಂಡ್ ಮಾಡ್ಕೊಂಡಾಗಿತ್ತು. ನಯವಾಗಿ, ಈಕೆಗೆ ಮಾಡಿಕೊಡಿ ಪ್ಲೀಸ್ ಎಂದು ನಾ ರಿಕ್ವೆಸ್ಟ್ ಮಾಡಿದೆ. ಕೆಲಸ ಸುಗಮ  ಇನ್ನೆಂದೂ ಸಿಗದ ಅವಳಿಗೆ ನಮ್ಮಿಬ್ಬರಲ್ಲಿ ಅದೇನೋ ಅಟ್ಯಾಚ್ಮೆಂಟ್ ಬೆಳೆದುಬಿಟ್ಟಿತ್ತು. ಬೈ ರೂಪಾ ಎಂದು ನಕ್ಕು ಬಂದೆ. ಅವಳ ಕಂಗಳಲ್ಲಿ ಕೃತಜ್ಞತೆ ಇತ್ತು.
ಸಂಬಂಧಗಳೇ ಹೀಗೆ ....... ಎಲ್ಲೋ ಇರುವ ನಾವು ಎಲ್ಲೋ ಸಿಗ್ತೇವೆ. ಒಂದಷ್ಟು ಸಮಯ ಜೊತೆ ಇರ್ತೇವೆ. ಅವರ ದಾರಿ ಅವರದು, ನಮಗೆ ನಮ್ಮದು. ಇದ್ದಷ್ಟು ಹೊತ್ತು ಚೆನ್ನಾಗಿದ್ರೆ ಸಾಕು 
ಬಯಸಿದ್ದು ಬಯಸಿದಾಗಲೇ ದೊರೆತರೆ ಬದುಕು ಚೆಂದ ಅಲ್ವಾ ? 
ಹಲ್ಲಿದ್ದಾಗ ಕಡ್ಲೆ ಇಲ್ಲ, ಕಡ್ಲೆ ಇದ್ದಾಗ ಹಲ್ಲು ಇಲ್ಲ ಅಂತಾದ್ರೆ ?

ಆದರೇ .............................
೧. ನನಗಾಗ ಬೆಳಗ್ಗೆ ೭.೩೦ ರಿಂದಾ ಕ್ಲಾಸು. ಬಸ್ ಹಿಡಿದು ಕಾಲೇಜ್ ಗೆ ಹೋಗಲು ಅರ್ಧ ಗಂಟೆಯ ಪಯಣ. ನಮ್ಮನೆ ಬಸ್ ನಿಲ್ದಾಣದಿಂದಾ ಒಂದೂವರೆ ಕಿ.ಮೀ ದೂರ. ಬೆಳಗ್ಗೆ ನಸುಗತ್ತಲು, ನೀರವ , ಚಳಿ, ಭಾರದ ಬ್ಯಾಗ್ ನೇತು ಹಾಕಿಕೊಂಡು ಒಬ್ಬಳೇ ಬಸ್ ನಿಲ್ದಾಣಕ್ಕೆ ಓಡಿ ಬರುತ್ತಿದ್ದೆ. ಎಷ್ಟೋ ಸಲ ಬಸ್ ಮಿಸ್ ಆಗ್ತಿತ್ತು. ಸಂಜೆ ವಾಪಸ್ ಬಸ್ ಇಳಿದು ಮನೆಯತ್ತ ಬರುವಾಗ ಆಯಾಸ , ಆಗ ಅನಿಸ್ತಿತ್ತು- ನಮ್ಮನೆ ಬಸ್ ನಿಲ್ದಾಣದ ಎದುರೇ ಇರಬಾರದಿತ್ತಾ?
ಆಸೆ ನೆರವೇರಿತು, ನಾನು ಕಾಲೇಜ್ ಮುಗಿಸಿ ಮದುವೆಯೂ ಮುಗಿದ ನಂತರ. ಅಮ್ಮನ ಮನೆ ಬಸ್ ನಿಲ್ದಾಣದ ಎದುರೇ ಇದೆ, ನಾನು ಮಾತ್ರಾ ಬಸ್ ನಲ್ಲಿ ಅಮ್ಮನ ಮನೆಗೇನು ಹೋಗೋದಿಲ್ಲ:-)
೨.ನನ್ನ ಇಪ್ಪತ್ತರಲ್ಲಿ, ಮೊದ ಮೊದಲಿಗೆ ಮನ ಸೆಳೆದ ಚೆಲುವ ನನಗೊಂದು ದಿನ I Love You Sujathaa ಎಂದ, ಸುಮಾರು ೨೦ ವರುಷಗಳ ಬಳಿಕ. ಏನ್ಮಾಡಲೀ ನಾನಾಗ ಎರಡು ಮುದ್ದು ಮಕ್ಕಳ ಅಮ್ಮ:-)
೩.ಮಗಳು ಜನಿಸಿ ಮೂರು ವರುಷಗಳ ನಂತರ, ಮಗಳಿಗೆ ಜೊತೆ ಬೇಕು ಎನಿಸ್ತು. ಆದರೇ ವೈದ್ಯರು ನಿಮಗೆ ಮಕ್ಕಳಾಗುವ ಸಾಧ್ಯತೆ ಇಲ್ಲ ಎಂದರು. ಆಸೆ ಅದುಮಿರಿಸಿ ಸುಮ್ಮನಾದೆ. ಆದರೇ ನನ್ನ ಫ್ರೆಂಡ್ ಒಬ್ಬರ ಸಮಸ್ಯೆಯ ಪರಿಹಾರಕ್ಕೆ ಜ್ಯೋತಿಷಿಗಳ ಹತ್ರ ಹೋದಾಗ ನನ್ನವ ಕುತೂಹಲದಿಂದಾ ಸಂತಾನ ಅಪೇಕ್ಷೆ ವ್ಯಕ್ತಪಡಿಸಿದ. ಯಾಕೆ ಆಗೋಲ್ಲ ಎಂದು ಸಂತಾನ 'ಗೋಪಾಲ ಕೃಷ್ಣ ವ್ರತ ' ಎರಡು ದಿನಗಳು ಪಾರಾಯಣ ಮಾಡಿಸಿದರು. ಮಗನೂ ಮಡಿಲು ಸೇರಿದ, ಬರೋಬ್ಬರಿ ಹತ್ತು ವರುಷಗಳ ನಂತರ. ಈಗ ದಿನ ದಿನವೂ, ಅವನ ಜೊತೆ ಇರೋಕೆ ನನಗೊಂದಿಷ್ಟು ಆರೋಗ್ಯ, ಆಯಸ್ಸು ಕೊಡು ತಂದೆ ಎಂದು ಬೇಡುವೆ.
೪.ಪಕ್ಕದ ಮನೆಯಾಕೆ ಅವರ ತಂಗಿಯ ಮುದ್ದಾದ ಹೆಣ್ಣು ಮಗುವನ್ನು ಆಗಾಗ್ಗೆ ಕರೆದುಕೊಂಡು ಬರ್ತಿದ್ರು. ನನಗಂತೂ ಮಕ್ಕಳು ಅಂದ್ರೆ ಬಲು ಪ್ರೀತಿ. ನೀವೊಂದು ಮನೆ ಮಾಡಿ ನಿಮ್ ತಂಗಿಯನ್ನು ಇಲ್ಲೇ ಇರಿಸಿಕೊಂಡರೆ, ಈ ಪಾಪುವನ್ನು ದಿನವೂ ಮುದ್ದಿಸಬಹುದು, ನನ್ ಮಗನ ಜೊತೆ ಆಡೋದು ನೋಡೋಕೆ ಚೆಂದ ಇರುತ್ತೆ ಅಂತಿದ್ದೆ. ದೇವರಾಣೆ ನನಗೆ ಆಗ ಗೊತ್ತೇ ಇರಲಿಲ್ಲ. ನಾವೇ ನಮ್ ಮನೆಯ ಮೇಲೆ ಮನೆ ಕಟ್ಟಿದೆವು, ಅದಕ್ಕೆ ಬಾಡಿಗೆಗೆಂದು ಅದೇ ಪಾಪುವಿನ ಆಗಮನ ಆಯ್ತು. ಈಗ ನನ್ ಮಗನ ಜೊತೆಗೆ ನಿತ್ಯವೂ ಆಡ್ತಾಳೆ. ಪರವಾಗಿಲ್ಲ, ಅಷ್ಟೇನೂ ತಡವಾಗಿಲ್ಲ, ಹಾಗೆ ನಾ ಬಯಸಿ ಬರೀ ೬ ವರ್ಷಗಳ ನಂತರ ಆಸೆ ನೆರವೇರಿತು:-)
ಮಗನ ಶಾಲೆಯ ಎದುರೇ ಮನೆ ಮಾಡುವ ಸುಂದರ ಕನಸಿದೆ. ಅದು ಯಾವಾಗ ನೆರೆವೇರುತ್ತೋ
!!! ಈಗವನು ಎರಡನೆ ಕ್ಲಾಸು:-)
ಹೀಗೇ .....ಒಂದೊಂದನ್ನೂ ನಾ ಹೇಳ್ತಾ ಹೋದರೆ ......
ನಗು ಬರುತ್ತೆ, ನಾನು ಅದೃಷ್ಟವಂತಳಾ !!!!!
ನೆನ್ನೆ ಮುಡಿದ ಮಲ್ಲಿಗೆ ಇಂದು ಬಾಡಿದೆ.
ಎಂದೋ ಹೋದೆ ನೀನು, ಆದರೇ ...... ನಿನ್ನ ನೆನಪು ಇಂದೂ ಕಾಡಿದೆ.

ಇಂದು ಬೆಳಗ್ಗೆ ತಿಂಡಿ ಏನು ಮಾಡಿದ್ರೀ ? ಎಂದು ಪಕ್ಕದ್ಮನೆ ಅಜ್ಜಿ ಕೇಳಿದ್ರು. ಆಗ ಇನ್ನೂ ಹನ್ನೆರಡು ಗಂಟೆ. ಸ್ವಲ್ಪ ಹೊತ್ತು ನೆನಪಿಸಿಕೊಂಡು 'ಅವರೆಕಾಳು-ತರಕಾರಿ ಹಾಕಿದ ಉಪ್ಪಿಟ್ಟು' ಎಂದೆ. ಸಖತ್ ಖುಷಿ ಆಯ್ತು ನನಗೆ  
ಒನ್ಸ್ ಅಪಾನ್ ಏ ಟೈಂ ------
ಸುಜಾತಾ ಅಂದ್ರೆ ಮಾತು ಮಾತು ಮಾತು, ತರಲೆ. ನಾನಿದ್ದಲ್ಲಿ ನಗು ....ಫ್ರೆಂಡ್ಸ್ ಸಿಕ್ಕಾಪಟ್ಟೆ. ಅವರ ಬರ್ತ್ಡೇ, ಮಕ್ಕಳ ಜನುಮದಿನ, ವೆಡಿಂಗ್ ಆನಿವರ್ಸರಿ .....ಏನೆಲ್ಲಾ ನೆನಪಿರ್ತಿತ್ತು! ಅದಿರಲಿ ಈ ಸಲ ಪಾರ್ಟಿ ಅಟೆಂಡ್ ಮಾಡುವಾಗ, ಲಾಸ್ಟ್ ಯಾವ ಹೋಟೆಲ್ ನಲ್ಲಿ ಮಾಡಿದ್ವಿ, ಏನು ಮೆನು, ಕೊನೆಗೆ ನಾನು ಯಾವ ಡ್ರೆಸ್ ಹಾಕಿದ್ದೆ ಆಗ, ಯಾರು ಎಷ್ಟು ಕುಡಿದರು , ಏನ್ ತಿಂದರು, ಏನೆಲ್ಲಾ ಜೋಕ್ಸ್ ಇತ್ತು ....... ಸಣ್ಣ ಸಣ್ಣ ಬೇಕಾದ, ಬೇಡದ ವಿಷಯಗಳೆಲ್ಲಾ ನೆನಪಿರ್ತಿತ್ತು. ಆಗ ಅದೇ ಖುಷಿ 
ಒಂದಿನ ಫ್ರೆಂಡ್ಸ್ ಜೊತೆ ನನ್ ಜನುಮದಿನ 'ನಂದಿನಿ' ಯಲ್ಲಿ ಆಚರಿಸಿಕೊಂಡು ಬಂದು ಮಲಗಿದೆ, ಎದ್ದದ್ದು ಒಂದೂವರೆ ತಿಂಗಳ ನಂತರ. ಹೌದು ಜ್ವರ ತೀವ್ರವಾಗಿ ಕೋಮಾದಲ್ಲಿ ಮಲಗಿ ನಿತ್ರಾಣ. ಎದ್ದ ಮೇಲೆ ನನಗೆ ನಾನೇ ಯಾರಂತಾ ಮರೆತು ಹೋಗಿತ್ತು. ಪ್ರೀತಿಸಿ ಮದುವೆಯಾದ ನನ್ನವನಿಗೆ -ನೀ ಯಾರು ? ಎಂದು ಕೇಳಿದರೆ ಅವನ್ ಕಥೆ ಹೇಗಿರಬೇಡ ? ನನ್ನ ಮನೆ ಎಲ್ಲಿ, ನನ್ನ ಊರು ಯಾವುದು , ನಾನು ಯಾರು ಎಂದು ಬಂದವರೆಲ್ಲಾ ಪ್ರಶ್ನಿಸ್ತಿದ್ರು. ನಿಜವಾಗಲೂ ಎಲ್ಲವನ್ನೂ ಮರೆತಿದ್ದೆ. ದಿನ ಕಳೀತಾ ಕಳೀತಾ .....ಒಂದೊಂದೇ ನೆನಪಿಸಿಕೊಳ್ಳಲು ಶುರು ಮಾಡಿದೆ. ಒಂದು ನಿದ್ರೆಯಿಂದಾ ಎದ್ದ ತಕ್ಷಣ ---ನಾನು ಯಾರು, ಎಲ್ಲಿದ್ದೇನೆ ಎಂದು ಪ್ರತೀ ಸಲ ನೆನಪು ಮಾಡಿಕೊಳ್ಳುವ ಸಾಹಸ. ಮನೆಯಿಂದಾ ಆಚೆ ಹೋದಾಗ ನನಗೆ ಮನೆ ಎಲ್ಲಿ ಅಂತಾ ಮರೆತುಹೋದರೆ ಅನಿಸಿ ಹೊರಗೆ ಹೋಗ್ತಾನೆ ಇರಲಿಲ್ಲ .ಮಾತಿನ ಮಲ್ಲಿಗೆ ಕೃತಕ ಉಸಿರಾಟದ ಸಲುವಾಗಿ ಉಪಕರಣ ಜೋಡಿಸಲು ಕತ್ತು ಕೊಯ್ದಿದ್ರು, ಹೀಗೇ .....ಮಾತಿರದೆ ಮೂಕಳಾಗಿ ಕೆಲವು ದಿನ ಕಳೆದೆ. ಆಮೇಲೂ ನಿಧಾನಕ್ಕೆ ಮಕ್ಕಳಂತೆ ಮಾತು:( ಅರವತ್ತು ನಾಲ್ಕು ಕೆ.ಜಿ ಯ ಗುಂಡಗಿನ ಸುಜಾತಾ ಆಸ್ಪತ್ರೆಯಿಂದಾ ಬರುವಾಗ ೨೪ ಕೆ.ಜಿ. ಉದ್ದನೆಯ ಓಲಾಡುವ ಜಡೆ ಮಾಯ. ಬೆಳ್ಳಗಿನ ಮೈ ಪೂರಾ ಕಪ್ಪು. ( ನೀನು ಚೆಂದ ಇದ್ದೀಯಾ ಎಂದು ನನಗೆ ಈಗ ಯಾರಾದರೂ ಅಂದರೆ ನಗು ಬರುತ್ತೆ. ಇದು ಶಾಶ್ವತ ಅಲ್ಲ ಅನ್ನೋದು ನನಗೆ ಚೆನ್ನಾಗಿ ಗೊತ್ತು ಅಂತಾ ) ನಗು ನಗುತ್ತಾ ಓಡಾಡುವ ನಾನು ಅಸಾಹಾಯಕಳಾಗಿ ಮಲಗಿದ್ದಲ್ಲೇ ಮಲಗಿ ಎಲ್ಲಾದಕ್ಕೂ ಬೇರೆಯವರನ್ನು ಆಶ್ರಯಿಸುವ ಸ್ಥಿತಿ.
ನನ್ನವರು ನನಗೆ, ಆಸ್ಪತ್ರೆಯಲ್ಲಿದ್ದಾಗಿನ ನನ್ನ ಅವತಾರಗಳು, ನಾನು ಬಡ ಬಡಿಸಿದ ಮಾತುಗಳು ......ಹೀಗೇ ಕೆಲವನ್ನು ಹೇಳ್ತಾ ಹೋದರೆ ಅದೆಲ್ಲಾ ಸಧ್ಯ ನೆನಪಲ್ಲಿ ಇರಲಿಲ್ಲ. ಇದು ಒಳ್ಳೆಯದು:-)
ಆಸ್ಪತ್ರೆಯಲ್ಲಿ ಅನುಭವಿಸಿದ ನೋವುಗಳನ್ನೆಲ್ಲಾ ಜೊತೆಗಿದ್ದವರ ಬಾಯಲ್ಲಿ ಕೇಳಿದಾಗ , ನಾನು ಇಷ್ಟನೆಲ್ಲಾ ಅನುಭವಿಸಿದೆನಾ ಅನಿಸುತ್ತೆ. ನನಗೇನೋ ದೇವರು ಮರೆಯುವುದನ್ನು ಕೊಟ್ಟು ಒಳ್ಳೆಯದೇ ಮಾಡಿದ ಅನಿಸಿತು.
ಆದರೆ ....... ಬಹಳಷ್ಟನ್ನು ಮರೆತು ನಾನು ಪೂರಾ ಹೊಸಬಳಾಗಿದ್ದೆ. ಮಕ್ಕಳು ನಡೆಯುವುದನ್ನು ಕಲಿತಂತೆ ನಾನು ನಡೆಯುವುದ ಕಲಿತೆ, ಮಾತು ಆಡೋದು ಕಲಿತೆ. ಹಳೆಯದನ್ನು ಹುಡುಕತೊಡಗಿದೆ, ಆಗ ಈ ಫೇಸ್ ಬುಕ್ ನಲ್ಲಿ ನನ್ನ ಬಾಲ್ಯದ ಸ್ನೇಹ ಸಿಕ್ಕೀತು ಎಂದು ಹುಡುಕಿದೆ. ಕೆಲವರು ಸಿಕ್ಕರು. ಮೊದಲಿನ ಪ್ರೀತಿ- ಸ್ನೇಹ ಬದಲಾಗಿತ್ತು ಅಷ್ಟೇ. ಏನೋ ಬರೆಯತೊಡಗಿದೆ, ಹೊಸ ಹೊಸ ಫ್ರೆಂಡ್ಸ್ ಸಿಕ್ಕರೂ:-) ನಾ ಬದಲಾದೆ.
ಇದು ನನ್ನ ಕಿರು ಪರಿಚಯ.
ಸವಿ ನೆನಪುಗಳು ಬೇಕು, ಕಹಿನೆನಪುಗಳು !!!!!
ಅಲ್ಲವನ್ನೂ ಸಮಚಿತ್ತದಿಂದಾ ಸ್ವೀಕರಿಸುವ ಮನೋಭಾವ ಈಗ 
ಮರೆತಿರೋದಕ್ಕೆ ಬೇಸರವಿಲ್ಲ. ನೆನ್ನೆ ನೆನ್ನೆಗೆ -ಇಂದಿನದು ಇಂದಿಗೆ -ನಾಳೆ ನಾಳೆಗೆ.

