Thursday, 7 February 2013

ಸುಸಂಸ್ಕೃತ  ಮನೆಯ  ಹೆಣ್ಣು  ಆಕೆ ,ನೋಡಲು ಸುಂದರಿ ಅಲ್ಲದಿದ್ರೂ  ತೆಳ್ಳಗೆ ,ಬೆಳ್ಳಗೆ  ಇದ್ಲು .ನಮ್ಮಪ್ಪ  ದನದ ಡಾಕ್ಟ್ರು  ,ಅವರಪ್ಪ  ಮನುಷ್ಯರ  ಡಾಕ್ಟ್ರು ಫ್ರೆಂಡ್ಸ್  ,ಅವರಮ್ಮ  ನಮ್ಮಮ್ಮ  ಇಬ್ರೂ  ದೇವಸ್ಥಾನ  ಸುತ್ತಿಬರೋದಕ್ಕೆ  ಒಳ್ಳೆಯ  ಫ್ರೆಂಡ್ಸ್ . ನಾ ಕಾಲೇಜ್ ಗೆ  ಬಸ್ನಲ್ಲಿ ಹೋಗ್ತಾ ,ಬರ್ತಾ  ಸಿಗ್ತಿದ್ಲು  .ಅಂದ್ರೆ  ಆಕೆನೂ  ಕೆಲಸದಲ್ಲಿದ್ದವಳು .ಸಹಪ್ರಯಾಣಿಕಳು .ಸದಾ  ಭಗವದ್ಗೀತೆ  ,ಲಲಿತಾ ಸಹಸ್ರನಾಮ ....ಮತ್ಯಾವುದೋ  ಮಂತ್ರಗಳ  ಪುಸ್ತಕ  ಹಿಡಿದುಕೊಂಡು , ಕೂರೋಕೆ  ಜಾಗ ಸಿಗದಿದ್ರೆ  ನಿಂತಲ್ಲೇ  ಓದುತಿದ್ಲು .ಯಾರೊಡನೆಯೂ  ಅನಾವಶ್ಯಕವಾಗಿ  ಮಾತಾಡದ ಅವಳು ಆಡಿದರೆ ,ಅವಳು ಓದುವ ಪುಸ್ತಕದ ಬಗ್ಗೆನೇ ಅಷ್ಟೇ . ಒಳ್ಳೆಯ ಹುಡುಗಿ ,ನನ್ನಮ್ಮ  ಎಷ್ಟೋ ಸಲ ,ಇಲ್ಲದ  ಮಗನ ಬಗ್ಗೆ  ಕಣ್ಣೀರು  ಹಾಕಿದಾಗ  ದೊಡ್ಡವರಿಗೂ  ಸಾಂತ್ವನ  ಹೇಳಿದಾಕೆ .ಆದರೆ .......
ನಾಗರತ್ನ  ನೇಣು ಹಾಕಿಕೊಂಡಳಂತೆ  ಎಂದು  ವಾರ್ತೆ .ಶಾಕ್ !
ಸತ್ತ  ಕಾರಣ ಇನ್ನೂ  ಶಾಕ್ !
ಸಹೋದ್ಯೋಗಿ  ಒಬ್ಬನನ್ನು  ಮೆಚ್ಚಿದ್ದಳು . ಆತ  ಹರಿಜನರ  ಹುಡುಗ .ಇವಳೋ  ಸದಾ  ಮಂತ್ರ  ಓದುವ ಬ್ರಾಹ್ಮಣರ  ಹುಡುಗಿ .ನಿರಾಕರಿಸಿದ  .ಇಂತಹ  ಹುಡುಗಿಗೆ ತಡೆದುಕೊಳ್ಳಲು  ಆಗಲಿಲ್ಲ ,ನೇಣಿಗೆ  ಶರಣಾದಳು .
ಮಾಮ ಎಂದು ಕರೆಸಿಕೊಳ್ಳುವ  ಆತ ಸೋಮ ಶೇಖರ ,ತುಂಬಾ ಓದಿಕೊಂಡಿದ್ದ .ಒಳ್ಳೆಯ  ಬರಹಗಾರ ,ಕವಿ .ಅವನಿಗೆ ವಿಜ್ಞಾನ ,ಜ್ಯೋತಿಷ್ಯ ,ಹಾಡು ........ಏನ್ ಹೇಳೋದು ?ಇಂತಹದ್ದು  ಗೊತ್ತಿಲ್ಲ ಅನ್ನೋ ಹಾಗಿಲ್ಲ .ಎಲ್ಲರೂ  ಬಯಸುವ ಸ್ನೇಹ ಜೀವಿ .ಆದರೆ  ಬದುಕಲ್ಲಿ  ಸೋತ .ಬಹುಷಃ ಅವನು ಪ್ರೀತಿಸಿದ  ಹುಡುಗಿ ಅವನಿಗೆ ಸಿಗಲಿಲ್ಲ .ಅವನೂ ನೇಣಿಗೆ ಕೊರಳು  ಕೊಟ್ಟ .
ಸಾಮಾನ್ಯವಾಗಿ ನಾನು ಸಾವಿಗೆ  ಹೋಗುವವಳಲ್ಲ  .ಆತ್ಮೀಯರು ,ಪರಿಚಿತರು ನಮ್ಮೊಡನೆ ಇಲ್ಲಾ  ಎಂದುಕೊಳ್ಳುವುದು ಕಷ್ಟ .ಆದರೆ  ಹೋಗಿದ್ದೆ .
