ನನ್ನ ಸ್ವಭಾವ ಇದು - ನಾನು ನನಗೆ ಸಂಬಂಧಿಸಿದ್ದನ್ನು ತುಂಬಾ ಕೇರ್ ಮಾಡ್ತೇನೆ, ಯಾರ ಜೊತೆಯಲ್ಲೂ ಶೇರ್ ಮಾಡೋಲ್ಲ:-)
ನನ್ನ ಮಲಗುವ ಕೋಣೆ ಏನೂ ಕ್ಲೀನ್ ಆಗಿರೋಲ್ಲ, ದಿಂಬಿನ ಬಳಿ ತುಂಬಾ ಪುಸ್ತಕಗಳು, ಪೆನ್ಸ್ ಇರುತ್ತೆ. ಮಗ ಅದರಲ್ಲಿ ಏನಾದರೂ ಗೀಚಬಾರದು, ಹಾಸಿಗೆ ಕಚಪಚ ತುಳಿಯಬಾರದು, ಬೆಡ್ ಮೇಲೆ ಕುತ್ಕೊಂಡು ಕುಡಿಯಬಾರದು, ತಿನ್ನಬಾರದು .... ಹೀಗೆ ಎಚ್ಚರಿಕೆ ಕೊಡ್ತಿರ್ತೇನೆ. ಹಾಸಿಗೆ ..... ಸಾವಿರ ಕೊಟ್ಟಿರೋದು ಕಣೋ ಪುಟ್ಟಾ ಹಾಳು ಮಾಡಬೇಡಾ ಅಂತಾ ಸಾಕಷ್ಟು ಸಲ ಬಯ್ಯೋದುಂಟು. ಟೀ. ವಿ ಬೇರೆ ಅಲ್ಲೇ ಇರೋದ್ರಿಂದಾ ಹೀಗೆ ಕೂಗಾಟಗಳು.
ಇಂದು ಬೆಳಿಗ್ಗೆ -- ಪ್ಲೇಟ್ ನಲ್ಲಿ ಎರಡು ಆನಿಯನ್ ಪಕೋಡ, ಸ್ವಲ್ಪ ನೂಡಲ್ಸ್, ಸ್ವಲ್ಪ ಚಟ್ನಿಪುಡಿ ಅನ್ನ ಎಲ್ಲಾ ಹಾಕ್ಕೊಂಡು, ಅದೇ ತಟ್ಟೇಲಿ ಮ್ಯಾಂಗೋ ಜ್ಯೂಸು ಲೋಟ ಸಹ ಇಟ್ಟುಕೊಂಡು ಒಂದು ಕೈಲಿ ಹಿಡ್ಕೊಂಡೆ, fb ನೋಡ್ತಾ ಟಿಫೆನ್ ತಿನ್ನೋಣ, ಮತ್ಯಾರು ಬರೋದು ಅಂತಾ ಟ್ಯಾಬ್ ಸಹಿತಾ ಮತ್ತೊಂದು ಕೈಲಿ ಹಿಡ್ಕೊಂಡು ರೂಂ ಗೆ ಹೋದೆ. ಕುತ್ಕೊಳೋಕೆ ಮುಂಚೆ ಲೋಟ ಅಲುಗಿತು , ತಟ್ಟೆಯೊಳಗೆ ಉರುಳಿತು, ಆಚೆಯೂ ಚೆಲ್ಲಿ ಹಾಸಿಗೆಯ ಅಂಚು ಒದ್ದೆಯಾಯ್ತು.
ಇದೇ ಅವಘಢ ಮಗನಿಂದ ಆಗಿದ್ದರೆ .... tv ನೋಡ್ತಾ ತಿನ್ನಬೇಡ ಅಂತಾ ಎಷ್ಟು ಸಲ ಹೇಳೋದು ? ನೆಟ್ಟಗೆ ತಟ್ಟೆ ಹಿಡಿದುಕೊಳ್ಳುವುದಕ್ಕೂ ತ್ರಾಣ ಇಲ್ವಾ ನಿಂಗೆ ? ಹಾಸಿಗೆ ಒದ್ದೆ ಮಾಡಿದ್ಯಲ್ಲಾ? ಆಚೆ ಹೋಗಿ ತಿನ್ನೋದಲ್ವಾ ?........ ಹೀಗೆ ಬಯ್ಗುಳಗಳ ಸುರಿಮಳೆಯೇ ಆಗ್ತಿತ್ತು.
ನನಗೆ ನಾನು ಮಾಡಿದ ಅವಾಂತರಕ್ಕೆ ಕೋಪ ಬರಲಿಲ್ಲ, ಹತ್ತಿರವಿದ್ದ ಟವೆಲ್ ತೆಗೆದುಕೊಂಡು, ಒತ್ತಿ ಒತ್ತಿ ನೀರು ತೆಗೆದೆ, ಪ್ಲೇಟ್ ಲ್ಲಿ ಸಾಲಿಡ್ ಲಿಕ್ವಿಡ್ ಜೊತೆ ಬೆರೆತು ತೇಲಾಡ್ತಿತ್ತು, ಎಲ್ಲಾ ಸರಿಪಡಿಸಿಕೊಂಡು ನಿಧಾನಕ್ಕೆ ತಿಂದು ಮುಗಿಸಿದೆ. ನಾನು ಮಾಡಿದ್ದು ತಪ್ಪು. ನಾನು fb ನೋಡ್ತಾ, ಹಾಸಿಗೆ ಮೇಲೆ ಕುಳಿತುಕೊಂಡು ತಿಂಡಿ ತಿನ್ನಬಹುದಾ ? ನಾನು ಬಹಳಾ ಹುಷಾರು, ನೀರು ಚೆಲ್ಲುವುದಿಲ್ಲ, ತಿಂಡಿ ಚೆಲ್ಲಿ ಕಲೆ ಮಾಡೋಲ್ಲ ಅನ್ನೋ ಹಮ್ಮು ಅಲ್ವಾ ನನಗೆ ?
ನನಗನಿಸ್ತು --- ನಾವು ಹೀಗೆ ಅಲ್ವ ? ಬೇರೆಯವರ ತಪ್ಪುಗಳಿಗೆ ಕೋಪಿಸಿಕೊಳ್ಳುತ್ತೇವೆ, ಕೂಗಾಡ್ತೇವೆ. ಆದರೆ ನಮ್ಮ ತಪ್ಪಿಗೆ ಎಕ್ಸ್ಕ್ಯೂಸ್ ಕೊಡುತ್ತೇವೆ. ಎಷ್ಟೋ ಸಲ ನಮ್ಮಿಂದಾದ ತಪ್ಪುಗಳಿಗೆ ಕಾರಣ/ ಸಮರ್ಥನೆ ಬೇರೆ ಕೊಡುವ ಪ್ರಯತ್ನ ಮಾಡ್ತೇವ, ಯಾಕೆ ?
No comments:
Post a Comment