Saturday, 27 July 2013

ಬಣ್ಣ

ಬಣ್ಣ ----

ನನ್ನವನು ,
ನನ್ನ ಬದುಕಿಗೆ ಬಣ್ಣ ತುಂಬಿದವನು 
ನನಗೆ ಬಣ್ಣ ಬಣ್ಣದ ಕನಸ ತಂದವನು 
ಹೇಗಿದ್ದರೇನು ಅವನ ಬಣ್ಣ 
ಅದು ನನಗ್ಯಾವ ಲೆಕ್ಕ !!! 

Wednesday, 17 July 2013

ನೆನಪಾಗೆ  ಉಳಿದವನಿಗೆ ---

ನನ್ನ ಮನದ ಬಾಗಿಲಿಗೆ,

ಪ್ರೀತಿಯ ಕನಸುಗಳ 
ತಳಿರು ತೋರಣದಿ ಅಲಂಕರಿಸಿ 
ನಿನ್ನ್ನಾಗಮನಕೆ ಕಾಯುತಲಿದ್ದೆ ಗೆಳೆಯಾ,
ಸದ್ದಿಲ್ಲದೇ ನನ್ನ ದೂರಸರಿಸಿ
ಯಾಕೆ ಮರೆಯಾದೆ ?
ನನ್ನ ಪ್ರೀತಿ ಚಿಗುರ ಚಿವುಟಿಬಿಟ್ಟೆ
ಬರಿಯ ನೆನಪಾಗಿ ನನ್ನಲಿ ಉಳಿದೆ .....

Wednesday, 3 July 2013

suriyali male


ಬರೀ ಮೋಡ......ಎಲ್ಲೆಲ್ಲ್ಲೂ ....
ಸುರಿಯಬಾರದೇ ಮಳೆ ?
ತಣಿಸಲಿ ನನ್ನ ,ಜೊತೆಗೆ ಇಳೆ .
ಕೊಡೆ ಬಿಚ್ಚಿ ನೀರಲ್ಲಿ
ಕಾಲು ನೆನೆಸುತ್ತಾ ನೆಡೆಯು ವಾಗ .....
ಮಲೆನಾಡ ಮಡಿಲಲ್ಲಿ ಕಳೆದ ಬಾಲ್ಯ ಮರುಕಳಿಸಲಿ .....
ಹರಿವ ನೀರಲ್ಲಿ ಕಾಗದದ ದೋಣಿ
ತೇಲಿಸಿದ ನೆನಪು ಕಾಡಿದೆ ...
ಇಂದೂ ಬಾರದ ಮಳೆಯ ಜೊತೆ
ಕಳೆದ ಸುಂದರ ದಿನಗಳು .
ಎಲ್ಲೆಲ್ಲೂ ಮೋಡ.....
ಕವಿದಿದೆ ನನ್ನ ಮನಕ್ಕೂ .
ಕಪ್ಪು ಮುಗಿಲು ಕರಗಲಿ
ಸುರಿಯಲಿ ಜಲಧಾರೆ .
ಪುಳಕಗೊಳ್ಳಲಿ ನನ್ನ ಹೃದಯ ,ಧರೆ .

pralaya

'ಪ್ರಳಯ '
ಪ್ರಳಯ ಆಗೋದಾದ್ರೆ ಆಗಲಿ ಬಿಡಿ ,
ನನ್ನದೇನೂ ಅಭ್ಯಂತರವಿಲ್ಲ :-) 
ಪಟ್ ಅಂತಾ ಪ್ರಾಣ ಹೋಗಲೀ ,
ಒದ್ದಾಡಿ ಸಾಯೋಕೆ ನನಗೆ ಇಷ್ಟವಿಲ್ಲ :( 
ಅದಕ್ಕೂ ಮೊದಲು ,
ಒಂದೆರಡು ಆಸೆ ಗಳು ಇದೇ ,
ಹಿಮದ ಮಳೆಯಲ್ಲಿ ನಿನ್ನೊಡನೆ ನೆನೆದು ಗಡ ಗಡ ನಡುಗಬೇಕು :-)
ಸಮುದ್ರದ ಅಲೆಗಳ ಹಿನ್ನೆಲೆಯಲ್ಲಿ ನಿನ್ನ ಹಾಡ ಕೇಳಬೇಕು
ಆಮೇಲೆ ಏನಾದರೂ ಆಗಲಿ .
ಜಗದ ಚಿಂತೆ ಬೇಡಾ ನನಗೆ
ನಿನ್ನ ಮಡಿಲಲ್ಲಿರುವಾಗ
ಆಗಲಿ ಬಿಡು ಪ್ರಳಯ .

nannadallada padya

ನನ್ನ ಹೆಸರು ಮರೆಯಬಹುದು ........
ನನ್ನ ಚಹರೆ ಬದಲಾಗಬಹುದು .......
ನನ್ನ ದ್ವನಿಯೂ ಮರೆತು ಹೋಗಬಹುದು 
ಆದರೆ ...... 
ನಾನು ಬರೆದ ಕವನದ ಸಾಲುಗಳು.. 
ನನ್ನ ನೆನಪನ್ನು ನಿಮ್ಮ ಹೃದಯದಲ್ಲಿ.. 
ಸವಿನೆನಪಾಗಿ ಇಡಬಹುದು....

aase

ನೀರಾಗುವ ಆಸೆ ...
ನಿಂತ ಕೆರೆಯಲ್ಲ ,
ಹರಿವ ತೊರೆಯಾಗೋ ಆಸೆ .
ಸಕಲ ಕಲ್ಮಶವ ತೊಳೆವ ,
ದಾಹವ ನೀಗುವ ಅಮೃತ...
ಜುಳು ಜುಳು ಹರಿವ .....
ಜೀವ ಜಲ
ನಾನಾಗುವ ಆಸೆ .

ondashtu male hanigalu

1.ಸುಮ್ನೆ ಹೀಗೊಂದು ಮಳೆಗವನ ---

ಓ ಮಳೆ ಸುರಿವ ಮೇಘಗಳೇ .......
ಕೈಮುಗಿವೆ ನಿಮಗೆ 
ದಂಡಿಗ್ಹೋದ ನನ್ನವ ಬಳಲಿದ್ದಾನೆ 
ಹೋಗಿ ನನ್ನವನ ನೆಲೆಗೆ
ಮಳೆಯ ಸುರಿಸಿ
ದಾಹ ತಣಿಸಿ ತಂಪಾಗಿಸಿ.


2.ರಾತ್ರಿಯಿಡೀ ಸುರಿಯಿತಲ್ಲೋ ವರ್ಷಧಾರೆ
ನಿನ್ನ ಮಧುರ ನೆನಪುಗಳ ತರಹ
ಬೆಂಗದಿರನ ತಾಪದಲಿ ಬಳಲಿದ್ದ ಧರೆಗೆ.

3.
ಮಳೆ ಇಳೆಗೆ
ಇಳಿಯುವ ಮುನ್ನ 
ಬೀಸುವ ತಂಗಾಳಿಯೂ 
ಹಿತವೆನಿಸುವುದು 
ನಿನ್ನ ನೆನಪಿನಂತೆ 
ಸುರಿವ ಮಳೆಯೂ
ನೆನಪಿಸುವುದು
ನಿನ್ನೊಲವಿನ ಮಧುರತೆ.

niriikshe

ನಿರೀಕ್ಷೆ --

ಅವನು 
ಬಂದೇ ಬರುವನು
ಎಂಬ ಭರವಸೆಯಲಿ 
ಅವನ ಹೆಜ್ಜೆಗೆ
ಕಾತರಿಸುವ
ಕಂಗಳ ನೋಟ .

Friday, 21 June 2013

ಬಂದುಬಿಡು ---

ಬೇಸಿಗೆ  ಅಬ್ಬಬ್ಬ ! ಉರಿ  ಬಿಸಿಲು
ಬರಲಾರೆ  ಅನ್ನದಿರು
ಸುರಿವ  ಬೆವರೊರೆಸಿ  ಹಾಕುವೆ
ಬೀಸಣಿಗೆ, ಬಂದುಬಿಡು
ಮಳೆಗಾಲ  ಅಯ್ಯಯ್ಯೋ ! ಬಿಡದ  ಜಡಿ
ಬರಲಾರೆ  ಅನ್ನದಿರು
ಮೈ ಮುಡಿಯನೊರೆಸಿ ಹಿಡಿವೆ
ಸಾಂಬ್ರಾಣಿ  ಹೊಗೆ, ಬಂದುಬಿಡು
ಚಳಿಗಾಲ  ಅಯ್ಯಮ್ಮಾ ! ಮೈ ನಡುಕ
ಬರಲಾರೆ  ಅನ್ನದಿರು
ಬಂದ ಕೂಡಲೇ  ಕೊಡುವೆ  ಬಿಸಿಮುತ್ತು
ಅಪ್ಪುಗೆಗೆ  ಬಂದುಬಿಡು. 
ಗೆಳೆಯಾ  ಯಾರಿಗೆ  ಬೇಕು
 ಈ  ಗಂಡ  ಮಕ್ಕಳ  ಸಂಸಾರ?
ಗಂಡನೆಂದು  ನೀ  ಚಲಾಯಿಸೋ ಅಧಿಕಾರ ?
ನಿನ್ನಷ್ಟೇ  ಸ್ವತಂತ್ರ  ನನಗೂ ಬೇಕು
ನಮ್ಮ ಸಂಬಂಧಕ್ಕೆ  ಯಾಕೆ ತಾಳಿ
ಯ ಬಂಧನ ?
ಅಂತೇನಾದ್ರೂ  ಅಂತೀನಾ ?
ಏಳೇಳು  ಜನ್ಮಕ್ಕೂ  ನೀನೇ  ಬೇಕು
ನಿನ್ನ  ಒರಟು  ಮಾತುಗಳಿಂದಾ
ವಿಕ್ಷಿಪ್ತ  ನಡೆವಳಿಕೆಯಿಂದಾ
ನನ್ನ ಗೆದ್ದೇ ಎನ್ನುವ .....
ನೀ  ದಬ್ಬಾಳಿಕೆಯಲಿ ಮೆರೆದು
ಗಹಗಹಿಸುವ  ನೀನೂ.......
  ನನಗಿಷ್ಟ.
'ನಾ  ನಿನ್ನ ಪ್ರೀತಿಸುವೆ '
ಸೋತಿದ್ದು  ನಾನಲ್ಲ.....
ನನ್ನ ಪ್ರೀತಿಗೆ ......
ನಿನ್ನ  ಸಹಿಸಿಕೊಳ್ಳುವ  ನನ್ನ ಸಹನೆಗೆ .....
ಸೋಲು  ನಿನ್ನದಲ್ಲವೇ ?

Monday, 27 May 2013

೧.ನನ್ನಲಿ  ಏನೇ  ಇದ್ದರೂ
ನೀ  ಮುಡಿಸಿದ  ಮಲ್ಲಿಗೆಯೇ  ಅಮೂಲ್ಯ
ಬಾಡಿಹೋದೀತು  ನಾಳೆ
ಅದರ ಹಿಂದಣ  ಪ್ರೀತಿ  ಬಾಡುವುದೇ ?
ಆ ಘಮ ನಿನ್ನ ಮಧುರ ನೆನಪಿನಂತೆ
ಸದಾ ಮನದಿ ಉಳಿಯಲಾರದೇ?
ಅದರ  ಮೃದು  ನಿನ್ನ ಮನಸಿನಂತೆ
ನನ್ನಲಿ ಎಂದೂ  ಇರಲಾರದೇ?
ಹ್ಯಾಂಗೆ  ಮರೆಯಲೀ ?

ಮರೆಯಬೇಕೆಂದೇ  ನಿನ್ನ ಮತ್ತೇರುವಷ್ಟು  ಕುಡಿದೆ
ಆ  ಅಮಲಿನಲ್ಲಿಯೂ  ನಿನ್ನ ಹೆಸರನೇ  ತೊದಲಿದೆ
ಎಚ್ಚರದಲಿ  ಸದಾ  ನೆನಪಾಗಿ ಕಾಡುವೆ
ಮಲಗಿ ನಿದ್ರಿಸಲು  ಹೋದರೆ  ಕನಸಾಗಿ  ಬರುವೆ
ಪ್ರಕೃತಿಯ  ಮಡಿಲಲ್ಲಿ ನಿನ್ನ ಮರೆತೇನೆ  ಎಂದು ಅಲೆದೆ
ಧುಮ್ಮಿಕ್ಕುವ  ಧಾರೆಯಲ್ಲೂ  ನಿನ್ನ ಮಾತೇ...
ಸುಂದರ  ಹಸಿರು ಬೆಟ್ಟ -ಗುಡ್ಡ  ನೆನಪಿಸಿದ್ದು  ನಿನ್ನ ಚೆಲುವೇ
ಮರೆತೆನೆಂದರೂ ಮರೆಯುವುದು  ಹೇಗೆ  ಗೆಳೆಯಾ ?
ನನ್ನೊಳು  ನೀ  ಎಂದೋ  ಒಂದಾಗಿಬಿಟ್ಟಿರುವೆ..
ಉಸಿರಾಟ --

ನೀನೆಷ್ಟೇ  ದೂರ  ಹೋದರೂ
ನನ್ನ ಮುಗ್ದ ಮೊಗದ  ನೆನಪು
ನಿನಗೆ  ಕಾಡದೇ?
ಕೈ ಕೈ ಹಿಡಿದು  ಜೊತೆಯಾಗಿ
ನಾವಿಬ್ಬರೂ ನಡೆದ ದಾರಿ
ಸಂಜೆಯಲಿ  ಆಡಿದ ಪಿಸುಮಾತು
ಮರೆಯಲಾದೀತೇ?
ನಾವಿಬ್ಬರೂ  ತಬ್ಬಿದ್ದು
ಮುತ್ತಿಟ್ಟಿದ್ದು
ಕಾಮವೂ  ಅಲ್ಲ -ಪ್ರೇಮವೂ  ಅಲ್ಲ
ಅದು  ನಮ್ಮ  ಉಸಿರಾಟ
ಅಗಲಲಾದೀತೆ ?
ಸುಮ್ನೆ  ಹೀಗೊಂದಷ್ಟು  ವಿರಹ ಪದ್ಯಗಳು -----


೧.ಈ  ಉರಿಬಿಸಿಲ  ತಾಪದೊಡನೆ
ನಿನ್ನ  ನೆನಪುಗಳ  ಬಿಸಿಯೂ  ಸ್ಪರ್ಧಿಸಿ
ಮನ ನಿನ್ನ ಸನಿಹವ  ಬಯಸಿದೆಯಲ್ಲ
ಜಾತಕಪಕ್ಷಿಯು  ಮಳೆಗಾಗಿ  ಕಾಯ್ವಂತೆ
ನಾ  ಕಾದಿರುವೆ ನಿನ್ನ ಮಿಲನಕೆ
ಬಂದುಬಿಡೋ  ನನ್ನ ಗಂಧರ್ವ
ನಿನ್ನ  ಮಧುರ ನುಡಿಗಳಲಿ ಮೈಮರೆಯುವಾಸೆ
ಬೇರೆಯಾಗದಂತೆ  ಬಾಹುಗಳಲಿ  ಬಂಧಿಸಿ
ಸುರಿಸಿಬಿಡೋ ನಿನ್ನೊಲವ  ಮಳೆಯಂತೆ
ವಿರಹದಿ  ಬಿರಿದ  ನನ್ನೆದೆಯ  ತಣಿಸೋ  ಮಾಧವ.

