- ಯಾಕೆ ಬಂದೇ ಒಬ್ಬನೇ ? ಏನ್ ಮಾಡ್ತೀ ? ನಿಂಗೆ ಬೋರ್ ಆಗೋಲ್ವಾ ? ಬೆಳ್ಳಗೆ ಚೆನಾಗಿದ್ದೀಯಾ ? ಆಚೆ ಹೋಗು, ಫ್ರೆಂಡ್ಸ್ ಸಿಗ್ತಾರೆ ........ ಹಿತ್ತಲಲ್ಲಿ ವಾಷಿಂಗ್ ಮೆಶೀನ್ ಗೆ ಬಟ್ಟೆ ತುಂಬಿಸುತ್ತಾ, ಮಾತಾಡ್ತಾ ಇದ್ದೆ. ಯಾರ ಜೊತೆ ಮಾತಾಡ್ತೀ ಅಮ್ಮಾ ಅಂದಳು ಮಗಳು. ಯಾರಿಲ್ವೆ ಮಗಳೇ ಇಲ್ಲೊಂದು ಹಲ್ಲಿ ಬಂದು ಸೇರ್ಕೊಂಡಿದೆ ಅದರ ಜೊತೆ ಅಂದೇ. ಥೂ ನಿನಗೇನಾಗಿದ? ದೇವರ ಮನೇಲಿ ಕೂತು, ಅದರ ಮುಂದೆ ಮಾತಾಡ್ತಿರ್ತೀಯ ಓಕೆ, ಭಗವಾನರ ಫೋಟೋ ಜೊತೆ, ಹಸು, ಬೀದಿನಾಯಿಮರಿ, ಬೆಕ್ಕಿನಮರಿ, ಅವರೇಕಾಳು ಹುಳ, ಸೊಳ್ಳೆ, ಹೂವ, ಪಾರಿವಾಳ ಅಮ್ಮಾ ಅವುಗಳ ಜೊತೆಯೆಲ್ಲಾ ಮಾತಾಡ್ತೀಯಲ್ಲಾ ? ನಿದ್ರೆಯಲ್ಲಿ ಸಹಾ ಮಾತಾಡ್ತೀಯ ? ನಕ್ಕಳು. ಹೌದು, ಪಕ್ಕದ ಸೈಟ್ ನಲ್ಲಿ ಹುಲ್ಲು ಬೆಳದಿದೆ ಅಂತಾ, ಹಸು ಕಟ್ಟಿರ್ತಾರೆ. ಅದು ಬಾಯಾರಿಕೆಗೆ ಅಂಬಾ ಎನ್ನುವುದುಂಟು. ಇರೋ ಬಂದೇ ಬೂಚಿ ಎಂದು ನೀರಿನ ಬಕೆಟ್ ತೆಗೆದುಕೊಂಡುಹೋದ್ರೆ , ಅಮ್ಮಾ ನಂಗೆ ಬೂಚಿ ಭಯಾ ಮನೆಗೆ ಕರೀಬೇಡಾ ಪ್ಲೀಸ್ ಅಂತಾನೆ ಮಗರಾಯ ಇನ್ನು ವಾಕಿಂಗ್ ಹೋದ್ರೆ ಬೀದಿನಾಯಿಗಳು ಫ್ರೆಂಡ್ಸ್, ಸಿಕ್ಕಿದವುಗಳಿಗೆ ಏನಾರೂ ಚೂರು ತಿಂಡಿ ಕೊಟ್ಟು, ಮಾತಾಡಿಸುವುದುಂಟು. ಅವು ಬಾಲ ಅಲ್ಲಾಡಿಸಿ , ಮೈಮೇಲೆ ಕಾಲಿಟ್ಟು ಪ್ರೀತಿ ತೋರಿಸುವುದು ಮಜಾ ಸಖತ್ ಪಾರಿವಾಳಗಳು ನಮ್ಮನೆ ಟೆರೇಸ್ ನ ನೀರಿನ ಟ್ಯಾಂಕ್ ಹತ್ರ ಉಂಟು. ಅವುಗಳ ಚೆಂದ ನೋಡ್ತಾ ಕಾಳು-ಅಕ್ಕಿ ಎಸೆದು ಸ್ವಲ್ಪ ಹೊತ್ತು ಮಾತಾಡೋದು ಅಭ್ಯಾಸ . ಅವರೆಕಾಯಿ ಕಾಲ , ಮೊನ್ನೆಯೊಮ್ಮೆ ಒಂದು ಹುಳ ಸಣ್ಣ ಮಗು ಅಂಬೆಗಾಲಿಟ್ಟ ಹಾಗೆ ವೇಗವಾಗಿ ಮಗಳ ರೂಂ ನತ್ತ ಹೋಗ್ತಿತ್ತು. ಇರೂ ಪುಟ್ಟಾ ಅಕ್ಕನ ರೂಂ ಗೇ ಹೋದ್ರೆ ಅಕ್ಕ ಬಯ್ತಾಳೆ ಅಂತಾ ಅದನ್ನು ಎತ್ತಿ ಆಚೆ ಹಣಿದೆ. ಅಮ್ಮಾ .....ನಾನು ಅವರೇಕಾಳು ಹುಳಕ್ಕೂ ಅಕ್ಕನಾ ? ಮಗಳಿಗೆ ಕೋಪ -ನಗು ಎರಡೂ ಹೂವು -ಪ್ರಾಣಿ -ಪಕ್ಷಿ .....ಇವುಗಳ ಹತ್ರ ಮಾತಾಡೋದು ಒಂಥರಾ ಖುಷಿನೇ . ಅವು ತೀಕ್ಷ್ಣವಾದ ಮಾತುಗಳಿಂದಾ ಹರ್ಟ್ ಮಾಡೋಲ್ಲ, ಕೆಲವು ಸ್ಪಂದನೆ ಗೊತ್ತಾಗುತ್ತೆ , ಖುಶೀ ಅನಿಸುತ್ತೆ. ಆದರೇ ........ ಮನುಷ್ಯರ ಜೊತೆ ಮಾತಾಡೋದು ? ನನಗಂತೂ ಪ್ರೀತಿ ಅವಶ್ಯ .ಭಾಷೆಯನ್ನು ಪ್ರೀತಿ ವ್ಯಕ್ತಪಡಿಸಲು ಬಳಸಿದಷ್ಟು ಹೊತ್ತೂ ಅದು ಬೇಕು ಅನಿಸುತ್ತೆ, ಪ್ರೀತಿಯನ್ನು ಬಯಸಿದಾಗ .....ಅವರಿಂದಾ ಬಿರುನುಡಿಗಳು ಬಂದರೆ ? ಈ ಸಂಭ್ರಮಕ್ಕೆ ನಾ ಯಾಕೆ ಇವರ ಹತ್ತಿರ ಮಾತಾಡಿದೆ ? ಅನಿಸಿ ಕಣ್ಣೀರುಗರೆಯುವ ಬದಲು ಸುಮ್ಮನಿರೋದೆ ವಾಸಿ
No comments:
Post a Comment