ನಾನು  ಓದಿರುವವರು -ಬುದ್ದಿವಂತರು  ಅಂದುಕೊಂಡಿದ್ದೆ .ಇವರುಗಳ  ವರ್ತನೆಯೂ  ಹಾಗಿತ್ತು ,ಆದರೆ  ತಮ್ಮ ಜೀವವನ್ನು ತಾವೇ  ಕೊನೆಗಾಣಿಸಿಕೊಂಡ  ಇವರ ಬಗ್ಗೆ ಏನು ಹೇಳೋದು ?
ಏನ್ ಓದಿದರೇನು ?
ಒಂದು ಕೆಟ್ಟ ಘಳಿಗೆ ಆಲ್ವಾ ?
ನಾನೂ ಅನಾರೋಗ್ಯದಿಂದಾ  ಮಲಗಿದಲ್ಲೇ  ಮಲಗಿದ್ದಾಗ ---
ನಾನು  ನಿರುಪಯೋಗಿ ,ನನ್ನಿಂದಾ  ದುಡ್ಡು ಖರ್ಚು  ......ಎಂದೆಲ್ಲಾ  ನೊಂದು  ಸಾಯುವ ಮನಸ್ಸು ಮಾಡಿದ್ದೆ .ದೇಹ ,ಮನಸ್ಸು ಎರಡೂ ಹಾಳಾಗಿದ್ದ  ಯಾತನೆ .ನೋವುನ್ದವರಿಗೆ ಮಾತ್ರಾ ಬೇರೆಯವರ  ನೋವು ಅರಿವಾಗುತ್ತೆ ,ಮರಗುತ್ತಾರೆ ಅಂತಾರೆ .ನನ್ನ ಬಳಿ  ಯಾರಾದರೂ  ಕಷ್ಟ ಹೇಳಿಕೊಂಡರೆ ---
ಅದನ್ನೆಲ್ಲಾ  ನಾನು  ಅನುಭವಿಸಿದ್ದೇನೆ  ಬಿಡಿ ಅಂತಾ ನಕ್ಕು ಬಿಡ್ತೇನೆ .
ಇಂದು  -----
ಮುದ್ದು ಮುದ್ದು ಮಕ್ಕಳು  'ಅಮ್ಮಾ  ನೀನು  ನಮಗೆ ಬೇಕು ' ಎನ್ನುವಾಗ ,
ನೀ ನಗು ನಗುತ್ತಾ  ಓಡಾಡಿಕೊಂಡಿರು ಸಾಕು ಎಂದು, ನಾ  ಬಯಸಿದ್ದನೆಲ್ಲಾ ನನ್ಮುಂದೆ  ಸುರಿಯುವ ಗಂಡ  ಇರುವಾಗ ,
ಸುಧಾ  ನೀವು  ಸತ್ತು ಬದುಕಿದ್ದೀರಿ ,ಚೆನ್ನಾಗಿರಿ .ನಿಮಗಿಷ್ಟ ಬಂದ ಹಾಗೇ .....ಎನ್ನುವ  ಸ್ನೇಹ ವೃಂದ ,
ಅಬ್ಭಾ  ನಮ್  ಸುಧಾ ಈಗೆಷ್ಟು  ನಗ್ತಾಳೆ ! ಹೀಗೆ ನೋಡ್ತೀವಾ ಅನ್ಕೊಂಡಿದ್ವಿ  ಎನ್ನುವ ನನ್ನ ಬಂಧುಗಳ  ಬೆಟ್ಟಿಯಾದಾಗ ,
ನಾನು  ಹೀಗೆ ಬದಲಾದೆನಾ !!!!!
ಇನ್ನೇನು  ಕೆಲವೇ  ದಿವಸ ನನ್ನ ಜನುಮ ದಿನ .ನಾನು  ಬದುಕಿದ್ದೇನೆ  ಇಷ್ಟು ದಿನ ಎಂದುಕೊಳ್ಳುವ  ಸಂಭ್ರಮ .
ಸಾವಿನ  ಸಮೀಪ  ಹೋದವಳಿಗೆ  ಬದುಕಿನ  ಮಹತ್ವ  ತಿಳಿದಿದೆ .
ನಿಮಗೆ  ಎಂದಾದರೂ ,ತನ್ನನ್ನು  ತಾನು  ಕೊನೆಗೊಳಿಸುವ  ನಿರ್ಧಾರ  ಏನಾದರೂ  ಬಂದಿದ್ದರೆ  ನನ್ನನೊಮ್ಮೆ ನೋಡಿ ಫ್ರೆಂಡ್ಸ್ .
ಇಂದು ಇದ್ದ  ಕೆಟ್ಟ  ಘಳಿಗೆ  ಮುಂದೆಯೂ ಇರೋಲ್ಲ .

No comments:

Post a Comment