೨.ನಿನ್ನ  ಮೌನರಾಗ
ನನ್ನಲ್ಲಿ ಅರಿಯದಾ  ಉದ್ವೇಗ
ಬಿಡು  ಗೆಳೆಯಾ .....
ಪ್ರೀತಿಯಲ್ಲಿ  ಎಲ್ಲವೂ  ಹಿತವೇ ....
ಕೋಪಿಸುವ ನೀನೂ
ನನಗಾಗಿ ಪರಿತಪಿಸುವ  ಪರಿಯೂ
ಆಮೇಲೆ  ಮುದ್ದಿಸಿಕೊಂಡು
ಓಲೈಸುವ  ಖುಷಿಯೂ
ನನಗೆ ಮುದವೇ .....

Friday, 8 March 2013

ಆಧ್ಯಾತ್ಮ ---

ಆಧ್ಯಾತ್ಮ ಮನುಷ್ಯನನ್ನು ಸರ್ವಶಕ್ತಭಲಾಡ್ಯನನ್ನಾಗಿ ಮಾಡುತ್ತದೆ,,,,

ಏನಿದು ಸುಜಾತಾ ಹೀಗೆ ಹೇಳ್ತಿದಾಳೆ ! ಅನ್ಕೋಬೇಡಿ. ನನ್ನ ಅನುಭವವನ್ನು ಮಾತ್ರಾ ನಾ ಹೇಳೋದು. ವಯಸ್ಸಾಯ್ತು ಅಂತಲ್ಲಾ. ನಾಗರ ಹಾವು ತನ್ನ ಪೊರೆಯನ್ನು ಕಳಚುವಂತೆ ನಾವು ಕೂಡ ದಿನದಿನಕ್ಕೆ ನಮ್ಮ ಭಾವನೆಗಳ ಪೊರೆಯನ್ನು ಕಳಚುತ್ತಲೇ ಇರುತ್ತೇವೆ.ಹೊಸ ಹೊಸ ಭಾವನೆ ಹೊಸ ಹೊಸ ಮಾರ್ಗಗಳನ್ನು ಹೊಸ ಹೊಸ ಪಾಠ ವನ್ನು ಕಲಿಯುತ್ತಲೇ ಇರುತ್ತೇವ. ನಮ್ಮ ಮೆದುಳಿಗೆ ದೇಹದಂತೆ ವಯಸ್ಸು ಎನ್ನುವುದು ಇಲ್ಲ.ಅದಕ್ಕೆ ಅದು ಹೊಸದಾಗಿಯೇ ಇರುತ್ತದ. ಅದು ಭಾವನೆಗಳಿಗೆ ಜ್ಞಾನಕ್ಕೆ ಕಲಿಕೆಗೆ ಹೊಸ ಹೊಸ ಆಲೋಚನೆಗಳಿಗೆ ಆವಿಷ್ಕಾರಕ್ಕೆ ಹುಡುಕುವಿಕೆಗೆ ಎಂದೆಂದೂ ತೆರೆದುಕೊಳ್ಳುತ್ತಲೇ ಇರುತ್ತದೆ.

Saturday, 2 March 2013

ನನ್ನನಗಲಿ ಮಥುರೆಗೆ ಹೊರಟು ನಿಂತೆಯಲ್ಲಾ ....
ನಿನ್ನಿರವು ಇರದ ಇಲ್ಲಿ ನಾ ಹೇಗಿರಲೀ ?
ಕೇಳಿಸದೆ ನಿನ್ನ ಮುರಳೀ ....
ವಿರಹ ಯಮುನೆಯಂತೆ ಹರಿದೀತು ಕೃಷ್ಣಾ 
ತೊರೆದು ಹೋಗದಿರು ನನ್ನ ....
ಸದಾ ನಿನ್ನೊಡನೆಯೇ ನಾನಿರುವಾಸೆ ಕೃಷ್ಣಾ ... 
ನಿನ್ನೆದೆಯಲ್ಲಿ ಭದ್ರವಾಗಿರಿಸೋ .......
ಗೆಳೆಯ

ನನ್ನ ಪ್ರೀತಿಯ ಮುದ್ದು ಗೆಳೆಯ 
ಅದೆಷ್ಟು ಕ್ರೂರ ನಿನ್ನ ವಿದಾಯ !
ನೀ ಬಂದ ಸಂತಸಕೂ ಮಿಗಿಲಾಗಿ 
ಬಂದಲ್ಲಿಗೇ ಮರಳುತ್ತೀಯೆಂಬ ಭಾವನೆ .
ನಾ ತಾಳಲಾರೆ ನೀ ದೂರ ಹೋದಾಗ 
ನಿನ್ನ ಅಗಲಿಕೆಯ ವೇದನೆ .
ಅಳತೆಗೂ ಸಿಗದ ಅಗಾಧ ಪ್ರೀತಿ 
ಮಾತಿಗೆ ನಿಲುಕದ ಮಧುರ ಅನುಭವ .
ಹೇಗೆ ಹೇಳಲಿ ಗೆಳೆಯ ವಿರಹವ 
ಊಹೆಗೂ ಸಿಲುಕದ ನನ್ನ ನೋವ .
ನೀ ಮರೆಯಾಗುವಾಗಿನ ನೋಟ
ನನ್ನ ಕಂಬನಿಯಲಿ ಮಸುಕಾಯ್ತು .
ಸದಾ ನಿನ್ನೊಂದಿಗಿರುವ ಬಯಕೆ
ನಲ್ಲ,ನಿನ್ನೊಲವೇ ನನ್ನುಸಿರಾಯ್ತು .
ತೋಳಲಿ ಹುದುಗಿದಾಗಿನ ಮನದ ಪ್ರಶಾಂತತೆ
ಕಂಗಳಲಿ ತುಂಬಿದ ಪ್ರೀತಿ ಸರೋವರ
ಅಪ್ಪಿ ಚುಂಬಿಸಿದಾಗಿನ ಸವಿನೆನಪು
ಹೇಗೆ ಸರಿದೀತು ನನ್ನ ಹೃದಯದಿಂದ ?
ನಾ ನಿನ್ನೊಂದಿಗಿನ ಕಳೆದ ಕ್ಷಣಗಳನು
ಹುಡುಕುತ್ತಿರುವೆ ಕಣ್ಣೀರ ಹನಿಗಳಲಿ .
ಮತ್ತೆಂದು ಬರುವೆ ನೀನೊಂದಾಗಲು
ಕಾದಿರುವೆ ನಿನ್ನ ತೊಳ್ತೆಕ್ಕೆ ಸೇರಲು .
deepavali --

ಬರುತ್ತೇನೆಂದ ನನ್ನವ 
ಬರಲಿಲ್ಲ ದೀಪಾವಳಿಗೆ .
ಅವನ ಬಿಟ್ಟು ನಾನು 
ಸಿಹಿಯ ತಿನ್ನುವುದು ಹೇಗೆ?

ಅವನ ನೆನಪೇ ಕಚಗುಳಿ
ಇಡುತಿತ್ತು ಮನದಿ .
ಹಬ್ಬದಿ ಅವನಿಲ್ಲವೆಂದು 
ನೋವು ಹೃದಯದಿ .

ಪುಟ್ಟ ತಮ್ಮರಿಗೋ
ಪಟಾಕಿಯ ಸಂಭ್ರಮ ಬೆರಗು!
ನನಗೋ ನನ್ನವನಿಲ್ಲದ
ಬೇಸರ ,ಕೊರಗು.

ಸೊಗಸೇ ಇರಲಿಲ್ಲ
ಮುದುಡಿದ್ದ ಮನಸಿಗೆ
ಅಮ್ಮನಿತ್ತ ಹೊಳಿಗೆಯೂ
ಕಹಿಯೆನಿಸಿತ್ತು ಬಾಯಿಗೆ.

ಮನೆ ಮುಂದೆ ರಾತ್ರಿ
ಬೆಳಗಿದರೆ ಸಾಲು ದೀಪ
ನನ್ನ ಎದೆಗೆ ಮಾತ್ರಾ
ವಿರಹದುರಿ ತಾಪ .

ಯಾಕೆ ಬರಲಿಲ್ಲವೆಂದು
ನಾ ಚಿಂತಿಸುತ್ತಲಿ
ಮುಗಿಸಿಯೇ ಬಿಟ್ಟಿದ್ದೆ
ಅವನಿಲ್ಲದೇ ದೀಪಾವಳಿ .

