Tuesday, 26 January 2016


ಯಾಕೋ ಮೊದಲಿನಂತಿಲ್ಲ..ಮಾತೇ ಆಡಲ್ವಲ್ಲೋ.... ನನ್ನ ಜೊತೆ ಮಾತುಗಳಿಲ್ವಾ ...ಎಂದೇ.
ಮಾತನಾಡಿದವರಿಗೆಲ್ಲಾ ಮನಸ್ಸು ಕೊಟ್ಟಿರೋಲ್ಲ, ಮನಸ್ಸು ಕೊಟ್ಟವರ ಜೊತೆಗೆ ಮಾತಿನ ಅವಶ್ಯಕತೆ ಇರುವುದಿಲ್ಲ ಎಂದ. ಸಿಡುಕಿದನಾ ? ಗೊತ್ತಿಲ್ಲ.
ಪ್ರೀತಿಸ್ತಿದ್ದೀಯಾ ಇನ್ನೂ ನನ್ನ ? ಕೇಳಿದೆ.... ನನ್ನ ನಾನು ನಂಬದ ಗೊಂದಲ.
ಮಾತಿನಲ್ಲಿಯೇ ಎಲ್ಲಾ ಹೇಳಬೇಕಾ ಎಂದ. ....ಅಡ್ಡಗೋಡೆಯ ಮೇಲೆ ದೀಪ.
ಅವನು ಹತ್ತಿರ ಬರಲು ಯತ್ನಿಸಿದಾಗ.....ನನ್ನ ಮನಸ್ಸಿಗೆ ಏನೂ ಬೇಡ ಅನಿಸುತ್ತಿದ್ದುದು ನಿಜ....
ದೂರ ನಿಂತಾಗವನು...ನನ್ನ ಮನಸ್ಸು ಅವನ ಬಯಸತೊಡಗಿದೆ....ಸುಳ್ಳಲ್ಲ.
ಮಾತುಗಳಲಿ ಅರ್ಥವಾಗದವನ ಮೌನವನ್ನು ನನಗೆ ಇಷ್ಟ ಬಂದಂತೆ ಅರ್ಥೈಸಿಕೊಂಡು ಖುಷಿಯಾಗಿರುವುದಂತೂ ಸತ್ಯ.





ನಿನ್ನ ಸಾಲುಗಳು. ..ಅತೃಪ್ತ ಹೆಣ್ಣಿನ ಭಾವನೆಗಳು
ಗೆಳೆಯನೋರ್ವನ ಛಟೀರ್ ಮಾತಿನೇಟಿಗೆ...
ಕಣ್ಣಾಲಿಗಳಲಿ ನೀರು
ವಿಪ್ರಲಂಭ ಶೃಂಗಾರ ಭಾವ. ..ಇನ್ನೋರ್ವರ ಹೇಳಿಕೆ
ಚೂರು ಒಳಗೊಳಗೇ. ... ಬೆರಗು...
ಯಾಕೆ ಹೀಗೆ ನಿನ್ನದು ಸದಾ. ...ಪ್ರೀತಿ ಪ್ರೇಮಗಳ ಬಡಬಡಿಕೆ ?
ಕೇಳಿದವಳಿಗೆ....
ಯಾರ ಹತ್ತಿರ ಏನಿಲ್ಲವೋ...ಅದರ ಬಗ್ಗೆನೇ ಜಾಸ್ತಿ ಮಾತು ಕಣೇ--
ಎಂದು ಗೊಂದಲಕ್ಕೆ ಕೆಡವಿದೆ
ಮುಜುಗರ ಬೇಡವೇ. ...'ಪ್ರೇಮ ಸುಂದರವಾದ ಭಾವನೆ'
ವಯಸ್ಸಿನ ಇತಿಮಿತಿಯ ಗೊಡವೆಯೇಕೆ? ಎಂದವಳ ಆತ್ಮೀಯತೆಗೆ ಹಿಗ್ಗು
ಅವನ ನೆನಪುಗಳೇ....ನನ್ನುಸಿರಾಗಿರುವಾಗ.....
ಅದೆಷ್ಟು ಪ್ರೇಮ-ವಿರಹಗಳು ಅಕ್ಷರಗಳಾದವೋ!!!!
ಆದರೆ. ....ಕೈ ಹಿಡಿದಿದೆ. ...ಮನ ಮಂಕಾಗಿದೆ....ಈ ಮೆಚ್ಚುಗೆ, ಟೀಕೆಗೆ. ..ಅಲ್ಲವೇ ಅಲ್ಲ.
ಬಂದೂಕು ಬಗಲಿಗೇರಿಸಿ ಗಡಿಯಲಿರುವವನ ಮಡದಿಯ ರಾತ್ರಿಗಳು ಹೇಗಿರುತ್ತೆ ಎನಿಸಿದಾಗ
ಹಾರ , ಘೋಷಣೆ ಮತ್ತು ಗುಂಡಿನ ಸದ್ದಿನೊಡನೆ...ಅಂತಿಮ ವಿದಾಯ ಹೇಳುವಾಗ
ಸುರಿಯುವ ಕಣ್ಣೀರು ಹನಿಗಳಲಿ... ಏನೆಲ್ಲಾ ಅಡಗಿದೆ. ...ಎನಿಸಿದಾಗ
ಮತ್ತೆಂದೂ...ಬರೆಯಲಾರೆ...ನಾ. ..
ಪ್ರೇಮ. ..ಕಾಮ.....ವಿರಹವ.

No comments:

Post a Comment