ಪ್ರೀತಿಸುವೆಯಾ ನನ್ನ ಎಂದೇ, ಯಾಕೆ ಈ ಸಂಶಯ ಅಂದ.
ಹೇಳಲಿಲ್ಲ ಇದುವರೆಗೂ ಅದಕ್ಕೆ ಕೇಳಿದೆ ಎಂದೇ, ಹೇಳದಿರುವ ಮಾತನ್ನೂ ಅರ್ಥೈಸಿಕೋ ಎಂದ.
ಗೊತ್ತು ಬಿಡು, ಪದಗಳೆಲ್ಲಾ ಹಳಸಲು ಅಂದೇ, ನಕ್ಕ ಅವನ ಕಣ್ಣುಗಳಲ್ಲಿ ಮಿಂಚಿದ ಭಾಷೆ ಸ್ಪಷ್ಟವಾಯ್ತು.
ನಿಜಾ ... ಅವನೆಂದೂ 'ನಾ ನಿನ್ನ ಪ್ರೀತಿಸುವೆ' ಎಂದುಲಿಯಲಿಲ್ಲ, ಮುನಿದಾಗ ನನ್ನ ಕೆನ್ನೆಗೆ ಮುತ್ತಿಟ್ಟ.
ನಾನು ಮಾತನಾಡುತಿದ್ದೆ, ಅವನು ಪಾದಗಳ ಮೆಲ್ಲಗೆ ಅದುಮುತಿದ್ದ.
ಅವನೆದುರು ನಾನು ಮಗುವಾಗುತಿದ್ದೆ, ನನ್ನ ತುಂಟತನಕ್ಕೆ ಅವನು ಬಿಗಿಯಾಗಿ ತಬ್ಬುತಿದ್ದ, ದೇಹವ ಬಯಸಲಿಲ್ಲ.
ಕಣ್ಣಿನಲಿ ಕಣ್ಣಿಟ್ಟು ನಾ ... ನೀನು ಬೇಕೆಂದೇ ... ನನ್ನೊಳಗೆ ಲೀನವಾಗಿ ಎದೆಯ ಮೇಲೆ ವಿಶ್ರಮಿಸಿದ.
ಇದ್ದಷ್ಟೂ ಹೊತ್ತು ನಾನೇ ಹರಟಿದೆ, ಹೊರಟಾಗ ಅವನು ನನ್ನ ನೊಸಲ ಚುಂಬಿಸಿದ.
ಅವನು ನನ್ನವನು, ಎಂದೆಂದೂ ನನ್ನವನು .... ಪ್ರೀತಿಸಿದವಳ ಎಂದೂ ಅಗಲಲಾರನು.
No comments:
Post a Comment