Friday, 22 February 2013


‎"ವ್ಯಸನ" ಎನ್ನುವುದು ಮನಸ್ಸಿನ ಒಂದು ವಿಕಲ್ಪ.ಯಾವುದೇ ವ್ಯಸನಕ್ಕೆ ಬಲಿಯಾದ ವ್ಯಕ್ತಿ,ತಾನು ವ್ಯಸನಕ್ಕೆ ಬಲಿಯಾಗಿದ್ದೇನೆ,ಎಂದು ಅರಿವಾದೊಡನೆ ಖಿನ್ನನಾಗುತ್ತಾನೆ.ಹಾಗೂ ಅದನ್ನು ಬಿಡಲು ಯತ್ನಿಸುತ್ತಾನೆ.ಇಲ್ಲಿ ವಿಶೇಷವೆಂದರೆ ವ್ಯಸನಕ್ಕೆ ಬಲಿಯಾಗುವ ಮೊದಲಿನ ಮಾನಸಿಕ ಸ್ಥಿತಿ, ಅದು ಖಿನ್ನತೆಯಾಗಿರಬಹುದು, ನಿರಾಶೆಯಾಗಿರಬಹುದು, ಸುಖ ಅಥವ ದುಃಖ ಆಗಿರಬಹುದು. ಅದೇನೇ ಆಗಿದ್ದರೂ, ಒಂದು ಸಾರಿ ಯಾವುದೇ ವ್ಯಸನಕ್ಕೆ ಒಳಗಾದ ವ್ಯಕ್ತಿ ಅದರಿಂದಾ ಹೊರಬರಲು ಹಾಗೂ ಆಗದಿದ್ದಾಗ ಮತ್ತೆ ಅದೇ ವ್ಯಸನದಿಂದಾ ಚಿಂತಿತ ಹಾಗೂ ವ್ಯಕುಲನಾಗುತ್ತಾ ಹೋಗುತ್ತಾನೆ. ಇದು ಒಂದು ವಿಷದ ಚಕ್ರದಂತೆ.ಇಲ್ಲಿ ವ್ಯಸನಕ್ಕೆ ಮಾದಕ ವಸ್ತುಬೇಕು ಎಂದು ಬಯಸುವವರು ಯಾರು?ಹಾಗೂ ಅದರಿಂದಾ ಹೊರಬರಲು ಯತ್ನಿಸುವವರು ಯಾರು? ಎಂಬ ಪ್ರಶ್ನೆ ಉಧ್ಭವವಾಗುತ್ತದೆ.ಎರಡೂ ನಮ್ಮಒಳಗಿನ ಮನಸ್ಸೇ, ಎರಡು ರೀತಿಯ ದ್ವಂದ್ವ ವ್ಯಕ್ತಿತ್ವಗಳಾಗಿರುತ್ತವೆ.ಇದು ಒಂದೇ ವ್ಯಕ್ತಿಯ ಮನಸ್ಸಿನ ಅನೇಕ ಸ್ಥರಗಳಲ್ಲಿ ಒಂದಾಗಿರುತ್ತದೆ. ಹಾಗಾಗಿ ವ್ಯಸನ ಅದರಿಂದಾ ಉಂಟಾಗುವ ಮಾನಸಿಕ ಹಾಗೂ ದೈಹಿಕ ಪರಿಣಾಮ,ಮತ್ತೆ ಮತ್ತೆ ಅದೇ ವ್ಯಸನದ ಸುತ್ತಾ ನಮ್ಮ ಮನಸ್ಸನ್ನು ಸೆಳೆಯಲು ಪ್ರೇರೇಪಿಸುತ್ತದೆ.ಇದಕ್ಕೆ ನಮ್ಮನ್ನು ನಾವೇ ಕೇಳಿಕೊಂಡಾಗ ವ್ಯಸನಕ್ಕಾಗಿ ಹಂಬಲಿಸುತ್ತಿರುವವರು ಯಾರು? ಹಾಗೂ ಅದರಿಂದ ಮುಕ್ತವಾಗಬೇಕೂ ಎಂದು ಹಂಬಲಿಸುತ್ತಿರುವವರು ಯಾರು?ವಾಸ್ಥವವಾಗಿ ಎರಡೂ ನಮ್ಮಲ್ಲಿಯ ಮಾನಸಿಕ ಸ್ಥರಗಳೇ 
ಆಗಿರುತ್ತವೆ.ಇನ್ನು ಮಾನಸಿಕ ಸ್ಥಿತಿಯನ್ನು ಸರಿ ಮಾಡಲು ಯಾವುದೋ ಒಂದು ಮಾದಕ ವಸ್ತುಗಳನ್ನು ಸೇವಿಸಿದಾಗ, ಅದು ಭೌತಿಕ ಶರೀರದ ಮೇಲೆ ಅಪಾರವಾದ ಪರಿಣಾಮ ಉಂಟುಮಾಡುತ್ತದೆ.ಭೌತಿಕ ಶರೀರ ನಮ್ಮದಲ್ಲ. ಅದರ ಮೇಲೆ ನಮ್ಮ ಹಕ್ಕು ಇರುವುದೇ ಇಲ್ಲ. ಅದನ್ನು ನಾವು ಬಾಡಿಗೆಗೆ ಪದೆದುಕೊಂದಿರುತ್ತೇವೆ. ಅದನ್ನು ಹಾಳು ಮಾಡಲು ನಮಗೆ ಹಕ್ಕೆ ಇಲ್ಲ. ಒಂದು ವೇಳೆ ಹಾಳು ಮಾಡಿದರೆ ಅದು ಪ್ರಕೃತಿಗೆ ವಿರುದ್ಧ, ಎಂಬ ಪ್ರಜ್ಞೆ ನಮಗೆ ಇದ್ದರೆ,ಬಹಳಷ್ಟು ದೇಹದ ಮೇಲಿನ ದಬ್ಬಾಳಿಕೆಯನ್ನು ನಾವು ಸಾಕಷ್ಟು ಕಡಿಮೆ ಮಾಡಬಹುದಾಗಿದೆ. ದೇಹ ನಮ್ಮದಲ್ಲ ಎಂದರೆ ಅರ್ಥವೇನೂ?ಎಂದು ಪ್ರಶ್ನೆ ಮಾಡುವವರು, ಯಾವುದೇ ಅನೈಚ್ಚಿಕ ಸ್ನಾಯು ನಮ್ಮ ವಶದಲ್ಲಿ ಇಲ್ಲ, ಉದಾಹರಣೆಗೆ: ನಮ್ಮ ಹೃದಯದ ಬಡಿತ ನಮ್ಮ ವಶದಲ್ಲಿ ಇಲ್ಲ ಎಂದು ಅರ್ಥ ಮಾಡಿಕೊಂಡರೆ ಗೊತ್ತಾಗುತ್ತದೆ, ಅದು ನಮ್ಮದಲ್ಲ ಅದರ
ನಿಯಂತ್ರಣ ಇನ್ಯಾವುದೋ ಶಕ್ತಿಯಲ್ಲಿ ಅಡಕವಾಗಿದೆ ಎನ್ನುವುದು ಅಲ್ಲವೇ?. ಈ ಜನ್ಮ ಎನ್ನುವುದು ಯಾಕಾಗಿ ಆಯಿತು? ನಾನು ಯಾಕಾಗಿ ಹುಟ್ಟಿದ್ದೇನೆ?ನನ್ನ ಈ ಜನ್ಮದ ಸ್ಪಷ್ಟ ಉದ್ದೇಶ ಏನೂ?ಎನ್ನುವುದು ನಮಗೆ ತಿಳಿಯದೆ ಇದ್ದಾಗ, ನಮಗೆ ಉಂಟಾಗುವ ಪರಿಸ್ಥಿತಿಗಳೂ ಕೂಡ ,ನಮಗೆ ತಿಳಿಯದೆಯೇ ಉಂಟಾದವೂ, ಎನ್ನುವ ಪಾರಮಾರ್ಥಿಕವಾದ ಯೋಚನೆ ಇಲ್ಲದಿದ್ದರೆ, ಸಂದರ್ಭಗಳ ಒತ್ತಡಗಳಿಂದಾಗಿ ಅಥವ ಇನ್ಯಾವುದೇ ಮಾನಸಿಕ ಪರಿಸ್ಥಿಗಳಿಗಾಗಿ ನಾವು ಚಿಂತಿಸಿ, ಖಿನ್ನರಾಗಿ, ಇಂಥಹ ವ್ಯಸನಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತವೆ. ಅದರ ಬದಲು, ಹೇಗೆ ನಾವು ನಮ್ಮ ಹುಟ್ಟಿನ ರಹಸ್ಯ ತಿಳಿದಿಲ್ಲವೋ, ಹಾಗೆಯೇ ಇಲ್ಲಿ ನಡೆಯುತ್ತಿರುವ ಘಟನೆಗಳಿಗೂ ಕೂಡ ನಾವೇ ಕಾರಣಕರ್ಥರು ಎಂದು ಅನ್ನಿಸಿದರೂ, ಅದಕ್ಕಾಗಿ ನಾವು ನಿಯೋಜಿಸಲ್ಪಟ್ಟಿದ್ದೇವೆ ಎನ್ನುವ ಸ್ಥಿತ ಪ್ರಜ್ಞೆಯನ್ನು ಹೊಂದಬೇಕಾಗುತ್ತದೆ. ಇಲ್ಲವಾದಲ್ಲಿ, ಉಂಟಾದ ಪರಿಸ್ಥಿತಿಯಿಂದಾ, ಮನಸ್ಸಿನ ಮೇಲೆ ಆಗುವ ಪರಿಣಾಮದಿಂದಾ ಅದರ ಉಪಶಮನಕ್ಕಾಗಿ, ವ್ಯಸನಕ್ಕೆ, ಮಾದಕ ವಸ್ತುಗಳಿಗೆ, ಬಲಿಯಾಗಬೇಕಾಗುತ್ತದೆ.ನಿದ್ರೆ ಬರುವುದಿಲ್ಲ, ಎಂದು ಕೆಲವರು ವ್ಯಸನಕ್ಕೆ ಬಲಿಯಾಗುತ್ತಾರೆ. ಆದರೆ ನಿಜವಾದ ನಿದ್ರೆ ಅಂದರೆ ಏನೂ? ಅದರಿಂದಾ ಏನಾಗಬೇಕಾಗಿದೆ? ಎನ್ನುವುದು ತಿಳಿಯುಯುವುದು ಅತೀ ಅವಶ್ಯಕ. ನಿದ್ರೆ ಎನ್ನುವುದು ನಮ್ಮ ಇಂದ್ರಿಯಗಳ ಪರಿವೆ ಇಲ್ಲದಂತೆ ಮರೆಸಿ ಸ್ನಾಯುಗಳ ಬಿಗಿತವನ್ನು ಸಡಿಲ ಗೊಳಿಸಿ ಅದಕ್ಕೆ ವಿಶ್ರಾಂತಿಯನ್ನು ಕೊಡುವ ಒಂದು ಪ್ರಕ್ರಿಯೆ ಅಷ್ಟೇ ಅದಕ್ಕಾಗಿ ದೇಹ ನಿದ್ರೆ ಬರಿಸುತ್ತದೆ. ಆದರೆ ಅದರಜೋತೆಯಲ್ಲಿ ಯೋಚನೆಗಳೂ ಕೂಡ ಇರುವುದಿಲ್ಲ, ಎಂಬ ತಪ್ಪು ತಿಳುವಳಿಕೆ ಇದ್ದಾಗ ಮಾತ್ರಾ, ಜನ ನಿದ್ರೆ ಬರದೆ ಇದ್ದರೆ ವಿಶ್ರಾಂತಿಯೇ ಸಿಗುವುದಿಲ್ಲ, ಎಂಬ ತಪ್ಪು ತಿಳುವಳಿಕೆಗೆ ಒಳಗಾಗುತ್ತಾರೆ.ವಾಸ್ಥವಿಕವಾಗಿ ನಿದ್ರೆ ಬರದಿದ್ದರೂ, ದೇಹದ ಸ್ನಾಯುಗಳಿಗೆ ವಿಶ್ರಾಂತಿ ಸಿಗುವಂತೆ ಮಲಗಿದರೆ ಯೋಚನೆಗಳು ಮರಯದೆ ಇದ್ದರೂ, ದೇಹಕ್ಕೆ ವಿಶ್ರಾಂತಿ ಸಿಕ್ಕೆ ಸಿಗುತ್ತದೆ. ನಿದ್ರೆಯ ಉದ್ದೇಶವೇ ಅದು.ನಿದ್ರೆಯಲ್ಲಿ ಯೋಚನೆಗಳು ಇರುವುದೇ ಇಲ್ಲ, ಎಂದು ತಿಳಿದುಕೊಂಡಿದ್ದರೆ, ಅದು ತಪ್ಪು.ಏಕೆಂದರೆ, ಯೋಚನೆಗಳಿಗೆ ವಿಶ್ರಾಂತಿ ಅಥವ ನಿಲುಗಡೆ ಎನ್ನುವುದು ಇಲ್ಲವೇ ಇಲ್ಲ. ನಾವು ಮಲಗಿದಾಗ ಕೂಡ ಯೋಚನೆಗಳು ಇದ್ದೆ ಇರುತ್ತವೆ. ಅದೇ ನಮ್ಮ ನಿದ್ದೆಯಲ್ಲಿ ಕನಸಾಗಿ ಪರಿವರ್ತನೆ ಆಗಲು ಸಾದ್ಯ.ಯೋಚನೆಗಳ ಅರಿವು ಇಲ್ಲದಿರಬಹುದು, ಆದರೆ, ಯೋಚನೆಗಳನ್ನು ನಿದ್ದೆಯಲ್ಲಾಗಲೀ, ಜಾಗೃತಾವಸ್ಥೆಯಲ್ಲಾಗಲೀ, ನಿಲ್ಲಿಸಲು ಆಗುವುದೇ ಇಲ್ಲ.ಯೋಚನೆ ಇದೆ, ಅದಕ್ಕಾಗಿಯೆ ಮಾದಕ ವಸ್ತುವಿಗೆ ಶರಣು ಹೋಗುತ್ತಿದ್ದೇವೆ, ಎಂದು ಅಂದು ಕೊಳ್ಳುವವರು, ಇದನ್ನೂ ಕೂಡ ಯೋಚನೆ ಮಾಡುವ ಅವಶ್ಯಕತೆ ಇದೆ.ನಾವು ಯಾವುದೇ ಮಾದಕ ವಸ್ತುಗಳನ್ನು ತೆಗೆದುಕೊಂಡರೂ ಯೋಚನೆ ನಮ್ಮ ಅರಿವಿಗೆ ಬರದಂತೆ ತಾತ್ಕಾಲಿಕವಾಗಿ ತಡೆಯಬಹುದೇ ವಿನಃ ,ಯೋಚನೆಯನ್ನು ನಿಲ್ಲಿಸಲು ಆಗುವುದಿಲ್ಲ. ಅದು ಕೇವಲ ಭ್ರಮೆ ಮಾತ್ರಾ.ಆದರೆ ಯೋಚನೆಗಳಿಂದಾ ತಪ್ಪಿಸಿಕೊಳ್ಳುವ ಸಲುವಾಗಿ ತೆಗೆದು ಕೊಳ್ಳುವ ಮಾದಕ ವಸ್ತುಗಳಿಂದಾ ಆಗುವ ದೇಹದ ಮೇಲಿನ ಕೆಟ್ಟ ಪರಿಣಾಮಕ್ಕೆ ನೇರವಾಗಿ ನಾವೇ ಹೊಣೆಯಾಗಿರುತ್ತೇವೆ.ಅದು ನಮ್ಮ ಪರಿಸ್ತಿಯನ್ನು ಮಾನಸಿಕವಾಗಿ, ದೈಹಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಇನ್ನೂ ಹಾಳುಮಾಡಿ,ಹತಾಶೆಯ ಕೊಪಕ್ಕೆ ನೂಕಿ, ಅಂಧಕಾರವನ್ನು ಜೀವನದಲ್ಲಿ ತಂದೊಡ್ಡುತ್ತದೆ.
4.ಹಸಿರೊಣಗಿ ಕೊಂಬೆ 
ಕಳಚುವ ಸ್ಥಿತಿಯಲ್ಲಿ ಎಲೆ -
-ಯುದುರಿದ ,ಭಾವನೆಗಳ 
ಕಳಚಿಕೊಂಡನ್ತಿರುವ ಒಣ ಮರ 
ನಾನಾಗೆ ......
ಮಣ್ಣಿಂದ ಬಿಡುಗಡೆ
ಹೊಂದಲಾರದೇ ..
ನಿಟ್ಟುಸಿರ ಗಯ್ಯಬಲ್ಲೆನಷ್ಟೇ ....
ರವಿಯ ಪ್ರೇಮದ ಹೊಂಗಿರಣಗಳು
ಮೈಮೇಲೆ ಚೆಲ್ಲಾಟವಾಡುತಿರಲು
ಪುಳಕಗೊಳ್ಳದ
ವಸಂತದಿ ತಂಪೆರೆವ ಕೋಗಿಲೆ -
-ಗೆ ತಾಣವಾಗದೆ
ಆ ಬಾವ ಜೀವಿಯ ಭಾವುಕತೆಗೆ
ಸ್ಪಂದಿಸಲಾಗದೆ
ಯವ್ವನದ ಗರಿ ಕಳಚಿದ ಮುದಿಹಕ್ಕಿಯ
ಹಳೆಯ ನೆನಪಿನಂತೆ
ಗತ ವೈಭವದ ನೆನೆಕೆಗಳ ಮೆಲುಕು ,
ನಿಂತಿರುವೆ ....
ನೀರೂಯಿದೆ.....
ನೀರೂಯಿದೆ.....
ಚಿಗುರಲಾರೆ ಮತ್ತೆ
ಹಸಿರು ಬಿರಿದು ಬಾನೆತ್ತರಕೆ
ಬೆಳೆಯುವಾಸೆಯಿದ್ದರೂ ,
ಪಕ್ಕದಲ್ಲಿನ ಕಿರುಸಸಿಗೆ
ಸ್ಥಳ ತೆರವು ಮಾಡುವ ತವಕದಿ
ಸಾವಿನ ನಿರೀಕ್ಷೆಯ ,
ಬದುಕಲಾರದ ಬಡ ಮುದುಕನ ತೆರದಿ
ಆಗಸವ ದಿಟ್ಟಿಸುತ್ತಿರುವೆ ,
ಮಳೆಗಾಗಿ ಅಲ್ಲ......
ಜೀವಿತದ ಕೊನೆಯ
ಕ್ಷಣಕ್ಕಾಗಿ .
3.‎'ನಿರಾಶಾವಾದ '
ಒಮ್ಮೆ ನನ್ನೂರ ಮಣ್ಣಲ್ಲಿ -
ಮಣ್ಣಾಗುತ್ತಾ ,ನನ್ನ ಕನಸು
ಕಲ್ಪನೆಗಳಲಿ ಕರಗುವಂತೆ
ಯಾರ ಕಣ್ಣಿಗೂ ಬೀಳದೇ ನಶಿಸುತ್ತಿರುವ
ಹಿರಿಯರ ಕಥೆಗೆ ಮೂಕಸಾಕ್ಷಿಯಾದ
ಕೋಟೆಯ ಮೇಲೊಮ್ಮೆ ,
ಹಲವರಿದ್ದ ಗುಂಪಿನಲ್ಲಿ ವಿಲೀನವಾಗಲೆತ್ನಿಸಿ ,
ವಿಫಲಳಾಗಿ
ನಾ ಒಂಟಿಯಾಗಿ
ಕುಳಿತಾಗ .....
ಸುತ್ತಲಿದ್ದ ವನಸಿರಿ ಹೊತ್ತ ಸಾಲು ಸಾಲು ಶೃಂಗಗಿರಿ
ಬತ್ತದೆ ಹರಿಯುತ್ತಿರುವ ಸುಂದರ ಝರಿ
ಚೂರು ಪಾರು ಮೋಡ ...ಬಿಟ್ಟರೆ
ನೀಲಿಯಾಗಸದ ತುಂಬಾ ...
ಚೆಲ್ಲು ಹರಿಯುವ -ಲಲ್ಲೆ ಹೊಡೆಯುವ
ಹುಡುಗ -ಹುಡುಗಿಯರ ನೆನಪಿಸುವ ಹಕ್ಕಿ ಪಕ್ಷಿಗಳು
ಮರವನ್ನಾಲಂಗಿಸಿ ನಿಂತ ಬಳ್ಳಿಗಳು ,
ವಾಸ್ತವದಲಿ ಇನ್ನೇನೇನೋ .....
ಕಣ್ಣೀರಲಿ ಕಾಣದಾಯ್ತು ....
ಮನವನೆಲ್ಲಾ ಆವರಿಸಬಹುದಾದ ಆ ಬಿಂಬ
ನನಗೆ ಮಾತ್ರಾ .....
ಕೋಟೆಯಲ್ಲೇ ....
ಎಲ್ಲೇ ...
ದಿಗಂತದಿಂದಾ ನನ್ನೆಡೆಗೂ
ಕವಿದ ಕಾರ್ಮೋಡದ ಮುಸುಕು
ವನಸಂಪ (ತ್ತ )ಲ್ಲಿ ಒಂಟಿಯಾಗಿ ನಿಂತ
ಒಣಕಲಾದ ಬೋಳುಮರ -
-ವೊಂದು ಕಾಣಿಸಿತ್ತು .
ಓಡಿದೇ ....
ಬಳಿಸಾರಿದೊಡನೆ
ಗಾಢವಾಗಿ ತಬ್ಬಿನಿಂತೆ
ಪ್ರೇಮಿಗಳ ಬಿಸಿಯೋ ...
ತಾಯಿ ಮಗುವಿನ ಅಕ್ಕರೆಯೂ .....
ದಂಪತಿಯ ಒಲುಮೆಯೋ ....
ಯಾವುದೋ ....
ಏನೋ...
ನನ್ನ ಕೃಶ ಬಾಹುಗಳಿ ಬಂಧಿಸಿದ್ದೇ ...
ಬಿಕ್ಕಿದ್ದೆ ...
ಕಣ್ಣಿಂದಾ ಉಪ್ಪುನೀರು ಪುಟಿದು
ಚುಂಬಿಸುತ್ತಾ ಸಾಗಿತ್ತು ....
ಆಗಲೋ ....
ಈಗಲೋ ...
ಎನ್ನುವ 'ಬೋಳು ಮರದ 'ಕಾಂಡಕ್ಕೆ
2.ಕಾಯುವುದು ಕಷ್ಟ ,
ಆದರೂ ...
ಅನಿವಾರ್ಯ,
ಮತ್ತೆನಗಿಷ್ಟ 
ಮಳೆಗಾಗಿ ಇಳೆ 
ರವಿಗಾಗಿ ನೈದಿಲೆ. 
ನಿನಗಾಗಿ ... 
ನಿನ್ನ ಈ ನಲ್ಲೆ 
ಕಾಯುತಿಹಳು
ಸದಾ ನಿನ್ನ
ನೆನಪಿನಲ್ಲೇ!

1,ನಿನ್ನ ನಲ್ನುಡಿಗೆ ಸೋತ ನನ್ನ ಮನ
ನಿನ್ನ ಸನಿಹವ ಬಯಸಿ
ನನ್ನ ಹೃದಯದ ಪ್ರತೀ ಬಡಿತವೂ
ನಿನ್ನ ಹೆಸರನೆ ಜಪಿಸಿ
ನಿನ್ನ ಪ್ರೇಮ ಸ್ಪರ್ಶದಿ
ಒಂದೊಂದು ಅಂಗವೂ ಧನ್ಯವಾಗಲು ಬಯಸಿ
ಇನಿಯಾ ಬಲು ಜತನದಿ
ನಿನಗಾಗಿ ಕಾದಿಹೆ ನಿನ್ನಯ ಅರಸಿ!

ಇದು ನಾನು ಮತ್ತು ಬಿ.ವಿ.ಭಾರತಿ ಸೇರಿ ಹೊಸೆದ ಸಾಲುಗಳು .ಫ್ರೆಂಡ್ಸ್ ನನ್ನದೊಂದು ವಿನೂತನ ಪ್ರಯತ್ನ 
ದಿನಕರನ ಕಿರಣ ಧರಣಿಗೆ ಮುತ್ತನಿತ್ತು
ಧರಣಿ ಚೆಲುವೆಗೆ ದಿನವೆಲ್ಲಾ ರೋಮಾಂಚನ .
ಅದಕೂ ಮೊದಲು ಇಳೆಗೆ ಇಬ್ಬನಿಯ
ಸಹಜ ಸ್ನಿಗ್ಧ ಸಿಂಚನ .
ರಾತ್ರಿಯೆಲ್ಲ ಚಂದ್ರ ಮುತ್ತಿಕ್ಕಿದ್ದ
ಮತ್ತು ಇಳಿವ ಮುನ್ನ
ಮತ್ತೆ ದಿನಕರನ ಧಾಳಿಗೆ ತುತ್ತಾದರೂ
ಇನಿತೂ ಸುಸ್ತಿಲ್ಲವಲ್ಲ ಇವಳಿಗೆ !!
ಚಂದ್ರಮ ಮುತ್ತಿಗೆ ತಂಪಾದ ಚೆಲುವೆ ಬುವಿ
ಬಿಸಿಯಾಗಿಸಿದ ಅವಳ ಹಗಲಿನಲಿ ರವಿ
ಮುತ್ತಿಗೆ ತಂಪಾಗಲು ಸಾಧ್ಯವೇ?
ಉಹೂ ! ಆವೇಗದ ಜ್ವರವಿಳಿದು
ಮೈ ಮಾತ್ರ ಶೀತಲ
ತುಟಿ ಕೆಂಡವಾಗಿದ್ದು ನೀ ಕಾಣಲಿಲ್ಲ?!
ಸುಡುವ ಧಾತ್ರಿಯ ತಣಿಸಲು ವರುಣ ಕೃಪೆ ಸುರಿಯೆ
ಬಸಿರು ನೆಲ ,ಮೊಳಕೆ ಶುರು ,ಎಲ್ಲೆಲ್ಲೂ ಹಸಿರು .
ಹಡೆದ ಸಮೃದ್ಧೆಯ ಸೊಬಗಿಗೆ
ಅವಾಕ್ಕಾದ ಅವರಿಬ್ಬರಿಗೆ
ಈಗ ಜಗಳವಂತೆ ...
ಇದಕೆ ಕಾರಣ ನಾನು ನಾನೆಂದು !

Sunday, 10 February 2013


ದೇವರೇ    ನಾ  ನಿನ್ನಲಿ  ಬೇಡುವುದೇನಿದೆ ?
ನನ್ನ  ಬೇಕು -ಬೇಡಗಳು  ನಿನಗೆ  ತಿಳಿದಿದೆ .
ಆದರೂ ......
ಹೇಳಿಬಿಡುವೇ ...
ನನ್ನ  ಕಂಗಳಿಗೆ ನಿನ್ನ  ನೋಡುವಾಸೆ
ಈಡೇರಿಸಬಾರದೇ?

ನಾ ಸನಿಹ ಬಂದಷ್ಟೂ ,,,,
ದೂರ ಓಡುತ್ತೀಯಲ್ಲ !
ನೀ ನನ್ನ ಬಳಿ ಇಲ್ಲದಿರೆ ಏನು ?
ನಾನೊಂಟಿಯಲ್ಲ ,
ನಿನ್ನೊಂದಿಗೆ ಕಳೆದ
ಮಧುರ ನೆನಪುಗಳಿವೆ
ಗೆಳೆಯ ಸಾಕಲ್ಲ ?
1.ಭೂಕಂಪನವಾದಾಗ ಮಾತ್ರ ಭೂಮಿ ಕಂಪಿಸುವುದಲ್ಲಾ .
ನನ್ನವ ಮುತ್ತು ಕೊಡುವೆನೆಂದಾಗ
ನನ್ನೆದೆಯಲ್ಲಿ ಸಣ್ಣಗೆ ಕಂಪನ
ತುಟಿ ಗಳು ಅದರುತ್ತವೆ
ಆಗಲೂ ಭೂಕಂಪನದ ಅನುಭವ


2.ಎಂದೋ ಕಂಡ ಕನಸು ನೀನು
ಹೃದಯದಿ ಮುಚ್ಚಿಟ್ಟು ಕಾದಿದ್ದೆ
ನೀ ಮುಡಿಸೋ ಮಲ್ಲಿಗೆಗೆ ಹಂಬಲಿಸಿ
ಏಳು ಹೆಜ್ಜೆ ನಿನ್ನೊಂದಿಗೆ ಹಾಕುವಾಸೆಯಲಿ
ಕಾಯುತಲಿದ್ದೆ ಗೆಳೆಯಾ ….
ವ್ಯರ್ಥವಾಗಲಿಲ್ಲ ….
ಶಬರಿಯ ಕಾಯುವಿಕೆ ,
ನನ್ನದೂ ಸಹ ……
1.viraha ---
ವಿರಹದುರಿಯಲಿ ಬೇಯುತ್ತಾ

ಕೋಪದಲಿ ಧುಮುಗುಡುತ್ತಿರುವಾಗ
ಸೀಲಿಂಗ್ ಫ್ಯಾನಿನ ರಭಸ
ಗಾಳಿಯೊಂದಿಗೆ ….
ಆ ಗಾಳಿಯೂ ನುಸುಳದಂತೆ
ಬಿಗಿದಪ್ಪಿದ ನಿನ್ನ ತೋಳುಗಳು
ನಾ ತಂಪನ್ನೀವೆ
ಫ್ಯಾನಿನ ಗಾಳಿಯೇಕೆ
ಎಂದು ಸವಾಲೆಸೆದ ಕ್ಷಣವೇ …..
ನಾ ಮಂಜಾಗಿ ….
ನಿನ್ನೊಳು ಸೇರಿಹೋದೆ.



2.
ಅಲೆಯ ಹೊಡೆತಕ್ಕೆ ಮರಳ ಮೇಲಿನ ನಿನ್ನ 
ಹೆಸರು ಅಳಿಸಬಹುದು ,,,,,
ನಿನ್ನನ್ನೇ ಪ್ರೀತಿಸುವ ನನ್ನ 
ಹೃದಯದಲಿ ಬರೆದ
ನಿನ್ನ ಹೆಸರು ಅಳಿಸಲಾದೀತೆ ?
ಮೋಹವೇನಲ್ಲ ಜೀವನ ಪ್ರೇಮ .
ಎಲ್ಲವೂ ಬೇಕು ಬದುಕಿರುವ ತನಕ .
ನೀನೂ ನಿನ್ನ ಪ್ರೀತಿಯೂ ..

Saturday, 9 February 2013

ಪ್ರೀತಿಯ  ಅಕ್ಕಾ  ,
ನನ್ನ  ಲೆಟರ್  ನೋಡಿದಾಗ  ಎದೆ  ಡವ ಡವ ಅಂತಾ ?ನಿನಗೆ ಮಾತ್ರಾ ಅಲ್ಲ ,ಜೀವವಿರೋ  ಎಲ್ಲರಿಗೂ  ಬಡಿದುಕೊಳ್ಳುತ್ತೆ .ನನ್ನ  ಲೆಟರ್  ನೋಡದೆ  ಇರುವಾಗಲೂ  ಬಡಿಯುತ್ತಿರುತ್ತೆ .ಬೇಕಾದ್ರೆ  ಪರೀಕ್ಷೆ  ಮಾಡ್ಕೋ .
ಹೌದಕ್ಕಾ , ಆಶಾಳ  ವಿಷಯದಲ್ಲಿ  ನಾನು  ತೀರಾ  ಅಪ್ಸೆಟ್  ಆಗ್ತೀನಿ ,ಹಾಗಾಗಬಾರದು  ಅಂತಾ ಎಷ್ಟೇ  ಪ್ರಯತ್ನಪಟ್ರೂ  ,ನನ್ನ ಮನಸನ್ನ  ಕಂಟ್ರೋಲ್ ನಲ್ಲಿ  ಇಟ್ಟುಕೊಳ್ಳಲು   ಆಗ್ತಿಲ್ಲ .But  any how it is a challenge to me  and  my personality . ಆಶಾ ನೇ  ದುಃಖಕ್ಕೆ  ಮೂಲ  ಅಲ್ಲ  ಸುಖಕ್ಕೆ  ಮೂಲ ಅನ್ನೋದನ್ನು  ಪ್ರೂವ್ ಮಾಡ್ತೇನೆ .
ನನ್ನ  ತಕ್ಕ ಆಯ್ಕೆ   ಅವಳಲ್ಲ  .ನಾನು  ಯಾವುದೇ   ಆದರ್ಶಗಳಿಲ್ಲದ ಒಬ್ಬ ಸಾಧಾರಣ  ಮನುಷ್ಯ .ಬಡವ  . ಅವಳೋ ಶ್ರೀಮಂತೆ .ನಾನು  ಸ್ವಾಭಿಮಾನಿ  ಅಕ್ಕಾ .ಎಂತಹಾ  ಸ್ರೀಮನ್ತಿಕೆಯಿನ್ದಾನೂ ನನ್ನ  ಸ್ವಾಭಿಮಾನಕ್ಕೆ ಬೆಲೆ  ಕಟ್ಟೋದು  ಯಾರಿಂದನೂ  ಸಾಧ್ಯವಿಲ್ಲ .ಶ್ರೀಮಂತಿಕೆ  ಕನಸಿನ  ಸಂಪತ್ತಿನಂತೆ .ಇಂದು  ಲಕ್ಷಾಧಿಪತಿಯಾಗಿದ್ದವನು  ನಾಳೆ  ಭಿಕ್ಷಾಧಿಪತಿ  ಆಗಬಹುದು ಯವ್ವನದ ಮದದಲ್ಲಿ ,ಶ್ರೀಮಂತಿಕೆಯ  ಮದದಿಂದಾ  ಏನನ್ನಾದರೂ  ಮಾಡಬಹುದು  ಅನ್ನೋ  ಭ್ರಮೆಯಲ್ಲಿರ್ತಾರೆ  .ಆದರೆ  ಎಷ್ಟು  ಶ್ರೀಮಂತಿಕೆಯೂ  ಒಬ್ಬನಿಗೆ  ಮನಶ್ಯಾನ್ತಿಯನ್ನು  ತಂದುಕೊಡಲು  ಸಾಧ್ಯನಾ ? ಮಾನವೀಯತೆಯಿಲ್ಲವಾದರೆ ಎಂತಹಾ ಶ್ರೀಮಂತಿಕೆಯೂ  ಉಪಯೋಗವಾಗದು .ಸಂದರ್ಭ ಬಂದರೆ  ಶ್ರೀಮಂತನೂ  ನನ್ನಂತಹ  ಬಡವನಲ್ಲಿ   ಬೇಡಬೇಕಾದೀತು  .ಆಗ  ನಾನು  ಅಮಾನವೀಯವಾಗಿ ನಡೆದುಕೊಂಡರೆ ?ಚ್ಛೆ  ನಾಯಿ ಕಚ್ಚುತ್ತೆ  ಅಂತಾ  ನಾವೂ  ಕಚ್ಚಲಿಕ್ಕೆ  ಸಾಧ್ಯನಾ ? ನಮ್ಮ  ವ್ಯಕ್ತಿತ್ವಕ್ಕೆ  ಕುಂದು .
ನನ್ನ ಜೀವನದಲ್ಲಿ  ಅಂತಹ ಘಟನೆ ಬಂದ್ರೆ ?ಹೇಗೆ ವರ್ತಿಸಬೇಕಾಗಿತ್ತು ?
surprise ....
ಇತ್ತೀಚೆಗಷ್ಟೇ  ವ್ಯಾಲಂಟೈನ್  ಡೇ  ಯಂದು  ,ಒಂದು ಗಿಫ್ಟ್  ವಿಷಯಕ್ಕಾಗಿ  ನನ್ನೊಂದಿಗೆ  ಜಗಳವಾಡಿದ  ,ಅದುವರೆಗೂ ಇದ್ದ ನಮ್ಮ  ಪವಿತ್ರ (!) ಪ್ರೇಮವನ್ನು   ತಿರಸ್ಕರಿಸಿ  ಹೋಗಿದ್ದ  'ಆಶಾ ' ಮತ್ತೆ  ನನ್ನ  ಬಳಿ  ಬಂದಳು .ಏನನ್ನೋ  ಬೇಡಿದಾಗ  ನನ್ನ ಪರಿಸ್ತಿತಿ  ಹೇಗಿರಬಹುದು  ಉಹಿಸಿದ್ದೀಯಾ ಅಕ್ಕಾ ?
ಸೋಮವಾರ  ಅಂದು ,ಬೆಳಗ್ಗೆ  ನನ್ನ ಕಾಲೇಜ್  ಬಳಿ  ನಿಂತಿದ್ಲು .ನನ್ನನ್ನು ಕಂಡ ಒಡನೆಯೇ  'ಸೂರ್ಯ  ಪ್ಲೀಸ್  ಒಂದು ನಿಮಿಷ .ಒಂದು  ಹೆಲ್ಪ್  ಮಾಡ್ತೀಯಾ ? ಅಪ್ಪನೇ ನನ್ನನ್ನ ನಿನ್ನಲ್ಲಿಗೆ  ಕಳಿಸಿದ್ದಾರೆ '  ಅಂದಳು .ನನಗರಿವಿಲ್ಲದೆಯೇ  ನನ್ನ ಕೈ ಮೇಲೆ  ಹೋಯ್ತು . ತಕ್ಷಣ ನನ್ನ ಒಳ ಪ್ರಜ್ಞೆ  ಎಚ್ಚರಿಸಿ ಆಗುವ ಅನಾಹುತವನ್ನು  ತಪ್ಪಿಸಿತು .
  ಅವಳ ಬಗ್ಗೆ ಕನಿಕರ ಮೂಡಿತು .ಮೊನ್ನೆ ಮೊನ್ನೆಯಷ್ಟೇ  ಒಂದು ಗಿಫ್ಟ್  ಎಂಬ ಮಾನದನ್ದದಿಂದಾ ನನ್ನನ್ನು ಅಳೆದು ತೊರೆದು ಹೋದ  ಹುಡುಗಿ ಇವಳೇನಾ ಅನಿಸಿತು .ಆಗ ನನ್ನಲ್ಲಾದ ದ್ವಂದ್ವ  !ಅದನ್ನು  ಮಾತಿನಲ್ಲಿ ವಿವರಿಸಲಾರೆ ಅಕ್ಕ .'ಜೀವನವೊಂದು ನಾಟಕ '  ಎನ್ನುವ  ಕಂಬಾರರ  ಮಾತು ನೆನಪಾಯ್ತು  .ನಿನ್ನಂತಹ  ಶ್ರೀಮಂತೆಗೆ  ನಾನು ಏನ್  ಸಹಾಯ ಮಾಡೋಕಾಗುತ್ತೆ   ನಾಲಿಗೆಯಿಂದಾ  ಜಾರಿತು .ಬಹುಷಃ  ಕಥೆಯೊಂದನ್ನು  ಓದಿದ ಹಾಗೇ ಆಗ್ತಿದೆ ಆಲ್ವಾ ಅಕ್ಕ್ಕಾ ?ಇದು ಕಥೇನೆ  ಮಾತ್ರಾ ಸತ್ಯ ಕಥೆ .
ಸೂರ್ಯ  ನಾನು  ನಿನ್ನನ್ನು ಅರ್ಥ ಮಾಡಿಕೊಳ್ಳಲಿಲ್ಲ .ಈಗ ಹೆಚ್ಚು ಮಾತಾಡಿದ್ರೆ  ನನ್ನಕ್ಕನ  ಜೀವ ಹೋಗುತ್ತೆ ಸೂರ್ಯ ಎಂದಾಗ  ಇದೇನು ಕನಸೋ ನನಸೋ  ಎಂದು ನನಗೇ  ಆಶ್ಚರ್ಯವಾಯ್ತು .ನನಗೇ ಅರಿವಿಲ್ಲದೇ ಕಾರಿನಲ್ಲಿ  ಹೋಗಿ ಕುಳಿತು ಮಂಗಳೂರ ಗೆ ಹೋದೆ .ಪ್ರಜ್ಞಾ ಹೀನ  ಸ್ಥಿತಿಯಲ್ಲಿ  ನಮ್ಮತ್ತಿಗೆ ಅಂದ್ರೆ ಅವಳ ಅಕ್ಕ ! ಅಲ್ಲಿ ನಡೆದಿದ್ದ ವಿಷ್ಯ ಇಷ್ಟು -ಡೆಲಿವರಿ  ಕಷ್ಟವಾಗಿ  ಒಪೆರೇಶನ್  ಮಾಡಿ  ಮಗು ತೆಗೆಯಬೇಕಾಗಿತ್ತಂತೆ .ಬ್ಲಡ್  ಲಾಸ್  ಆಗಿ  ಚಿಂತಾಜನಕ  ಸ್ತಿತಿಯಲ್ಲಿ  ಅತ್ತಿಗೆ . ನೋಡಿ  ಅಳು ಬಂತು . AB-ve ರಕ್ತ  ಬೇಕಾಗಿತ್ತು  .ಎಷ್ಟು ಹುಡುಕಿದರೂ  ಸಿಗದೇ  ಆಶಾ ನನ್ನಲ್ಲಿಗೆ  ಬರಬೇಕಾಯ್ತು .ಹೇಗಿದೆ ನಾಟಕ ?ಆಕಸ್ಮಾತ್ ನಾನು ಆಗಲ್ಲಾ ಅಂದಿದ್ರೆ ?ಅವ್ರ  ಶ್ರೀಮಂತಿಕೆಯಿಂದಾ  ಏನು  ಮಾಡಲಿಕ್ಕೆ ಸಾಧ್ಯವಾಗ್ತಿತ್ತು ? ಅವರ ಅದೃಷ್ಟ ನೋಡು .ಮೊನ್ನೆ ಕಾಲೇಜ್ ಕ್ಯಾಂಪಸ್  ನಲ್ಲಿ  ರಕ್ತದಾನ  ಶಿಬಿರ  ಏರ್ಪಡಿಸಿದ್ದರು .ನಾನೂ ಭಾಗವಹಿಸಿದ್ದೆ  .ಆಗ ನನ್ನ ಗ್ರೂಪ್  ಚೆಕ್ ಮಾಡಿದ ಡಾಕ್ಟರು  'ನಿಮ್ಮದು  ರೇರ್  ಬ್ಲಡ್ ಗ್ರುಪ್ ,ಈಗ  ಕೊಡೋದು  ಬೇಡ .ನಮಗೆ  ಅವಶ್ಯವಿದ್ದಾಗ  ಕರೆಸಿಕೊಳ್ತೆವೆ 'ಅಂದಿದ್ರು .ಅದಾದ ಎರಡೇ  ದಿನಕ್ಕೆ  ಹೀಗಾಯ್ತು  .ಮೊದಲೇ  ನಾನು ಸಪೂರ  .ರಕ್ತ  ಕೊಟ್ಟು ಏಳಬೇಕಾದ್ರೆ  ನಿಶ್ಯಕ್ತಿ .,ನನಗೇ  ಗ್ಲುಕೋಸ್  ಕೊಡಬೇಕಾಯ್ತಂತೆ .ಈಗ  ಪರವಾಗಿಲ್ಲ  ,ಕಾಲೇಜ್ ಗೆ ಹೋಗ್ತಿದ್ದೇನೆ .
ಅವಳಿಗೆ  ಗಿಫ್ಟ್  ಕೊಡಲು  ಬೇಕಾದ ಹಣ  ಈಗ  ಕೇಳಿದ್ರೆ  ಎಷ್ಟ್ ಕೇಳಿದರೂ  ಸಿಗುತಿತ್ತು  ಆಲ್ವಾ ?ಒಂದು  ಬಾಟ್ಲಿ  ರಕ್ತ ! ಬೆಲೆ ?
ನಾನು  ಆರಾಮಾಗಿ  ದುಡ್ಡು ಕೇಳಿದ್ರೆ  ಕೊಡುತಿದ್ರು ಆಲ್ವಾ ? ಮಗಳ  ಜೀವಕ್ಕೆ  ಬೆಲೆ! ನಾನೂ ಹಣವಂತ  ಆಗ್ತಿದ್ದೆ . ಗಿಫ್ಟ್ ಕೊಡಿಸಬಹುದಿತ್ತು ಆಲ್ವಾ ?ಹೇಗಿದೆ  ಐಡಿಯಾ  :-)
  ಅಕ್ಕಾ  ಮತ್ತೆ ಬರೆಯುತ್ತೇನೆ .
--ನಿನ್ನ ಸೂರ್ಯ .


Thursday, 7 February 2013

ಸುಸಂಸ್ಕೃತ  ಮನೆಯ  ಹೆಣ್ಣು  ಆಕೆ ,ನೋಡಲು ಸುಂದರಿ ಅಲ್ಲದಿದ್ರೂ  ತೆಳ್ಳಗೆ ,ಬೆಳ್ಳಗೆ  ಇದ್ಲು .ನಮ್ಮಪ್ಪ  ದನದ ಡಾಕ್ಟ್ರು  ,ಅವರಪ್ಪ  ಮನುಷ್ಯರ  ಡಾಕ್ಟ್ರು ಫ್ರೆಂಡ್ಸ್  ,ಅವರಮ್ಮ  ನಮ್ಮಮ್ಮ  ಇಬ್ರೂ  ದೇವಸ್ಥಾನ  ಸುತ್ತಿಬರೋದಕ್ಕೆ  ಒಳ್ಳೆಯ  ಫ್ರೆಂಡ್ಸ್ . ನಾ ಕಾಲೇಜ್ ಗೆ  ಬಸ್ನಲ್ಲಿ ಹೋಗ್ತಾ ,ಬರ್ತಾ  ಸಿಗ್ತಿದ್ಲು  .ಅಂದ್ರೆ  ಆಕೆನೂ  ಕೆಲಸದಲ್ಲಿದ್ದವಳು .ಸಹಪ್ರಯಾಣಿಕಳು .ಸದಾ  ಭಗವದ್ಗೀತೆ  ,ಲಲಿತಾ ಸಹಸ್ರನಾಮ ....ಮತ್ಯಾವುದೋ  ಮಂತ್ರಗಳ  ಪುಸ್ತಕ  ಹಿಡಿದುಕೊಂಡು , ಕೂರೋಕೆ  ಜಾಗ ಸಿಗದಿದ್ರೆ  ನಿಂತಲ್ಲೇ  ಓದುತಿದ್ಲು .ಯಾರೊಡನೆಯೂ  ಅನಾವಶ್ಯಕವಾಗಿ  ಮಾತಾಡದ ಅವಳು ಆಡಿದರೆ ,ಅವಳು ಓದುವ ಪುಸ್ತಕದ ಬಗ್ಗೆನೇ ಅಷ್ಟೇ . ಒಳ್ಳೆಯ ಹುಡುಗಿ ,ನನ್ನಮ್ಮ  ಎಷ್ಟೋ ಸಲ ,ಇಲ್ಲದ  ಮಗನ ಬಗ್ಗೆ  ಕಣ್ಣೀರು  ಹಾಕಿದಾಗ  ದೊಡ್ಡವರಿಗೂ  ಸಾಂತ್ವನ  ಹೇಳಿದಾಕೆ .ಆದರೆ .......
ನಾಗರತ್ನ  ನೇಣು ಹಾಕಿಕೊಂಡಳಂತೆ  ಎಂದು  ವಾರ್ತೆ .ಶಾಕ್ !
ಸತ್ತ  ಕಾರಣ ಇನ್ನೂ  ಶಾಕ್ !
ಸಹೋದ್ಯೋಗಿ  ಒಬ್ಬನನ್ನು  ಮೆಚ್ಚಿದ್ದಳು . ಆತ  ಹರಿಜನರ  ಹುಡುಗ .ಇವಳೋ  ಸದಾ  ಮಂತ್ರ  ಓದುವ ಬ್ರಾಹ್ಮಣರ  ಹುಡುಗಿ .ನಿರಾಕರಿಸಿದ  .ಇಂತಹ  ಹುಡುಗಿಗೆ ತಡೆದುಕೊಳ್ಳಲು  ಆಗಲಿಲ್ಲ ,ನೇಣಿಗೆ  ಶರಣಾದಳು .
ಮಾಮ ಎಂದು ಕರೆಸಿಕೊಳ್ಳುವ  ಆತ ಸೋಮ ಶೇಖರ ,ತುಂಬಾ ಓದಿಕೊಂಡಿದ್ದ .ಒಳ್ಳೆಯ  ಬರಹಗಾರ ,ಕವಿ .ಅವನಿಗೆ ವಿಜ್ಞಾನ ,ಜ್ಯೋತಿಷ್ಯ ,ಹಾಡು ........ಏನ್ ಹೇಳೋದು ?ಇಂತಹದ್ದು  ಗೊತ್ತಿಲ್ಲ ಅನ್ನೋ ಹಾಗಿಲ್ಲ .ಎಲ್ಲರೂ  ಬಯಸುವ ಸ್ನೇಹ ಜೀವಿ .ಆದರೆ  ಬದುಕಲ್ಲಿ  ಸೋತ .ಬಹುಷಃ ಅವನು ಪ್ರೀತಿಸಿದ  ಹುಡುಗಿ ಅವನಿಗೆ ಸಿಗಲಿಲ್ಲ .ಅವನೂ ನೇಣಿಗೆ ಕೊರಳು  ಕೊಟ್ಟ .
ಸಾಮಾನ್ಯವಾಗಿ ನಾನು ಸಾವಿಗೆ  ಹೋಗುವವಳಲ್ಲ  .ಆತ್ಮೀಯರು ,ಪರಿಚಿತರು ನಮ್ಮೊಡನೆ ಇಲ್ಲಾ  ಎಂದುಕೊಳ್ಳುವುದು ಕಷ್ಟ .ಆದರೆ  ಹೋಗಿದ್ದೆ .
ನಾನು  ಓದಿರುವವರು -ಬುದ್ದಿವಂತರು  ಅಂದುಕೊಂಡಿದ್ದೆ .ಇವರುಗಳ  ವರ್ತನೆಯೂ  ಹಾಗಿತ್ತು ,ಆದರೆ  ತಮ್ಮ ಜೀವವನ್ನು ತಾವೇ  ಕೊನೆಗಾಣಿಸಿಕೊಂಡ  ಇವರ ಬಗ್ಗೆ ಏನು ಹೇಳೋದು ?
ಏನ್ ಓದಿದರೇನು ?
ಒಂದು ಕೆಟ್ಟ ಘಳಿಗೆ ಆಲ್ವಾ ?
ನಾನೂ ಅನಾರೋಗ್ಯದಿಂದಾ  ಮಲಗಿದಲ್ಲೇ  ಮಲಗಿದ್ದಾಗ ---
ನಾನು  ನಿರುಪಯೋಗಿ ,ನನ್ನಿಂದಾ  ದುಡ್ಡು ಖರ್ಚು  ......ಎಂದೆಲ್ಲಾ  ನೊಂದು  ಸಾಯುವ ಮನಸ್ಸು ಮಾಡಿದ್ದೆ .ದೇಹ ,ಮನಸ್ಸು ಎರಡೂ ಹಾಳಾಗಿದ್ದ  ಯಾತನೆ .ನೋವುನ್ದವರಿಗೆ ಮಾತ್ರಾ ಬೇರೆಯವರ  ನೋವು ಅರಿವಾಗುತ್ತೆ ,ಮರಗುತ್ತಾರೆ ಅಂತಾರೆ .ನನ್ನ ಬಳಿ  ಯಾರಾದರೂ  ಕಷ್ಟ ಹೇಳಿಕೊಂಡರೆ ---
ಅದನ್ನೆಲ್ಲಾ  ನಾನು  ಅನುಭವಿಸಿದ್ದೇನೆ  ಬಿಡಿ ಅಂತಾ ನಕ್ಕು ಬಿಡ್ತೇನೆ .
ಇಂದು  -----
ಮುದ್ದು ಮುದ್ದು ಮಕ್ಕಳು  'ಅಮ್ಮಾ  ನೀನು  ನಮಗೆ ಬೇಕು ' ಎನ್ನುವಾಗ ,
ನೀ ನಗು ನಗುತ್ತಾ  ಓಡಾಡಿಕೊಂಡಿರು ಸಾಕು ಎಂದು, ನಾ  ಬಯಸಿದ್ದನೆಲ್ಲಾ ನನ್ಮುಂದೆ  ಸುರಿಯುವ ಗಂಡ  ಇರುವಾಗ ,
ಸುಧಾ  ನೀವು  ಸತ್ತು ಬದುಕಿದ್ದೀರಿ ,ಚೆನ್ನಾಗಿರಿ .ನಿಮಗಿಷ್ಟ ಬಂದ ಹಾಗೇ .....ಎನ್ನುವ  ಸ್ನೇಹ ವೃಂದ ,
ಅಬ್ಭಾ  ನಮ್  ಸುಧಾ ಈಗೆಷ್ಟು  ನಗ್ತಾಳೆ ! ಹೀಗೆ ನೋಡ್ತೀವಾ ಅನ್ಕೊಂಡಿದ್ವಿ  ಎನ್ನುವ ನನ್ನ ಬಂಧುಗಳ  ಬೆಟ್ಟಿಯಾದಾಗ ,
ನಾನು  ಹೀಗೆ ಬದಲಾದೆನಾ !!!!!
ಇನ್ನೇನು  ಕೆಲವೇ  ದಿವಸ ನನ್ನ ಜನುಮ ದಿನ .ನಾನು  ಬದುಕಿದ್ದೇನೆ  ಇಷ್ಟು ದಿನ ಎಂದುಕೊಳ್ಳುವ  ಸಂಭ್ರಮ .
ಸಾವಿನ  ಸಮೀಪ  ಹೋದವಳಿಗೆ  ಬದುಕಿನ  ಮಹತ್ವ  ತಿಳಿದಿದೆ .
ನಿಮಗೆ  ಎಂದಾದರೂ ,ತನ್ನನ್ನು  ತಾನು  ಕೊನೆಗೊಳಿಸುವ  ನಿರ್ಧಾರ  ಏನಾದರೂ  ಬಂದಿದ್ದರೆ  ನನ್ನನೊಮ್ಮೆ ನೋಡಿ ಫ್ರೆಂಡ್ಸ್ .
ಇಂದು ಇದ್ದ  ಕೆಟ್ಟ  ಘಳಿಗೆ  ಮುಂದೆಯೂ ಇರೋಲ್ಲ .

Sunday, 3 February 2013

ಪ್ರತಿಯೊಬ್ಬರಿಗೂ ಅವರದೇ ಆದ ನೋವಿನ ಕಥೆಯಿರುತ್ತೆ .ನಮ್ಮದೇ ಬಹಳಾ ನೋವು ಅಂದುಕೊಂಡು ,ಆಗ ಹಾಗೆಲ್ಲಾ ಆಗಿತ್ತು ಈಗ ಹೀಗಾಗೋಯ್ತು ಎಂದು ಕೊರಗ್ತಾ ವರ್ತಮಾನವನ್ನೂ ಹಾಳುಮಾಡಿಕೊಂಡು ,ಮುಂದೆ ಹೇಗೋ ಎಂದು ಯೋಚಿಸ್ತಾನೇ ಬದುಕುವವರನ್ನು ಕಂಡರೆ ಅಯ್ಯೋ ಅನಿಸುತ್ತೆ . ವಯಸಾಗ್ತಾ ಆಗ್ತಾನಾದರೂ ಆಸೆಗಳಿಗೆ ಕಡಿವಾಣ ಹಾಕಿಕೊಳ್ಳದೇ, ನಿರೀಕ್ಷೆಗಳನ್ನು ಮಾಡದೇ , ಮೋಹಗಳಲ್ಲಿ ಸಿಲುಕದೇ ,ಜವಾಬ್ದಾರಿಗಳನ್ನು ನಿಭಾಯಿಸುತ್ತಾ ನೆಮ್ಮದಿಯಿಂದಾ ಬದುಕಬಾರದೇ ? ಭೂತಗಳ ನೆನಪುಗಳಲ್ಲಿ ವರ್ತಮಾನ ಹಾಳುಗೆಡವದೆ ,ಇರೋದನ್ನು ಒಪ್ಪಿಕೊಳ್ಳುವುದನ್ನು ಮೊದಲು ಕಲಿಯಬೇಕು .ನಮ್ಮ ಕೈನಲ್ಲೇನಿದೆ ? ಏನೇನ್ ಆಗಬೇಕೋ ಅದೇ ಆಗೋದು .ಎಲ್ಲವೂ ಪೂರ್ವನಿಯೋಜಿತ .ಬೊಮ್ಮನಾಟ ಅಂದುಕೊಂಡರೆ ? 
ನಿರಾಳ .

Saturday, 2 February 2013

ನಂಬಿಕೆಗಳು ----
ನನ್ನ ದೇಹಕ್ಕೆ ಒಂದು ಚೂರು ನೋವಾದರೂ ತಡೆದುಕೊಳ್ಳುವುದಕ್ಕೆ ಆಗೋಲ್ಲ .ತಕ್ಷಣ ಪರಿಹಾರ ಹುಡುಕ್ತೇನೆ .ಇನ್ನು ಮನಸ್ಸಿಗೆ ? ಹಂಗೆನಾಗಲ್ಲ ,ದೇವರ ಹತ್ರ ಮಾತಾಡ್ತಾ ಇರ್ತೆನಲ್ವಾ ? ಆದರೆ ......

ನಮ್ಮ ಕಡೆ ದೇವರು ,ದೇವಸ್ಥಾನಗಳಿವೆ .ನಮ್ಮೂರ ಕಡೆ ಜನ ಹೇಗೆ ಅಂದ್ರೆ ,ಏನೇ ಒಳ್ಳೆಯ ಕೆಲಸ ಮಾಡಲೀ ,ದೇವರ ಅಪ್ಪಣೆ ಕೇಳದೇ ಮಾಡೋದಿಲ್ಲ .ಏನೇ ಸಮಸ್ಯೆಗಳಾದ್ರೂ ದೇವರೇ ಪರಿಹಾರ ಕೊಡಬೇಕು .ಅಂದ್ರೆ ಹುಷಾರಿಲ್ಲ ಅಂತಾದ್ರೆ ,ಯಾಕೆ ?ಏನು ಮಾಡಬೇಕು ?ನೀನೇ ನೋಡ್ಕೊತೀಯಾ ಅತ್ವಾ ಆಸ್ಪತ್ರೆ ಮದ್ದು ಮಾಡಬೇಕಾ ಅಂತಾ ದೇವರಲ್ಲಿ ಕೇಳಿ ತೀರ್ಮಾನಿಸ್ತಾರೆ . ಕೊನೆಗೆ ,ಹುಶಾರಿಲ್ಲದವರನ್ನು ದೇವಸ್ಥಾನಕ್ಕೆ ಹಾಕಿಬಿಡ್ತಾರೆ .ಹುಶಾರಾದ್ರೆ ದೇವರ ದಯೆ ,ಇಲ್ಲಾಂದ್ರೆ ಆಯಸ್ಸು ಮುಗೀತು ,ದೇವರ ಹತ್ರ ಪ್ರಾಣ ಹೋಯ್ತು ಅಂತಾ .
ಇನ್ನು ಮದುವೆ ಮಾಡಬೇಕಾ ?ದೇವರು ಅಪ್ಪಣೆ ಕೊಡಬೇಕು .ಹೇಗೆ ಅಂತೀರಾ ? ದೇವರಿಗೆ ಪೂಜಿಸಿ ,ಹೂವು ಬಲಕ್ಕೆ ಬೀಳುತ್ತೋ ,ಎಡಕ್ಕೆ ಬೀಳುತ್ತೋ ಕಾಯ್ಕೊಂಡು ಕೂರೋದು .ಅದರಿಂದಾ ತೀರ್ಮಾನಿಸುವುದು .ಇನ್ನು ದೇವರ ಪಲ್ಲಕ್ಕಿ ಹೊತ್ತು ತೂಗಾಡುವಾಗ ಅದರ ತುದಿಯಿಂದಾ ಗೋಡೆ ಮೇಲೆ ಗೀಚಿರುತ್ತಲ್ಲಾ ಅದನ್ನು ಓದಿ ಪರಿಹಾರ ತಿಳಿಯುವುದು .
ಹಾಗೇ ಅಪ್ಪಣೆ ಕೇಳುವ ದೇವಸ್ಥಾನ ಅಂದರೆ ನಾ ನೋಡಿದ್ದು -ನಮ್ಮೂರ ಕಲ್ಲಮರಡಿ ಅಜ್ಜಯ್ಯನಾ ಮಠ .ಅಲ್ಲಿ ಮೂರು ಹೊತ್ತು ಪೂಜೆ .ತುಂಬೆ ಹೂ ಮುಡಿಸಿ ದೇವರ ಹತ್ರ ಅಪ್ಪಣೆ ಕೇಳೋಕೆ ಜನ ಕುಳಿತಿರ್ತಾರೆ .
ಪುಷ್ಪಗಿರಿ ಮಲ್ಲಿಕಾರ್ಜುನ -ಹಳೇಬೀಡು .
ಯಗಟಿ ಮಲ್ಲಿಕಾರ್ಜುನ -ಯಗಟಿ ,ಕಡೂರು ಬಳಿ ಇದೆ.
ಪ್ರತಿಯೊಂದು ನಿರ್ಧಾರಗಳಿಗೆ ,ಸಮಸ್ಯೆಗಳಿಗೆ ದೇವರು .
ಕಷ್ಟ ಬಂದಾಗ ,ಕುಲದೇವರನ್ನೋ ,ಗ್ರಾಮದೇವತೆಯನ್ನೋ ಮನೆಗೆ ಕರೆದುಕೊಂಡು ಬಂದು ಒಂದಷ್ಟು ದಿನ ಪೂಜಿಸಿ ಕಳಿಸುವುದುಂಟು .
ಈ ತರಹದ ನಮ್ಬಿಕೆಗಳನ್ನು ನಾನು ತೆಗಳುತ್ತಿಲ್ಲ .ನಮ್ಮ ಬದುಕಲ್ಲಿ ದೇವರು ಜೊತೆ ಜೊತೆಯಲ್ಲಿ ಆಲ್ವಾ ?
ನಾ ದೇವರಲ್ಲಿ ಬೇಡೋದು ಏನಿಲ್ಲ ಅಂತನೋ ಏನೋ ದೇವಸ್ಥಾನಕ್ಕೆ ಹೋಗೋದು ಕಡಿಮೆ . ಹಾಗೇ ನಾನೊಮ್ಮೆ ಹಳೇಬೀಡು ಸಮೀಪದ 'ಪುಷ್ಪಗಿರಿ' ಗೆ ಹೋದಾಗ ,ನನಗೆ ಕುತೂಹಲ ,ಅಲ್ಲಿ ಚೆನ್ನಮಲ್ಲಿಕಾರ್ಜುನನನ್ನು ನಾನೂ ಅಪ್ಪಣೆ ಕೇಳಿದ್ದೆ . ನನ್ನ ಮೆಚ್ಚಿದವನ ಜೊತೆಗೇ ಈ ಫೆಬ್ರವರಿಲಿ ಮದ್ವೆ ಆಗುತ್ತಾ ಅಂತ :-)ಬಲಕ್ಕೆ ಪ್ರಸಾದವಾಗಿ ಖುಷಿಯಾಗಿಬಿಟ್ಟಿತ್ತು .ಅದು ನಿಜವೂ ಆಯ್ತು .ಇದೆಲ್ಲಾ ಒಂಥರಾ ಹೇಳ್ಕೊಬೇಕು ಅನಿಸ್ತು ಹೇಳಿದೆ .
ನೀವು ನಂಬುತ್ತೀರಾ ?

Wednesday, 30 January 2013


amma ---
ನನ್ನೂಡಲೊಳಗೆ ಜೀವವೊಂದು ಇದೆಯೆಂದಾಗ ನನ್ನಮ್ಮನ ನೆನಪಾಯ್ತು .ಅಮ್ಮಾ ನಾನೂ ಅಮ್ಮನಾಗ್ತಿದ್ದೇನೆ ಎಂದು ಅವಳಿಗೆ ಹೇಳಬೇಕೆನಿಸಿತು .ಕಣ್ಣೀರು ,,,,,ಅಷ್ಟೇ ,,,,ನಾನು ಎಲ್ಲರನ್ನೂ ಬಿಟ್ಟು ನನ್ನವನ ಪ್ರೀತಿಗೆ ಸೋತು ಅವನೊಂದಿಗೆ ಬಂದುಬಿಟ್ಟಿದ್ದೆ .ನವಮಾಸ ತುಂಬಿದಾಗ ಅಮ್ಮನ ಮನೆಗೆ ಹೋದೆ .ಅಮ್ಮ ಆಲ್ವಾ ? ನಾನು ಅಮ್ಮನಾಗಿದ್ದಕ್ಕೆ ಸಂಭ್ರಮಿಸಿದಳು .ಅವಳ ಕರ್ತವ್ಯ ನಿಷ್ಠೆಯಿಂದಾ ಮಾಡಿದಳು .ಹೆಣ್ಣು ಮಗುವೆ ಬೇಕೆಂದು ಆಸೆ ,ಮುದ್ದಾದ ಪುಟ್ಟಿ ,ಮನೆ ,ಮನ ಬೆಳಗಿದಳು .ಎಲ್ಲಾ ಕಹಿಯನ್ನೂ ಮರೆಸಿದಳು .
ನಾನು -ನನ್ನ ಮಗಳು -ಪ್ರೀತಿಸಿದ ನನ್ನವ - ಬದುಕು ಸುಂದರ .ಪುಟ್ಟ ಪ್ರಪಂಚ . ಎಲ್ಲಾರಿಗೂ ಮುದ್ದು ರಾಣಿ .ನನ್ನ ಪುಟ್ಟ ಗೆಳತಿ .ನನ್ನ ಪುಟ್ಟಿ ಒಂಟಿಯಾಗಬಾರದು ಅನಿಸ್ತಿತ್ತು ,ಸುಮಾರು ಹತ್ತು ವರ್ಷಗಳ ನಂತರ ಮತ್ತೊಮ್ಮೆ ಹೊಸಜೀವದ ಆಗಮನದ ಸೂಚನೆ ಆದಾಗ ,,,,ಮತ್ತೊಂದು ಮಗು ಬಂದರೆ ಹೇಗೆ ಅನಿಸಿದರೂ ಒಳಗೊಂದು ಆತಂಕ .ಹತ್ತು ವರುಷದಿಂದಾ ನನ್ನ ಮಗಳು ರಾಣಿ ಯಂತೆ ಬೆಳೆದಿದ್ದಾಳೆ .ಇನ್ನೊಂದು ಮಗುವನ್ನ ಒಪ್ಪಿಕೊತಾಳಾ ?ತಡವಾಗಿ ನನ್ನುದರದಲ್ಲಿ ಬಂದರೂ ,ಅವಸರದಲ್ಲಿ ಆಚೆ ಬರುತ್ತೇನೆ ಎಂದ ನನ್ನ ಕಂದ.ಆ ದಿನ ಹಾಸ್ಪಿಟಲ್ ಸೇರಿದ ದಿನದಂದೇ ಮಗಳ ಸ್ಕೂಲ್ ರೀ-ಓಪನ್ .' ಅಪ್ಪಾ ನೀನೆ ಸ್ಕೂಲಿಗೆ ಬಿಡಬೇಕು ನನ್ನ ' ಹಠ ಮಗಳದ್ದು .ನನ್ನ ಮೇಲಿನ ಪ್ರೀತಿ ಎಲ್ಲಿ ಹಂಚಿಹೋದೀತೋ ಎಂಬ ಭಯ ಅದಕ್ಕೂ ಇರಬೇಕು ಅನಿಸಿತು ,ಮಗಳ ಮನಸ್ಸು ಹೇಗಿದೆಯೋ ! ಒಪ್ಪಿಕೊಳ್ಳದಿದ್ರೆ ಹೇಗೆ ನಿಭಾಯಿಸಲಿ ಎರಡು ಮಕ್ಕಳನ್ನು ? ಸಂಜೆ ಪಾಪುವನ್ನು ನೋಡಿದ ಮಗಳು ,ಪಾಪ ಕೆಮ್ಪುಗಿದೆ ಅಮ್ಮಾ ಎಂದಾಗ ನಿಟ್ಟುಸಿರು .ಬಂಧು -ಬಾಂಧವರು ಬಂದರು , ಹಾರೈಸಿದರು ಹೋದರು .ಅಮ್ಮ ಇಲ್ಲ ಎಂಬ ಸತ್ಯ ತಿಳಿದ ನನ್ನವ ಬಾಣಂತನ ನಾ ಮಾಡ್ತೇನೆ ಇಲ್ವಾ ನಾನು ಸುಮ್ಮನಿರೆ ಎಂದು ಅಭಯವಿತ್ತಿದ್ದ .ಮನೆಗೆ ನೆಮ್ಮದಿಯಿಂದಾ ಬಂದೆ .ಅವನೂ ಒಂದಿನ ಹುಷಾರು ತಪ್ಪಿ ಮಲಗ್ತಾನೆ ಅಂತಾ ನಾನಂದುಕೊಂಡಿದ್ನಾ ?ಚ್ಛೆ ಯಾರಿಲ್ಲ ,,,, ಮಗುವಿಗೆ ನೀರು ಹಾಕಬೇಕು ,ನಾನೇ ಕಾಲು ಚಾಚಿ ಕುಳಿತು ನೀರು ಹಾಕಿದೆ , ಪಾಪು ಹಿಡಿದುಕೊಂಡು ಏಳಲಿಕ್ಕೆ ಆಗ್ತಿಲ್ಲ , ಏನು ಅನಿಸ್ತೋ !ನೋಡ್ತಾ ಇದ್ದ ಮಗಳು ಬಂದಳು ಪಾಪು ಕೊಡಮ್ಮಾ ,ನಾ ಎತ್ಕೊತೀನಿ ಅಂದಳು, ಕೊಟ್ಟು ಎದ್ದೆ .ಬರುವಷ್ಟರಲ್ಲಿ ,,,,ಹಾಸಿಗೆಯ ಮೇಲೆ ಮೆತ್ತಗೆ ಮಗುವನಿರಿಸಿ ,ಮೈ ಒತ್ತುತ್ತಾ ಮುದ್ದುಗರೆಯುವ ಮಗಳು ! ಮಗುವಿಗೆ ಪೌಡರ್ ಹಾಕ್ತಾ 'ಪುಟ್ಟು ತಮ್ಮಾ ನಾನು ನಿನ್ನ ಅಕ್ಕ ಆಲ್ವಾ ? ಹಠ ಮಾಡಬಾರದೂ ಕಂದಾ , ಪಾಪು ಅತ್ತರೆ ಅಮ್ಮನಿಗೆ ಅಳು ಬರುತ್ತೆ ,ಅಕ್ಕನಿಗೂ ಅಳು ಬರುತ್ತೆ ,,,,,,ಎಂದು ಮುದ್ದಿಸವಾಗ ,,,,, 'ತಮ್ಮ' ಪಾಪು ಅಳು ನಿಲ್ಲಿಸಿ , ಅಕ್ಕನ ಮನ ಕದ್ದರೆ ,,,,ನನ್ನ ಹತ್ತು ವರ್ಷದ ಮಗಳು ನನ್ನ ತಾಯಿಯಾಗಿ ಮನ ಗೆದ್ದಳು .

Friday, 18 January 2013

habba --
ಮುಂದೆ ನೆರಿಗೆ ಅಂತಾ ಒಂದಷ್ಟು ಬಟ್ಟೆ ,ಹಿಂದೆ ಬೆನ್ನ ಮೇಲೆ ಸೆರಗು ಅಂತಾ ಇಳಿ ಬಿಟ್ಟ ಒಂದಷ್ಟು ಬಟ್ಟೆ ,ಹೀಗೆ ಈ ಐದೂವರೆ ಮೀಟರ್ ಬಟ್ಟೆಯನ್ನು ಸೀರೆ ಅಂತಾ ಉಡಬೇಕು .ಆದರೂ ಇಟ್ಟರೆ-ತೊಟ್ಟರೆ ಪುಟ್ಟಕ್ಕನೂ ಚೆಂದ :-) ತೌರ ಮನೆಗೆ ಹೋಗೋದು ಅಮ್ಮನ್ನ ನೋಡೋಕೆ ಮಾತ್ರಾ ಅಲ್ಲ .ಹುಟ್ಟಿದ ,ಬೆಳೆದ ಊರಿಗೆ ಹೋದರೆ ,ಅಲ್ಲಿಯ ಮಂದಿಯ ಆತ್ಮೀಯ ಮಾತು ,ಉಪಚಾರ .ನಾವಿನ್ನೂ ಸಣ್ಣವರೇನೋ ಅನಿಸುತ್ತೆ .ಅಜ್ಜಮ್ಮ ಒಬ್ರು ಏನವ್ವಾ ಶ್ಯಾಲೆ ಸುತ್ಕೊಂಡಿದ್ದೀಯ? ಕಾಟನ್ !ಏನ್ ಚೆನಾಗ್ ಕಾಣಿಸ್ತೀಯ
ವ್ವಾ ? ಅಂದ್ರು .ಹೌದು ಅವರಿಗೆ ಇನ್ನೂ ಫ್ರಾಕ್ ಹಾಕಿಕೊಂಡ ಮಗುವೇ :-) ಸೀರೆ ,ಸದಾ ನಾ ಉಡುವ ಕಾಟನ್ ಸೀರೆ ಎಷ್ಟ್ ಚೆಂದ ಅನಿಸ್ತು .
ನೆನ್ನೆ ಇದ್ದಕ್ಕಿದ್ದಂತೆ ಊರ ಕಡೆ ಪಯಣ .ಅಮ್ಮನೂರಲ್ಲಿ ಶಗುನ ರಂಗನ ತೇರು ,ಗಂಡನ ಊರಲ್ಲಿ ನಾಗರ ಹಬ್ಬ .ಮನೆಯ ಹಿರಿಯ ಸೊಸೆ ,ನನಗೊಬ್ಬ ಮಗರಾಯ ,ಹಳ್ಳಿಗೆ ನಾಗರಹಬ್ಬಕ್ಕೆ ಹೋಗುವ ಅನಿವಾರ್ಯ . ದೊಡ್ಡ ಸಂಸಾರ ನಮ್ಮದು ಮಕ್ಕಳು ,ಮೊಮ್ಮಕ್ಕಳು, ಸೊಸೆಯಂದಿರು ....ಎಲ್ಲಾ ಇವತ್ತು ಮಾತ್ರ ಒಟ್ಟಿಗೆ ಸೇರಿ ಹೊಲದಲ್ಲಿರುವ ನಾಗರ ಕಲ್ಲಿನ ಬಳಿ ಪೂಜೆ ಮಾಡೋದು ,ಮಾವಿನ ಮರದ ಕೆಳಗೆ ಊಟ ಮಾಡೋದು ಎಷ್ಟು ಚೆನ್ನಾಗಿರುತ್ತೆ .ಹುರುಳಿಬೇಳೆ -ಅಕ್ಕಿ ಹಾಕಿ ತಯಾರಿಸಿದ ಖಿಚುಡಿ ,ಅದಕ್ಕೆ ಜಜ್ಜಿದ ಬೆಲ್ಲ ,ತುಪ್ಪ ಜೊತೆಗೆ ಕಿವುಚಿದ ಬಾಳೆಹಣ್ಣು ಹಾಕಿಕೊಂಡು ತಿನ್ನೋದು .ಬದನೆ ,ಚಪ್ಪರದವರೆಕಾಯಿ ,ಅವರೇಕಾಳು ಹಾಕಿದ ,ಮೆಣಸಿನ ಕಾಯಿ ,ತೆಂಗಿನಕಾಯಿ ,ಕೊತ್ತಂಬರಿಪುಡಿ ಏನೂ ಹಾಕದೆ ಮಾಡಿದ ಸಾರು ಸಹಾ ಇರುತ್ತೆ ,ಅದನ್ನು ಬೆರೆಸಿಯೂ ತಿನ್ನಬಹುದು .
ವರ್ಷಕ್ಕೊಮ್ಮೆ ಮಾತ್ರಾ ಬನಕ್ಕೆ ಹೋಗಿ ,ತಮ್ಮ ತಮ್ಮ ಮನೆಯ ಗಂಡಸರಿಗೆ ಬಯ್ತಾ ,ತಾವೇ ಸ್ವಚ್ಚಗೊಳಿಸಿ , ಹಣೆಗೆ ನೆನೆದ ಅಕ್ಷತೆಯನ್ನು ಇಟ್ಟುಕೊಂಡು,ನಾಗಪ್ಪನಿಗೆ ಪೂಜಿಸಿ ,ತನಿ ಎರೆದು ,ತಂದ ಎಡೆಯನ್ನ ಮುಂದಿಟ್ಟು,ತಂಬಿಟ್ಟು ,ಹಸಿಕಡಲೆ ಬಾಳೆಹಣ್ಣು ಎಲ್ಲಾ ನೈವೇದ್ಯ ಮಾಡಿ ,ನಾಗರ ತಾಳಿಯನ್ನು ಮಕ್ಕಳಿಗೆ ಕಟ್ಟುತ್ತಾರೆ .
ಎಲ್ಲವನ್ನೂ ಮರೆತು ,(ಮರೆತಂತೆ ನಟಿಸಿ !) ಒಂದಷ್ಟು ಗಲ-ಗಲ ಅಂತಾ ,ಒಟ್ಟಾಗಿ ಸೇರಿ ಉಣ್ಣೋದು ಹಬ್ಬ ಆಲ್ವಾ ? ಸ್ವಲ್ಪ ಫೋಟೋಗಳನ್ನು ಪೋಸ್ಟ್ ಮಾಡುವೆ .ನಿಮ್ಮೊಂದಿಗೆ ಎಲ್ಲವನ್ನೂ ಹಂಚಿಕೊಳ್ಳಲು ಇರೋದು ತಾನೇ ನನ್ ವಾಲ್ ?
ಮದುವೆ  ಅನ್ನೋದು  ಎರಡು  ಆತ್ಮಗಳ  ಪವಿತ್ರ  ಬಂಧನ .
ಮದುವೆ ಅಷ್ಟೇ ಅಲ್ಲ ,ಯಾವುದೇ  ಸಂಬಂಧವಾಗಲೀ  ಋಣ .
ಕಾಯಾ ,ವಾಚಾ ,ಮನಸಾ  ಜೊತೆಯಾಗಿ  ಇರ್ತವೆ ,ನಡೆಯುತೇವೆ ,ನಮ್ಮ  ಮಿಲನದಿಂದಾ   ಸಮಾಜಕ್ಕೆ  ಸತ್ಪ್ರಜೆಯನ್ನು  ನೀಡ್ತೇವೆ  ಅನ್ನುವುದರ  ಉದ್ದೇಶ  -ಮದುವೆ .
ಆದರೆ   ಮದುವೆಗಳಲ್ಲಿ  ಅಂದ್ರೆ  ಪ್ರೇಮವಿವಾಹ ,ಹಿರಿಯರು ನೋಡಿ ಮಾಡಿದ  ವಿವಾಹ  ಯಾವುದೇ  ಇರಲಿ  ಎಲ್ಲವೂ  ಬಾಳುವುದು  ಪರಸ್ಪರ  ನಂಬಿಕೆಯ ಮೇಲೆ ,ಹೊಂದಾಣಿಕೆಯ  ಮೇಲೆ .
ವಿವಾಹದ  ದ್ಯೋತಕವಾಗಿ  ಹೆಣ್ಣಿಗೆ  ತಾಳಿ .ಗಂಡಿಗೆ  ಏನೂ  ಇಲ್ಲ ,ಬೇಕಾಗಿಲ್ಲವಂತೆ  ಅವನ  ಮುಖ  ನೋಡಿದರೆ  ಸಾಕು ತಿಳಿಯುತ್ತೆ ಅಂತಾರೆ :-).
ನಾನು  ಹೆಚ್ಚು  ತಿಳಿದುಕೊಂಡಿಲ್ಲ .ಭಾವನಾತ್ಮಕವಾಗಿ  ಯೋಚಿಸೋದೆ  ಜಾಸ್ತಿ .ನಾನ್ಯಾಕೆ  ತಾಳಿ ,ಕಾಲುಂಗುರ  ಸದಾ  ಧರಿಸ್ತೇನೆ  ಅಂತಾ  ನನ್ನಲ್ಲಿ ಪ್ರಶ್ನಿಸಿಕೊಂಡೆ .ಆಗನಿಸಿದ್ದು ----
ನಾನು  ಮದ್ವೇಯಾದೆ  ಅಂತಾ  ಅಂದುಕೊಳ್ಳೋದು  ಹೆಮ್ಮೆ .ತಂದೆ -ತಾಯಿಯ  ಮಡಿಲಿನಿಂದಾ ಸ್ವತಂತ್ರವಾಗಿ  ನನ್ನದೇ  ಸಂಸಾರ  ಕಟ್ಟಿಕೊಂಡ ಬದಲಾವಣೆಯ  ಖುಷಿ  .ಮದ್ವೇಯಾಗಿಲ್ವಾ  ಇನ್ನೂ  ಎಂಬಾ  ಕೊಂಕು ನೋಟ  ತಪ್ಪಿಸಿಕೊಂಡ  ನಿರಾಳತೆ .
ಸಮಾಜದಲ್ಲಿ  ಒಂದು ಭದ್ರತೆ ,ಸ್ಥಾನ ,ಮಾನ ,ಗೌರವ  -ಮದುವೆಯಿಂದಾ. ನನ್ನ  ಸುಖ- ದುಃಖದಲ್ಲಿ  ಸಮಭಾಗಿ  ನನ್ನವ ..ನನ್ನ  ಹೆಣ್ತನಕ್ಕೆ  ಗೌರವ  ಮದುವೆ  ಅದರಿಂದಾ ನಾ  ತಾಯಿಯಾಗಿದ್ದು . ಮುತ್ತೈದೆ  ಭಾಗ್ಯ  ತಂದುಕೊಟ್ಟ  ನನ್ನವನನ್ನು  ಪ್ರೀತಿಸುವ ,ಗೌರವಿಸುವ  ನಾನು  ಮದುವೆಯಾಗಿದೆ  ಅನ್ನೋದನ್ನು  ಬಿಂಬಿಸುವ  ತಾಳಿಯನ್ನು ,ಕಾಲುನ್ಗುರವನ್ನೂ ಸದಾ  ಧರಿಸುವುದರ  ಮುಖಾಂತರ ಗೌರವಿಸ್ತೇನೆ .
ಕುಂಕುಮ  ಕೊಟ್ಟಾಗ  ,ನಾ ಹಣೆಗೆ  ಹಚ್ಚಿಕೊಳ್ಳುವುದಷ್ಟೇ ಅಲ್ಲ ,ತಾಳಿಗೂ ಹಚ್ಚುವುದರ  ಮೂಲಕ ,ನಾನು  ನನ್ನವನು  ಕಟ್ಟಿದ  ತಾಳಿಗೆ ಒಂದು  ಪೂಜನೀಯ  ಭಾವನೆಯಿಂದಾ  ನೋಡ್ತೇನೆ .
ಅಮ್ಮ ಬರಿಯ ಹಣೆಯಲ್ಲಿರೋದು ನನಗೆ  ಅಸಹನೀಯ ಅನಿಸಿದ್ದುಂಟು .ಅವಳು ಅಪ್ಪಿ ತಪ್ಪಿ ಬೋಳು ಹಣೆಯಲ್ಲಿ ,ಕುತ್ತಿಗೆಯಲ್ಲಿ ಇರೋದು ನೋಡಿದಾಗ ,ನಾ ನಡುಗುವುದುಂಟು .ಉಹುಂ ,ನಾನೂ ಇರೋಲ್ಲ .
ಏನ್ರೀ ಚೆನ್ನಾಗಿದ್ದೀರ ?
ಹುಂ ರೀ .
ಮನೆಲೆಲ್ಲಾ ಚೆನಾಗಿದಾರೆನ್ರೀ ?
ನನ್ ಸಣ್ಣ ಮಗನಿಗೆ ಸ್ವಲ್ಪ ಹುಶಾರಿಲ್ಲರೀ ?
ಏನಾಗೈತೆ ?
ಮೂಗ್ನಾಗ್ ಒಂದೇ ಸಮಕೇ ಗೊಣ್ಣೆ ಇಳಿತೈತೆರೀ .
ಒಹ್! ನಿಮ್ಮ ಯಜಮಾನ್ರು ಈಗಲೂ ಕುಡ್ಕೊಂಡು ಬಂದ್ ಹೊಡಿತಾರಾ ?ನಿಮ್ಮತ್ತೆ ಹೆಂಗವ್ರೆ ?
-------ಹೀಂಗೆಲ್ಲಾ ಏನೋ ಕಲ್ಪಿಸಿಕೊಂಡು ನಮ್ ಕಾಲೇಜ್ ದಿನಗಳಲ್ಲಿ ಹರಟುದಿದ್ವಿ .
ನೆನ್ನೆ ,ಸುಮಾರು ಹದಿನೆಂಟು -ಹತ್ತೊಂಬತ್ತು ವರ್ಷಗಳ ನಂತರ ನನ್ ಗೆಳತಿ ವಿಜಿಗೆ ಕಾಲ್ ಮಾಡಿದೆ .ಒಟ್ಟಿಗೆ ಬಸ್ನಲ್ಲಿ ,ಕಾಲೇಜ್ ನಲ್ಲಿ ,ಪಿಚ್ಚರ್ ನಲ್ಲಿ ,ಹೋಟೆಲ್ ನಲ್ಲ್ಲಿ ,ಮನೆಯಲ್ಲಿ ಒಟ್ಟಿಗೆ ಪರೀಕ್ಷೆಗೆ ತಯಾರಿ ........ಸದಾ ..... ಜಗಳವಾಡದೆ ,ಜೊತೆ ಜೊತೆಯಾಗಿ ೩ ವರ್ಷಗಳು ಕಳೆದಿದ್ವಿ .
-ವಿಜು ನಾನು ಸುಜಾತ .
-ಯಾವ್ ಸುಜಾತಾ ?
-ನಿನ್ AIT ಫ್ರೆಂಡ್ .
-ಹೇಯ್ ಬೇಜಾರ್ ಆಗಬೇಡವೇ ,ನನಗೆ ಎಲ್ ಹೋದರೂ ಸುಜಾತಾ ಅನ್ನೋವ್ರೆ ಫ್ರೆಂಡ್ ಆಗ್ತಾರೆ ,ಅದಕ್ಕೆ ಕೇಳಿದೆ .
-ನನ್ನ ಮರೆಯೋಕೆ ಆಗಬಾರ್ದೂ ಅಂತಾ ಆಲ್ವಾ ?ನನಗೂ ಹಾಗೇ ಎಲ್ ಹೋದರೂ ವಿಜಯ ಅನ್ನೋವ್ರೆ ಸಿಗ್ತಾರೆ :-).
-ಫೋನ್ ನಂಬರ್ ಹೇಗೆ ಸಿಗ್ತು ?
-ಅದನ್ನು ಅಮ್ಮೇಲೆ ಹೇಳ್ತೇನೆ .
-ಹೇಗಿದ್ದೀಯ ?
-ಹ್ಮಂ ,ಸ್ವಂತ ಮನೆ ,ಸ್ವಂತ ಕಾರು ,ಸ್ವಂತ ಗಂಡ ,ಸ್ವಂತ ಮಕ್ಕಳು ಕಣೆ :-)
-ಹೌದೇನೆ ! :-)
-ನಿನಗೆಷ್ಟೇ ಮಕ್ಕಳು ?
ನಗು ಇಬ್ಬರಿಗೂ . ನಮ್ಮ ಕಾಲೇಜ್ ದಿನಗಳು ನೆನಪಾಗಿ ,ಇಬ್ರೂ ಅದೇ ಕಾಲಕ್ಕೆ ಹೋಗಿಬಿಟ್ಟಿವಿ. ಹೀಗೆ ಖುಷಿ ಕೊಟ್ಟಿದ್ದು -
ಅಂಜಲಿ ಮ್ಯಾಡಂ ಪುಸ್ತಕ ಬಿಡುಗಡೆಗೆ ಹೋದಾಗ ,ಪರದೇಶವಾಸಿ ತ್ರಿವೇಣಿ ರಾವ್ ಅಲ್ಲಿ ಸಿಕ್ಕಿ ,ನನ್ನ ಬರಹ ಗಮನಿಸುವ ಅವರು ,ನನ್ನನ್ನು ಸುಜಾತ ಅಂತಾ ಮಾತಾಡಿಸಿದರು . ಕಾರ್ಯಕ್ರಮ ಮುಗಿದ ನಂತರ ಅವರನ್ನು ನನ್ನ ಕಾರ್ ನಲ್ಲಿ ವಿದ್ಯಾಪೀಠ ಕ್ಕೆ ಡ್ರಾಪ್ ಮಾಡುವಾಗ ನಡೆದ ಮಾತುಗಳಿಂದಾ ನನ್ ಗೆಳತಿ ವಿಜಯಲಕ್ಷ್ಮಿ ನಂಬರ್ ಸಿಕ್ಕಿತು .ಎಲ್ಲೋ ಕಳೆದು ಹೋಗಿದ್ವಿ ಯಾರೋ ಜೋಡಿಸಿದರು :-)
ಆಹಾ ಫೇಸ್ ಬುಕ್ ಏನು ನಿನ್ನ ಲೀಲೆ ?
ಭೂತಗಳ ನೆನಪುಗಳೊಂದಿಗೆ ವರ್ತಮಾನ :-) ಇತ್ತೀಚೆಗೇಕೋ ಜಾಸ್ತಿಯಾಗಿದೆ ,ಹಳೆಯದರ ಹುಡುಕಾಟ ,ನೆನಪುಗಳು . ಸಿಗ್ತಿದಾರೆ .....ಒಬ್ಬೊಬ್ಬರೇ ....ಹಂಗೇ ಪೂರ್ವಜನುಮದ ಹುಡುಕಾಟವೂ :-) ಬೇಕಿತ್ತಾ ?

Tuesday, 15 January 2013

ರೀ  ನಿಮ್  ಹೆಸರು  ಹಚ್ಚೆ  ಹಾಕಿಸಿಕೊಳ್ಳಲಾ ?
ಹಚ್ಚೆ ಅಂದ್ರೆ  ಏನೇ ?
ಅಳಿಸಲಾಗದ  ಬರಹ !
ಎಲ್ಲಿ ?
ನನ್ನ ಕೈಮೇಲೆ ?
ಯಾಕೆ ?
ಪದೇ  ಪದೇ  ನಿಮ್ಮ ಹೆಸರ  ನೋಡ್ತಿರೋಕೆ  .
ಬಳಪ ,ಪೆನ್ನು  ...ಏನ್  ಸಿಗುತ್ತೋ ,ತಗೊಂಡು  ಬರಕೋ .
ಅದು  ಬರೆಯೋದು ಇದ್ದಿದ್ದೆ ,ಇಷ್ಟ ದಿನ ಅದೇ  ಮಾಡಿದ್ದು. ನನ್ನ   ದೇಹದ  ಯಾವ ಭಾಗದಲ್ಲಿ  ಹಾಕಿಸಲಿ  ನೀವೇ ಹೇಳಿ ?
ಎಲ್ಲಾದರೂ  ಹಾಕಿಸಿಕೊ  ,ಆದರೆ  ದೇಹ  ನಾಶ ಆದಾಗ  ನನ್ ಹೆಸರೂ  ಅಳಿಸುತ್ತಲ್ಲೇ ?
ಹ್ಮಂ :(
ಹುಚ್ಚೀ  ನನ್  ಹೆಸರು  ನಿನ್  ಎದೆಯಲ್ಲಿ  ಹಚ್ಹ್ಚೆಯಾಗಿಲ್ವೇನೆ  ?ಸಾಲದಾ ?
ಹೌದಲ್ವಾ ! ನನ್ನ  ಹೃದಯದಲ್ಲಿ  ಅಚ್ಚಳಿಯದೆ  ಅವರಿರುವಾಗ  ಅವರ ಹೆಸರು  ನನ್ನ  ದೇಹದ  ಮೇಲೇಕೆ ?
:-)
ಎಂದೋ ಒಂದು  ದಿನ ಕಲ್ಪನೆಯಲಿ ಬರೆದುಕೊಂಡಿದ್ದೆ  ಹೀಗೆ-
ರಕ್ತದಲಿ  ನನ್ನ ಹೆಸರ  ಬರೆಯುವ  ಹುಚ್ಚು ಸಾಹಸ  ನಿನಗೇಕೆ  ಗೆಳೆಯಾ ? ನಿನ್ನೆದೆಯಲ್ಲಿ  ಬರೆದ ನನ್ನ ಹೆಸರ  ಅಳಿಸದಂತೆ  ಜೋಪಾನವಾಗಿ  ಕಾಪಾಡಿಕೋ .
ನೆನಪಾಗಿ  ತುಟಿಯ ಮೇಲೊಂದು  ನಗು  :-)